ಚೆಲ್ಯಡ್ಕ ಮುಳುಗು ಸೇತುವೆ ಸಂಚಾರ ಸ್ಥಗಿತಕ್ಕೆ ಜಿಲ್ಲಾಧಿಕಾರಿ‌ ಆದೇಶ

ಸುದ್ದಿಗಳು News

Posted by vidyamaana on 2024-06-29 13:06:13 |

Share: | | | | |


ಚೆಲ್ಯಡ್ಕ ಮುಳುಗು ಸೇತುವೆ ಸಂಚಾರ ಸ್ಥಗಿತಕ್ಕೆ ಜಿಲ್ಲಾಧಿಕಾರಿ‌ ಆದೇಶ

ಪುತ್ತೂರು: ಚೆಲ್ಯಡ್ಯ ಮುಳುಗು ಸೇತುವೆ ಮಳೆಗಾಲ ಮುಗಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಈ ಬಾರಿಯ ಮಳೆಗೂ ಚೆಲ್ಯಡ್ಕ ಮುಳುಗು ಸೇತುವೆ ನೀರಿನಿಂದ ಮುಳುಗಿ, ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ಸಂಚಾರ ಸೂಚಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನಿಂದ ಪಾಣಾಜೆ - ಬೆಟ್ಟಂಪಾಡಿ ಭಾಗಕ್ಕೆ ತೆರಳುವವರು ಸಂಟ್ಯಾರ್ ರಸ್ತೆಯಾಗಿ ತೆರಳಬಹುದು. ದೇವಸ್ಯ ಕಡೆಯಿಂದ ತೆರಳುವವರು ಚೆಲ್ಯಡ್ಕದವರೆಗೆ ಮಾತ್ರ ತೆರಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 Share: | | | | |


ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

Posted by Vidyamaana on 2024-01-05 15:03:39 |

Share: | | | | |


ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

ಬೆಂಗಳೂರು : ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳಿವೆ.ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.


ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ.


ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

Posted by Vidyamaana on 2023-05-16 03:26:05 |

Share: | | | | |


ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

ಪುತ್ತೂರು: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಎನ್ನುವ ಹೆಸರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಮೇ 21ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ದರ್ಬೆ ವೃತ್ತದಿಂದ‌ ಹೊರಡುವ ಜಾಥಾ ಮುಖ್ಯರಸ್ತೆಯಾಗಿ ಸಂಚರಿಸಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಳ್ಳಲಿದೆ.

ಕಾಲ್ನಡಿಗೆ ಜಾಥಾದ ಬಳಿಕ ದೇವಸ್ಥಾನದ ವಠಾರದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ ಬಳಿಕ ಪುತ್ತಿಲ ಅಭಿಮಾನಿಗಳು ಎಂಪಿ ಫಾರ್ ಪುತ್ತಿಲ ಅಭಿಯಾನ‌ ಕೈಗೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಪುತ್ತಿಲ ಘೋಷ ವಾಕ್ಯ ಹತ್ತೂರಿಗೆ ಪುತ್ತಿಲ ಎಂಬುದಾಗಿ ಪರಿವರ್ತನೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮೇ 21ರಂದು ನಡೆಯುವ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಕಾರ್ಯಕರ್ತರ ಸಭೆ ಮಹತ್ವ ಪಡೆದುಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ವೀರೋಚಿತ ಸೋಲು ಅನುಭವಿಸಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಯ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಿಕೊಂಡಿದ್ದಾರೆ. ಸರ್ವಧರ್ಮೀಯರು ಪುತ್ತಿಲ ಅಭಿಮಾನಿಗಳಾಗಿರುವುದು ಕಾಂಗ್ರೆಸ್ ವಿಜಯೋತ್ಸವದ ವೇಳೆಯೇ ಗಮನಕ್ಕೆ ಬಂದಿತ್ತು.

ಹೆರಿಗೆ ಬಳಿಕ ಮಾನಸಿಕ ಖಿನ್ನತೆ ; ನಾಲ್ಕು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾವಿಗೆ ಶರಣಾದ ರುಕಿಯಾ

Posted by Vidyamaana on 2023-12-03 04:27:12 |

Share: | | | | |


ಹೆರಿಗೆ ಬಳಿಕ ಮಾನಸಿಕ ಖಿನ್ನತೆ ; ನಾಲ್ಕು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾವಿಗೆ ಶರಣಾದ ರುಕಿಯಾ

ಮಂಗಳೂರು: ಹೆರಿಗೆಯಾದ ಬಳಿಕ ಮಾನಸಿಕವಾಗಿ ಖಿನ್ನರಾಗಿದ್ದ ಮಹಿಳೆಯೊಬ್ಬರು ತನ್ನ ನಾಲ್ಕುವರೆ ತಿಂಗಳ ಮಗುವನ್ನು ಟಬ್ ನಲ್ಲಿ ಮುಳುಗಿಸಿ ಕೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಂಗಳಾದೇವಿ ಬಳಿಯ ಗುಜ್ಜರಕೆರೆಯಲ್ಲಿ ನಡೆದಿದೆ. 


ಫಾತಿಮಾ ರುಕಿಯಾ (23) ತನ್ನ ನಾಲ್ಕುವರೆ ತಿಂಗಳ ಗಂಡು ಮಗುವನ್ನು ಕೊಂದು ಸಾವಿಗೆ ಶರಣಾದ ಯುವತಿ. ಇವರಿಗೆ ಒಂದೂವರೆ ವರ್ಷದ ಹಿಂದೆ ಮಹಮ್ಮದ್ ಉನೈಸ್ ಎಂಬವರ ಜೊತೆಗೆ ಮದುವೆಯಾಗಿತ್ತು. ಕಳೆದ ಜುಲೈ 7ರಂದು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಬಳಿಕ ಮಾನಸಿಕ ಖಿನ್ನತೆ ಹೊಂದಿದ್ದರು.‌ ತನ್ನ ತಾಯಿ ಜೊತೆಗೆ ತಾನು ಸಾಯುವುದಾಗಿ ಹೇಳುತ್ತಿದ್ದರು. ಇದಕ್ಕಾಗಿ ಅವರನ್ನು ಮಾನಸಿಕ ತಜ್ಞ ವೈದ್ಯರಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. 


ಆದರೆ, ಡಿ.2ರ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾನು ವಾಸವಿದ್ದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟಿನ ಫ್ಲಾಟಿನ ಬೆಡ್ ರೂಮಿನಲ್ಲಿ ಸಾವಿಗೆ ಶರಣಾಗಿದ್ದಾರೆ. ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ ನಾಲ್ಕುವರೆ ತಿಂಗಳ ಮಗುವನ್ನು ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಕಿಟಕಿಯ ಸರಳಿಗೆ ಸೀರೆಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ತಾಯಿ ಖತೀಜಾತುಲ್ ಕುಬ್ರ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ‌

ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಕೇಸ್ - ಪೊಲೀಸರಿಂದ ಶಂಕಿತನ ಪೋಟೋ ಬಿಡುಗಡೆ

Posted by Vidyamaana on 2023-02-06 15:12:33 |

Share: | | | | |


ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಕೇಸ್ - ಪೊಲೀಸರಿಂದ ಶಂಕಿತನ ಪೋಟೋ ಬಿಡುಗಡೆ

ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು, ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್ ಗ್ಲಾಸ್ ಧರಿಸಿಕೊಂಡಿರುವ ಶಂಕಿತ ಆರೋಪಿಯ ಸಿಸಿ ಕೆಮರಾದಲ್ಲಿ ಸೆರೆ ಸಿಕ್ಕ ಪೋಟೋ ಬಿಡುಗಡೆಗೊಳಿಸಿದ್ದಾರೆ

ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅದನ್ನು ಪೊಲೀಸರಿಗೆ ನೀಡುವಂತೆ ಕೋರಲಾಗಿದ್ದು ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜುವೆಲ್ಯರಿಯೊಂದಕ್ಕೆ ಹಾಡುಹಗಲೇ ನುಗ್ಗಿದ್ದ ದುಷ್ಕರ್ಮಿ ಸಿಬಂದಿ ರಾಘವ ಆಚಾರ್ಯ (55) ಅವರಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ.

ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿಬೇಕಾದ ಪೊಲೀಸ್ ಅಧಿಕಾರಿಗಳು:

ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333,

ಮಹೇಶ್ ಕುಮಾರ್ , ಎಸಿಪಿ ಕೇಂದ್ರ ಉಪವಿಭಾಗ, ಮಂಗಳೂರು ನಗರ - ಮೊ: 9480805320

ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

Posted by Vidyamaana on 2024-03-12 15:57:41 |

Share: | | | | |


ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

ಪುತ್ತೂರು: ಹೆದ್ದಾರಿ ಮೇಲೆ ಮರದ ಕೊಂಬೆ ಬಿದ್ದು, ದ್ವಿಚಕ್ರ ಸವಾರರು ಸ್ವಲ್ಪದರಲ್ಲೇ ಬಚಾವಾದ ಘಟನೆ ಮುರ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಪುತ್ತೂರು - ಕಬಕ ನಡುವಿನ ಮುರ ಜಂಕ್ಷನಲ್ಲೇ ಮರದ ಕೊಂಬೆ ಮುರಿದು ಬಿದ್ದಿದೆ. ಸೋಮವಾರ ಸಂಜೆಯೇ ಕೊಂಬೆ ಮುರಿದು ಬಿದ್ದಿದ್ದರೂ, ಇನ್ನೂ ಸಂಬಂಧಪಟ್ಟವರು ಕೊಂಬೆಯನ್ನು ತೆರವು ಮಾಡಿಲ್ಲ.

ರಾತ್ರಿ ಹೊತ್ತು ವಾಹನ ಸವಾರರ ಗಮನಕ್ಕೆ ಬಾರದೇ, ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಎರಡು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

Posted by Vidyamaana on 2024-03-03 13:48:11 |

Share: | | | | |


ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಚಾಲಕ ಅಜಾಗರೂಕತೆಯಿಂದ ಬಸ್ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಬಸ್ ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ಅಂಗಡಿಗೆ ನುಗ್ಗಿದ್ದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿದಂತೆ ಅಂಗಡಿಯ ಕಪಾಟುಗಳಿಗೂ ಹಾನಿಯಾಗಿದೆ. ಮಾತ್ರವಲ್ಲದೆ ಮೂರಾಲ್ಕು ದ್ವಿಚಕ್ರ ವಾಹನ ಹಾಗೂ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಈ ದುರ್ಘಟನೆಯ ಸಂದರ್ಭ ಕೆಲವೇ ಜನರಿದ್ದರಿಂದ, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ



Leave a Comment: