ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಸುದ್ದಿಗಳು News

Posted by vidyamaana on 2024-07-24 16:44:22 |

Share: | | | | |


ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಸೇರಿಸಬೇಕು ಎಂದು ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ತುಳು ಭಾಷೆಯಲ್ಲೇ ವಿಧಾನಸಭಾ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿದ್ದು , ಶಾಸಕರ ಬೇಡಿಕೆಗೆ ಸರಕಾರದಿಂದ ಗಟ್ಟಿ ಭರವಸೆ ದೊರೆತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಸರಕಾರ ಭರವಸೆಯನ್ನು ನೀಡಿದೆ.

ತುಳುವಿಗೆ ೨೦೦೦ ವರ್ಷದ ಇತಿಹಾಸವಿದೆ

ತುಳುಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ತುಳು ಮಾತನಾಡುವ ಮಂದಿ ವಿಶ್ವದೆಲ್ಲೆಡೆ ಇದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಎಟಂನೇ ಪರಿಚ್ಚೇಧಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇನ್ನೊಂದು ಕಡೆ ಇದೆ ಇದೆಲ್ಲದರ ನಡುವೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಶಾಸಕನಾಗಿ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇನೆ.

೧೯೯೪ ರಲ್ಲಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ, ೨೦೦೭ ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ, ಆಕಾಶವಾಣಿಯಲ್ಲಿ ೧೯೭೬ ರಿಂದ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಅಮೇರಿಕಾದಲ್ಲಿ ಸಿಆರ್ ಎಕ್ಸಾಮ್‌ಗೆ ಅರ್ಜಿ ನಮೂನೆಯಲ್ಲೂ ವಿಶ್ವದ ೧೨೨ ಭಾಷೆಯ ಜೊತೆಗೆ ತುಳುವಿಗೆ ಮಾನ್ಯತೆ ನೀಡಲಾಗಿದೆ, ಗೂಗಲ್ ಸಂಸ್ಥೆಯವರು ತರ್ಜುಮೆ ಮಾಡಬಲ್ಲ ಭಾಷೆಗಳ ಪಟ್ಟಿಯಲ್ಲಿ ತುಳುವನ್ನು ಸೇರ್ಪಡೆ ಮಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ನಮ್ಮ ರಾಜ್ಯದಲ್ಲಿ ತುಳುವನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ಅಧ್ಯಯನ ತಂಡ ಕಳಿಸಿದ್ದೇನೆ

ಬಿಹಾರ, ಪಶ್ಚಿಮಬಂಗಾಳ ಮತ್ತು ಆಂದ್ರಕ್ಕೆ ವಿಶೇಷ ಪ್ರತಿನಿಧಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಳಿಸಿದ್ದೇನೆ. ಈ ಮೂರು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಯಾವ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ ಎಂಬುದನ್ನು ಅಧ್ಯಯನ ನಡೆಲಲಾಗಿದೆ. ಆಂದ್ರದಿಂದ ವರದಿಯನ್ನು ತರಿಸಿದ್ದೇನೆ.. ಈ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಅದರ ಆಧಾರದಲ್ಲಿ ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನು ಸ್ವಂತ ಖರ್ಚಿನಲ್ಲೇ ಅಧ್ಯಯನ ತಂಡವನ್ನು ಮೂರು ರಾಜ್ಯಗಳಿಗೆ ಕಳಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ವಿಶ್ವದಲ್ಲೇ ತುಳವರಿದ್ದಾರೆ, ತುಳುವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ.


ನಿಕ್ಲು ಗಲಾಟೆ ಮಲ್ಪೊಡ್ಚಿ ಕುಲ್ಲುಲೆ ಮಾರ್ರೆ

ಪುತ್ತೂರು ಶಾಸಕ ಅಶೋಕ್ ರೈಯವರು ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಮಧ್ಯದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ರಲ್ಲಿ ಈರ್ ಬೊಕ್ಕ ಪಾತೆರ‍್ಲೆ , ಇತ್ತೆ ಯಾನ್ ಪಾತರೊಂದುಲ್ಲೆ ಎಂದು ಶಾಸಕ ಅಶೋಕ್ ರೈ ವೇದವ್ಯಾಸ ಕಾಮತರಿಗೆ ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಭಾಪತಿ ಯು ಟಿ ಖಾದರ್ ನಿಕ್ಲು ಗಲಾಟೆ ಮಲ್ಪೊಡ್ಚಿ ಮಾರ್ರೆ ಈರ್ ಕುಲ್ಲುಲೆ ಎಂದು ಶಾಸಕ ವೇದವ್ಯಾಸ ಕಾಮತರಿಗೆ ಕುಳಿತುಕೊಳ್ಳಲು ಹೇಳಿದರು.

 ಇದೇನು ಮಂಗಳೂರು ಅಧಿವೇಶನವಾ: ಆರ್ ಅಶೋಕ್

ಸದನದಲ್ಲಿ ಶಾಸಕ ಅಶೋಕ್ ರೈ ಮತ್ತು ಸಭಾಪತಿ ಯು ಟಿ ಖಾದರ್ ರವರು ತುಳುವಿನಲ್ಲಿ ಮಾತನಾಡುತ್ತಿದ್ದ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಇದೇನು ಮಂಗಳೂರು ಅಧಿವೇಶಧನವಾ? ಎಂದು ನಗುತ್ತಲೇ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್ ರವರೇ ನಾವು ತುಳುವಿನಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ಹೇಳುತ್ತೇನೆ. ನೀವು ನಮ್ಮ ಹೋರಾಟಕ್ಕೆ , ನಮ್ಮ ಬೇಡಿಕೆಗೆ ಬೆಂಬಲವನ್ನು ನೀಡಬೇಕು, ಇಡೀ ಸದನ ನಮ್ಮ ನಿಲುವಿಗೆ ಬೆಂಬಲ ನೀಡಬೇಕು ಅ ಮೂಲಕ ತುಳು ಭಾಷೆಗೆ ಸರಕಾರದಿಂದ ಮಾನ್ಯತೆ ದೊರೆಯುವಂತಾಗಲಿ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ತುಳುವಿಗೆ ಲಿಪಿ ಇದೆ, ವಿಶ್ವದಲ್ಲೆಡೆ ತುಳು ಮಾತನಾಡುವ ಮಂದಿ ಇದ್ದಾರೆ ಎಂದು ಹೇಳಿದ ಶಾಸಕ ಅಶೋಕ್ ರೈಯವರು ಸಭಾಧ್ಯಕ್ಷೆರೇ ಈರ್ ಸಪೋರ್ಟು ಮಲ್ಪೊಡು, ಈರ್‌ನ ಸಹಕಾರ ಎಂಕ್ಲೆಗ್ ಬೋಡು ಎಂದು ಮನವಿ ಮಾಡಿದರು.

ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ವೇದವ್ಯಾಸ ಕಾಮತ್

ಸದನದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತುಳು ವಿಚಾರದಲ್ಲಿ ಪ್ರಾರಂಭದಿಂದಲೇ ಸರಕರದ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ನಿಮ್ಮ ಕಾಳಜಿಗೆ ಅಭಿನಂದನೆ; ಸಚಿವ ಖರ್ಗೆ

ತನ್ನ ಸ್ವಂತ ಖರ್ಚಿನಲ್ಲಿ ಅಧ್ಯಯನ ತಂಢವನ್ನು ಮೂರು ರಾಜ್ಯಕ್ಕೆ ಕಳುಹಿಸುವ ಮೂಲಕ ತನ್ನ ಊರಿನ ಮಾತೃಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಡಬೇಕು ಎನ್ನುವ ನಿಮ್ಮ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಿದರು. ಮಾತೃಭಷೆಯ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ ಆದರಲ್ಲೂ ಅಶೋಕ್ ರೈಯವರು ಈವಿಚಾರದಲ್ಲಿ ಒಂದು ಹಜ್ಜೆ ಮುಂದೆ ಇದ್ದಾರೆ ಇದು ಅಭಿನಂದನಾರ್ಹ ಎಂದು ಸಚಿವರು ಸಭೆಯಲ್ಲಿ ಹೇಳಿದರು.

 ಖಂಡಿತವಾಗಿಯೂ ಬೇಡಿಕೆ ಈಡೇರಲಿದೆ: ಪ್ರಿಯಾಂಕ ಖರ್ಗೆ

ಡಾ. ಮೋಹನ್ ಆಳ್ವರ ನೇತೃತ್ವದ ಸಮಿತಿಯ ವರದಿಯಲ್ಲಿ ಸಾಧ್ಯವಿದೆ ಎಂಬುದರ ಬಗ್ಗೆ ವರದಿ ನೀಡಲಾಗಿದೆ.. ತನ್ನ ಸ್ವಂತ ಖರ್ಚಿನಲ್ಲಿ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿದ ಶಾಸಕ ಅಶೋಕ್ ರೈಯವರ ಕಾಳಜಿಯನ್ನು ಮೆಚ್ಚಲೇಬೇಕು. ತುಳು ಭಾಷೆ, ಅದರ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ, ಎಲ್ಲವೂ ಗೌರವದಿಂದ ಕೂಡಿದೆ. ಸರಕಾರದ ಮುಂದೆ ಈ ಪ್ರಸ್ತಾಪ ಇದೆ. ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಸಭೆಗೆ ತಿಳಿಸಿದರು. ವೈಯುಕ್ತಿಕವಾಗಿಯೂ ಈ ಪ್ರಸ್ತಾಪಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವರು ಹೇಳಿದರು.

ಸಚಿವರ ಸಭೆ ಕರೆದು ತೀರ್ಮಾನಿಸಿ: ಸಭಾಪತಿ

ಈ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರನ್ನೊಳಗೊಂಡಂತೆ ಆ ಭಾಗದ ಶಾಸಕರ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವಂತೆ ಸಭಾಪತಿ ಯು ಟಿ ಖಾದರ್ ರವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆಯನ್ನು ನೀಡಿದರು.

ಎರಡನೇ ಬಾರಿಗೆ ತುಳುವಿನಲ್ಲಿ ಮಾತು

ಶಾಸಕ ಅಶೋಕ್ ರೈಯವರು ತಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ತುಳುವಿನಲ್ಲಿ ಮಾತನಾಡಿದ್ದರು. ಈ ವಿಚಾರ ಅತೀ ಹೆಚ್ಚು ವೈರಲ್ ಆಗಿತ್ತು. ಅಧಿವೇಶನದ ಇತಿಹಾಸದಲ್ಲೇ ಮೊದಲ ಬಾರಿಗೆ ತುಳುವಿನಲ್ಲಿ ಮಾತನಾಡುವ ಮೂಲಕ ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿರುವುದು ತುಳು ಭಾಷೆಗೆ ಸಿಕ್ಕ ಮಾನ್ಯತೆ ಎಂದೇ ಹೇಳಬಹುದು

 Share: | | | | |


ಅತ್ಯಾಚಾರ ಯತ್ನ ಆರೋಪ – ಬಂಧಿತ ಯುವಕನಿಗೆ ಸಿಕ್ತು ಜಾಮೀನು

Posted by Vidyamaana on 2024-04-28 14:14:12 |

Share: | | | | |


ಅತ್ಯಾಚಾರ ಯತ್ನ ಆರೋಪ – ಬಂಧಿತ ಯುವಕನಿಗೆ ಸಿಕ್ತು ಜಾಮೀನು

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹರ್ಷಿತ್ ಎಂಬ ಇನ್ನೋರ್ವ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಾ.13ರಂದು ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು,ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ.ಯುವಕನ ಸ್ನೇಹಿತರಿಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ವಾಮಂಜೂರಿನ ಆತನ ಸ್ನೇಹಿತೆಯ ನಂಬ‌ರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು.ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.13ರಂದು ಪುತ್ತೂರಿಗೆ ಬಂದಾಗ ಆಪಾದಿತ ಯುವಕರಿಬ್ಬರು ಆಕೆಗೆ ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಾಲಏಸು ಮಂದಿರ ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು.

ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

Posted by Vidyamaana on 2023-11-10 07:26:53 |

Share: | | | | |


ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಊರಿಗೆ ಬರಲು ಬಸ್ಸು, ರೈಲುಗಳಲ್ಲಿ ಟಿಕೆಟು ಸಿಗುತ್ತಿಲ್ಲ ಎಂದು ಟೆನ್ಷನ್ ಮಾಡುತ್ತಿರುವವರಿಗೆ ರೈಲ್ವೇ ಇಲಾಖೆ ಒಂದು ಗುಡ್ ನ್ಯೂಸ್ ನೀಡಿದೆ. ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲೊಂದನ್ನು ಇಲಾಖೆ ಬಿಟ್ಟಿದ್ದು ಅದರ ವೇಳಾಪಟ್ಟಿ ಇಂತಿದೆ.


ಬೆಳಕಿನ ಹಬ್ಬದ ಈ ವಿಶೇಷ ರೈಲು ಓಡಾಟದ ವೇಳಾಪಟ್ಟಿ ಇಂತಿದೆ.

ದಿನಾಂಕ 10/11/2023 ಶುಕ್ರವಾರ ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 11/11/2023 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.


ದಿನಾಂಕ 14/11/2023 ಬುಧವಾರ ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಸಂಜೆ 5:15ಕ್ಕೆ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. 


ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿನ್ ಕೋಚ್ಗಳು ಇರಲಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಬಯಸುವವರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ದ್ವಿತೀಯ ಪಿಯುಸಿ ಫಲಿತಾಂಶ: ಸುಳ್ಯದ ತಾಯಿ, ಮಗಳು ಉತ್ತೀರ್ಣ

Posted by Vidyamaana on 2023-04-21 11:26:30 |

Share: | | | | |


ದ್ವಿತೀಯ ಪಿಯುಸಿ ಫಲಿತಾಂಶ: ಸುಳ್ಯದ ತಾಯಿ, ಮಗಳು ಉತ್ತೀರ್ಣ

ಸುಳ್ಯ: ಸುಳ್ಯದ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ.

ಸುಳ್ಯ ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು.

ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ.

ಮಗಳು ತೃಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು.

ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯ, ಮನೆಗೆಲಸದ ಬಿಡುವಿನ ವೇಳೆ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

ನಾಳೆಯಿಂದ ವಿಧಾನ ಮಂಡಲ ಅಧಿವೇಶನ

Posted by Vidyamaana on 2023-07-02 05:01:04 |

Share: | | | | |


ನಾಳೆಯಿಂದ ವಿಧಾನ ಮಂಡಲ ಅಧಿವೇಶನ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ (ವಿಪಕ್ಷ ನಾಯಕ)ನ ಆಯ್ಕೆಗಾಗಿ ರವಿವಾರ ಕರೆಯಲಾಗಿದ್ದ ಶಾಸಕರ ಸಭೆಯನ್ನು ಹಠಾತ್ ರದ್ದುಪಡಿಸ ಲಾಗಿದೆ. ಸೋಮವಾರ ಆರಂಭ ವಾಗಲಿರುವ ಅಧಿವೇಶನ ಹಿನ್ನೆಲೆ ಯಲ್ಲಿ ಎರಡೂ ಸದನಗಳ ವಿಪಕ್ಷ ನಾಯಕರ ಆಯ್ಕೆಗೆ ಶಾಸಕರ ಸಭೆ ನಿಗದಿಯಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬೊಮ್ಮಾಯಿ ರವಿವಾರದ ಸಭೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಶಾಸಕರ ಸಭೆ ದಿಢೀರ್ ರದ್ದಾಗಿರುವುದು ಅಚ್ಚರಿ ಮೂಡಿಸಿದೆ. ಪಕ್ಷದ ಕಚೇರಿಯಿಂದ ಎಲ್ಲ ಶಾಸಕರಿಗೂ ಈ ಸಂಬಂಧ ದೂರವಾಣಿಕರೆ ಮಾಡಿ ಮಾಹಿತಿ ನೀಡಲಾಗಿದೆ. ಉಭಯ ಸದನಗಳ ವಿಪಕ್ಷ ನಾಯಕರ ಆಯ್ಕೆಯನ್ನು ದಿಲ್ಲಿಯಲ್ಲೇ ಸಭೆ ನಡೆಸಿ ಘೋಷಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್‌ ವೈ ಅವರಿಗೆ ಕರೆ ಮಾಡಿ ದಿಲ್ಲಿಗೆ ಬರುವಂತೆ ಸೂಚಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ಅವರು ದಿಲ್ಲಿಗೆ ತೆರಳಲಿದ್ದಾರೆ. ಈ ಬೆಳವಣಿಗೆಯೊಂದಿಗೆ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಲವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳಿವೆ. ಈ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿವೆ.

ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-05-22 13:24:27 |

Share: | | | | |


ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ವಿಧಾನಸೌಧ ಶಾಸನ ರಚಿಸುವ ಪುಣ್ಯ ಸ್ಥಳ. ಅಂತಹ ವಿಧಾನಸೌಧಕ್ಕೆ ಶಾಸಕನಾಗಿ ಪ್ರವೇಶ ಮಾಡುವುದೇ ದೊಡ್ಡ ಸಂತೋಷದ ಭಾವನೆ. ಅದಕ್ಕೆ ಕಾರಣರು ನನ್ನ ಕ್ಷೇತ್ರದ ಜನರು. ಅವರಿಗೆ ಇದನ್ನು ಅರ್ಪಿಸಲು ಬಯಸುತ್ತೇನೆ.

ಇದು ಅಶೋಕ್ ಕುಮಾರ್ ರೈ ಅವರ ಫಸ್ಟ್ ರಿಯಾಕ್ಷನ್...

ಶಾಸಕನಾಗಿ ಸೋಮವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿದ್ಯಮಾನಕ್ಕೆ ಫಸ್ಟ್ ರಿಯಾಕ್ಷನ್ ನೀಡಿದರು.

ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಅಶೋಕ್ ಕುಮಾರ್ ರೈ ಅವರು, ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಮೆಟ್ಟಿಲುಗಳಿಗೆ ನಮಿಸಿ, ಮುಂದಡಿ ಇಟ್ಟರು.

ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಯುವಕನ ದಾಂಧಲೆ

Posted by Vidyamaana on 2023-09-26 15:32:07 |

Share: | | | | |


ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಯುವಕನ ದಾಂಧಲೆ

ಮಂಗಳೂರು ಸೆ.26: ನಗರದ ಇಂಡಿಯಾನ ಆಸ್ಪತ್ರೆಗೆ ರೋಗಿಯ ಜೊತೆ ಬಂದಿದ್ದ ವ್ಯಕ್ತಿಯೊಬ್ಬ ರಿಸೆಪ್ಶನಿಸ್ಟ್ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಸ್ಪತ್ರೆ ಸೊತ್ತುಗಳನ್ನು ಹಾನಿಗೈದು ಘಟನೆ ನಡೆದಿದೆ.


ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕದ್ರಿ ವ್ಯಾಸನಗರ ನಿವಾಸಿ ಆಶೀಕ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.25ರಂದು ಸಂಜೆ ಆಶೀಕ್ ತನ್ನ ತಾಯಿಯನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಈ ವೇಳೆ ಆಸ್ಪತ್ರೆಯಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮಹಿಳೆ ರೋಗಿಯ ಮಾಹಿತಿ ಕೇಳಿದ್ದಾರೆ.


ರೋಗಿಯ ವೈಯಕ್ತಿಕ ವಿವರ, ಪ್ರಾಯ, ವಿಳಾಸ ಇತ್ಯಾದಿ ಮಾಹಿತಿಗಳನ್ನು ಕೇಳಿದಾಗ, ಆರೋಪಿ ಆಶೀಕ್ ಕೋಪಗೊಂಡಿದ್ದು ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ, ಸ್ಥಳದಲ್ಲಿ ದಾಂಧಲೆ ನಡೆಸಿದ್ದು ಮಹಿಳೆಯನ್ನು ದೂಡಿ ಮೈ ಕೈಯನ್ನು ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಡ್ಮಿಶನ್ ಡೆಸ್ಕ್ ನಲ್ಲಿದ್ದ ಆಸ್ಪತ್ರೆಯ ಟೇಬಲ್, ಕಂಪ್ಯೂಟರ್ ಇನ್ನಿತರ ಸೊತ್ತುಗಳನ್ನು ಹಾನಿ ಮಾಡಿದ್ದಾನೆ. ಈ ಬಗ್ಗೆ ತೊಂದರೆಗೀಡಾದ ಮಹಿಳೆ ಕಂಕನಾಡಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದು, ಮಾನಸಿಕ ತೊಂದರೆ ಎದುರಿಸುತ್ತಿದ್ದಾನೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಮನೆಯವರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

Recent News


Leave a Comment: