ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಸುದ್ದಿಗಳು News

Posted by vidyamaana on 2024-07-24 16:44:22 |

Share: | | | | |


ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಸೇರಿಸಬೇಕು ಎಂದು ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ತುಳು ಭಾಷೆಯಲ್ಲೇ ವಿಧಾನಸಭಾ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿದ್ದು , ಶಾಸಕರ ಬೇಡಿಕೆಗೆ ಸರಕಾರದಿಂದ ಗಟ್ಟಿ ಭರವಸೆ ದೊರೆತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಸರಕಾರ ಭರವಸೆಯನ್ನು ನೀಡಿದೆ.

ತುಳುವಿಗೆ ೨೦೦೦ ವರ್ಷದ ಇತಿಹಾಸವಿದೆ

ತುಳುಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ತುಳು ಮಾತನಾಡುವ ಮಂದಿ ವಿಶ್ವದೆಲ್ಲೆಡೆ ಇದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಎಟಂನೇ ಪರಿಚ್ಚೇಧಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇನ್ನೊಂದು ಕಡೆ ಇದೆ ಇದೆಲ್ಲದರ ನಡುವೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಶಾಸಕನಾಗಿ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇನೆ.

೧೯೯೪ ರಲ್ಲಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ, ೨೦೦೭ ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ, ಆಕಾಶವಾಣಿಯಲ್ಲಿ ೧೯೭೬ ರಿಂದ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಅಮೇರಿಕಾದಲ್ಲಿ ಸಿಆರ್ ಎಕ್ಸಾಮ್‌ಗೆ ಅರ್ಜಿ ನಮೂನೆಯಲ್ಲೂ ವಿಶ್ವದ ೧೨೨ ಭಾಷೆಯ ಜೊತೆಗೆ ತುಳುವಿಗೆ ಮಾನ್ಯತೆ ನೀಡಲಾಗಿದೆ, ಗೂಗಲ್ ಸಂಸ್ಥೆಯವರು ತರ್ಜುಮೆ ಮಾಡಬಲ್ಲ ಭಾಷೆಗಳ ಪಟ್ಟಿಯಲ್ಲಿ ತುಳುವನ್ನು ಸೇರ್ಪಡೆ ಮಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ನಮ್ಮ ರಾಜ್ಯದಲ್ಲಿ ತುಳುವನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ಅಧ್ಯಯನ ತಂಡ ಕಳಿಸಿದ್ದೇನೆ

ಬಿಹಾರ, ಪಶ್ಚಿಮಬಂಗಾಳ ಮತ್ತು ಆಂದ್ರಕ್ಕೆ ವಿಶೇಷ ಪ್ರತಿನಿಧಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಳಿಸಿದ್ದೇನೆ. ಈ ಮೂರು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಯಾವ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ ಎಂಬುದನ್ನು ಅಧ್ಯಯನ ನಡೆಲಲಾಗಿದೆ. ಆಂದ್ರದಿಂದ ವರದಿಯನ್ನು ತರಿಸಿದ್ದೇನೆ.. ಈ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಅದರ ಆಧಾರದಲ್ಲಿ ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನು ಸ್ವಂತ ಖರ್ಚಿನಲ್ಲೇ ಅಧ್ಯಯನ ತಂಡವನ್ನು ಮೂರು ರಾಜ್ಯಗಳಿಗೆ ಕಳಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ವಿಶ್ವದಲ್ಲೇ ತುಳವರಿದ್ದಾರೆ, ತುಳುವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ.


ನಿಕ್ಲು ಗಲಾಟೆ ಮಲ್ಪೊಡ್ಚಿ ಕುಲ್ಲುಲೆ ಮಾರ್ರೆ

ಪುತ್ತೂರು ಶಾಸಕ ಅಶೋಕ್ ರೈಯವರು ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಮಧ್ಯದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ರಲ್ಲಿ ಈರ್ ಬೊಕ್ಕ ಪಾತೆರ‍್ಲೆ , ಇತ್ತೆ ಯಾನ್ ಪಾತರೊಂದುಲ್ಲೆ ಎಂದು ಶಾಸಕ ಅಶೋಕ್ ರೈ ವೇದವ್ಯಾಸ ಕಾಮತರಿಗೆ ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಭಾಪತಿ ಯು ಟಿ ಖಾದರ್ ನಿಕ್ಲು ಗಲಾಟೆ ಮಲ್ಪೊಡ್ಚಿ ಮಾರ್ರೆ ಈರ್ ಕುಲ್ಲುಲೆ ಎಂದು ಶಾಸಕ ವೇದವ್ಯಾಸ ಕಾಮತರಿಗೆ ಕುಳಿತುಕೊಳ್ಳಲು ಹೇಳಿದರು.

 ಇದೇನು ಮಂಗಳೂರು ಅಧಿವೇಶನವಾ: ಆರ್ ಅಶೋಕ್

ಸದನದಲ್ಲಿ ಶಾಸಕ ಅಶೋಕ್ ರೈ ಮತ್ತು ಸಭಾಪತಿ ಯು ಟಿ ಖಾದರ್ ರವರು ತುಳುವಿನಲ್ಲಿ ಮಾತನಾಡುತ್ತಿದ್ದ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಇದೇನು ಮಂಗಳೂರು ಅಧಿವೇಶಧನವಾ? ಎಂದು ನಗುತ್ತಲೇ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್ ರವರೇ ನಾವು ತುಳುವಿನಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ಹೇಳುತ್ತೇನೆ. ನೀವು ನಮ್ಮ ಹೋರಾಟಕ್ಕೆ , ನಮ್ಮ ಬೇಡಿಕೆಗೆ ಬೆಂಬಲವನ್ನು ನೀಡಬೇಕು, ಇಡೀ ಸದನ ನಮ್ಮ ನಿಲುವಿಗೆ ಬೆಂಬಲ ನೀಡಬೇಕು ಅ ಮೂಲಕ ತುಳು ಭಾಷೆಗೆ ಸರಕಾರದಿಂದ ಮಾನ್ಯತೆ ದೊರೆಯುವಂತಾಗಲಿ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ತುಳುವಿಗೆ ಲಿಪಿ ಇದೆ, ವಿಶ್ವದಲ್ಲೆಡೆ ತುಳು ಮಾತನಾಡುವ ಮಂದಿ ಇದ್ದಾರೆ ಎಂದು ಹೇಳಿದ ಶಾಸಕ ಅಶೋಕ್ ರೈಯವರು ಸಭಾಧ್ಯಕ್ಷೆರೇ ಈರ್ ಸಪೋರ್ಟು ಮಲ್ಪೊಡು, ಈರ್‌ನ ಸಹಕಾರ ಎಂಕ್ಲೆಗ್ ಬೋಡು ಎಂದು ಮನವಿ ಮಾಡಿದರು.

ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ವೇದವ್ಯಾಸ ಕಾಮತ್

ಸದನದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತುಳು ವಿಚಾರದಲ್ಲಿ ಪ್ರಾರಂಭದಿಂದಲೇ ಸರಕರದ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ನಿಮ್ಮ ಕಾಳಜಿಗೆ ಅಭಿನಂದನೆ; ಸಚಿವ ಖರ್ಗೆ

ತನ್ನ ಸ್ವಂತ ಖರ್ಚಿನಲ್ಲಿ ಅಧ್ಯಯನ ತಂಢವನ್ನು ಮೂರು ರಾಜ್ಯಕ್ಕೆ ಕಳುಹಿಸುವ ಮೂಲಕ ತನ್ನ ಊರಿನ ಮಾತೃಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಡಬೇಕು ಎನ್ನುವ ನಿಮ್ಮ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಿದರು. ಮಾತೃಭಷೆಯ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ ಆದರಲ್ಲೂ ಅಶೋಕ್ ರೈಯವರು ಈವಿಚಾರದಲ್ಲಿ ಒಂದು ಹಜ್ಜೆ ಮುಂದೆ ಇದ್ದಾರೆ ಇದು ಅಭಿನಂದನಾರ್ಹ ಎಂದು ಸಚಿವರು ಸಭೆಯಲ್ಲಿ ಹೇಳಿದರು.

 ಖಂಡಿತವಾಗಿಯೂ ಬೇಡಿಕೆ ಈಡೇರಲಿದೆ: ಪ್ರಿಯಾಂಕ ಖರ್ಗೆ

ಡಾ. ಮೋಹನ್ ಆಳ್ವರ ನೇತೃತ್ವದ ಸಮಿತಿಯ ವರದಿಯಲ್ಲಿ ಸಾಧ್ಯವಿದೆ ಎಂಬುದರ ಬಗ್ಗೆ ವರದಿ ನೀಡಲಾಗಿದೆ.. ತನ್ನ ಸ್ವಂತ ಖರ್ಚಿನಲ್ಲಿ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿದ ಶಾಸಕ ಅಶೋಕ್ ರೈಯವರ ಕಾಳಜಿಯನ್ನು ಮೆಚ್ಚಲೇಬೇಕು. ತುಳು ಭಾಷೆ, ಅದರ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ, ಎಲ್ಲವೂ ಗೌರವದಿಂದ ಕೂಡಿದೆ. ಸರಕಾರದ ಮುಂದೆ ಈ ಪ್ರಸ್ತಾಪ ಇದೆ. ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಸಭೆಗೆ ತಿಳಿಸಿದರು. ವೈಯುಕ್ತಿಕವಾಗಿಯೂ ಈ ಪ್ರಸ್ತಾಪಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವರು ಹೇಳಿದರು.

ಸಚಿವರ ಸಭೆ ಕರೆದು ತೀರ್ಮಾನಿಸಿ: ಸಭಾಪತಿ

ಈ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರನ್ನೊಳಗೊಂಡಂತೆ ಆ ಭಾಗದ ಶಾಸಕರ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವಂತೆ ಸಭಾಪತಿ ಯು ಟಿ ಖಾದರ್ ರವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆಯನ್ನು ನೀಡಿದರು.

ಎರಡನೇ ಬಾರಿಗೆ ತುಳುವಿನಲ್ಲಿ ಮಾತು

ಶಾಸಕ ಅಶೋಕ್ ರೈಯವರು ತಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ತುಳುವಿನಲ್ಲಿ ಮಾತನಾಡಿದ್ದರು. ಈ ವಿಚಾರ ಅತೀ ಹೆಚ್ಚು ವೈರಲ್ ಆಗಿತ್ತು. ಅಧಿವೇಶನದ ಇತಿಹಾಸದಲ್ಲೇ ಮೊದಲ ಬಾರಿಗೆ ತುಳುವಿನಲ್ಲಿ ಮಾತನಾಡುವ ಮೂಲಕ ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿರುವುದು ತುಳು ಭಾಷೆಗೆ ಸಿಕ್ಕ ಮಾನ್ಯತೆ ಎಂದೇ ಹೇಳಬಹುದು

 Share: | | | | |


ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್‌ ಬಳಿ ಕಾರು ಪಲ್ಟಿ

Posted by Vidyamaana on 2024-02-11 16:02:22 |

Share: | | | | |


ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್‌ ಬಳಿ ಕಾರು ಪಲ್ಟಿ

ಪುತ್ತೂರು: ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್‌ ಎದುರು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಫೆ 11ರಂದು ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಅಯೋಧ್ಯೆ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ: ಯೋಗಿಗೆ ವಿಎಚ್‌ಪಿ ದೂರು

Posted by Vidyamaana on 2023-12-31 16:45:19 |

Share: | | | | |


ಅಯೋಧ್ಯೆ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ: ಯೋಗಿಗೆ ವಿಎಚ್‌ಪಿ ದೂರು

ನವದೆಹಲಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಹೆಸರಿನಲ್ಲಿ ಕೆಲವರು ಯಾವುದೇ ಅನುಮೋದನೆ ಪಡೆಯದೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರಕ್ಕೆ ದೂರು ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ಹೇಳಿದೆ.ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಪ್ರಯತ್ನಿಸಲಾಗುತ್ತಿದೆ. ಅವರ ಬಲೆಗೆ ಬೀಳದಂತೆ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜನರನ್ನು ಎಚ್ಚರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರತಿಯನ್ನು ಸಿಎಂ ಆದಿತ್ಯನಾಥ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ.ಎಚ್ಚರ! ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಕಲಿ ಗುರುತಿನ ಚೀಟಿ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬನ್ಸಾಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ನಾವು ಉತ್ತರ ಪ್ರದೇಶ ಡಿಜಿಪಿ, ಲಖನೌ ವಲಯ ಐಜಿಗೆ ಔಪಚಾರಿಕ ದೂರು ನೀಡಿದ್ದೇವೆ ಎಂದು ಬನ್ಸಾಲ್ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಣವನ್ನು ಸಂಗ್ರಹಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಇತ್ತೀಚೆಗೆ ಹೇಳಿತ್ತು.


ಶ್ರೀರಾಮ ದೇಗುಲದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ನಿಧಿ ಸಂಗ್ರಹಿಸಲು, ಪ್ರತ್ಯೇಕ ಸಮಿತಿ ರಚಿಸಲು ಮತ್ತು ರಶೀದಿಗಳನ್ನು ಮುದ್ರಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.

ಮಂಗಳೂರು: SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Posted by Vidyamaana on 2023-05-05 08:31:45 |

Share: | | | | |


ಮಂಗಳೂರು:  SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ SDPI ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿಯವರು ಇಂದು ಮಂಗಳೂರಿಗೆ ಆಗಮಿಸಿದರು.

ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಬಜಪೆ ಪಟ್ಟಣದವರೆಗೆ ವಾಹನ ಜಾಥಾ ಮೂಲಕ ಕರೆ ತರಲಾಯಿತು.ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ, ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ  ಜಮಾಲ್ ಜೋಕಟ್ಟೆ, ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮೂಡಬಿದ್ರೆ ಕ್ಷೇತ್ರಾಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು ಹಾಗೂ ಇತರ ನಾಯಕರು ಉಪಸ್ಥಿತರಿದ್ದರು

ಇಂದು ಮತ್ತು ನಾಳೆ ಉಳ್ವಾಲ, ಬಂಟ್ವಾಳ, ಮೂಡಬಿದ್ರೆ ಕ್ಷೇತ್ರಗಳಲ್ಲಿ ನಡೆಯುವ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಎಂ.ಕೆ ಫೈಝಿಯವರು ಭಾಗವಹಿಸಲಿದ್ದಾರೆ.

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ

Posted by Vidyamaana on 2023-08-14 09:53:27 |

Share: | | | | |


ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ

ಪುತ್ತೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣವನ್ನು ಮುಚ್ಚಿ ಹಾಕಿದ ಅಂದಿನ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು, ಅದಕ್ಕಾಗಿ ಎಸ್ಐಟಿ ರಚಿಸಬೇಕೆಂದು ಆಗ್ರಹಿಸಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಬೃಹತ್ ಪ್ರತಿಭಟನೆ, ಪಾದಯಾತ್ರೆ ನಡೆಸಲಾಗಿದೆ. 


ದರ್ಬೆ ವೃತ್ತದಿಂದ ಪುತ್ತೂರು ಬಸ್ ನಿಲ್ದಾಣದ ವರೆಗೆ ಕಾಲ್ನಡಿಗೆ ಯಾತ್ರೆಯಲ್ಲಿ ಬಂದ ಮಹಿಳೆಯರು, ಕಾರ್ಯಕರ್ತರು ನ್ಯಾಯಕ್ಕಾಗಿ ಹೋರಾಟದ ಧ್ವನಿ ಮೊಳಗಿಸಿದರು. ಸರಕಾರಿ ಬಸ್ ನಿಲ್ದಾಣದ ಬಳಿ ಸೇರಿ 10 ನಿಮಿಷ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಬಳಿಕ ಸಾರ್ವಜನಿಕ ಸಮಾವೇಶ ನಡೆಯಿತು. 




ಪ್ರತಿಭಟನೆ ಉದ್ಧೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಸೌಜನ್ಯಳ ಕೊಲೆಯಾಗಿ ಹನ್ನೊಂದು ವರ್ಷ ಕಳೆದರು ಆಕೆಯ ನೈಜ ಕೊಲೆಗಾರ ಯಾರು ಅನ್ನೋದು ಪತ್ತೆಯಾಗಿಲ್ಲ. ಆರೋಪಿ ಎಂದು ಬಂಧಿಸಲ್ಪಟ್ಟ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಆದೇಶ ನೀಡಿರುವಾಗ ನೈಜ ಆರೋಪಿ ಯಾರು ಅನ್ನೋದು ಪತ್ತೆಯಾಗಬೇಕು. ಆತ ಅಲ್ಲ ಎಂದಾದರೆ, ಕ್ರೂರವಾಗಿ ಹಿಂಸಿಸಿ ಕೊಲೆಗೈದ ಪಾಪಿಗಳ ಬಂಧನ ಆಗಬೇಡವೇ.. ಸೌಜನ್ಯಾ ಪರ ಹೋರಾಟ ಈಗ ಆಂದೋಲನ ರೂಪ ಪಡೆದಿದ್ದು ಸಂಘರ್ಷಕ್ಕೂ ಕಾರಣವಾದೀತು. ಆದರೆ ಸಂಘರ್ಷಕ್ಕೆ ಸರಕಾರ ಆಸ್ಪದ ನೀಡಬಾರದು. 


ಅದಕ್ಕಾಗಿ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು. ತನಿಖೆಗೆ ಒಳಪಡಿಸಬೇಕು.  ನ್ಯಾಯ ಸಿಗಬಹುದು ಎನ್ನುವ ನಂಬಿಕೆ ಜನರಲ್ಲಿದೆ. ಆಮೂಲಕ ನೈಜ ಆರೋಪಿಯನ್ನು ಪತ್ತೆ ಮಾಡಿ ಗಲ್ಲಿಗೇರಿಸಬೇಕು ಎಂದು ಮಹಾಲಿಂಗೇಶ್ವರನ ಸನ್ನಿಧಿಯ ಮುಂದೆ ನಿಂತು ಒತ್ತಾಯಿಸುತ್ತೇವೆ ಎಂದರು. 


ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಜನ ಭಾಗವಹಿಸಿ ಸೌಜನ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ.

ಬಿಪಿಎಲ್ ಕಾರ್ಡ್​ಗೆ ಹೆಚ್ಚಿದ ಬೇಡಿಕೆ

Posted by Vidyamaana on 2023-05-25 04:25:36 |

Share: | | | | |


ಬಿಪಿಎಲ್ ಕಾರ್ಡ್​ಗೆ ಹೆಚ್ಚಿದ ಬೇಡಿಕೆ

ಬೆಂಗಳೂರು :ಕಾಂಗ್ರೆಸ್  ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕಾರ್ಡ್​ಗಳಿಗೆ ಬೇಡಿಕೆ ಹೆಚ್ಚಿದ್ದು, ಕಾರ್ಡ್ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆ ಫಲಾನುಭವಿ ಗಳಾಗಬೇಕೆಂಬ ಆಸೆಗಣ್ಣಿನಿಂದ ಕಾಯುತ್ತಿರುವ ಜನರಿಗೆ ಸಿಗುತ್ತಿಲ್ಲ ಹೊಸ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ.ಸುಮಾರು 2.88 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳು ವಿಲೇವಾರಿಗಾಗಿ ಕಾಯುತ್ತಿವೆ.

ರಾಜ್ಯದಲ್ಲಿ 2023 ಜನವರಿಯಿಂದ ಮೇ 20ರವರೆಗೆ ತುರ್ತು ಆರೋಗ್ಯ ಸೇವಾ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿ ಪಡೆಯಲು ಸುಮಾರು 4.25 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಎರಡು ತಿಂಗಳಿಂದ ಸರ್ವರ್, ದಾಖಲೆಗಳ ಸಮಸ್ಯೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಅರ್ಜಿಗಳ ವಿಲೇವಾರಿ, ಹೊಸ ಕಾರ್ಡ್ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಜನರು ಕಾರ್ಡ್​ಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.ರಾಜ್ಯದಲ್ಲಿ ಮೇ 14 ರಿಂದ 20ರ ನಡುವಿನ ಅವಧಿಯಲ್ಲಿ ಹೊಸ ಬಿಪಿಎಲ್ ಕಾರ್ಡ್​ಗಾಗಿ ಬರೋಬ್ಬರಿ 78 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ತುರ್ತು ಆರೋಗ್ಯ ಚಿಕಿತ್ಸೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾತ್ರ ಮೇ 18ರಿಂದ ವಿಲೇವಾರಿ ಮಾಡಿ ವಿತರಣೆ ಮಾಡಲಾಗುತ್ತಿದೆ. ಇನ್ನುಳಿದ ಹೊಸ ಅರ್ಜಿಗಳ ವಿಲೇವಾರಿ ಸ್ಥಗಿತಗೊಳಿಸಿದೆ. ಹೊಸ ಸರ್ಕಾರದ ಆದೇಶದ ಬಳಿಕ ಮುಂದಿನ ಅರ್ಜಿಗಳ ವಿಲೇವಾರಿ ಪ್ರಕ್ರಿಯೇ ಆರಂಭವಾಗಲಿದೆ.

2023 ಜನವರಿಗೆ ರಾಜ್ಯದಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಸುಮಾರು 5.28 ಕೋಟಿ ಜನರು ರೇಷನ್ ಕಾರ್ಡ್ ಫಲಾನುಭವಿಗಳಾಗಿದ್ದು, ಇವರಲ್ಲಿ ಸುಮಾರು 4.50ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ. ಜತೆಗೆ ಹೊಸ ಬಿಪಿಎಲ್ ಕಾರ್ಡ್​ಗಾಗಿ ಸುಮಾರು 4.25 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಕೆಲ ಅನರ್ಹಗೊಂಡಿರುವ ಕಾರ್ಡ್​ದಾರರು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಹೊಸ ಬಿಪಿಎಲ್ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಹೊಸದಾಗಿ ಬಿಪಿಎಲ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ, ಅರ್ಜಿಗಳ ವಿಲೇವಾರಿ ಕೆಲಸ ಬಂದ್ ಆಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಗ್ಯಾರಂಟಿ ಯೋಜನೆಗಳಿಂದ ಬೇಡಿಕೆ: ಕಾಂಗ್ರೆಸ್​ನ ಐದು ಗ್ಯಾರಂಟಿ ಯೋಜನೆಗಳ ಘೊಷಣೆ ನಂತರ ಮತ್ತು ಚುನಾವಣೆ ಫಲಿತಾಂಶದ ಬಳಿಕ ಬಿಪಿಎಲ್ ಕಾರ್ಡ್​ಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಪ್ರತಿ ನಿತ್ಯ 8ರಿಂದ 10 ಜನರು ಹೊಸದಾಗಿ ಬಿಪಿಎಲ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರಲ್ಲಿ ನಗರ ಪ್ರದೇಶಗಳಲ್ಲಿನ ಜನರೇ ಅಧಿಕ ಸಂಖ್ಯೆಯಲ್ಲಿ ದ್ದಾರೆ. ನೂತನ ಸರ್ಕಾರದ ಸೂಚನೆಯ ಬಳಿಕ ಹೊಸ ಕಾರ್ಡ್ ಗಳ ವಿತರಣೆ, ಅರ್ಜಿಗಳ ವಿಲೇವಾರಿ ಕೆಲಸ ಆರಂಭವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್ ಬದಲಿ ಮಾರ್ಗ ಮೂಲಕ ತೆರಳಲು ಸೂಚನೆ

Posted by Vidyamaana on 2024-03-13 12:04:14 |

Share: | | | | |


ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್  ಬದಲಿ ಮಾರ್ಗ  ಮೂಲಕ ತೆರಳಲು ಸೂಚನೆ

ಸಕಲೇಶಪುರ: ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ರಲ್ಲಿ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಟ್ಯಾಂಕ‌ರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ..

ಮಾರ್ಗಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ನೂರಾರು ವಾಹನಗಳು ನಿಂತಲ್ಲೆ ನಿಂತಿವೆ.

ಬೆಂಗಳೂರು-ಹಾಸನ-ಮಂಗಳೂರು:

ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಹೋಗಿದ್ದು ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.ಪಲ್ಟಿಯಾದ ಗ್ಯಾಸ್ ಟ್ಯಾಂಕರ್‌ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ.ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ.

Recent News


Leave a Comment: