ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ಪುತ್ತೂರು : ವಿಶ್ವಕರ್ಮ ಮಹೋತ್ಸವ ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

Posted by Vidyamaana on 2023-09-17 18:44:13 |

Share: | | | | |


ಪುತ್ತೂರು : ವಿಶ್ವಕರ್ಮ ಮಹೋತ್ಸವ ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

ಪುತ್ತೂರು: ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿದರು. ಬಳಿಕ ಪುತ್ತೂರು ಪೇಟೆಯ ಮುಖ್ಯರಸ್ತೆಯಿಂದಾಗಿ ಸಾಗಿದ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ಸಾಗಿತು.


ಇಂದು ಮಹತ್ವಾಕಾಂಕ್ಷಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ; ಏನಿದು ಸ್ಕೀಮ್.? ಯಾರಿಗೆ ಲಾಭ.? ಡಿಟೈಲ್ಸ್ ಇಲ್ಲಿದೆ

https://vidyamaana.com/news/prime-Minister-modi-launched-ambitious-Vishwakarma-project-today

ಮೆರವಣಿಗೆಯಲ್ಲಿ ಚೆಂಡೆ, ಕುಣಿತ ಭಜನೆ, ವಿಶ್ವಕರ್ಮ ದೇವರ ಸ್ತಬ್ದಚಿತ್ರ ಗಮನ ಸೆಳೆಯಿತು. ಇದನ್ನನುಸರಿಸಿ ವಿಶ್ವಕರ್ಮ ಸಮುದಾಯದವರು ಮೆರವಣಿಗೆಯಲ್ಲಿ ಸಾಗಿಬಂದರು.ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳಾದ ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ,


ವಿಶ್ವಕರ್ಮ ಯುವ ಸಮಾಜ, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಶ್ರೀ ಆನೆಗೊಂದಿ ಗುರು ಸೇವಾ ಪರಿಷತ್ತಿನ ಪುತ್ತೂರು ವಲಯ, ಪುತ್ತೂರು ವಿಶ್ವಕರ್ಮ ಯುವ ಮಿಲನ್, ಪಂಚಮುಖಿ ಗೆಳೆಯರ ಬಳಗ ಕೋರ್ಟ್‌ ರಸ್ತೆ ಪುತ್ತೂರು, ವಿಶ್ವಕರ್ಮ ಮಹಿಳಾ ಮಂಡಳಿ, ಬೀರಮಲೆ ವಿಶ್ವಕರ್ಮ ಸೇವಾ ಸಂಘ, ಬೀರಮಲೆ ಗಾಯತ್ರಿ ಮಹಿಳಾ ಮಂಡಳಿ, ಉಪ್ಪಿನಂಗಡಿ ವಿಶ್ವಕರ್ಮ ಸೇವಾ ಸಂಘ, ಬೊಳುವಾರು ಭಾವನಾ ಕಲಾ ಆರ್ಟ್ಸ್, ಬೀರಮಲೆ ವಿಶ್ವಕರ್ಮ ಯುವಕ ಸಂಘ, ಉಪ್ಪಿನಂಗಡಿ ಕಾಳಿಕಾಂಬಾ ಮಹಿಳಾ ಸಂಘ, ದ.ಕ. ಜಿಲ್ಲಾ ಕಬ್ಬಿಣ ಕೆಲಸಗಾರರ ಸಂಘ ಸಹಕರಿಸಿತು.

ಬೆಳ್ತಂಗಡಿ ಹೆದ್ದಾರಿ ಬದಿ ಅಂಗಡಿ ಪುಡಿಗೈದ ಕಿಡಿಗೇಡಿಗಳು

Posted by Vidyamaana on 2023-12-03 09:08:40 |

Share: | | | | |


ಬೆಳ್ತಂಗಡಿ ಹೆದ್ದಾರಿ ಬದಿ ಅಂಗಡಿ ಪುಡಿಗೈದ ಕಿಡಿಗೇಡಿಗಳು

ಬೆಳ್ತಂಗಡಿ: ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿ ಗಳು ರಾತ್ರಿ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.



ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್‌ ಅಜೀಜ್‌ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿ ಇರಿಸಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್‌ ಅಜೀಜ್‌ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರು ವುದು ಕಂಡು ಬಂದಿದೆ.


ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

Posted by Vidyamaana on 2024-04-21 08:44:30 |

Share: | | | | |


ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

ಪುತ್ತೂರು: ಕಲ್ಲಾರೆ ಶಿವಬ್ರಾಹ್ಮಣ್ಯ (ಸ್ಥಾನಿಕ) ಸಮಾಜ ಸೇವಾ ಸಂಘ ೧೯೩೬ರಲ್ಲಿ ಸ್ಥಾಪನೆಗೊಂಡು, ಕಳೆದ೮೮ ವರ್ಷಗಳಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ನೂತನವಾಗಿ ಸುಮಾರು ೧.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.೨೪ರಂದು ಸಾಯಂಕಾಲ ೬.೩೦ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಕೆ. ಜಗನ್ನಿವಾಸ ರಾವ್ ಹೇಳಿದರು.

ಡಿಜಿ - ಐಜಿಪಿ ಅಲೋಕ್ ಮೋಹನ್‌ ಭೇಟಿ ಮಾಡಿದ ಬಿಜೆಪಿ ನಿಯೋಗ

Posted by Vidyamaana on 2023-09-06 21:03:33 |

Share: | | | | |


ಡಿಜಿ - ಐಜಿಪಿ ಅಲೋಕ್ ಮೋಹನ್‌ ಭೇಟಿ ಮಾಡಿದ ಬಿಜೆಪಿ ನಿಯೋಗ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆ, ಬೆದರಿಕೆ, ಕಿರುಕುಳ ಆರೋಪ ಕೇಳಿಬಂದಿದ್ದು, ಹಾಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ನೇತೃತ್ವದಲ್ಲಿ ಡಿಜಿ&ಐಜಿಪಿ ಅಲೋಕ್ ಮೋಹನ್​ರನ್ನು ಬುಧವಾರ ಭೇಟಿ ಮಾಡಲಾಗಿದೆ.


ಶಾಸಕ ರವಿ ಸುಬ್ರಮಣ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಕಾನೂನು ಪ್ರಕೋಷ್ಠದ ಮುಖಂಡ ವಿವೇಕ್ ರೆಡ್ಡಿ ಉಪಸ್ಥಿತರಿದ್ದು, ನಿಯೋಗದ ಭೇಟಿ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗೈರಾಗಿದ್ದಾರೆ.


ಕಾರ್ಯಕರ್ತರನ್ನು ಅನಗತ್ಯ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು: ಎನ್. ರವಿಕುಮಾರ್


ನಗದರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ಮಾತನಾಡಿ, ಬಿಜೆಪಿ ಕಾರ್ಯಕರ್ತರಾಗಿರುವ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್​ಗಳ ಮನೆಗೆ ಹೋಗಿ ಎಫ್​ಐಆರ್ ಮಾಡದೇ ಎರಡು ದಿನಗಳ ಕಾಲ ಕೂರಿಸಿಕೊಂಡಿದ್ದಾರೆ. ಪೊಲೀಸ್ ದೌರ್ಜನ್ಯದ ಮೂಲಕ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ.


ಪೊಲೀಸ್ ಅಧಿಕಾರಿಗಳು ಕಾನೂನಾತ್ಮಕ ಕರ್ತವ್ಯ ಮಾಡಲಿ. ಕಾರ್ಯಕರ್ತರನ್ನು ಅನಗತ್ಯ ವಿಚಾರಣೆ ಮಾಡುವುದನ್ನು ಬಂದ್ ಮಾಡಬೇಕು. ಏನೇ ಇದ್ದರೂ ನೋಟೀಸು ಕೊಡಿ, ಪಕ್ಷ ಉತ್ತರ ಕೊಡುತ್ತದೆ. ಬಿಜೆಪಿ ಕಾರ್ಯಕರ್ತರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ.

ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

Posted by Vidyamaana on 2023-01-29 08:38:59 |

Share: | | | | |


ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

ಶಾಲಾ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಆನ್ಲೈನ್ ಗೇಮ್ಗಳ ಹಾವಳಿ ಜೋರಾಗಿದೆ. ಬೇಡ ಬೇಡ ಎಂದರೂ ಮಕ್ಕಳು ಇಂತಹ ಆನ್ಲೈನ್ ಗೇಮ್ಗಳ ದಾಸರಾಗುತ್ತಿದ್ದಾರೆ. ಇನ್ನೊಂದರ್ಥದಲ್ಲಿ ದಾಸರಾಗುವಂತೆ ಮಾಡಲಾಗುತ್ತಿದೆ. ಆದ್ದರಿಂದ ಪೋಷಕರೇ, ಶಿಕ್ಷಕರೇ ಎಚ್ಚರೆಚ್ಚರ ಎಚ್ಚರ!!

ಮಕ್ಕಳು ಹೇಳಿದಂತೆ ಕೇಳುತ್ತಿಲ್ಲ ಎಂದು ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರೇ, ಆನ್ಲೈನ್ ಕ್ಲಾಸ್ಗೆಂದು ಮೊಬೈಲ್ ಕಡ್ಡಾಯ ಮಾಡಿರುವ ಶಿಕ್ಷಕರೇ, ದಯವಿಟ್ಟು ಇತ್ತ ಕಡೆ ಸ್ವಲ್ಪ ಗಮನ ಕೊಡಿ. ಒಂದಷ್ಟು ಸಮಯ ಫ್ರೀ ಮಾಡಿಕೊಂಡು, ಓದಿ. ಸಾವನ್ನು ಮೈಮೇಲೆ ಎಳೆದುಕೊಂಡ ವಿದ್ಯಾರ್ಥಿಗಳ ಅಪ್ಪ - ಅಮ್ಮನ ಸ್ಥಾನದಲ್ಲಿ ನಿಂತು ಯೋಚಿಸಿ.

ಕರಾವಳಿಯ ಒಂದು ಮನೆ. ಪುಟ್ಟ ಸಂಸಾರದ ಸಂತೋಷಕ್ಕೆ ಕೊಳ್ಳಿ ಇಟ್ಟದ್ದೇ ಮೊಬೈಲ್. ಮೊದಮೊದಲು ಮಗ ಆಡಿಕೊಂಡಿರಲಿ ಎಂದು ಕೈಗೆ ಮೊಬೈಲ್ ನೀಡಿದರು ಪೋಷಕರು. ಆತ ಮಾಡುತ್ತಿದ್ದ ಚೇಷ್ಟೇಗಳನ್ನು ಕಂಡು ಸಂತೋಷ ಪಡುತ್ತಿದ್ದರು. ಬರಬರುತ್ತಾ, ಮಗ ಆನ್ಲೈನ್ ಗೇಮ್ಗಳ ದಾಸನಾದ.

ಗೇಮ್ ಒಂದರಲ್ಲಿ ಸಂಭಾಷಣೆ ಮಾಡುವ ಮೂಲಕ ಆಟ ಮುಗಿಸಲಾಗುತ್ತದೆ - ಅಲ್ಲಿ ಯಾರಾದರೂ ಇದ್ದೀರಾ ಎಂದು ಹುಡುಗ ಪ್ರಶ್ನಿಸುತ್ತಾನೆ. ಆ ಕ್ಷಣ ಮೊಬೈಲ್ ಸ್ಕ್ರೀನ್ ಮೇಲ್ಗಡೆ ವ್ಯಕ್ತಿಯೋರ್ವ ಕಾಣಿಸಿಕೊಳ್ಳುತ್ತಾನೆ. ಆತನ ತಲೆಗೇ ಗನ್ನಿಂದ ಶೂಟ್ ಮಾಡಬೇಕು. ಅಲ್ಲಿಗೆ ಹುಡುಗ ಜಯಶಾಲಿ ಎಂದು ಘೋಷಿಸಲಾಗುತ್ತದೆ.

ಇನ್ನೊಂದು ಗೇಮ್ ಹೀಗಿತ್ತು - ಆಟದ ಕೊನೆಯಲ್ಲಿ ಒಂದು ಮೆಟ್ಟಿಲಿನಿಂದ ಇನ್ನೊಂದು ಮಗ್ಗುಲಿಗೆ ಹಾರುವಂತೆ ಸೂಚನೆ ನೀಡಲಾಯಿತು. ಅದರಂತೆ ಹುಡುಗ ಹಾರಿದ. ಅಲ್ಲಿಗೆ ಜಯಶಾಲಿ ಎಂದು ಘೋಷಿಸಲಾಯಿತು.

ಈ ಎರಡು ಘಟನೆಗಳು ಪೋಷಕರ ಗಮನಕ್ಕೆ ಬಂದಿತು. ಇದ್ಯಾಕೋ ಅನಾಹುತಕ್ಕೆ ದಾರಿ ಎನ್ನುವುದನ್ನು ಮನಗಂಡರು. ಈಗ, ಮಗನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ನೋಡಿದರು. ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆತ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ. ದಾರಿ ಕಾಣದ ತಂದೆ, ಮೊಬೈಲ್ ಕಿತ್ತುಕೊಂಡು ನೆಲಕ್ಕಪ್ಪಳಿಸಿಯೇ ಬಿಟ್ಟರು. ಅಲ್ಲಿಗೀಕಥೆ ಮುಗಿಯಿತು.

ವಾಸ್ತವ ಹೇಗಿದೆ ನೋಡಿ. ಪುತ್ತೂರಿನಂತಹ ಬೆಳೆಯುತ್ತಿರುವ ಪಟ್ಟಣದಲ್ಲಿ ಒಂದಾದ ನಂತರ ಒಂದರಂತೆ ವಿದ್ಯಾರ್ಥಿಗಳ ಸಾವು ದಾಖಲಾಗುತ್ತಿದೆ. ಪೋಷಕರು ಹೇಳದೇ ಇದ್ದರೂ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇದ್ದರೂ, ಆನ್ಲೈನ್ ಆಟದ ಹುಡುಗಾಟವೇ, ಸಾವಿನೂಟಕ್ಕೆ ಕಾರಣ ಎನ್ನುವುದು ಖಾತ್ರಿಯಾಗಿದೆ.

ಅದೇಷ್ಟು ವಿದ್ಯಾರ್ಥಿಗಳು ಆನ್ಲೈನ್ ಗೇಮ್ಗಳ ದಾಸರಾಗಿದ್ದಾರೋ? ಮುಂದೆ ಅದೆಷ್ಟು ವಿದ್ಯಾರ್ಥಿಗಳು ಇದೇ ರೀತಿ ಸಾವನ್ನು ಮೈಮೇಲೆ ಎಳೆದುಕೊಳ್ಳುತ್ತಾರೋ? ಕಾದು ನೋಡುವುದಲ್ಲದೇ ಬೇರೆ ವಿಧಿಯಿಲ್ಲ. ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಸಾವಿನ ಹಿಂದಿನ ರಹಸ್ಯವನ್ನು ಬಿಡಲೊಪ್ಪದ ಪೋಷಕರು, ಇನ್ನೊಂದಷ್ಟು ಮಕ್ಕಳ ಸಾವಿಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಸಾವಿನ ಹಿಂದಿನ ಮರ್ಮವನ್ನು ಬಗೆದು ತೆಗೆಯಲು ವಿಫಲವಾದ ಪೊಲೀಸರು, ಮತ್ತಷ್ಟು ಮಕ್ಕಳ ಸಾವನ್ನು ಕಣ್ಣಾರೆ ಕಾಣುವ ಭಾಗ್ಯವನ್ನು ಎದುರು ನೋಡುತ್ತಿದ್ದಾರೆ.


ಇದೆಲ್ಲಾ ಬೇಕಾ!?

ಹೌದು ಇದೆಲ್ಲಾ ಬೇಕು ಎನ್ನುತ್ತಿವೆ ಆನ್ಲೈನ್ ಗೇಮಿಂಗ್ ಕಂಪೆನಿಗಳು. ಯಾಕೆ ಗೊತ್ತಾ? ಅದರಿಂದ ಬರುವ ಆದಾಯವೇ ಲೆಕ್ಕವಿಲ್ಲದಷ್ಟು. ಇಂದು ಭಾರತದಲ್ಲಿ ಅದೇಷ್ಟೋ ಆನ್ಲೈನ್ ಗೇಮಿಂಗ್ ಕಂಪೆನಿಗಳಿವೆ. ಆ ಕಂಪೆನಿಗಳು ಅದೇಷ್ಟು ದುಡ್ಡನ್ನು ಬಾಚಿಕೊಳ್ಳುತ್ತಿವೆ. ಕೊರೋನಾ ಸಾಂಕ್ರಾಮಿಕ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಾಗ, ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗ ಆನ್ಲೈನ್ ಗೇಮಿಂಗ್ ಕಂಪೆನಿಗಳು ಯದ್ವಾತದ್ವಾ ಮಾರುಕಟ್ಟೆ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ ಅದರ ಲಾಭವನ್ನು ಕ್ರಮೇಣವಾಗಿ ಪಡೆಯತೊಡಗಿದವು. ಆನ್ಲೈನ್ ಕ್ಲಾಸ್ಗಳು ಹೆಚ್ಚುತ್ತಿದ್ದಂತೆ, ಆನ್ಲೈನ್ ಗೇಮ್ಗಳು ತಮ್ಮ ಅಸ್ತಿತ್ವವನ್ನು ಪೋಷಕರ ಅರಿವಿಗೆ ಬಾರದಂತೆ ಸ್ಥಾಪಿಸಿಕೊಂಡಿವೆ. ವಿದ್ಯಾರ್ಥಿಗಳು ದಾಸರಾದರೆ, ಪೋಷಕರು ಲೂಸರ್ಸ್ತ ಆಗುತ್ತಿದ್ದಾರೆ.

ಆತ್ಮಹತ್ಯೆಯ ಹಿಂದಿನ ಅಸಲಿಯತ್ತು

ಸಾಲ ಮಾಡಲಿಲ್ಲ, ಪೋಷಕರೋ - ಶಿಕ್ಷಕರೋ ಗದರಲಿಲ್ಲ, ಲವ್ ಫೈಲ್ಯೂರ್ ಆಗಿಯೇ ಇಲ್ಲ, ಪರೀಕ್ಷಾ ಒತ್ತಡವೇ ಎಂದು ಕೇಳಿದರೆ - ಪರೀಕ್ಷಾ ಸಮಯವೇ ಅಲ್ಲ... ಹಾಗಾದರೆ ಪ್ರೌಢಶಾಲಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ? ಪುತ್ತೂರಿನಲ್ಲಿ ಅದೇಷ್ಟೋ ವಿದ್ಯಾರ್ಥಿಗಳು ತಮ್ಮ ಜೀವವನ್ನು ಸಾವಿಗೆ ಆಹುತಿ ನೀಡಿದ್ದಾರೆ. ಆತ್ಮಹತ್ಯೆಯ ಜಾಡು ಹಿಡಿದು ನೋಡಿದರೆ, ಆನ್ಲೈನ್ ಗೇಮ್ಗಳ ವಾಸನೆ. ಸರಿಯಾಗಿ ಗಮನಿಸಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕೊನೆ ಕ್ಷಣದ ಚಲನವಲನ. ಇವೆಲ್ಲಾ ಏನನ್ನು ಸೂಚಿಸುತ್ತವೆ. ಆತ್ಮಹತ್ಯೆಯ ವಿಚಿತ್ರ ಸ್ಟೈಲ್ಗಳನ್ನು. ಅಂದರೆ ಯಾರೋ ಸೂಚನೆ ನೀಡುತ್ತಿದ್ದಾರೆ, ವಿದ್ಯಾರ್ಥಿಗಳು ಅದನ್ನು ಅನುಸರಿಸುತ್ತಿದ್ದಾರೆ.

ಆನ್ಲೈನ್ ಕ್ಲಾಸ್ಗಳು!!!

ಕೊರೋನಾ ಸಾಂಕ್ರಾಮಿಕದ ವೇಳೆಯಲ್ಲಿ ಶುರುವಾದ ಆನ್ಲೈನ್ ಕ್ಲಾಸ್ಗಳು ಇಂದು ನಡೆಯುತ್ತಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಆನ್ಲೈನ್ ಟ್ಯೂಷನ್ಗೂ ಶುರುವಿಟ್ಟುಕೊಂಡಿವೆ. ಪ್ರತಿಯೊಬ್ಬ ಪೋಷಕರಿಗೂ, ಶಿಕ್ಷಕರಿಗೂ ಮೊಬೈಲ್ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವಿರುವಾಗ ಇಂತಹದ್ದೊಂದು ಆನ್ಲೈನ್ ಟ್ಯೂಷನ್ ಬೇಕೇ? ಭೌತಿಕ ತರಗತಿಗಳು ಆರಂಭವಾದ ಈ ದಿನಗಳಲ್ಲಿ, ಆನ್ಲೈನ್ ಕ್ಲಾಸ್ಗಳ ಅಗತ್ಯವಿದೆಯೇ? ಸ್ವಲ್ಪ ಗಮನಿಸಿ! ಮಕ್ಕಳ ಕೈಗೆ ಮೊಬೈಲ್ ಸಿಕ್ಕಿತೆಂದರೆ, ಹಿರಿಯರನ್ನು ಯಾಮಾರಿಸುವಷ್ಟು ನಿಸ್ಸೀಮರಾಗುತ್ತಾರೆ. ಟಚ್ ಸ್ಕ್ರೀನ್ನಲ್ಲಿ ಒಂದು ಟಚ್ಗೆ ಆಪ್ ಬದಲಾಯಿಸಲು ಸಾಧ್ಯ. ಹಾಗಾದರೆ, ಮಕ್ಕಳ ಕೈಯಲ್ಲಿರುವ ಮೊಬೈಲ್ಗೆ ನಿಯಂತ್ರಣ ಹೇಗೆ? ಈ ಆನ್ಲೈನ್ ಕ್ಲಾಸ್ಗಳು ಇನ್ನಾದರೂ ಕಡಿಮೆಯಾದೀತೇ? ಓದು.. ಓದೆಂಬ... ಹಪಹಪಿಗೆ ಮಕ್ಕಳು ಕೈತಪ್ಪುವ ಈ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಕೆ? ಮತ್ತೊಮ್ಮೆ ಆಲೋಚಿಸಿ...

ಯಾಕಿಲ್ಲ ಗಂಭೀರ ತನಿಖೆ!

ವಿದ್ಯಾರ್ಥಿಗಳ ಆತ್ಮಹತ್ಯೆಯ ಕಾರಣ ಕೇಳಿದರೆ, ಇದುವರೆಗೂ ‘ತಿಳಿದುಬಂದಿಲ್ಲ’. ಸುಖಾಸುಮ್ಮನೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಹಾಗಾದರೆ ಇದನ್ನು ಯಾರೂ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ. ಪೋಷಕರು, ಪೊಲೀಸರು, ಸಾರ್ವಜನಿಕರಿಗೆ ಇದರ ಹಿಂದಿನ ಮರ್ಮ ತಿಳಿದುಕೊಳ್ಳಬೇಕು ಎಂದು ಅನಿಸಲೇ ಇಲ್ಲವೇ? ಅಥವಾ ಅವರ ಮಕ್ಕಳು, ನಮಗೇನು ಎಂಬ ತಾತ್ಸಾರವೇ? ಇಂದು ಅಲ್ಲೊಂದು- ಇಲ್ಲೊಂದು ಘಟಿಸುವ ಆತ್ಮಹತ್ಯೆಗಳು, ನಾಳೆ ಮನೆಮನೆಯಲ್ಲೂ ನಡೆದೀತು! ಎಚ್ಚರ!!! ಆದ್ದರಿಂದ ತಿಳಿದವರು ದೂರು ದಾಖಲಿಸುವುದು ಉತ್ತಮ. ಅಥವಾ ಪೊಲೀಸರಾದರೂ ಯಾಕೆ ಇದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿಲ್ಲ. ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶ ಅವರಿಗೂ ಇದೆಯಲ್ಲವೇ? ನಾಳೆ ಘಟಿಸುವ ಅವಘಡಕ್ಕೆ ಇಂದೇ ಯಾಕೆ ಮುನ್ನೆಚ್ಚರಿಕೆ ಕೈಗೊಳ್ಳಬಾರದು? ಒಟ್ಟು ಪ್ರಕರಣಗಳ ಮಾಹಿತಿ ಕಲೆ ಹಾಕಿ, ಗಂಭೀರ ತನಿಖೆಯನ್ನು ಯಾಕೆ ಕೈಗೊಳ್ಳುತ್ತಿಲ್ಲ?


ನೈತಿಕ ಶಿಕ್ಷಣ ನೀಡಿ: ಡಿವೈಎಸ್ಪಿ

ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಮೊಬೈಲ್ ಪ್ರವೇಶಿಸಿತು. ಶೈಕ್ಷಣಿಕ ವಿಷಯಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮೊಬೈಲನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಉತ್ತಮ. ಇಂದು ಕೂಡು ಕುಟುಂಬದ ಕಲ್ಪನೆ ಇಲ್ಲವಾಗಿದೆ. ಅಲ್ಲಿ ಮಕ್ಕಳಿಗೆ ಆಟವಾಡಲು ಅವಕಾಶ ಹಾಗೂ ಸಹವರ್ತಿಗಳು ಸಿಗುತ್ತಿದ್ದರು. ಆದರೆ ಇಂದು ಮಕ್ಕಳು ಒಬ್ಬಂಟಿಯಾಗುತ್ತಿದ್ದಾರೆ. ಮಕ್ಕಳು ಕೀಟಲೆ ಮಾಡುತ್ತಿದ್ದರೆ ಅವರನ್ನು ಸುಮ್ಮನಿರುವಂತೆ ಮಾಡಲು ಮೊಬೈಲ್ ನೀಡುತ್ತಿದ್ದಾರೆ. ಪರಿಣಾಮ, ಸೋಶಿಯಲ್ ಲೈಫ್ ಸಿಂಗಲ್ ಲೈಫ್ ಆಗಿದೆ. ಅಂದರೆ ಇಂತಹ ಪರಿಸ್ಥಿತಿಗೆ ಸಮಾಜವೇ ಒತ್ತಡ ಹಾಕುತ್ತಿದೆ. ಮೃದು ಮನಸ್ಸಿನ ವಿದ್ಯಾರ್ಥಿಗಳ ಮನಸ್ಸಿಗೆ ಇದು ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳು ಮನೆಯಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರೆ, ಪೋಷಕರು ಉತ್ತಮ ಅಭ್ಯಾಸಗಳನ್ನು ಪಾಲಿಸುತ್ತಿರಬೇಕು. ಮಕ್ಕಳು ಅದನ್ನು ಅನುಕರಿಸುತ್ತಾರೆ. 

ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಯಾವ ರೀತಿ ಇರಬೇಕು, ಎದುರಿನ ವ್ಯಕ್ತಿಗೆ ಯಾವ ರೀತಿ ಗೌರವ ನೀಡಬೇಕು ಹಾಗೂ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳು ಮೈದಾನದಲ್ಲಿ ಆಟದಲ್ಲಿ ನಿರತರಾದಂತೆ, ಅವರು ಮೊಬೈಲ್ನಿಂದ ದೂರವಾಗುತ್ತಾರೆ. ಸೈಬರ್ ಕ್ರೈಮ್ ಅಥವಾ ಇನ್ನಾವುದೋ ವಿಚಾರದಲ್ಲಿ ಪೊಲೀಸರ ಪ್ರವೇಶ, ಮಕ್ಕಳ ಬೆಳವಣಿಗೆಗೆ ಪೂರಕವಲ್ಲ. ಬದಲಿಗೆ ಶಿಕ್ಷಕರು, ಪೋಷಕರೇ ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು.                                  ಡಾ.ವೀರಯ್ಯ ಹಿರೇಮಠ್, ಡಿವೈಎಸ್ಪಿ


ಮಕ್ಕಳ ಮೇಲೆ ವಿಶೇಷ ನಿಗಾ ಅಗತ್ಯ: ಬಿಇಓ

ನಮ್ಮಲ್ಲಿ ಆನ್ಲೈನ್ ಕ್ಲಾಸ್ಗಳು ಆಗುತ್ತಿಲ್ಲ. ಎಲ್ಲಾ ಆಫ್ಲೈನ್ ಕ್ಲಾಸ್ಗಳೇ ನಡೆಯುತ್ತಿವೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ನೀಡುವ ಅವಕಾಶವೇ ಇಲ್ಲ. ಮೊಬೈಲ್ಗೆ ಹಣ ಹಾಕಿ, ಯಾವುದೋ ಆಟ ಆಡಿ ತೊಂದರೆ ಅನುಭವಿಸುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು. ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು. ಅಂತರ್ಜಾಲದಿಂದ ದೂರವಿರಬೇಕು, ಪೋಷಕರು ಜಾಗೃತೆ ವಹಿಸಬೇಕು ಮೊದಲಾದ ವಿಚಾರಗಳನ್ನು ಪೋಷಕರಿಗೂ ತಿಳಿಸಿದ್ದೇವೆ. ಅಂತರ್ಜಾಲದಿಂದ ವ್ಯತಿರಿಕ್ತ ಪರಿಣಾಮ ಉಂಟಾದ ಘಟನೆ ಪುತ್ತೂರಿನಲ್ಲಿಲ್ಲ.

ಲೊಕೇಶ್ ಎಸ್.ಆರ್., ಬಿಇಓ, ಪುತ್ತೂರು

ನೆಲ್ಯಾಡಿ : ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು

Posted by Vidyamaana on 2023-06-11 01:09:46 |

Share: | | | | |


ನೆಲ್ಯಾಡಿ : ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ  ಬಿದ್ದ ಕಾರು

ನೆಲ್ಯಾಡಿ : ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಎರ್ಟಿಗಾ ಕಾರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ರಸ್ತೆ ಬದಿಯ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.

ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50) ಎಂದು ಗುರುತಿಸಲಾಗಿದ್ದು, ಗೋಪಿ (48) ಎಂಬವರು ಗಾಯಗೊಂಡವರು.


ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ದಾಖಲಿಸಲಾಗಿದೆ. ಕಾರು ನೀರಿನಲ್ಲಿ ಮುಳುಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Recent News


Leave a Comment: