ಕುರಿಯ ; ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೆಯುವ ಪುಸ್ತಕ, ಛತ್ರಿ ವಿತರಣೆ

ಸುದ್ದಿಗಳು News

Posted by vidyamaana on 2024-06-26 13:25:21 |

Share: | | | | |


ಕುರಿಯ ; ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೆಯುವ ಪುಸ್ತಕ, ಛತ್ರಿ ವಿತರಣೆ

ಪುತ್ತೂರು: ದ.ಕ.ಜಿ.ಪಂ, ಹಿರಿಯ ಪ್ರಾಥಮಿಕ ಶಾಲೆ ಕುರಿಯದಲ್ಲಿ ಜೂ. ೨೧ ರಂದು ೭೭ ಮಂದಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಛತ್ರಿ ವಿತರಣೆ ಮಾಡಲಾಯಿತು.

ಕೊಡುಗೆ: ಆರ್ಯಾಪು ಗ್ರಾ.ಪಂ ಸದಸ್ಯ  ಬೂಡಿಯಾರ್ ಪುರುಷೋತ್ತಮ ರೈರವರು ತನ್ನ ಸಹೋದರ ಮಾಧವ ರೈಯವರ ೫೦ನೇ ವರ್ಷದ ಪುಣ್ಯ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕೊಡುಗೆ ನೀಡಿದರು. ಇದೇ ಸಂಧರ್ಭದಲ್ಲಿ  ಆರ್ಯಾಪು ಗ್ರಾ.ಪಂ, ಸದಸ್ಯ ನಾಗೇಶ್‌ರವರು ಛತ್ರಿ ಕೊಡುಗೆಯಾಗಿ ನೀಡಿದರು.

ಕನ್ನಡ ಮಾಧ್ಯಮ ಕಲಿಕೆಯಿಂದಲೂ ಉನ್ನತ ಸ್ಥಾನ- ಪುರುಷೋತ್ತಮ ರೈ: ಆರ್ಯಾಪು ಗ್ರಾ.ಪಂ, ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಈಗಿನ ಪೋಷಕರಿಗೆ ಇಂಗ್ಲೀಷ್ ಮಾಧ್ಯಮ ಫ್ಯಾಶನ್ ಆಗಿದೆ. ಆದರೆ  ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುವುದರಿಂದಲೂ ಉನ್ನತವಾದ ಸ್ಥಾನವನ್ನು ಪಡೆದವರು ತುಂಬಾ ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ಕುರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಒಂದನೆ ತರಗತಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕುರಿಯ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಹೆಚ್ಚು ಮುತುವರ್ಜಿಯನ್ನು ವಹಿಸಿಕೊಳ್ಳಬೇಕು. ನಾನು ಕಳೆದ  ೨೫ ವರ್ಷಗಳಿಂದ ಇಡಬೆಟ್ಟು ಹಾಗೂ ೫ ವರ್ಷಗಳಿಂದ ಕುರಿಯ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಿzನೆ. ಪ್ರತಿಯೊಬ್ಬರು ನಮ್ಮ ಊರಿನ ಶಾಲೆಯ  ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಲೆ ಹೆಚ್ಚಿನ ಅಭಿವೃದ್ಧಿ ಆಗಬೇಕು-ಅಬ್ದುಲ್‌ಜಬ್ಬಾರ್: ಅಧ್ಯಕ್ಷತೆ ವಹಿಸಿದ್ದ ಕುರಿಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್‌ಜಬ್ಬಾರ್‌ರವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಕುರಿಯ ಶಾಲೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಆರ್ಯಾಪು ಗ್ರಾ.ಪಂ ಸದಸ್ಯಗಳಾದ ನಾಗೇಶ್ ಮತ್ತು ಕಲಾವತಿಯವರು ಸಂದಭೋಚಿತವಾಗಿ ಮಾತನಾಡಿದರು.

ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ದಿವ್ಯಜೋತಿಯವರು ಶಾಲೆಯ ಚಟುವಟಿಕೆಯ ಬಗ್ಗೆ ಮಾತನಾಡಿದರು. ಗೌರವ ಶಿಕ್ಷಕಿ ರಮ್ಯ ವಂದಿಸಿದರು. ಶಿಕ್ಷಕಿ ಕವಿತಾ ಕಾರ್‍ಯಕ್ರಮ ನಿರೂಪಿಸಿದರು.

ಕುರಿಯ ಶಾಲೆ ಮಾದರಿ ಶಾಲೆ

ಗ್ರಾಮೀಣ ಪ್ರದೇಶದಲ್ಲಿ ಇರುವ ಕುರಿಯ ಶಾಲೆಯು ಮಾದರಿ ಶಾಲೆಯಾಗಿದ್ದು, ಈ ಶಾಲೆಯನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೃಪಾಂಕ ದೊರೆಯುತ್ತದೆ. ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಇದೆ. 

ವಿದ್ಯಾರ್ಥಿಗಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಕೊಳ್ಳಬೇಕು. ನನ್ನ ಸಹೋದರ ಮಾಧವ ರೈರವರ ೫೦ ನೇ ವರ್ಷದ ಪುಣ್ಯ ಸ್ಮರಣಾರ್ಥ ಬರೆಯುವ ಪುಸ್ತಕ ವನ್ನು ಕೊಡುಗೆಯಾಗಿ ನೀಡಿದ್ದೇನೆ

- ಬೂಡಿಯಾರ್ ಪುರುಷೋತ್ತಮ ರೈ

ಸದಸ್ಯರು ಗ್ರಾ.ಪಂ, ಆರ್ಯಾಪು

 Share: | | | | |


ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

Posted by Vidyamaana on 2024-06-09 14:02:56 |

Share: | | | | |


ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

ಮುಂಬೈ :ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುತ್ತಿದ್ದ ರನ್ ವೇಯಲ್ಲಿ ಇಂಡಿಗೋ ವಿಮಾನವೊಂದು ಇಳಿದ ನಂತರ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ತ್ವರಿತ ಪ್ರತಿಕ್ರಿಯೆಯಲ್ಲಿ, ನಾಗರಿಕ ವಿಮಾನಯಾನ ನಿಯಮಿತ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ವಜಾಗೊಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಹೊರಹೊಮ್ಮಿದ ವೀಡಿಯೊದಲ್ಲಿ, ಎರಡೂ ವಿಮಾನಗಳು ಒಂದೇ ರನ್ವೇಯಲ್ಲಿ ಕಂಡುಬರುತ್ತವೆ. ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಇಂಡಿಗೊ ವಿಮಾನವು ಇಳಿಯುವುದನ್ನು ಕಾಣಬಹುದು. ಇಂಡಿಗೋ ವಿಮಾನವು ಇಂದೋರ್ ನಿಂದ ಮುಂಬೈಗೆ ಹಾರುತ್ತಿದ್ದರೆ, ಏರ್ ಇಂಡಿಯಾ ವಿಮಾನವು ಕೇರಳದ ತಿರುವನಂತಪುರಕ್ಕೆ ಹೊರಟಿತು.

ಕುತ್ತಾರು : ಮನೆ ಕುಸಿತದಿಂದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಕಂದಾಯ ಸಚಿವರು ಭೇಟಿ

Posted by Vidyamaana on 2024-06-27 08:40:07 |

Share: | | | | |


 ಕುತ್ತಾರು : ಮನೆ ಕುಸಿತದಿಂದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಕಂದಾಯ ಸಚಿವರು ಭೇಟಿ

ಮಂಗಳೂರು, ಜೂನ್.26: ಪ್ರಕೃತಿ ವಿಕೋಪವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸದೆ ಇಳಿಜಾರಿನಲ್ಲಿ ಮನೆ ಕಟ್ಟಿಕೊಂಡಿರುವುದು ಇಲ್ಲಿ ಕಂಡುಬಂದಿದೆ. ಬೆಟ್ಟದ ಇಳಿಜಾರಿನಲ್ಲಿ ಈ ರೀತಿ ಮನೆ ಮಾಡಿರುವುದು ರಾಜ್ಯದಲ್ಲಿ ಸಾವಿರಾರು ಇರಬಹುದು. ಮಳೆಯ ಸಂದರ್ಭದಲ್ಲಿ ತೊಂದರೆ ಆಗಬಲ್ಲಂತಹ ಇಂತಹ ಮನೆಗಳನ್ನು ಗುರುತಿಸಿ, ಅಲ್ಲಿನ ನಿವಾಸಿಗಳಿಗೆ ಬೇರೆಡೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ

ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

Posted by Vidyamaana on 2023-02-16 15:37:25 |

Share: | | | | |


ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

   ಯಕ್ಷ ರಂಗದ ಭೀಷ್ಮ, ಭಾಗವತಿಕೆಯಲ್ಲಿ ತನ್ನದೇ ಮೇರು ಶೈಲಿಯಾದ ‘ಬಲಿಪ ಹಾಡುಗಾರಿಕೆ’ಯನ್ನು ಆರು  ದಶಕಗಳಿಂದ  ಉಣ ಬಡಿಸಿದ ಯಕ್ಷಗಾನದ ಸರ್ವಶ್ರೇಷ್ಟ ಭಾಗವತರಲ್ಲಿ ಒಬ್ಬರಾದ  ಬಲಿಪ ನಾರಾಯಣ ಭಾಗವತರು  ( 84) ಇಂದು ಇಹಲೋಕ ತ್ಯಜಿಸಿದ್ದಾರೆ.  ಈ ಮೂಲಕ ಯಕ್ಷ ಪ್ರಿಯರನ್ನು ತನ್ನ ಭಾಗವತಿಕೆಯ ಮೂಲಕ ಸೆಳೆಯುತ್ತಿದ್ದ ಕಂಚಿನ ಕಂಠ ಮೌನವಾಗಿದೆ. ಭಾಗವತಿಕೆಯ ರಂಗದಲ್ಲಿ ಅಗ್ರಜರೆನಿಸಿದ ಬಲಿಪ ನಾರಾಯಣ ಭಾಗವತರು ಬಲಿಪ ಪರಂಪರೆಯ ಕೊಂಡಿ.   ತನ್ನ ಕೊನೆಯ ದಿನಗಳಲ್ಲಿ ಅವರು ಮೂಡುಬಿದಿರೆ ನೂಯಿಯಲ್ಲಿ ವಾಸಿಸುತ್ತಿದ್ದರುತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಶೈಲಿಯ ಮೇರು ಭಾಗವತರಾದ ಬಲಿಪ ಭಾಗವತರ ಅಜ್ಜನ ಹೆಸರು ಕೂಡಾ ಬಲಿಪ ನಾರಾಯಣ ಭಾಗವತರೆಂದೇ. ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಯಕ್ಷಗಾನದ ತಾರಾ ವರ್ಚಸ್ಸಿನ ಸುವಿಖ್ಯಾತ ಭಾಗವತರು. ರಂಗದ ಒಳ ಹೊರಗಿನ ವ್ಯವಹಾರ ಮತ್ತು ಜನ್ಮದಾತ ಸಿದ್ಧಿಯಿಂದ ಅಕ್ಷರಶಃ ‘ಹುಲಿ’ಯಂತೆ ಮೆರೆದು ಆ ಕಾಲದ ಕೀರ್ತಿ ಪಡೆದವರು.ಅಂತಹಾ ಅಜ್ಜನ ಹಿನ್ನೆಲೆಯಲ್ಲಿ ಅದೇ ಶೈಲಿಯನ್ನು ಅನುಸರಿಸಿ, ಕೈದಾಟಿಸಿದ ಈಗಿನ ಬಲಿಪ ನಾರಾಯಣ ಭಾಗವತರು ಸುಮಾರು 63ವರ್ಷಗಳಷ್ಟು ಕಾಲ ಸಕ್ರಿಯವಾಗಿ ಹಾಡಿ ಯಕ್ಷರಾತ್ರಿಗಳನ್ನು ಬೆಳಗಿಸಿದವರು.ಅನೇಕ ಕಲಾವಿದರನ್ನು ರೂಪಿಸಿದ್ದಾರೆ. ಸುಮಾರು 70ರಷ್ಟು ಪ್ರಸಂಗಕಾವ್ಯಗಳು ಮತ್ತದರ ಪ್ರಸ್ತುತಿಯ ರಂಗನಡೆ-ಮಾಹಿತಿ ಅವರಿಗೆ ಕಂಠಸ್ಥ.


“ನೋಡಿ ನಿರ್ಮಲ ಜಲ ಸಮೀಪದಿ…”, “ಜಗವು ನಿನ್ನಾಧೀನ ಖಗಪತಿ ವಾಹನ…”, “ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೊ”, “ಎಲವೋ ಕುಂತೀ ಸುತನೇ” ಎಂಬಿತ್ಯಾದಿ ವಿವಿಧ ಸ್ವರ ಏರಿಳಿತದ ಸಮ್ಮಿಲನ-ಸಮತೋಲನ ಹೊಂದಿದ್ದ ‘ಬಲಿಪ’ ಶೈಲಿಗೆ ಅದರದ್ದೇ ಆದ ತೂಕ-ಸ್ಥರ…ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು  ಜಿಲ್ಲೆಯ ಪಡ್ರೆ ಗ್ರಾಮದವರು. ಇವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದಾರೆ. ಇವರು ತೆಂಕುತಿಟ್ಟಿನ ಪ್ರಸಿದ್ಧ ಮತ್ತು ಹಿರಿಯ ಭಾಗವತರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ


ವೈಯಕ್ತಿಕ ಜೀವನ


ಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾರ್ಚ್ 13, 1938 ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ವರ್ಷ ನಿಧನ ಹೊಂದಿದ್ದರು.  ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು.


ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ


ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಇವರು ಮೊದಲಿಗೆ ಆರಂಭಿಸಿದರು. ಯಕ್ಷಗಾನದ  50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡುತ್ತಾರೆ. ಇವರನ್ನು ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಾರೆ. ಇವರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.

ಪ್ರಶಸ್ತಿಗಳು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010

ಸಾಮಗ ಪ್ರಶಸ್ತಿ 2012

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ’ 2003

ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ 2002

71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ ‘ಪ್ರಶಸ್ತಿ, 2003

ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ’ 2002

ಶೇಣಿ ಪ್ರಶಸ್ತಿ, 2002

ಕವಿ ಮುದ್ದಣ ಪುರಸ್ಕಾರ, 2003ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ,2003

ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, 2003

ಪಾರ್ತಿಸುಬ್ಬ ಪ್ರಶಸ್ತಿ

ಆಳ್ವಾಸ್ ನುಡಿಸಿರಿ ಪ್ರಶಸ್ತಿ

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆರೋಪಿ ಪ್ರವೀಣ್‌ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Posted by Vidyamaana on 2023-12-01 15:58:50 |

Share: | | | | |


ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆರೋಪಿ ಪ್ರವೀಣ್‌ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಉಡುಪಿ ಸಬ್ ಜೈಲಿನಿಂದ ಆರೋಪಿ ಪ್ರವೀಣ್‌ ಚೌಗಲೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ.


ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ನನ್ನು ಉಡುಪಿಯ ಸಬ್ ಜೈಲಿಗೆ ರವಾನಿಸಲಾಗಿತ್ತು. ಆದರೆ ಈ ಜೈಲಿನಲ್ಲಿ ಈತನಿಗೆ ಭದ್ರತೆ ನೀಡುವುದು ಸವಾಲಾಗಿದೆ. ಸಹಕೈದಿಗಳೇ ಈತ ಮಾಡಿದ ಹೀನ ಕೆಲಸಕ್ಕೆ ಆತನಿಗೆ ಹಲ್ಲೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಸೀಮಿತ ವ್ಯವಸ್ಥೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆ ಸದ್ಯ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಡಿಸೆಂಬರ್ 5ರ ತನಕ ಈತನಿಗೆ ನ್ಯಾಯಾಂಗ ಬಂಧನವಿದ್ದು, ವಿಡಿಯೋ ಕಾನ್ನರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Posted by Vidyamaana on 2024-05-02 11:06:52 |

Share: | | | | |


ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮೇ. 1(ಬುಧವಾರ) ದಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಧರಿಸಿದ್ದ ಪುತ್ತೂರು ಅವರು ರಾತ್ರಿ 12.25 ರ ಸುಮಾರಿಗೆ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

Posted by Vidyamaana on 2024-02-11 21:30:15 |

Share: | | | | |


ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು, ಫೆ.11: ಬಿಜೆಪಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಬಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ನಿರಾಸೆಗೊಂಡಿದ್ದಾರೆ.


ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ.ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.


1.ಧರ್ಮಶೀಲಾ ಗುಪ್ತಾ: ಬಿಹಾರ

2.ಡಾ.ಭೀಮ್ ಸಿಂಗ್: ಬಿಹಾರ

3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್

4.ಸುಭಾಷ್ ಬರಲಾ: ಹರಿಯಾಣ

5.ನಾರಾಯಾಣ ಭಾಂಡಗೆ: ಕರ್ನಾಟಕ

6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ

7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ

8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ

9.ಸಾಧನಾ ಸಿಂಗ್: ಉತ್ತರ ಪ್ರದೇಶ

10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ

11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ

12.ನವೀನ್ ಜೈನ್: ಉತ್ತರ ಪ್ರದೇಶ

13.ಮಹೇಂದ್ರ ಭಟ್: ಉತ್ತರಾಖಂಡ್

14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

Recent News


Leave a Comment: