ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

Posted by Vidyamaana on 2023-08-29 07:34:23 |

Share: | | | | |


ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

ಪುತ್ತೂರು: ತೆಂಗು ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ನಡೆಸಿದಾಗ ಅಧಿಕ ಇಳುವರಿ ಪಡೆಯಲು ಸಾಧ್ಯ. ಉಪಬೆಳೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮಿ ಆರ್. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಆ. 28ರಂದು ಜೈನ ಭವನದಲ್ಲಿ ನಡೆದ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ತೆಂಗಿಗೆ ವಿಶೇಷ ಆಶಕ್ತಿ ನೀಡದೇ ಇರುವುದರಿಂದ ಇಂದು ಇಳುವರಿ ಕಡಿಮೆಯಾಗಿದೆ. ಜೊತೆಗೆ ಸಮಗ್ರ ಪೋಷಕಾಂಶಗಳ ಕೊರತೆಯಿಂದ ನುಸಿ ರೋಗಗಳಂತ ಕಾಯಿಲೆಗಳು ಬಾಧಿಸುತ್ತಿವೆ. ಆದ್ದರಿಂದ ಕರಾವಳಿಯ ಈ ಭಾಗದಲ್ಲಿ ಮಣ್ಣಿಗೆ ಆವಶ್ಯಕವಾದ ಸಾರಜನಕ, ರಂಜಕ, ಪೊಟ್ಯಾಶ್ಗಳಂತ ಪ್ರಧಾನ ಪೋಷಕಾಂಶ ನೀಡಬೇಕು. ಮಣ್ಣು ಪರೀಕ್ಷೆಯೂ ಅಗತ್ಯವಾಗಿದ್ದು, ಕನಿಷ್ಠ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ಹೀಗೆ ಪ್ರತಿ ಹಂತದಲ್ಲೂ ತೆಂಗಿಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದಾಗ ಪ್ರಧಾನ ಬೆಳೆಯಾಗಿ, ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.

ಬೆಂಬಲ ಬೆಲೆಗೆ ಆಗ್ರಹಿಸಿ ಅ. 2ರಂದು ರಾಜಭವನ ಚಲೋ: ರವಿಕಿರಣ್ ಪುಣಚ

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನಕಾಯಿಯ ಮೌಲ್ಯವರ್ಧನೆಯ ಗುಟ್ಟು ಎಲ್ಲರಿಗೂ ತಿಳಿದಿದೆ. ಆದರೆ ಇದರಿಂದ ಎಷ್ಟು ಆದಾಯ ಬರಬಹುದು ಎನ್ನುವ ಆಲೋಚನೆ ಯಾರಿಗೂ ಇಲ್ಲ. ಒಂದು ಮರದಿಂದ 3 ಸಾವಿರ ರೂ.ದಿಂದ 5 ಸಾವಿರ ರೂ.ವರೆಗೆ ಆದಾಯ ಪಡೆಯಬಹುದು. ಆದ್ದರಿಂದ ರೈತರು ಈ ದಿಶೆಯಲ್ಲಿ ಆಲೋಚನೆ ಮಾಡಬೇಕು. ಇಷ್ಟೆಲ್ಲಾ ಇದ್ದರೂ, ರಾಜಕೀಯದ ಇಚ್ಚಾಶಕ್ತಿಯ ಕೊರತೆಯಿಂದಾಗಿ ತೆಂಗಿನಕಾಯಿಯನ್ನು ಖರೀದಿಸಲು ಸರಕಾರಿ ವ್ಯವಸ್ಥೆಗಳು ಇಲ್ಲ ಎನ್ನುವುದು ಬೇಸರದ ಸಂಗತಿ. ಆದ್ದರಿಂದ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ಆಗ್ರಹವನ್ನು ಮುಂದಿಟ್ಟುಕೊಂಡು ಅಕ್ಟೋಬರ್ 2ರಂದು ತಿಪಟೂರಿನಿಂದ ರಾಜಭವನ ಚಲೋ ಪಾದಯಾತ್ರೆ ನಡೆಯಲಿದೆ. ಅಕ್ಟೋಬರ್ 9ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಕಲ್ಮಿನೇಷನ್ ನಡೆಯಲಿದೆ ಎಂದರು.

ರೈತರೇ ವಿಜ್ಞಾನಿಗಳಾಗಬೇಕು: ಕಡಮಜಲು ಸುಭಾಷ್ ರೈ

ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ ಮಾತನಾಡಿ, ಉಪಬೆಳೆಯಾಗಿರುವ ತೆಂಗಿಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಗಳಿಸಲು ಸಾಧ್ಯ. ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಲ್ಯಾಬಿನಲ್ಲಿ ಆಗುವ ಪ್ರಯೋಗಗಳನ್ನು ಮಣ್ಣಿಗೆ ತರುವ ಕೆಲಸ ಆಗಬೇಕು. ಈ ಕೆಲಸವನ್ನು ಕೃಷಿಕರೇ ಮಾಡಬೇಕಾಗಿದೆ ಎಂದರು.

ಕ್ಷಿಪ್ರಸಾಲಕ್ಕಾಗಿ ಒಡಂಬಡಿಕೆ: ಪೂರ್ಣಿಮಾ ಎನ್.

ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್. ಮಾತನಾಡಿ, ರೈತರಿಗೆ ಅಗತ್ಯವಿರುವ ಕೃಷಿ ಸಲಕರಣೆ, ರಸಗೊಬ್ಬರಗಳನ್ನು ಪೂರೈಸುವ ದೃಷ್ಟಿಯಿಂದ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲು ನಮ್ಮ ಸಂಘ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ತೆಂಗು ಉತ್ಪಾದಕರ ಕಂಪೆನಿ ಹಾಗೂ ಮಾನಸಗಂಗಾಗ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಗಣೇಶ ಚತುರ್ಥಿ ಬಳಿಕ ತೆಂಗು ಖರೀದಿ: ಕುಸುಮಾಧರ ಎಸ್.ಕೆ.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ. ಮಾತನಾಡಿ, ತೆಂಗಿಗೆ ಮೌಲ್ಯವರ್ಧನೆ ಮಾಡಿ, ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ. ಇದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಲ್ಪರಸ ಯೋಜನೆಯ ಜಾರಿಗಾಗಿ ದೊಡ್ಡತೋಟದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗಣೇಶ ಚತುರ್ಥಿ ಬಳಿಕ ಅಲ್ಲಿ ತೆಂಗಿನಕಾಯಿ ಖರೀದಿಸಲಾಗುವುದು. ತೆಂಗಿನಕಾಯಿ ಕೀಳಲು ಜನರ ಸಮಸ್ಯೆ ಇದೆ ಎನ್ನುವ ಕಾರಣಕ್ಕಾಗಿ, ಟೋಲ್ ಫ್ರೀ ಸಹಾಯವಾಣಿಯನ್ನು ನೀಡಲಾಗಿದೆ. ಸದಸ್ಯರ ಉತ್ತಮ ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ 100 ಕೋಟಿ ರೂ.ವರೆಗೆ ಸಾಲ ಒದಗಿಸುವ ಯೋಜನೆಯೂ ಇದೆ. ಮಾತ್ರವಲ್ಲ, ಕಲ್ಪ ಸಮೃದ್ಧಿ ಯೋಜನೆಯಡಿ ಠೇವಣಿ ಇಟ್ಟರೆ ಶೇ. 12ರವರೆಗೆ ಬಡ್ಡಿ ನೀಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಸಂಸ್ಥೆ ಪ್ರಾರಂಭಗೊಂಡು 2 ವರ್ಷ ಪೂರೈಸಿದೆ. ಈ 2 ವರ್ಷದಲ್ಲಿ 14 ಸಾವಿರ ರೈತರನ್ನು ಹೊಂದಿದ್ದು, ದೇಶದಲ್ಲೇ ಪ್ರಥಮ ಸಂಸ್ಥೆ ಎನ್ನುವ ಹಿರಿಮೆಗೂ ಪಾತ್ರವಾಗಿದೆ ಎಂದರು.

ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ರೈತರಾದ ಎ. ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ, ಐತ್ತಪ್ಪ ನಾಯ್ಕ್, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈ ಅವರಿಗೆ ಇದೇ ಸಂದರ್ಭ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.

ನಿಶ್ಮಿತಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಕಚೇರಿ ಮೇಲ್ವಿಚಾರಕಿ ಅಪರ್ಣಾ ವಂದಿಸಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

ಮಾಣಿಲ : ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-01 06:46:16 |

Share: | | | | |


ಮಾಣಿಲ : ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಮಾಣಿಲ ಮತ್ತು ಎಣ್ಮಕಜೆ ನದಿಗೆ ಸೇತುವೆ ನಿರ್ಮಾಣವಾಗಬೇಕೆಂಬುದು ಮಾಣಿಲ ಗ್ರಾಮಸ್ಥರ ಕನಸಾಗಿದ್ದು ಅದನ್ನು ಶಾಸಕರಾದ ಬಳಿಕ ಅಶೋಕ್ ರೈಗಳು ನನಸು ಮಾಡಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಮಾಣಿಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಶಾಸಕಳಾಗಿದ್ದ ವೇಳೆ 12 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದೆ ಆದರೆ ಸರಕಾರ ಬಿಜೆಪಿ ಇದ್ದ ಕಾರಣ ಹಣ ಮಂಜೂರಾಗಿಲ್ಲ ಎಂದು ಹೇಳಿದರು. ಈ ಬಾರಿ ಕಾಂಗ್ರೆಸ್ ಗೆದ್ದರೆ ಸೇತುವೆ ನಿರ್ಮಾಣ ಮಾಡಿಸಿಯೇ ಸಿದ್ದ ಕೈ ಗೆ ಬಲ ಕೊಡೊ ಎಂದು‌ಮನವಿ ಮಾಡಿದರು. ಪುತ್ತೂರಿನಲ್ಲಿ ಬಿಜೆಪಿ ಯ ಪಾಪದ ಕೊಡ ತುಂಬಿದೆ ಈ ಕಾರಣಕ್ಕೆ ಹಿಂದುತ್ವವನ್ನು ಈ ಬಾರಿ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ಬಿಜೆಪಿಯವರ ಹಿಂದುತ್ವವನ್ನು ಪಕ್ಷೇತರ ಅಭ್ಯರ್ಥಿ ಕೊಂಡು ಹೋಗಿದ್ದಾರಂತೆ ಎಂದು ವ್ಯಂಗ್ಯವಾಡಿದರು.ಬಿಜೆಪಿಗೆ ಮತ ನೀಡಿ ವೋಟುಹಾಳುಮಾಡಬೇಡಿಎಂದು‌ಮನವಿ‌ಮಾಡಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಮನೆಗೆ ಮನೆಗೆ ತೆರಳಿ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಸಮುದಾಯದ ಮಧ್ಯೆ ವಿಷ ಬೀಜ ಬಿತ್ತುವವರು ನಮಗೆ ಬೇಡ ಎಂದು ಮನವಿ ಮಾಡಿದರು.

ಪ್ರತೀ ಬೂತ್ ನಲ್ಲಿ ವೋಟ್ ಲೀಡ್ ಬರಬೇಕು: ಅಶೋಕ್ ರೈ

ಪ್ರತೀಯೊಬ್ಬ ಕಾರ್ಯಕರ್ತರು ಯಾವ ಮನೆಯನ್ನೂ ಬಿಡದೆ ಭೇಟಿ ಮಾಡಬೇಕು. ಪ್ರತೀ ಬೂತ್ ನಲ್ಲಿ‌ಲೀಡ್ ಬರುವಂತೆ ನೋಡಿಕೊಳ್ಳಬೇಕು. ಪಕ್ಷದಲ್ಲಿ ಕಾರ್ಯಕರ್ತರ ಕೊರತೆಯಿಲ್ಲ. ಎಲ್ಲಾ ಕಡೆ ಕಾರ್ಯಕರ್ತರ ಪಡೆಯೇ ಇದೆ ಎಂಬುದು ಸಂತೋಷದ ವಿಷಯ. ನಾವು ಇನ್ನು ಎಂಟು ದಿನ ಆಹೋರಾತ್ರಿ ಕೆಲಸ ಮಾಡಿದರೆ ಮುಂದಿನ 5 ವರ್ಷ ನೆಮ್ಮದಿಯ ಜೀವನ ಮಾಡಬಹುದು. ಬೂತ್ ಮಟ್ಟದ ಪ್ರತೀ ಮನೆಗೂ ಗ್ಯಾರಂಟಿ ಕಾರ್ಡು ಕಡ್ಡಾಯವಾಗಿ ಕೊಡಿ. ಬಿಜೆಪಿಯವರು ನಮ್ಮ ಜೊತೆ ಸೇರಿಕೊಳ್ಳುತ್ತಿದ್ದಾರೆ,ಕೆಲವರು ಎದುರು ಬೀಳುವುದಿಲ್ಲ ಹಿಂದಿನಿಂದ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಬೇಕು. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಎಂದು ಮನವಿ ಮಾಡಿದರು.ಕುಚ್ಚಲಕ್ಕಿ ಕೊಡ್ತೇವೆ ನಾವು ಅಧಿಕಾರಕ್ಕೆ ಬಂದರೆ ತಲಾ 5 ಕೆ ಜಿ ಕುಚ್ಚಲಕ್ಕಿ ಮತ್ತು 5 ಕೆ ಜಿ ಬೆಳ್ತಿಗೆಯನ್ನು ಕೊಡ್ತೇವೆ. ಯಾವ ತಾಯಂದಿರೂ ಇನ್ನು‌ಮನೆಗೆ ದುಡ್ಡು ಕೊಟ್ಟು ಅಕ್ಕಿ ತರುವುದು ಬೇಡ,ಕರೆಂಟ್ ಬಿಲ್ ಕಟ್ಟುವುದು ಬೇಡ, ಉಳಿದ ಖರ್ಚಿಗೆ ತಿಂಗಳಿಗೆ ಎರಡು ಸಾವಿರ ತಾಯಂದಿರ ಖಾತೆಗೆ ಜಮೆಯಾಗ್ತದೆ. ಸಂಚಾರಕ್ಕೆ ಸರಕಾರಿ ಬಸ್ ಉಚಿತವಾಗಿ ತಾಯಂದಿರಿಗೆ ಪ್ರಯಾಣಿಸಲು ಅವಕಾಶವನ್ನು ಸರಕಾರ ಒದಗಿಸಲಿದೆ. ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು‌ಮನವಿ‌ಮಾಡಿದರು.

ಪುತ್ತೂರು: ಆಂಬ್ಯುಲೆನ್ಸ್ -ಕಂಟೈನರ್ ಅಪಘಾತ-ಐರ್ವರಿಗೆ ಗಾಯ

Posted by Vidyamaana on 2024-09-02 17:19:31 |

Share: | | | | |


ಪುತ್ತೂರು: ಆಂಬ್ಯುಲೆನ್ಸ್ -ಕಂಟೈನರ್ ಅಪಘಾತ-ಐರ್ವರಿಗೆ ಗಾಯ

ಪುತ್ತೂರು: ಇಂದು ( ಸೆ.2) ಸಂಜೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಜಯಪ್ರಕಾಶ್ ಎಂಬವರು ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್(ಕೆಎ 21, ಬಿ 1971) ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು ಘಟನೆಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಇನ್ನೊಂದು ಆಂಬ್ಯುಲೆನ್ಸ್‌ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

Posted by Vidyamaana on 2023-07-10 07:10:00 |

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

ಮಂಗಳೂರು ಡ್ರಗ್ಸ್ ಜಾಲದ ಸೂತ್ರಧಾರಿ ಪೊಲೀಸರ ಬಲೆಗೆ

Posted by Vidyamaana on 2023-09-02 15:45:50 |

Share: | | | | |


ಮಂಗಳೂರು ಡ್ರಗ್ಸ್ ಜಾಲದ ಸೂತ್ರಧಾರಿ  ಪೊಲೀಸರ ಬಲೆಗೆ

ಮಂಗಳೂರು: "ಡ್ರಗ್ಸ್ ಫ್ರೀ ಮಂಗಳೂರು" ಎಂಬ ಗುರಿ ಇಟ್ಟುಕೊಂಡು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಮತ್ತು ಗಾಂಜಾ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಡ್ರಗ್ಸ್ ಜಾಲದ ಪ್ರಮುಖ ಸೂತ್ರಧಾರಿ ಎನ್ನಲಾದ ನೈಜೀರಿಯಾ ದೇಶದ ಮಹಿಳೆಯೋರ್ವಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಡ್ರಗ್ ದಂಧೆಯ ಕಿಂಗ್ ಪಿನ್ ಯಾರಿದ್ದಾರೆಂದು ಪತ್ತೆ ಮಾಡಲು ಮಂಗಳೂರು ಸಿಸಿಬಿ ಪೊಲೀಸರು ಕಳೆದ ಮೂರು ತಿಂಗಳಿನಿಂದ ತನಿಖೆ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬಂಧಿತರಾಗಿರುವ ಹೆಚ್ಚಿನ ಆರೋಪಿಗಳಿಗೆ ನೈಜಿರಿಯಾ ಮೂಲದವರಿಂದಲೇ ಡ್ರಗ್ಸ್ ಪೂರೈಕೆ ಆಗುತ್ತಿರುವುದು ತಿಳಿದುಬಂದಿತ್ತು. ನಿರಂತರ ಕಾರ್ಯಾಚರಣೆ ಬಳಿಕ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ತನ್ನ ನಿಜ ವಿಚಾರ ಮುಚ್ಚಿಟ್ಟು ಬೆಂಗಳೂರಿನ ಯಲಹಂಕದಲ್ಲಿ ವಾಸ್ತವ್ಯ ಇರುವುದು ಪತ್ತೆಯಾಗಿತ್ತು. 


ಪೊಲೀಸರು ಇದೀಗ ನೈಜೀರಿಯಾ ಮೂಲದ ಅಡೆವೊಲೆ ಅಡೆಟುಟು ಆನು @ ರೆಜಿನಾ ಜರಾ @ ಆಯಿಶಾ(33) ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ‌ಮೂಲತಃ ನೈಜೀರಿಯಾ ದೇಶದ ಒಂಡೋ ರಾಜ್ಯದ ಅಕುರೆ ನಗರದ ನಿವಾಸಿಯಾಗಿದ್ದು ಪ್ರಸಕ್ತ ಯಲಹಂಕ ಹೋಬಳಿಯ ಜಕ್ಕೂರಿನ ಜಿಪಿ ನಾರ್ತ್ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದಳು. 


ಆರೋಪಿ ವಶದಿಂದ ಒಟ್ಟು 400 ಗ್ರಾಂ ತೂಕದ ರೂ. 20 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್-1, ನಗದು ರೂ. 2910 ವಶಪಡಿಸಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910 ಆಗಬಹುದೆಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಣದ ಉದ್ದೇಶದಲ್ಲಿ ಭಾರತದ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಈಕೆ, ಬಳಿಕ ಇಲ್ಲಿಯೇ ಉಳಿದುಕೊಂಡಿದ್ದಳು.‌ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು ಆನಂತರ ನರ್ಸಿಂಗ್ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಮಂಗಳೂರು ನಗರದ ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಈಕೆಯಿಂದಲೇ ಮಾದಕ ವಸ್ತು ಖರೀದಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.  


ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ, ನರೇಂದ್ರ  ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪೇಪರ್ ಕಪ್‌ನಲ್ಲಿ ಚಹಾ ಸೇವಿಸಿದರೆ ದೇಹಕ್ಕೆ ಪ್ಲಾಸ್ಟಿಕ್ !

Posted by Vidyamaana on 2023-02-16 11:07:59 |

Share: | | | | |


ಪೇಪರ್ ಕಪ್‌ನಲ್ಲಿ ಚಹಾ ಸೇವಿಸಿದರೆ ದೇಹಕ್ಕೆ ಪ್ಲಾಸ್ಟಿಕ್ !

ನವದೆಹಲಿ: ಬಳಸಿ ಎಸೆಯುವ ಪೇಪರ್ ಕಪ್ನಲ್ಲಿ ಚಹಾ ಅಥವಾಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಹುಷಾರ್. ನಿಮ್ಮ ದೇಹದ ಒಳಕ್ಕೆ ಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತವೆ. ಖರಗ್‌ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್ ಕಪ್‌ನಲ್ಲಿ ಚಹಾ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು

ದೇಹಕ್ಕೆ ಹೋಗುತ್ತವೆ. ಪೇಪರ್ ಕಪ್‌ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದ ವೇಳೆ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಹಾಗೂ ವಿಷಕಾರಿ ಅಂಶಗಳು ಸೇರಿಕೊಂಡಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಪೇಪರ್ ಕಪ್‌ಗಳು ತೆಳುವಾದ ಪ್ಲಾಸಿಕ್ ಪದರವನ್ನು ಹೊಂದಿರುತ್ತವೆ. ಹೀಗಾಗಿ 15 ನಿಮಿಷದಲ್ಲಿ ಅವು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್ ತಿಳಿಸಿದ್ದಾರೆ. ನಾವು ನಡೆಸಿದ ಸಂಶೋಧನೆಯಿಂದ 100 ಎಂಎಲ್ ಬಿಸಿ ನೀರನ್ನು ಪೇಪರ್ ಕಪ್‌ಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 25,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಬಿಡುಗಡೆ ಆಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

Recent News


Leave a Comment: