ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

Posted by Vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

Posted by Vidyamaana on 2024-01-22 09:05:12 |

Share: | | | | |


ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

ಶಿವಮೊಗ್ಗ, (ಜನವರಿ 22): ಯುವತಿಯೋರ್ವಳಿಗೆ ಮದುವೆ (Marriage) ನಿಶ್ಚಯವಾಗಿತ್ತು. ಇನ್ನೇನು ಮದುವೆಗೆ ಎರಡು ವಾರ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದ್ರೆ, ಮದುವೆಯಾಗಬೇಕಿದ್ದ ಯುವತಿಯೇ ಸಾವಿನ ಮನೆ ಸೇರಿದ್ದಾಳೆ. ಹೌದು…ಮದುವೆಗೆ 13 ದಿನಗಳು ಇರುವಾಗ ಯುವತಿಯೊಬ್ಬಳು‌ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ. 13 ದಿನದಲ್ಲಿ ಹಸೆಮಣೆ ಏರಬೇಕಿದ್ದ ಚೈತ್ರಾ(26) ನೇಣಿಗೆ ಶರಣಾಗಿದ್ದಾಳೆ.ಚೈತ್ರಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು. ಆದ್ರೆ, ಇದೀಗ ಏಕಾಏಕಿ ಚೈತ್ರ ಆತ್ಮಹತ್ಯೆಗೆ ಶರಣಾಗಿದ್ದು,ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.


ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಾರ್ವಾಕ ನಿವಾಸಿ ತಾರಾನಾಥ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-11-05 11:07:32 |

Share: | | | | |


ಚಾರ್ವಾಕ ನಿವಾಸಿ ತಾರಾನಾಥ್  ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ಕಡಬ ತಾಲೂಕಿನ ಚಾರ್ವಾಕ ನಿವಾಸಿ ತಾರಾನಾಥ ಎನ್ನುವವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ಕಡಬ ತಾಲೂಕಿನ ಬೊಮ್ಮಳಿಕೆ ಪದ್ಮನಾಭ ಗೌಡ ಎನ್ನುವವರ ಪುತ್ರ ತಾರಾನಾಥ (39ವ.) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು,  ತನ್ನ ರೂಮ್ ನಲ್ಲೇ ನ.3ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಈ ಬಗ್ಗೆ ಪ್ರಕರಣ ದಾಖಲಾಗಿದೆ. 


ಮೃತರು ತಂದೆ ತಾಯಿ ಪತ್ನಿ ಪುತ್ರನನ್ನು ಅಗಲಿದ್ದಾರೆ.  ನ.5 ರಂದು ಮೃತದೇಹ ತವರೂರಿಗೆ ಆಗಮಿಸಲಿದೆ.

ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್ ಬದಲಿ ಮಾರ್ಗ ಮೂಲಕ ತೆರಳಲು ಸೂಚನೆ

Posted by Vidyamaana on 2024-03-13 12:04:14 |

Share: | | | | |


ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್  ಬದಲಿ ಮಾರ್ಗ  ಮೂಲಕ ತೆರಳಲು ಸೂಚನೆ

ಸಕಲೇಶಪುರ: ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ರಲ್ಲಿ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಟ್ಯಾಂಕ‌ರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ..

ಮಾರ್ಗಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ನೂರಾರು ವಾಹನಗಳು ನಿಂತಲ್ಲೆ ನಿಂತಿವೆ.

ಬೆಂಗಳೂರು-ಹಾಸನ-ಮಂಗಳೂರು:

ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಹೋಗಿದ್ದು ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.ಪಲ್ಟಿಯಾದ ಗ್ಯಾಸ್ ಟ್ಯಾಂಕರ್‌ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ.ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ.

ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ : ಆರೋಪಿಗೆ ಜಾಮೀನು

Posted by Vidyamaana on 2023-12-06 21:25:29 |

Share: | | | | |


ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ : ಆರೋಪಿಗೆ ಜಾಮೀನು

ಪುತ್ತೂರು: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು, ಅಪಹರಿಸಿ, ನಂತರ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಕಡಬದ  ಯಜ್ಞೇಶ್ ಎಂಬವರಿಗೆ  ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಘಟನೆಯ ಹಿನ್ನಲೆ :

ದಿನಾಂಕ 10/10/2020 ರಂದು ಬೆಳಿಗ್ಗೆ 07:30 ಗಂಟೆಗೆ ಅಪ್ರಾಪ್ತ ಬಾಲಕಿಯು ತನ್ನ ಮನೆಯಿಂದ ಹೊರಡುವಾಗ ತನಗೆ ಇನ್ನು ಮೂರು ದಿನ ವಿಶೇಷ ತರಗತಿಯಿದ್ದು, ಬೊಳುವಾರಿನ  ತನ್ನ ಗೆಳತಿಯ ಮನೆಗೆ ಹೋಗಿ ಶುಕ್ರವಾರದಂದು ಸಂಜೆ ಮನೆಗೆ ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿರುತ್ತಾಳೆ. ಬಳಿಕ ಅಪ್ರಾಪ್ತ ಬಾಲಕಿಯು ಮನೆಗೆ ಫೋನ್ ಮಾಡದೆ ಇರುವುದರಿಂದ, ಅವಳ ಸ್ನೇಹಿತೆಯಲ್ಲಿ ವಿಚಾರಿಸಿದಾಗ, ಅವಳು ಸ್ನೇಹಿತೆಯ ಮನೆಗೆ ಹೋಗದೆ ಇರುವುದನ್ನು ತಿಳಿದು, ನಂತರ  ಕಾಲೇಜಿನಲ್ಲಿ ವಿಚಾರಿಸಿದಾಗ, ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದು ನಂತರ ಬಂದಿರುವುದಿಲ್ಲ ಎಂಬುದನ್ನು ತಿಳಿದು, ಅಪ್ರಾಪ್ತ ಬಾಲಕಿಯ ತಂದೆಯು  ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು  ಭಾರತೀಯ ದಂಡ ಸಂಖ್ಯೆಯ ಕಲಂ 363 ರಂತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಅಪ್ರಾಪ್ತ ಬಾಲಕಿಯು ತನ್ನ ತಂದೆಯೊಂದಿಗೆ ದಿನಾಂಕ 13/10/2023 ರಂದು ಪೊಲೀಸ್ ಠಾಣೆಗೆ ಹಾಜರಾಗಿ ಆರೋಪಿಯನ್ನು ಕಳೆದ ಮೂರು ತಿಂಗಳಿನಿಂದ ಪ್ರೀತಿಸುತ್ತಿದ್ದು, ದಿನಾಂಕ 10 /10 /2023 ರಂದು ಮಡಿಕೇರಿಗೆ ಹೋಗಿ ಅಲ್ಲಿ ಆರೋಪಿಯ  ಅತ್ತೆ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಈ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 4ರನ್ವಯ ಪ್ರಕರಣ ದಾಖಲಿಸಿ, ತದನಂತರ ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ  ಯಜ್ಞೆಶ್ ರವರನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದರು.


    ಆರೋಪಿಯು ತನ್ನ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ  ಶ್ರೀ ಮಹೇಶ್ ಕಜೆ ಅವರ ಮುಖಾಂತರ   ಜಾಮೀನು ಕೋರಿ ಅರ್ಜಿ   ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್ ವಿ ರವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಬೆಂಗಳೂರು :ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ : ಓರ್ವ ಶಂಕಿತನನ್ನು ವಶಪಡಿಸಿಕೊಂಡ ಪೊಲೀಸರು

Posted by Vidyamaana on 2024-03-02 07:21:16 |

Share: | | | | |


ಬೆಂಗಳೂರು :ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ : ಓರ್ವ ಶಂಕಿತನನ್ನು ವಶಪಡಿಸಿಕೊಂಡ ಪೊಲೀಸರು

ಬೆಂಗಳೂರು : ನಗರದ ರಾಮೇಶ್ವರಂ ಕೆಫೆ ಹೊಟೆಲ್ ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.ಬೆಳಗ್ಗೆ ಸುಮಾರು 11.40ರ ವೇಳೆಗ ಆಗಂತುಕ ರಾಮೇಶ್ವರಂ ಕೆಫೆ ಬಂದಿದ್ದಾನೆ.

ಹೆಗಲಿಗೆ ಸೈಡ್ ಬ್ಯಾಗ್, ತಲೆಗೆ ಕ್ಯಾಪ್ ಹಾಕಿಕೊಂಡು ರಾಮೇಶ್ವರಂ ಕೆಫೆ ಪ್ರವೇಶಿಸಿದ್ದಾನೆ. ಹೊಟೇಲ್ ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ. ನಂತರ ತಿಂಡಿ ತಿಂದು ಬ್ಯಾಗ್ ವೊಂದನ್ನ ಹ್ಯಾಂಡ್ ವಾಷ್ ಬಳಿ ಇರಿಸಿದ್ದಾನೆ. ಅಲ್ಲಿಂದ ಕೆಫೆ ಸಮೀಪದಲ್ಲಿರೋ ನಿಲ್ದಾಣದಿಂದ ಬಸ್ ಹತ್ತಿ ತೆರಳಿರೋ ಸಾಧ್ಯೆತೆಗಳಿವೆ.ಬ್ಯಾಗ್ ಇಟ್ಟು ಒಂದು ಘಂಟೆಯ ನಂತರ ಬ್ಲಾಸ್ಟ್ ಆಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ಯಾರೆಂದು ಆಲ್ ಮೋಸ್ಟ್ ಗೊತ್ತಾಗಿದೆ. ಆರೋಪಿ ಪತ್ತೆಗಾಗಿ ಸಿಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದು, ಕೆಲವೇ ಘಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಲಾಗತ್ತದೆ ಎಂದು ಅವರು ಹೇಳಿದರು.

ಶಂಕಿತ 28-30 ವರ್ಷ ವಯಸ್ಸಿನವನಾಗಿದ್ದು, BMTC ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಬಂದು ಕೂಪನ್ ಖರೀದಿಸಿ, ರವಾ ಇಡ್ಲಿ ಆರ್ಡರ್ ಮಾಡಿ, ಬ್ಯಾಗ್ ಇಟ್ಟು ಹೊರಟುಹೋಗಿದ್ದಾನೆ. ಶೋಧ ಕಾರ್ಯಕ್ಕಾಗಿ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ.

Recent News


Leave a Comment: