ಉಳಾಯಿಬೆಟ್ಟು ದರೋಡೆ ಪ್ರಕರಣ ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ, ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಸುದ್ದಿಗಳು News

Posted by vidyamaana on 2024-07-05 07:31:37 |

Share: | | | | |


ಉಳಾಯಿಬೆಟ್ಟು ದರೋಡೆ ಪ್ರಕರಣ  ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ,  ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಮಂಗಳೂರು: ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಹೊರವಲಯದ ಪೆರ್ಮಂಕಿ ಪರಿಸರದಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ನಡೆಸಿದ ಆರೋಪದಲ್ಲಿ ಮಂಗಳೂರು ಪೊಲೀಸರು 10 ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಲ್ಲಿ ಉದ್ಯಮಿಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರಮಾರ್ಗ ಗ್ರಾಮ ನಿವಾಸಿ ವಸಂತಕುಮಾರ್ (42) ಒಳಗೊಂಡಿದ್ದಾನೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಬಂಧಿತರನ್ನು ನೀರಮಾರ್ಗದ ವಸಂತಕುಮಾರ್ (42), ನೀರಮಾರ್ಗದ ರಮೇಶ್ (42), ಬಂಟ್ವಾಳದ ಬಾಲಕೃಷ್ಣ ರೇಮಂಡ್ ಡಿಸೋಜಾ (47) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ (48), ತ್ರಿಶೂರಿನ ಜಾಕೀರ್ ಹುಸೇನ್ (56), ತ್ರಿಶೂರ್‌ನಿಂದ ವಿನೋಜ್ (38), ತ್ರಿಶೂರ್‌ನಿಂದ ಸಜೀಶ್ ಎಂಎಂ (32), ತಿರುವನಂತಪುರದಿಂದ ಬಿಜು ಜಿ (41), ತ್ರಿಶೂರ್‌ನಿಂದ ಸತೀಶ್ ಬಾಬು (44), ಮತ್ತು ಶಿಜೋ ದೇವಸಿ (38) ಇದರಲ್ಲಿ 7 ಮಂದಿ ಕೇರಳ ಮೂಲದವರಾಗಿದ್ದಾರೆ.

ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ಜೂನ್ 21ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ವೇಳೆ ಸುಮಾರು 10ರಿಂದ 12 ಮಂದಿ ಆರೋಪಿಗಳು ಆಗಮಿಸಿ, ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ, ನಂತರ, ಅವರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ, ನಗದು, ಹಣ, ಒಡವೆ ಸೇರಿ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು.


ಘಟನೆಯಲ್ಲಿ ವಸಂತಕುಮಾರ್, ಉದ್ಯಮಿಯ ವ್ಯವಹಾರ ಮತ್ತು ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದು, ಆರೋಪಿ ರಮೇಶ್ ಪೂಜಾರಿ ಮತ್ತು ರೇಮಂಡ್ ಡಿಸೋಜಾ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದ್ದಾರೆ. ಅದರಂತೆ ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ,ಮನೆಯ ಮಾಹಿತಿಯನ್ನು ನೀಡಿ, ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ದರೋಡೆ ನಡೆಸಿದ್ದಾಗಿ ತಿಳಿದುಬಂದಿದೆ ಎಂದು ಕಮೀಷನರ್ ಹೇಳಿದ್ದಾರೆ.ಕೃತ್ಯದಲ್ಲಿ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ಎರಡು ತಂಡ ಗಳನ್ನು ಮಂಗಳೂರಿಗೆ ಕಳಿಸಿ, ದರೋಡೆಗೆ ಸಂಚು ರೂಪಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ಮೊದಲೇ ಕೇಸ್ ಇತ್ತು

ಆರೋಪಿಗಳ ಪೈಕಿ ವಸಂತ ಕುಮಾರ್ ವಿರುದ್ಧ 2011ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದರೆ, ಜಾಕೀರ್ ಎಂಬಾತನ ವಿರುದ್ಧ ಕೇರಳದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ವಿರುದ್ಧ ತ್ರಿಶೂರ್ ಜಿಲ್ಲೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ. ಬಿಜು ವಿರುದ್ಧ ಅಬಕಾರಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು. ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.

ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.

ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್‌ ಬೆಡ್‌ರೂಮ್‌ನ ಟೈಲ್ಸ್‌ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 Share: | | | | |


ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

Posted by Vidyamaana on 2023-11-15 22:40:21 |

Share: | | | | |


ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.


ಮುಹಮ್ಮದ್ ಶಮಿ ಶಿಸ್ತುಬದ್ಧ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿ ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ ಬಾರಿಯ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.


ವಿರಾಟ್ ಸಾರ್ವಕಾಲಿಕ ದಾಖಲೆಯ 50 ನೇ ಏಕದಿನ ಶತಕ ಹಾಗೂ ಮುಹಮ್ಮದ್ ಶಮಿ ಜೀವನ ಶ್ರೇಷ್ಠ ವಿಶ್ವಕಪ್ ನ 4 ಐದು ವಿಕೆಟ್ ಗೊಂಚಲು ನೆರವಿಂದ ಭಾರತ ಫೈನಲ್ ಪ್ರವೇಶಿಸಿದೆ.ಭಾರತ ನೀಡಿದ 398 ರನ್ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡಿದೆ.ಭಾರತದ ಕಠಿಣ ಗುರಿ ಬೆನ್ನತ್ತಲು ಸ್ಪೋಟಕ ಆರಂಭದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಬಂದಿದ್ದಕಿವೀಸ್ ಗೆ ಮುಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು. ನ್ಯೂಝಿಲ್ಯಾಂಡ್ ಓಪನರ್ ಗಳಾದ ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕ್ರಮವಾಗಿ 13 ರನ್ ಗೆ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕೇನ್ ವಿಲಿಯಮ್ಪನ್ ಹಾಗೂ ಡೆರಲ್ ಮಿಚೆಲ್ ಜೋಡಿ, ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿ ಯಾದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯನ್ಸನ್ 69 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಡರೆಲ್ ಮಿಚೆಲ್ 119 ಎಸೆತಗಳಲ್ಲಿ 9 ಬೌಂಡರಿ 7 ಸಿಕ್ಸರ್ ನೆರವಿನಿಂದ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಶಮಿ ಬೌಲಿಂಗ್ ನಲ್ಲಿ ಜಡೇಜಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ: ಸದಾನಂದ ಗೌಡ

Posted by Vidyamaana on 2024-03-21 11:41:25 |

Share: | | | | |


ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ: ಸದಾನಂದ ಗೌಡ

ಬೆಂಗಳೂರು: ಕಾಂಗ್ರೆಸ್‌ ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ಆದರೆ ನಾನು, ಕಾಂಗ್ರೆಸ್‌ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು.


ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು

ವಿಟ್ಲ: ಬಾವಿಗೆ ರಿಂಗ್ ಅಳವಡಿಸುವಾಗ ಉಸಿರುಗಟ್ಟಿ ಇಬ್ಬರು ಮೃತ್ಯು

Posted by Vidyamaana on 2024-04-23 16:20:35 |

Share: | | | | |


ವಿಟ್ಲ: ಬಾವಿಗೆ ರಿಂಗ್ ಅಳವಡಿಸುವಾಗ ಉಸಿರುಗಟ್ಟಿ ಇಬ್ಬರು ಮೃತ್ಯು

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.

ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಆಲಿ(24) ಎಂದು ಗುರುತಿಸಲಾಗಿದೆ.

ನಕಲಿ ಸೀಲು ಸ್ಟ್ಯಾಂಪ್ ದಾಖಲೆ ಪತ್ರ ತಯಾರಿ ಪ್ರಕರಣ – ಬಂಧಿತ ಆರೋಪಿಗೆ ಸಿಕ್ತು ಜಾಮೀನು

Posted by Vidyamaana on 2023-08-22 11:32:29 |

Share: | | | | |


ನಕಲಿ ಸೀಲು ಸ್ಟ್ಯಾಂಪ್ ದಾಖಲೆ ಪತ್ರ ತಯಾರಿ ಪ್ರಕರಣ – ಬಂಧಿತ ಆರೋಪಿಗೆ ಸಿಕ್ತು ಜಾಮೀನು

ಪುತ್ತೂರು: ಸ್ಥಳೀಯ ಗ್ರಾ.ಪಂ.ಗಳು ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್, ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ವಿಶ್ವನಾಥ್ ಬಿ.ವಿ. ಅವರಿಗೆ ಜಿಲ್ಲಾ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ನೀಡಿದೆ.


ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್.ಅವರು ನೀಡಿದ ದೂರಿನಂತೆ, ಅವರ ನೇತೃತ್ವದಲ್ಲಿ ಜು.11ರಂದು ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಪಡೀಲ್‌ನ ಎಂ.ಎಸ್ ಕಾಂಪ್ಲೆಟ್ನಲ್ಲಿರುವ ಬಿ.ಬಿ.ಇಲೆಕ್ಟಿಕಲ್ಸ್ ಆಂಡ್ ಪ್ಲಂಗ್ಸ್ ಕಚೇರಿಗೆ ದಾಳಿ ನಡೆಸಿದ್ದರು. ಆ ವೇಳೆ ಅಲ್ಲಿ, ವಿವಿಧ ಗ್ರಾ.ಪಂಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್ ಹಾಗು ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು. ವಿಶ್ವನಾಥ ಅವರು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದಿದ್ದರು.


ಈ ವಿಚಾರವಾಗಿ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಜಿಲ್ಲಾ ನ್ಯಾಯಾಲಯ ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಮಹೇಶ್ ಕಜೆ ವಾದಿಸಿದರು

ಮಧ್ಯವರ್ತಿಗಳನ್ನು ಬಳಿ ಸೇರಿಸದೇ ಜನರ ಸೇವೆ ಮಾಡಿ - ಸಿದ್ದರಾಮಯ್ಯ ಕೆಎಎಸ್ ಅಧಿಕಾರಿಗಳಿಗೆ ಸಿಎಂ ಕಿವಿ ಮಾತು

Posted by Vidyamaana on 2024-01-03 19:13:29 |

Share: | | | | |


ಮಧ್ಯವರ್ತಿಗಳನ್ನು ಬಳಿ ಸೇರಿಸದೇ ಜನರ ಸೇವೆ ಮಾಡಿ - ಸಿದ್ದರಾಮಯ್ಯ ಕೆಎಎಸ್ ಅಧಿಕಾರಿಗಳಿಗೆ ಸಿಎಂ ಕಿವಿ ಮಾತು

ಬೆಂಗಳೂರು: ಮಧ್ಯವರ್ತಿಗಳನ್ನು ಬಳಿ ಸೇರಿಸದೇ ಜನರ ಸೇವೆ ಮಾಡಿ, ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ. ಮಾಸಲು ಬಟ್ಟೆಯಲ್ಲಿ ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.


ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ 2024ನೇ ಸಾಲಿನ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.ಸವೆದ ಚಪ್ಪಲಿ, ಹರಕಲು ಚೆಡ್ಡಿ, ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕು. ನೀವು ಒಳ್ಳೆ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದು ಹೇಳಿದರು.


ನಾವು ನೀವು ರಾಜ್ಯದ 7 ಕೋಟಿ ಜನರ ಹಿತ ಕಾಯುವುದಕ್ಕಾಗಿ ಇದ್ದೇವೆ. ರಾಜಕಾರಣಿಗಳು ಜನರಿಂದ ರಿನೀವಲ್ ಆದರೆ ಮಾತ್ರ ಐದು ವರ್ಷದ ಬಳಿಕವೂ ಜನ ಸೇವೆಯಲ್ಲಿ ಇರ್ತಾರೆ. ಆದರೆ ಕೆಎಎಸ್ ಅಧಿಕಾರಿಗಳು 30 ವರ್ಷಗಳ‌ ಕಾಲ ನಿರಂತರ ಜನ ಸೇವೆಯಲ್ಲಿ ಇರುತ್ತೀರಿ. ಆದ್ದರಿಂದ ಹೆಚ್ಚು ಜನಪರವಾಗಿ ಇದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಿಎಂ ಎಂದು ಕರೆ ನೀಡಿದರು.ರಾಜಕಾರಣಗಳಿಗೆ, ಅಧಿಕಾರಿಗಳಿಗೆ ಜನರು ಸವಲತ್ತುಗಳನ್ನು ಒದಗಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನಮಗೆ ಸವಲತ್ತುಗಳು ಸಿಕ್ಕಿವೆ. ಸುಗಮ ಜನಪರ ಆಡಳಿತ ಕೊಡಲಿ ಎನ್ನುವ ಕಾರಣದಿಂದ ಜನರಿಂದ ನಮಗೆ ಸವಲತ್ತು ಸಿಕ್ಕಿವೆ. ಜನರ ಅಭ್ಯದಯ ನಮ್ಮ ಗುರಿ ಆಗಬೇಕು ಎಂದರು.


ಬಲಾಡ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸಿ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಿ ಎಂದು ಕರೆ ನೀಡಿದರು.


ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೆ ಜನರು ಸಿಎಂ ಬಳಿಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸಿಎಂ ಇದೇ ಸಂದರ್ಭ ಎಚ್ಚರಿಸಿದರು.


ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನಿಲ್ ಕುಮಾರ್, ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ವೇದಿಕೆಯಲ್ಲಿದ್ದರು.

ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ ಮಾಜಿ ರೌಡಿ ಶಮೀರ್ ನೇಣಿಗೆ ಶರಣು

Posted by Vidyamaana on 2023-10-17 16:51:05 |

Share: | | | | |


ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ  ಮಾಜಿ ರೌಡಿ ಶಮೀರ್ ನೇಣಿಗೆ ಶರಣು

ಉಳ್ಳಾಲ, ಅ.17: ಬಿಸಿ ರಕ್ತದಲ್ಲಿ ಮದ್ಯ, ಗಾಂಜಾ ಸೇದಿ ರೌಡಿಸಂ ನಡೆಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಮಾಜಿ ರೌಡಿ ಶೀಟರ್ ಓರ್ವ ಮನೆಯಲ್ಲಿ ಟಿ.ವಿ ನೋಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಸೇವಂತಿಗುಡ್ಡೆ ನಿವಾಸಿ ಶಮೀರ್ (41)ಆತ್ಮಹತ್ಯೆಗೈದ ವ್ಯಕ್ತಿ. ಶಮೀರ್ ಕ್ಯಾನ್ಸರ್ ನಿಂದ ಮೃತಪಟ್ಟ ನಟೋರಿಯಸ್ ರೌಡಿ ಶಬರಿಯ ಸಹಚರನಾಗಿದ್ದು ಉಳ್ಳಾಲ ಠಾಣೆಯಲ್ಲಿ ಹಳೆಯ ರೌಡಿ ಶೀಟರ್ ಆಗಿದ್ದ. ಗಾಂಜಾ, ಮದ್ಯ ವ್ಯಸನಿಯಾಗಿದ್ದ ಶಮೀರ್ ಜೀವನ ನಿರ್ವಹಣೆಗೆ ಇತ್ತೀಚಿಗೆ‌ ಆಟೋ ರಿಕ್ಷಾ ಚಲಾಯಿಸುತ್ತಿದ್ದು ತೊಕ್ಕೊಟ್ಟಿನ ಒಳಪೇಟೆಯ ರಿಕ್ಷಾ ಪಾರ್ಕಲ್ಲಿ ದುಡಿಯುತ್ತಿದ್ದ. 


ನಿನ್ನೆ ಸಂಜೆ ಒಳಪೇಟೆಯ ರಿಕ್ಷಾ ಚಾಲಕರಲ್ಲಿ ಗಲಾಟೆ ನಡೆಸಿದ್ದ ಶಮೀರ್ ಯಾರೊಬ್ಬರಿಗೂ ಪಾರ್ಕಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡಲು ಬಿಡುವುದಿಲ್ಲವೆಂದು ಆವಾಝ್ ಹಾಕಿದ್ದನಂತೆ.




ಶಮೀರನ ತಾಯಿ ಒಂದು ತಿಂಗಳ ಹಿಂದಷ್ಟೆ ಮೃತಪಟ್ಟಿದ್ದರಂತೆ. ಮೂರು ದಿನಗಳ ಹಿಂದಷ್ಟೆ ಶಮೀರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ರಿಕ್ಷಾದ ಲೋನ್ ಬಾಕಿಯಿದ್ದು ಬ್ಯಾಂಕಿನ ಸೀಝರ್ ಗಳು ದಿನ ನಿತ್ಯವೂ ಶಮೀರ್ ಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರಂತೆ. ಮೃತ ಶಮೀರ್ ಗೆ ಎರಡು ಹೆಣ್ಣು, ಒಂದು ಗಂಡು ಮಕ್ಕಳಿದ್ದು ಪತ್ನಿಯೂ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎನ್ನಲಾಗಿದೆ. ನವರಾತ್ರಿ ರಜೆ ಸಿಕ್ಕ ಕಾರಣ ಪತ್ನಿ , ಮಕ್ಕಳು ತವರು ಸೇರಿದ್ದು,ಇಂದು ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಶಮೀರ್ ಟಿ.ವಿ ನೋಡುತ್ತಲೇ ‌ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಯೌವನದಲ್ಲಿ ಮದ್ಯ ,ಗಾಂಜಾದ ಅಮಲಿನಲ್ಲಿ ಉಳ್ಳಾಲದಲ್ಲಿ ಪುಡಿ ರೌಡಿಗಳಾಗಿ ಅಟ್ಟಹಾಸ ಮೆರೆದಿದ್ದ ಶಬರಿ, ಶಮೀರ್ ಇಬ್ಬರೂ ಅಕಾಲಿಕ ಸಾವು ಕಂಡಿದ್ದು ವಿಪರ್ಯಾಸ.



Leave a Comment: