ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಕರ್ತವ್ಯದಲ್ಲಿರುವಂತೆಯೇ ದಿಡೀರ್ ಅಸ್ವಸ್ಥಗೊಂಡು ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

Posted by Vidyamaana on 2023-10-16 19:59:35 |

Share: | | | | |


ಕರ್ತವ್ಯದಲ್ಲಿರುವಂತೆಯೇ ದಿಡೀರ್ ಅಸ್ವಸ್ಥಗೊಂಡು ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

ಬೆಳ್ತಂಗಡಿ; ವೇಣೂರು ಹಿದಾಯಾತುಲ್ ಇಸ್ಲಾಂ ಮದ್ರಸ  ಇಲ್ಲಿನ ಮುಖ್ಯ ಅಧ್ಯಾಪಕರಾಗಿದ್ದ ಕಾರ್ಕಳ ಹೊಸ್ಮಾರು ನಿವಾಸಿ ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ (ಅದ್ದು ಉಸ್ತಾದ್) (43) ಅವರು ಕರ್ತವ್ಯದಲ್ಲಿರುವಂತೆಯೇ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥತಗೊಂಡು ಅ.15 ರಂದು ಕೊನೆಯುಸಿರೆಳೆದಿದ್ದಾರೆ.


ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮದರಸಗಳಲ್ಲಿ ಇಂದು ಅಂತಿಮ‌ ಪರೀಕ್ಷೆ ನಡೆದಿದ್ದು, ತನ್ನ ಕರ್ತವ್ಯ ಮುಗಿಸಿ ಬೆಳಗ್ಗಿನ‌ ಉಪಹಾರ ಮಾಡುತ್ತಿದ್ದಾಗ ತಲೆತಿರುಗಿದಂತಾಗಿ ವಾಂತಿ ಮಾಡಿದ್ದರು.‌ತಕ್ಷಣ ಅವರನ್ನು ಸ್ಥಳೀಯ ಕ್ಲಿನಿಕ್‌ನಲ್ಲಿ, ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತರಾಗಿರುವುದಾಗಿ ವೈದ್ಯರು ಪ್ರಕಟಿಸಿದರು.


ಎಸ್ಸೆಸ್ಸೆಫ್ ಸಂಘಟನೆಯಲ್ಲಿ ಕಾರ್ಕಳ ಡಿವಿಷನ್ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಪ್ರಸ್ತುತ ಎಸ್‌ವೈಎಸ್ ಸ್ವಯಂ ಸೇವಾ ಸಂಘಟನೆ "ಟೀಮ್ ಹಿಸಾಬಾ" ಇದರ ಕ್ಯಾಪ್ಟನ್ ಆಗಿದ್ದರು.

ಹಲವೆಡೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರು ಎರಡು ವಾರಗಳ ಹಿಂದಷ್ಟೇ ವೇಣೂರಿನ ಮದರಸಕ್ಕೆ ಕರ್ತವ್ಯಕ್ಕೆ ಸೇರಿದ್ದರು. ಕಾರ್ಕಳದ ಅಜೆಕಾರು ಶಿರ್ಲಾಲಿನಲ್ಲಿ ಕರ್ತವ್ಯ ದಲ್ಲಿದ್ದ ವೇಳೆ ಅಲ್ಲಿ ಮಸೀದಿ ನಿರ್ಮಾಣವಾಗುವಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು.

ಬುರ್ದಾ ಸಂಘಟನೆ, ಮಕ್ಕಳ ಪ್ರತಿಭಾ ಕಾರ್ಯಕ್ರಮಗಳ ತೀರ್ಪುಗಾರಿಕೆ, ಮದ್ಹ್ ಹಾಡುಗಾರರಾಗಿ, ಪ್ರಿಂಟಿಂಗ್, ವಿನ್ಯಾಸ, ಪ್ರತಿಭಾ ವೇದಿಕೆ, ಮೀಲಾದ್ ವೇದಿಕೆ ವಿನ್ಯಾಸ, ಮಸೀದಿ ಮದರಸಗಳಲ್ಲಿ ಸಾಮೂಹಿಕ ಅಡುಗೆ ತಯಾರಿಕೆ, ಸುನ್ನೀ ಸಂಘಟನೆಗಳು ಹಾಗೂ ಮುಅಲ್ಲಿಮ್ ಸಂಘಟನೆಗಳ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಅರ್ಹ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕಾಗಿ ಸಹಾಯಧನ ಸಂಗ್ರಹಿಸಿ ನೀಡುವುದು ಹಾಗೂ ಝಿಯಾರತ್ ಟೂರ್ ಗಳನ್ನು ಸಂಘಟಿಸುವುದು ಹೀಗೆ ಎಲ್ಲಾ ರೀತಿಯಿಂದ ಜನರ ಮೆಚ್ಚುಗೆ ಗಳಿಸಿದ್ದರು. ಹೊಸ ಮನೆ ನಿರ್ಮಿಸಿದ್ದು ಮೂರು ವಾರಗಳ ಹಿಂದಷ್ಟೇ ಗೃಹ ಪ್ರವೇಶ ನಡೆದಿತ್ತು.ಇದೀಗ ಮನೆಯ ಯಜಮಾನನ ಈ ದಿಢೀರ್ ಸಾವಿನಿಂದ ಮನೆ ಮಂದಿ ಶೋಕದಲ್ಲಿ‌ ಮುಳುಗಿದ್ದಾರೆ.

ಮೃತರು ತಾಯಿ ನೆಫೀಸಮ್ಮ, ಪತ್ನಿ ರಂಳತ್, ಮೂವರು ಹೆಣ್ಣು ಮಕ್ಕಳಾದ ಮಾಶಿತಾ, ಅನ್ಸೀರಾ ಮತ್ತು ಬಿಶಾರಾ, ಸಹೋದರಾದ ಅಬ್ಬಾಸ್, ಇಸ್ಮಾಯಿಲ್ ಮತ್ತು ಹುಸೈನ್ ಸ‌ಅದಿ, ಸಹೋದರಿ ಬೀಫಾತಿಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

Posted by Vidyamaana on 2024-03-24 21:28:06 |

Share: | | | | |


BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅನಂತ್ ಕುಮಾರ್ ಹೆಗಡೆ ಬದಲು ಇದೀಗ ಹೈಕಮಾಂಡ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ.ಅಲ್ಲದೆ ಇದೇ ವೇಳೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಜಗದೀಶ್ ಶೆಟ್ಟರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬದಲು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಹೈಕಮಾಂಡ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ಮಾಜಿ ಸಚಿವ ಸುಧಾಕರ್ ಅವರಿಗೆ ಕೂಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.ಬಿಜೆಪಿ 5ನೇ ಪಟ್ಟೆ ಬಿಡುಗಡೆಯಾಗಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ


1)ಉತ್ತರ ಕನ್ನಡ ಲೋಕಸಭಾ ಕ್ಷೇತ್ರ - ವಿಶ್ವೇಶ್ವರ ಹೆಗಡೆ ಕಾಗೇರಿ

2)ಚಿಕ್ಕಬಳ್ಳಾಪುರ ಕ್ಷೇತ್ರ -ಡಾ. ಕೆ ಸುಧಾಕರ್

3) ಬೆಳಗಾವಿ ಲೋಕಸಭಾ ಕ್ಷೇತ್ರ- ಜಗದೀಶ್ ಶೆಟ್ಟರ್

4). ರಾಯಚೂರು ಲೋಕಸಭಾ ಕ್ಷೇತ್ರ-ರಾಜಾಅಮರೇಶ್ವರ ನಾಯಕಗೆ ಬಿಜೆಪಿ ಟಿಕೇಟ್ ನೀಡಿದೆ.

ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

Posted by Vidyamaana on 2023-11-13 07:45:09 |

Share: | | | | |


ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

ಪುತ್ತೂರು; ಪುತ್ತೂರಿನ ಜನರ ಮನಗೆದ್ದಿರುವ ಮಾನಕ ಜುವೆಲ್ಲರ್‌ನ ಸಹ ಸಂಸ್ಥೆ ಸಿಪಿಸಿ ಪ್ಲಾಝಾದ ಎದುರಿನ ಎಂ.ಎಸ್.ಕಾಂಪ್ಲೆಕ್ಸ್‌ ನಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂ ಮಾನಕ ಜುವೆಲ್ಲರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ನೊಂದಿಗೆ ಆಕರ್ಷಕ ಕರಿಮಣಿ

ಮೇಳ ನಡೆಯಲಿದೆ. ನ.13 ರಂದು ಈ ಮೇಳ ಆರಂಭಗೊಳ್ಳಲಿದ್ದು ನ.14 ರ ತನಕ ಇರಲಿದೆ, ವಿವಿಧ ವಿನ್ಯಾಸದ ಆಕರ್ಷಕ ಕರಿಮಣಿಗಾಗಿ ಈಗಾಗಲೇ ಹೆಸರುವಾಸಿಯಾಗಿರುವ ಮಾನಕ ಜ್ಯುವೆಲ್ಲರ್ ಈ ವರ್ಷದ ದೀಪಾವಳಿಗೆ ಗ್ರಾಹಕರ ಮನದಿಚ್ಛೆಯಂತೆ ನವನವೀನ ಕರಿಮಣಿ ಸರಗಳನ್ನು ಮೇಳದಲ್ಲಿ ಪ್ರದರ್ಶನ ಮಾಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ಕರಿಮಣಿ ಖರೀದಿಗೆ ಪ್ರತಿ ಗ್ರಾಂ ಮೇಲೆ  ರೂ.100 ರಿಯಾಯಿತಿ ಕೂಡ ದೊರೆಯಲಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ಈ ವರ್ಷದ ದೀಪಾವಳಿಯನ್ನು ಮಾನಕದ ವಜ್ರಾಭರಣಗಳ ಜೊತೆಯಲ್ಲಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವರ ನಾಪತ್ತೆ- ಮದುವೆ ರದ್ದು.ವರನ ಮೊದಲ ಪತ್ನಿಯಿಂದ ಬೆಳ್ಳಾರೆ ಠಾಣೆಯಲ್ಲಿ ದೂರು

Posted by Vidyamaana on 2023-02-09 08:42:58 |

Share: | | | | |


ವರ ನಾಪತ್ತೆ- ಮದುವೆ ರದ್ದು.ವರನ ಮೊದಲ ಪತ್ನಿಯಿಂದ ಬೆಳ್ಳಾರೆ ಠಾಣೆಯಲ್ಲಿ ದೂರು

 ಸುಳ್ಯದ ಪುರಭವನದಲ್ಲಿಫೆ 9 ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು, ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವಳೆಂದು ತಿಳಿದುಬಂದಿದೆ. ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ರೆಂಜ ಗ್ರಾಮದ ಗುಮ್ಮಟಗದ್ದೆಯ ಕೃಷ್ಣ ಎಂಬಾತನೊಂದಿಗೆ ಮದುವೆ ನಿಗದಿಯಾಗಿತ್ತು.ಇಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯಿಂದ ಜನ ಬಂದು ಟೌನ್ ಹಾಲ್ ಅಲಂಕಾರವೂ ನಡೆದಿತ್ತು. ನಿನ್ನೆಯ ದಿನ ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಸಂಭ್ರಮಪಡಲಾಗಿತ್ತು. ಇಂದು ವಧುವಿನ ಕಡೆಯವರು ಮದುವೆಗಾಗಿ ಕೆ.ವಿ.ಜಿ. ಟೌನ್ ಹಾಲ್ ಗೆ ಬಂದು ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗುತ್ತಿತ್ತು.ಇದ್ದಕ್ಕಿದ್ದಂತೆ ಮಾಹಿತಿ ಬಂತು - ವರ ಕಾಣುತ್ತಿಲ್ಲ ಎಂದು.ಅವನ ಫೋನ್ ನಂಬರಿಗೆ ಕರೆ ಮಾಡುವಾಗ ಸ್ವಿಚ್ ಆಫ್.ವಧುವಿನ ಕಡೆಯವರು ಕಂಗಾಲು. ವಿಷಯ ತಿಳಿದು ಬಂದದಲಿತ ಮುಖಂಡೆ ಸರಸ್ವತಿಯವರ ನೇತೃತ್ವದಲ್ಲಿ ಸುಳ್ಯಪೋಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು.ಇಷ್ಟೊತ್ತಿಗೆ ತಿಳಿದು ಬಂದ ಮತ್ತೊಂದು ವಿಷಯವೆಂದರೆ, ಆ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಅವನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ಹೋಗಿ ದೂರು ಕೊಡಲು ಹೋಗಿದ್ದಾಳೆ ಎಂದು. ಇನ್ನು ಈ ಮದುವೆ ಆಗುವುದಿಲ್ಲವೆಂದು ತಿಳಿದು ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದರು. ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್ ಗಳಿಗೆ ಕೊಡುವುದೆಂದು ನಿರ್ಧರಿಸಿದರು.

ಕದ್ದ ಸ್ಕೂಟಿಯಲ್ಲಿ ತಿರುಗಾಡುತ್ತಲೇ ಹಲವೆಡೆ ಕಳ್ಳತನ – ಚಾಲಾಕಿ ಖದೀಮ ಸುರೇಶ ಅಂದರ್

Posted by Vidyamaana on 2023-08-26 09:01:14 |

Share: | | | | |


ಕದ್ದ ಸ್ಕೂಟಿಯಲ್ಲಿ ತಿರುಗಾಡುತ್ತಲೇ ಹಲವೆಡೆ ಕಳ್ಳತನ – ಚಾಲಾಕಿ ಖದೀಮ ಸುರೇಶ ಅಂದರ್

ಬೆಳ್ತಂಗಡಿ : ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಅಂತರ್ ರಾಜ್ಯ ಕಳ್ಳನೊಬ್ಬ ಸ್ಕೂಟರ್ ಕದ್ದು ಬೆಳ್ತಂಗಡಿ ತಾಲೂಕಿನ ಹಲವೆಡೆ ಕನ್ನ ಹಾಕಿ ಅದರಲ್ಲಿ ಸಿಕ್ಕಿದ್ದ ಹಣವನ್ನು ಜೂಜಾಟಕ್ಕೆ ಬಳಸುತ್ತಿದ್ದ ಕದಿಮನೊಬ್ಬನನ್ನು ಕಳ್ಳತನ ಮಾಡಿ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಆಗಸ್ಟ್ 25 ರಂದು ಧರ್ಮಸ್ಥಳ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌.


ಆಗಸ್ಟ್  9 ರಂದು ರಾತ್ರಿ 10 ಗಂಟೆಯಿಂದ ಆಗಸ್ಟ್ 10 ರ ಬೆಳಿಗ್ಗೆ 6.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಪ್ರಸನ್ನ ಅರಿಗ ಎಂಬವರ ಪದ್ಮಾಂಬ ಪ್ರಾವಿಜನ್ ಸ್ಟೋರ್ ರಾಡ್ ನಿಂದ ಬೀಗ ಮುರಿದು ಒಳಹೋಗಿ ಕ್ಯಾಶ್ ಕೌಂಟರ್ ನಲ್ಲಿದ್ದ ಐದು ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಸನ್ನ ಅರಿಗ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 


 

ಧರ್ಮಸ್ಥಳ ಪೊಲೀಸ್‌ ಸಬ್ ಇನ್ಸ್ಪೆಕ್ಟರ್ ಅನಿಲ್‌ ಕುಮಾರ್ ತಂಡ ಆಗಸ್ಟ್25 ರಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳ್ಳತನ ಮಾಡಿಕೊಂಡು ಸ್ಕೂಟರ್ ವಾಹನದಲ್ಲಿ ಕಾರ್ಕಳ ಮನೆಗೆ ಹೋಗುತ್ತಿದ್ದಾಗ ಅಡ್ಡಹಾಕಿ ವಾಹನ ಪರಿಶೀಲನೆ ನಡೆಸಿದಾಗ ದಾಖಲೆಗಳಿಲ್ಲದೆ  ಅನುಮಾನಸ್ಪದವಾಗಿ ವರ್ತಿಸುತ್ತಿದ್ದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಕೂಟರ್ ಕಳ್ಳತನ ಮಾಡಿ ಅದರಲ್ಲಿಯೇ ಹಲವು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ‌‌. ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ,ಅತ್ತೂರು ಗ್ರಾಮದ ದಿ.ಕೊರಗಪ್ಪ ಪೂಜಾರಿ ಮಗನಾದ  ಸುರೇಶ ಕೆ. ಪೂಜಾರಿ(50) ಎಂಬಾತ ಆರೋಪಿಯಾಗಿದ್ದಾನೆ.ಈ ಆರೋಪಿಯು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ KA-21-U-9418 ನಂಬರಿನ ಸ್ಕೂಟಿಯೊಂದನ್ನು ಕಳ್ಳತನ ಮಾಡಿ ಸದ್ರಿ ಸ್ಕೂಟಿಯನ್ನು ಉಪಯೋಗಿಸಿಕೊಂಡು ಸುಮಾರು ಒಂದುವರೆ ತಿಂಗಳಿನಿಂದ ಧರ್ಮಸ್ಥಳ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ನೆರಿಯಾ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ, ವೇಣೂರು ಸೇರಿ ಸುಮಾರು 25 ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಕಳವು ಮಾಡಿದ್ದು. ಈತನು ಮಟ್ಕಾ (ಓಸಿ) ಆಡುವ ಚಟವುಳ್ಳವನಾಗಿದ್ದು, ಕಳ್ಳತನ ಮಾಡಿದ ಹಣವನ್ನು ಮಟ್ಕಾ ಆಟಕ್ಕೆ ಕಟ್ಟಿ ಸೊತಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿರುತ್ತಾನೆ. 


ಈತನು ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆ, ಹಿರಿಯಡಕ ಠಾಣೆ, ಪಡುಬಿದ್ರಿ ಠಾಣೆ, ಮುಲ್ಕಿ ಠಾಣೆ, ಹೆಬ್ರಿ ಠಾಣೆ, ಉಡುಪಿ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮತ್ತು ಬೆಳಗಾಂ ಮಾರ್ಕೆಟ್‌ ಪೊಲೀಸ್‌ ಠಾಣೆಗಳು ಸೇರಿ ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು. ಕಳೆದ ಎರಡು ತಿಂಗಳು ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದು ವಾಪಸ್ ಕಳ್ಳತನ ಕೃತ್ಯ ಮುಂದುವರೆಸಿಕೊಂಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.ಆರೋಪಿಯಿಂದ 20,220 ರೂಪಾಯಿ ನಗದು ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಉಪಯೋಗಿಸಿದ KA-21-U-9418 ನಂಬರಿನ ಸ್ಕೂಟಿ ವಾಹನ ಅಂದಾಜು ಮೌಲ್ಯ 25 ಸಾವಿರ ಅಗಿದ್ದು ಅದನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸೊತ್ತುಗಳು ಒಟ್ಟು ಅಂದಾಜು ಮೌಲ್ಯ 45 ಸಾವಿರ ಅಗಿದ್ದು. ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಆಗಸ್ಟ್ 26 ರಂದು (ಇಂದು) ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ‌.


ಈ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನಿಲ್ ಕುಮಾರ್ ಡಿ, ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ಅಲ್ಲದೇ ಈ ಹಿಂದೆ ಪಿಎಸ್ಐ ಆಗಿದ್ದ (ತನಿಖೆ) ಲೋಲಾಕ್ಷ ಪಿ ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್ ತಂಡದ ಸಿಬ್ಬಂದಿಗಳಾದ ರಾಜೇಶ್‌, ಪ್ರಶಾಂತ್, ಶೇಖರ್, ಸತೀಶ ನಾಯ್ಕ ಜಿ, ಶಶಿಧರ, ಮಂಜುನಾಥ,ಧರ್ಮಪಾಲ್, ಅಸ್ಲಾಂ, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ,ಅಭಿಜಿತ್ ಮೆಹಬೂಬ್, ನಾಗರಾಜ ಬುಡ್ರಿ, ದೀಪು, ಮಧು, ಹರೀಶ್, ಜಗದೀಶ್ , ಚಾಲಕ ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಸವಣೂರು ಶ್ರೀ ವಿಷ್ಣು ಮೂರ್ತಿ ದೇವಾಲಯದ ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಸಮರ್ಪಣೆ

Posted by Vidyamaana on 2024-02-06 18:07:40 |

Share: | | | | |


ಸವಣೂರು ಶ್ರೀ ವಿಷ್ಣು ಮೂರ್ತಿ ದೇವಾಲಯದ ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಸಮರ್ಪಣೆ

ಪುತ್ತೂರು: ಫೆ. ೭ ಮತ್ತು ೮ ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಸಮರ್ಪಣೆಯು ಫೆ  ೬ ರಂದು ಸವಣೂರು ಶ್ರೀ ಪದ್ಮಾವತೀ ದೇವಿಯ ಬಸದಿ ವಠಾರದಿಂದ ಹೊರಟು ಸವಣೂರು ಮುಖ್ಯ ರಸ್ತೆಯಾಗಿ ಪರಣೆ ಮಾರ್ಗವಾಗಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ತಲುಪಿತು.

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿಯವರು ತೆಂಗಿನಕಾಯಿ ಒಡೆಯುವ ಮೂಲಕ ಹಸಿರುಹೊರೆ ಕಾಣಿಕೆ ಸಮರ್ಪಣೆಗೆ ಚಾಲನೆಗೈದರು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ನಾರಾಯಣ ಬಡೆಕಿಲ್ಲಾಯರವರು ದೇವಾಲಯದ ವಠಾರದಲ್ಲಿ ಹಸಿರುಹೊರೆ ಕಾಣಿಕೆಗೆ ಆರತಿ  ಬೆಳಗಿ, ಸ್ವಾಗತಿಸಿದರು.  ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಕಾರ್‍ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ನಿಕಟಪೂರ್ವಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಕಾರ್‍ಯದರ್ಶಿ ರಾಘವ ಗೌಡ ಸವಣೂರು, ಉಪಾಧ್ಯಕ್ಷ ಗಂಗಾಧರ್ ಸುಣ್ಣಾಜೆ, ಪುರಂದರ ಬಾರಿಕೆ, ಸತೀಶ್ ಬಲ್ಯಾಯ ಕನಡಕುಮೇರು, ನಾರಾಯಣ ಪೂಜಾರಿ ಕೆಯ್ಯೂರು,  ಜಯರಾಮ ರೈ ಮೂಡಂಬೈಲು ಕನಡಕುಮೇರು, ಜಯಪ್ಪ ಗೌಡ ಸವಣೂರು, ಭಾಸ್ಕರ ಗೌಡ ಅಡೀಲು, ರುಕ್ಮಯ್ಯ ಗೌಡ ಹೊಸವೊಕ್ಲು, ರಾಮಚಂದ್ರ ಕೊಡಂಕೀರಿ, ನಾರಾಯಣ ಪೂಜಾರಿ ಮಾಲೆತ್ತಾರು,  ಅಂಗಾರ ಸವಣೂರು, ಕಿರಣ್ ಕೋಡಿಬೈಲು, ವೆಂಕಪ್ಪ ಗೌಡ ಮಾಲೆತ್ತಾರು, ಪ್ರವೀಣ್ ಬಾರಿಕೆ ಸಹಿತ ನೂರಾರು ಮಂದಿ ಭಾಗವಹಿಸಿದರು. 

ಫೆ ೭-೮ ಜಾತ್ರೋತ್ಸವ 

ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಫೆ. ೭ ಮತ್ತು ೮ ರಂದು ಜರಗಲಿದೆ. ಫೆ ೭ ರಂದು ಬೆಳಿಗ್ಗೆ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್‍ಯಕ್ರಮಗಳು, ಮಧ್ಯಾಹ್ನನ ಪ್ರತಿಷ್ಠಾ ದಿನದ ಪೂಜೆಯ ಬಳಿಕ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ರಾತ್ರಿ ರಂಗಪೂಜೆ , ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತಕಟ್ಟೆ ಪೂಜೆ ಸುಡುಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿಯ ಅನ್ನದಾನ ಸೇವಾಕರ್ತರಾಗಿ ಗ್ರಾಮಸ್ಥರು ಮತ್ತು ಪರವೂರದಾನಿಗಳು ಸಹಕರಿಸಲಿದ್ದಾರೆ. ಫೆ. ೮ ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮದ್ಯಾಹ್ನ ಅನ್ನಸಂತರ್ಪಣೆಯು ಸವಣೂರುಗುತ್ತು ಕುಟುಂಬಸ್ಥರ ಸೇವಾರ್ಥ ನಡೆಯಲಿದೆ. ರಾತ್ರಿ ೮ ರಿಂದ ಶ್ರೀ ಉಳ್ಳಾಲ್ತಿ ದೈವದ ನೇಮೋತ್ಸವ  ನಡೆದ ಬಳಿಕ ಅದೇ ದಿನ ಶ್ರೀಮತಿ ವಿಸ್ಮಿತಾ ಸಾಜನ್ ಹೆಗ್ಡೆರವರ ಸೇವಾರ್ಥ ಶ್ರೀ ಉಳ್ಳಾಲ್ತಿ ದೈವದ ಹರಿಕೆ ನೇಮೋತ್ಸವ ನಡೆಯಲಿದೆ. ರಾತ್ರಿಯ ಅನ್ನಸಂತರ್ಪಣೆಯು  ಶ್ರೀಮತಿ ಕವಿತಾ ವಿ.ಶೆಟ್ಟಿ ಮತ್ತು ಕು.ದೇಷ್ನಾ ಶೆಟ್ಟಿ ಬೆಂಗಳೂರುರವರ ಸೇವಾರ್ಥ ನಡೆಯಲಿದೆ  ಎಂದು ದೇವಾಲಯದ ಆಡಳಿತದಾರ ಸವಣೂರುಗುತ್ತು ಡಾ.ರತ್ನಾಕರ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ, ಕಾರ್‍ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆರವರು ತಿಳಿಸಿದ್ದಾರೆ.



Leave a Comment: