ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

Posted by Vidyamaana on 2023-05-21 11:14:43 |

Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ.ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

Posted by Vidyamaana on 2023-08-16 02:24:59 |

Share: | | | | |


ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

ಪುತ್ತೂರು: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ಆ. 16ರಂದು ಮಧ್ಯಾಹ್ನ 1 ಗಂಟೆಗೆ ಪರಾಶರ ಸಭಾಂಗಣದಲ್ಲಿ ಆಟಿದ ಗೌಜಿ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, ಎಸಿಜೆಎಂ, ತಾ.ಕಾ.ಸೇ. ಸಮಿತಿ ಅಧ್ಯಕ್ಷ ಗೌಡ ಆರ್.ಪಿ. ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಪ್ರೀಯಾ ರವಿ ಜೊಗ್ಲೇಕರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಹಾಗೂ ತಾ.ಕಾ.ಸೇ. ಸಮಿತಿ ಸದಸ್ಯ ಕಾರ್ಯದರ್ಶಿ ಅರ್ಚನಾ ಕೆ. ಉಣ್ಣಿತ್ತಾನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ. ಶಿವಣ್ಣ ಎಚ್.ಆರ್., 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಯೋಗೇಂದ್ರ ಶೆಟ್ಟಿ ಉಪಸ್ಥಿತರಿರುವರು.

ಸುಳ್ಯದ ಹಿರಿಯ ವಕೀಲ ಜಗದೀಶ ಹುದೇರಿ ಅವರು ಆಟಿಯ ಆಶಯ ಭಾಷಣ ಮಾಡಲಿದ್ದಾರೆ. ಬಳಿಕ ಆಟಿ ವಿಶೇಷ ಊಟದ ವ್ಯವಸ್ಥೆ ಇದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸಿದಲ್ಲಿ ಬಸ್ ಚಾಲಕ ಮಾಲಕರ ವಿರುದ್ಧ ಎಫ್ಐಆರ್ ; ಕಮಿಷನರ್ ಖಡಕ್ ಎಚ್ಚರಿಕೆ

Posted by Vidyamaana on 2023-09-28 04:36:11 |

Share: | | | | |


ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸಿದಲ್ಲಿ ಬಸ್ ಚಾಲಕ ಮಾಲಕರ ವಿರುದ್ಧ ಎಫ್ಐಆರ್ ; ಕಮಿಷನರ್ ಖಡಕ್ ಎಚ್ಚರಿಕೆ

ಮಂಗಳೂರು: ಖಾಸಗಿ ಬಸ್ಸುಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಅಪಘಾತ, ಪ್ರಯಾಣಿಕರ ಜೊತೆ ಸಿಬಂದಿ ಜಗಳ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಬಸ್ ಮಾಲಕರ ಜೊತೆ ತುರ್ತು ಸಭೆ ನಡೆಸಿದ್ದು, ಅಜಾಗರೂಕ ಚಾಲನೆಯಿಂದಾಗಿ ಅಪಘಾತವುಂಟಾಗಿ ಸಾವು ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲಕರಿಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಸ್ ಮಾಲಕರ ಜೊತೆಗೆ ಪೊಲೀಸ್ ಕಮಿಷನರ್, ಆರ್ ಟಿ ಓ ಅಧಿಕಾರಿಗಳು ಸಭೆ ನಡೆಸಿದ್ದು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಟ್ರಾಫಿಕ್ ಪೊಲೀಸ್ ಮತ್ತು ಬಸ್ ಮಾಲಕರ ಮಾತುಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗರ್ವಾಲ್, ಬಸ್ ಗಳ ನಡುವಿನ ಪೈಪೋಟಿ ಹಾಗೂ ಇದರಿಂದ ಸಿಬಂದಿ ಮೇಲಿನ ಒತ್ತಡದಿಂದಲೇ ಸಮಸ್ಯೆ ಆಗಿದೆ. ಬಸ್ ಮಾಲೀಕರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿ ಕ್ರಮಬದ್ಧ ವೇಳಾಪಟ್ಟಿ ರೂಪಿಸಬೇಕು. ತಿಂಗಳ ಒಳಗೆ ಹೊಸ ನಿಯಮ ಕಾರ್ಯರೂಪಕ್ಕೆ ಬರಬೇಕು. ಅಪಘಾತದಲ್ಲಿ ಪ್ರಾಣ ಹಾನಿ ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಏಕಕಾಲದಲ್ಲಿ ಮೂರ್ನಾಲ್ಕು ಬಸ್ ಗಳು ಸಂಚಾರ ಮಾಡುತ್ತಿರುವುದರಿಂದ ಪೈಪೋಟಿ ಏರ್ಪಟ್ಟು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಂಚಾರಿ ಪೊಲೀಸರು ಸಭೆಯ ಗಮನಕ್ಕೆ ತಂದಿದ್ದಾರೆ. ಕದ್ರಿ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ, ಕೆಲವು ರೂಟಿನಲ್ಲಿ ಬಸ್ ಮಾಲಕರಿಗೆ ತಮ್ಮ ಬಸ್ಸಿನಲ್ಲಿ ಯಾರು ಸಿಬಂದಿ ಇದ್ದಾರೆಂಬುದೇ ತಿಳಿದಿರುವುದಿಲ್ಲ. ಬಸ್ಸನ್ನು ಲೀಸಿಗೆ ನೀಡುತ್ತಿರುವುದರಿಂದ ಸಿಬಂದಿಗೆ ಕಲೆಕ್ಷನ್ ಮುಖ್ಯವಾಗುವುದೇ ಹೊರತು ಜನರ ಪ್ರಾಣದ ಬಗ್ಗೆ ಕಾಳಜಿ ಇರುವುದಿಲ್ಲ. ಕಲೆಕ್ಷನ್ ಆಗಬೇಕೆಂಬ ಒತ್ತಡಕ್ಕೆ ಬಿದ್ದು ಬಸ್ ಓಡಿಸುತ್ತಾರೆ. ಇದರಿಂದ ಅಪಘಾತಕ್ಕೆ ಕಾರಣ ಆಗುತ್ತಿದೆ ಎಂದು ಹೇಳಿದರು.


ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಮಾತನಾಡಿ, ಅಪಘಾತ, ಪ್ರಾಣ ಹಾನಿ ಆಗದಂತೆ ಕ್ರಮ ವಹಿಸಲು ಸಿಬಂದಿಗೆ ಕಾರ್ಯಾಗಾರ ನಡೆಸಿದ್ದೇವೆ. ಬಸ್ಸಿನ ಮೆಟ್ಟಿಲುಗಳಲ್ಲಿ ನಿರ್ವಾಹಕರು, ಪ್ರಯಾಣಿಕರು ಸಂಚರಿಸದಂತೆ ಸೂಚನೆ ನೀಡಿದ್ದೇವೆ ಎಂದರು. ಆದರೆ ಪರಿಣಾಮ ಆಗಿಲ್ಲ ಯಾಕೆ ಎಂದು ಕಮಿಷನರ್ ಪ್ರಶ್ನೆ ಮಾಡಿದರು. ಆರ್ ಟಿಓ ರವಿಶಂಕರ್ ಮಾತನಾಡಿ, ಸಿಟಿ ಬಸ್ ಗಳಿಗೆ ವೇಳಾಪಟ್ಟಿ ನಿಗದಿ ಪಡಿಸುವುದಕ್ಕೆ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ತೆರವಾಗಿದೆ. ಹೊಸತಾಗಿ ವೇಳಾಪಟ್ಟಿ ನಿಗದಿಪಡಿಸಲು ಅಡ್ಡಿ ಇಲ್ಲ. ಆ ಕೆಲಸ ಶೀಘ್ರದಲ್ಲಿ ಮಾಡಿಕೊಡುತ್ತೇವೆ ಎಂದು ಹೇಳಿದರು.


ರಸ್ತೆ ಗುಂಡಿಗಳ ಬಗ್ಗೆಯೂ ಬಸ್ ಮಾಲಕರು ಕಮಿಷನರ್ ಗಮನಕ್ಕೆ ತಂದಿದ್ದಾರೆ. ಮಳೆಗಾಲದಲ್ಲಿ ಪೂರ್ತಿಯಾಗಿ ರಸ್ತೆ ಗುಂಡಿ ಬಿದ್ದಿದ್ದು, ಹೆದ್ದಾರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೆದ್ದಾರಿ ಗುಂಡಿ ಬಿದ್ದಲ್ಲಿ, ಅದನ್ನು ಸರಿಪಡಿಸದೇ ಇದ್ದಲ್ಲಿ ಇಂಜಿನಿಯರ್ ಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ರಸ್ತೆಯ ದೋಷದ ಕಾರಣಕ್ಕೆ ಅಪಘಾತ ಸಂಭವಿಸಿದಲ್ಲಿ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಸೂಚನೆ ನೀಡಿದರು.


ನಿಲ್ದಾಣಗಳಲ್ಲಿ ಬಸ್ ಬೇ ಇರದಿರುವುದು, ಅದರಿಂದಾಗಿ ಜನರು ಎಲ್ಲೆಲ್ಲಿ ನಿಲ್ಲುವಂತಾಗಿರುವುದು, ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಬೇ ಇಲ್ಲದೆ ಪರದಾಡುವುದು ಇತ್ಯಾದಿ ವಿಚಾರಗಳೂ ಚರ್ಚೆಗೆ ಬಂದವು. ಈ ವೇಳೆ, ಎರಡು ತಿಂಗಳ ಹಿಂದೆಯೇ ಬಸ್ ಬೇ ಇರದಿರುವ ಬಗ್ಗೆ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಸ್ಪಂದನೆ ನೀಡದಿರುವ ಬಗ್ಗೆಯೂ ಡಿಸಿಪಿ ದಿನೇಶ್ ಕುಮಾರ್, ಕಮಿಷನರ್ ಗಮನಕ್ಕೆ ತಂದಿದ್ದಾರೆ. ಸಭೆಯಲ್ಲಿ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿಗಳಾದ ಮಹೇಶ್ ಕುಮಾರ್, ಗೀತಾ ಕುಲಕರ್ಣಿ, ಮನೋಜ್ ಕುಮಾರ್ ನಾಯ್ಕ್ ಮತ್ತಿತರ ಅಧಿಕಾರಿಗಳಿದ್ದರು.

ಪುತ್ತಿಲ ಪರಿವಾರದಿಂದ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ – ಬೃಹತ್ ಸಂತ ಸಮ್ಮೇಳನ : ಪೂರ್ವಭಾವಿ ಸಭೆ

Posted by Vidyamaana on 2023-11-20 20:02:34 |

Share: | | | | |


ಪುತ್ತಿಲ ಪರಿವಾರದಿಂದ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ – ಬೃಹತ್ ಸಂತ ಸಮ್ಮೇಳನ : ಪೂರ್ವಭಾವಿ ಸಭೆ

ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಡಿ.24 ಮತ್ತು 25 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಲೋಕಕಲ್ಯಾಣರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಬೃಹತ್ ಸಂತ ಸಮ್ಮೇಳನ ನಡೆಯುವ ಬಗ್ಗೆ ಪೂರ್ವಭಾವಿ ಸಭೆ ಮುಕ್ರಂಪಾಡಿಯ ಸುಭದ್ರ ಕಲ್ಯಾಣಮಂಟಪದಲ್ಲಿ ನಡೆಯಿತು.



ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಡಿ.24 ರ ಸಂಜೆ ಬೊಳುವಾರಿನಿಂದ ತಿರುಪತಿಯಿಂದ ಆಗಮಿಸುವ ದೇವರ ವೈಭವದ ಮೆರವಣಿಗೆ, ನಂತರ ರಾತ್ರಿ ಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮರುದಿನ ಬೆಳಿಗ್ಗೆ ವಿಶೇಷ ಉದಯಾಸ್ತಮಾನ ಪೂಜೆ , ನಂತರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನೋತ್ಸವ ಸಂಜೆ ಬೃಹತ್ ಸಂತ ಸಮ್ಮೇಳನ ನಡೆಯಲಿದೆ.



ಸಭೆಯ ನಂತರ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.


ಎರಡು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರಲಿದ್ದು, ಎರಡು ದಿನವೂ ಅನ್ನದಾನ ಇರಲಿದೆ ಎಂದರು.



ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚನೆ ನಡೆಯಿತು.


ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಶ್ರೀನಿವಾಸ ಕಲ್ಯಾಣೋತ್ಸವದ ಅಧ್ಯಕ್ಷರಾದ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್, ಗಣೇಶ್ ಭಟ್ ಮಕರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು.

ಸ್ನೇಹಿತನನ್ನು ಕೊಲೆಗೈದು ಗುಹೆಯಲ್ಲಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

Posted by Vidyamaana on 2024-01-16 04:45:51 |

Share: | | | | |


ಸ್ನೇಹಿತನನ್ನು ಕೊಲೆಗೈದು ಗುಹೆಯಲ್ಲಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

ಚಿಕ್ಕಬಳ್ಳಾಪುರ, ಜ.16: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಂಧ್ರಪ್ರದೇಶ ಮೂಲದ ತನ್ನ ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆ (Murder)ಮಾಡಿ ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿ ತಲೆಮರೆಸಿಕೊಂಡಿದ್ದರು. ಆದರೆ ಆರೋಪಿಗಳು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬಂತೆ ಆರೋಪಿಯೊಬ್ಬನನ್ನು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪಾತಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.


ನೆರೆರಾಜ್ಯ ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದ. ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು.ನೆರೆರಾಜ್ಯ ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದ. ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು.


ಸ್ನೇಹಿತನಿಂದ ಕೊಲೆ ರಹಸ್ಯ ಬಹಿರಂಗ


ಮೃತನ ಸ್ನೇಹಿತ ಬಾಬುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣನನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ಕೊಂದು ಶವ ಸುಟ್ಟು ಹಾಕಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಕರ್ನಾಟಕದ ಪಾತಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ್ದಾರೆ.ಕೊಲೆ ಆರೋಪಿ ಪ್ರಭಾಕರ್ ಆತ್ಮಹತ್ಯೆ


ಆಂಧ್ರದ ಪೊಲೀಸರು ಆರೋಪಿ ಬಾಬುವನ್ನು ವಶಕ್ಕೆ ಪಡೆದು ತನಿಖೆ ಆರಂಬಿಸುತ್ತಿರುವ ವಿಚಾರ ತಿಳಿದ ಮತ್ತೊಬ್ಬ ಆರೋಪಿ ಪ್ರಭಾಕರ್ ಪೊಲೀಸರ ತನಿಖೆಗೆ ಹೆದರಿ ಸ್ವಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.


ವೆಂಕಟರಮಣ ನಾಯ್ಕ ಕೊಲೆಗೆ ಕಾರಣ


ವೆಂಕಟರಮಣ ನಾಯ್ಕ, ಬಾಬು, ಪ್ರಭಾಕರ್ ಮೂವರು ಸ್ನೇಹಿರಾಗಿದ್ದರು. ಬಾಬು ಹಾಗೂ ವೆಂಕಟರಮಣ ನಾಯ್ಕ ಮಧ್ಯೆ ಜಮೀನು ವಿವಾದ ಇತ್ತು. ಈ ವಿಚಾರವಾಗಿ ವೆಂಕಟರಮಣ ನಾಯ್ಕ್ ಪದೆ ಪದೆ ಕ್ಯಾತೆ ತೆಗೆಯುತ್ತಿದ್ದನಂತೆ. ಇದರಿಂದ ಕುಪಿತನಾದ ಬಾಬು ವೆಂಕಟರಮಣನನ್ನು ಗಡಿನಾಡು ವಂಡಮಾನ್ ಬಳಿ ಕರೆತಂದು ಮದ್ಯಪಾನ ಮಾಡಿಸಿದ್ದಾರೆ. ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಆರೋಪಿ ಬಾಬು ಪೊಲೀಸರು ಮುಂದೆ ಬಾಯಿ ಬಿಟ್ಟಿದ್ದಾನೆ.


ಕೊಲೆ ಮಾಡಿದ ಸ್ಥಳ ಕರ್ನಾಟಕ ರಾಜ್ಯಕ್ಕೆ ಸೇರಿರುವ ಕಾರಣ ಆಂಧ್ರ ಪೊಲೀಸರು ಕೊಲೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

Posted by Vidyamaana on 2024-03-21 20:21:00 |

Share: | | | | |


ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

ಬೆಂಗಳೂರು, (ಮಾರ್ಚ್ 21): ಇತ್ತೀಚೆಗೆ ನಮ್ಮ ಮೆಟ್ರೋ (Namma Metro )ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈ ಹಿಂದೆ ಮೆಟ್ರೋ ಹಳಿಗೆ ಹಾರಿದ ಪ್ರಕರಣಗಳು ನಡೆದಿದ್ದವು. ಆದ್ರೆ, ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದ್ರೆ, ಇಂದು (ಮಾರ್ಚ್ .21) ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ (Athiguppe Metro) ರೈಲು ಬರುವಾಗ ಯುವಕ ಹಳಿಗೆ ಜಿಗಿದಿದ್ದಾನೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದೆ. ಇದರಿಂದ ಯುವಕನ ದೇಹ ಎರಡು ತುಂಡಾಗಿದೆ. ಸದ್ಯ ಯುವಕನ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವಕನನನ್ನು ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದ್ದು, ಆತನ ಕುಟುಂಬಕ್ಕೆ ಮತ್ತು ಕಾಲೇಜಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.ಮಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವ್ ಟಕ್ಕರ್ ಜೊತೆಗೆ ಒರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದ. ಹಾಗೇ ಮೂವರು ಮಾತನಾಡುತ್ತಾ ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ಸಮಯದಲ್ಲಿ . ಧ್ರುವ್ ಟ್ರಾಕ್ ಮೇಲೆ ಹಾರಿದ್ದಾನೆ. ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರೈಲು ಹತ್ತಿರ ಬಂದಾಗ ಸ್ಥಳದಿಂದ ಓಡಿ ಹೋಗಿದ್ದಾರೆ. ಪರಿಣಾಮ ರೈಲು ಸ್ವಲ್ಪ ದೂರ ಎಳೆದೊಯ್ದಿದ್ದು, ರುಂಡ-ಮುಂಡ ಬೇರೆ-ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಡಿಸಿಪಿ ಎಸ್‌.ಗಿರೀಶ್‌ ಹೇಳಿದ್ದಿಷ್ಟು

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 19 ರಿಂದ 20 ವರ್ಷದ ಹುಡುಗನ ಸಾವಾಗಿದೆ. ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನು. ಈತ ನ್ಯಾಷನಲ್ ಲಾ ಕಾಲೇಜ್ ಫಸ್ಟ್ ಇಯರ್ ವಿದ್ಯಾರ್ಥಿ ಎಂದು ಮಾಹಿತಿ ನೀಡಿದರು.

ಸದ್ಯ ವಿದ್ಯಾರ್ಥಿ ಸಾವಿನ ಬಗ್ಗೆ ಕಾಲೇಜು ಮತ್ತು ಆತನ ಕುಟುಂಬಕ್ಕೆ ಪೊಲೀಸರು ಮಾಹಿತಿ ರವಾನಿಸಿದ್ದು, ಧ್ರುವ್ ಟಕ್ಕರ್ ಏಕೆ ಆತ್ಮಹತ್ಯೆ ಮಾಡಿಕೊಂಡ? ಆತ್ಮಹತ್ಯೆಗೆ ಕಾರಣವೇನು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಪುನಾರಂಭವಾಗಿದೆ.

Recent News


Leave a Comment: