ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಫಾಝಿಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

Posted by Vidyamaana on 2023-08-22 01:32:43 |

Share: | | | | |


ಫಾಝಿಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

ಮಂಗಳೂರು: ದ.ಕ.ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.


ಪ್ರಕರಣದ ಆರೋಪಿಗಳಾದ ಅಜಿತ್ ಕ್ರಾಸ್ತಾ, ಶ್ರೀನಿವಾಸ್ ಗೆ ಜಾಮೀನು ಆಗಿದೆ.


ಕಳೆದ ವರ್ಷ ಜುಲೈ 28 ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು. ಆ ಪೈಕಿ ಹರ್ಷಿತ್‌ ಎಂಬಾತನಿಗೆ ನ್ಯಾಯಾಲಯವು ಸೆ.7, 2022ರಂದು ಜಾಮೀನು ಮಂಜೂರು ಮಾಡಿತ್ತು

ಬೆಂಗಳೂರು ಕಂಬಳಕ್ಕೆ ಸಿಕ್ತು ರಾಜ್ಯ ಸರಕಾರದಿಂದ ಧನ ಬಲ

Posted by Vidyamaana on 2023-11-04 21:32:04 |

Share: | | | | |


ಬೆಂಗಳೂರು ಕಂಬಳಕ್ಕೆ ಸಿಕ್ತು ರಾಜ್ಯ ಸರಕಾರದಿಂದ ಧನ ಬಲ

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನ.24ರಿಂದ 26 ರತನಕ ನಡೆಯಲಿರುವ ಬೆಂಗಳೂರು‌ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ರೂ ಒಂದು ಕೋಟಿ ಘೋಷಣೆ ಮಾಡಿದ್ದಾರೆ ಎಂದು ಅಶೋಕ್ ರೈ ತಿಳಿಸಿದ್ದಾರೆ 

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಕಂಬಳಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಂಬಳ ಸಮಿತಿ ನೇಮಕ ಮಾಡಿದೆ. ಕರೆ ಮುಹೂರ್ಥದ ಬಳಿಕ ಅನೇಕ ಸಚಿವರು ಕಂಬಳ ನಡೆಯುವ ಅರಮನೆ ಮೈದಾ‌ನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಈ ಹಿಂದೆ ಘೋಷಣೆಯನ್ನು ಮಾಡಿದ್ದರು.


ಬೆಂಗಳೂರು ಕಂಬಳಕ್ಕೆ ಖ್ಯಾತ ಬಾಲಿಹುಡ್ ನಟಿಯರು, ಸೆಲೆಬ್ರಿಟಿಗಳು ಆಗಮಿಸಲಿದ್ದು ಸುಮಾರು 8 ಲಕ್ಷ ಮಂದಿ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದರು.

ಇದೀಗ ಕಂಬಳಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಕಂಬಳ ಸಮಿತಿಯವರ ಉತ್ಸಾಹವನ್ನು ಕಂಡ ಸಿ ಎಂ ರವರು ಕಂಬಳಕ್ಕೆ ಸರಕಾರದಿಂದ ಒಂದು ಕೋಟಿ ರೂ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದು ಕಂಬಳದ ಮೆರುಗನ್ನು ಹೆಚ್ಚಿಸಿದೆ. 


ಕಂಬಳದಲ್ಲಿ ಸುಮಾರು 150 ಕ್ಕೂ‌ಮಿಕ್ಕಿ ಜೋಡಿ ಕಂಬಳ ಕೋಣಗಳು ಭಾಗವಹಿಸಲಿದ್ದು ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಕಂಬಳ ಕೋಣಗಳಿಗೆ ಬೇಕಾದ ಆಹಾರ ಮತ್ತು ನೀರನ್ನು ಕೂಡಾ ಮಂಗಳೂರಿನಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ.

ಖ್ಯಾತ ಸೆಲೆಬ್ರಿಟಿಗಳಾದ ಐಶ್ವರ್ಯಾ ರೈ, ಅನುಷ್ಕಾ ಶೆಟ್ಡಿ, ರಜನಿಕಾಂತ್ ಸೇರಿದಂತೆ ರಾಷ್ಡ್ರಿಯ ಮತ್ತು ಅಂತರ ರಾಷ್ಡ್ರೀಯ ಖ್ಯಾತಿಯ ಘಟಾನುಘಟಿ ಪ್ರಮುಖರು ಭಾಗವಹಿಸಿ ಕಂಬಳಕ್ಕೆ ತಾರಾ ಮೆರುಗನ್ನು ನೀಡಲಿದ್ದಾರೆ. ಕಂಬಳ ಕರೆ‌ಮುಹೂರ್ತ ನಡೆಸಲಾಗಿದ್ದು ಕರೆ ನಿರ್ಮಾಣವೂ ಭರದಿಂದ ಸಾಗುತ್ತಿದೆ. ಕಂಬಳಕ್ಕೆ ಸರಕಾರದ ಸಹಾಯ ಹಸ್ತ ದೊರೆಯುವುದರೊಂದಿಗೆ ಬೆಂಗಳೂರು‌ ಕಂಬಳ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ.


ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಒಂದು ಕೋಟಿ ನೀಡುವುದಾಗಿ ಘೋಷಣೆ ಮಾಡಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬೆಂಗಳೂರು ಕಂಬಳ ಹೊಸ ಇತಿಹಾಸವನ್ನು ನಿರ್ಮಿಸಲಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಯನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಕಂಬಳಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿದ್ದು ವಿವಿಧ ತುಳು ಸಂಘಟನೆಗಳು ಮತ್ತು ಕರಾವಳಿಯ ವಿವಿಧ ಸಂಘಟನೆಗಳ ಸಹಕಾರದಿಂದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ.


ಅಶೋಕ್ ರೈ ಶಾಸಕರು ಪುತ್ತೂರು

ಅಧ್ಯಕ್ಷರು ಬೆಂಗಳೂರು‌ಕಂಬಳ ಸಮಿತಿ

ಕುಂದಾಪುರದಲ್ಲಿ ನದಿಯಲ್ಲಿ ನಾಪತ್ತೆಯಾಗಿದ್ದ ಐವರ್ನಾಡಿನ ಸುಹಾಸ್ ಮೃತದೇಹ ಪತ್ತೆ

Posted by Vidyamaana on 2023-05-06 08:42:14 |

Share: | | | | |


ಕುಂದಾಪುರದಲ್ಲಿ ನದಿಯಲ್ಲಿ ನಾಪತ್ತೆಯಾಗಿದ್ದ ಐವರ್ನಾಡಿನ ಸುಹಾಸ್ ಮೃತದೇಹ ಪತ್ತೆ

ಸುಳ್ಯ: ನಿನ್ನೆ ಕುಂದಾಪುರದ ಸಮೀಪದ ಬಿಡ್ಕಲ್ ಕಟ್ಟೆಯ ಸೌಡ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿ ಮುಳುಗಿ ನಾಪತ್ತೆಯಾಗಿದ್ದ ಸುಳ್ಯದ ಐವರ್ನಾಡಿನ ಯುವಕನ ಮೃತದೇಹ ನದಿಯಲ್ಲಿ ನಿನ್ನೆ ಪತ್ತೆಯಾಗಿದೆ.ಅಗ್ನಿ ಶಾಮಕ ದಳದವರು ಮತ್ತು ಮುಳುಗುತಜ್ಞರು ಸತತ ಹುಡುಕಾಟ ನಡೆಸಿದ್ದು ನದಿಗೆ ಇಳಿದ 300 ಮೀ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂದಾಪುರ ತಾಲೂಕಿನ ಬಿಟ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್.ಎಂ. (21) ಮಧ್ಯಾಹ್ನ ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದರು.

ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದು, ಎ.29 ರಂದು ಬೆಳಿಗ್ಗೆ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದರು. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ; NIA ತಂಡದಿಂದ ಮಹತ್ವದ ಮಾಹಿತಿ ಪ್ರಕಟಣೆ

Posted by Vidyamaana on 2023-12-16 09:47:31 |

Share: | | | | |


ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ; NIA ತಂಡದಿಂದ ಮಹತ್ವದ ಮಾಹಿತಿ ಪ್ರಕಟಣೆ

ಸುಳ್ಯ : ಪ್ರವೀಣ್‌ ನೆಟ್ಟಾರು ಹತ್ಯೆ(Praveen Nettaru Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮನವಿ ಮಾಡಿದೆ.


ಬೆಳ್ಳಾರೆಯ ಬೂಡು ನಿವಾಸಿ ಎಂ.ಡಿ.ಮುಸ್ತಫ, ನೆಕ್ಕಿಲಾಡಿ ಅಗ್ನಾಡಿ ನಿವಾಸಿ ಮಸೂದ್‌ ಅಗ್ನಾಡಿ, ಮಸೂದ್‌ ಕೆ.ಎ, ಬಂಟ್ವಾಳ ತಾಲೂಕಿನ ಕೊಡಾಜೆ ನಿವಾಸಿ ಮೊಹಮ್ಮದ್‌ ಶರೀಫ್‌ ಕೊಡಾಜೆ, ಸುಳ್ಯದ ಕಲ್ಲುಮುಟ್ಟು ನಿವಾಸಿ ಉಮ್ಮರ್‌ ಆರ್. ಉಮ್ಮರ್‌ ಫಾರೂಕ್‌, ಬೆಳ್ಳಾರೆ ನಿವಾಸಿ ಅಬೂಬಕ್ಕರ್‌ ಸಿದ್ದಿಕ್‌ ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್‌ ಲಿಸ್ಟ್‌ ನಲ್ಲಿದ್ದಾರೆ.ಈ ಆರೋಪಿಗಳ ಕುರಿತು ಇರುವಿಕೆ ತಿಳಿದು ಬಂದರೆ ಮಾಹಿತಿ (whatsapp 9497715294) ತಿಳಿದು ಬಂದಲ್ಲಿ ತಿಳಿಸಬೇಕೆಂದು ಸಾರ್ವಜನಿಕರನ್ನು ಎನ್‌ಐಎ ವಿನಂತಿಸಿದೆ. ಅಷ್ಟು ಮಾತ್ರವಲ್ಲದೇ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಿದೆ

ಮೇ 6 ಕ್ಕೆ ಪುತ್ತೂರಿಗೆ ಯೋಗಿ ಆದಿತ್ಯನಾಥ್

Posted by Vidyamaana on 2023-04-25 03:40:15 |

Share: | | | | |


ಮೇ 6 ಕ್ಕೆ ಪುತ್ತೂರಿಗೆ ಯೋಗಿ ಆದಿತ್ಯನಾಥ್

ಪುತ್ತೂರು: ಚುನಾವಣಾ ಕಣ ರಂಗು ಪಡೆಯುತ್ತಿದ್ದಂತೆ ಸ್ಟಾರ್ ಪ್ರಚಾರಕರ ದಂಡು ಪುತ್ತೂರಿಗೆ ಆಗಮಿಸುತ್ತಿದೆ.

ಮೇ 6ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ಪಕ್ಕಾ ಆಗಿದೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಮತ ಯಾಚಿಸಲಿರುವ ಯೋಗಿ, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದಾರೆ.

ರಾಜ್ಯ, ರಾಷ್ಟ್ರದ ರಾಜಕಾರಣ ಪುತ್ತೂರಿನೆಡೆಗೆ ಮುಖ ಮಾಡಿದ್ದು, ಕಣ ರಣಾಂಗಣವಾಗಿದೆ. ವಿಪಕ್ಷ, ಪಕ್ಷೇತರ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗುತ್ತಿರುವ ನಡುವೆ ಬಿಜೆಪಿಯೂ ಸ್ಟಾರ್ ಪ್ರಚಾರಕರನ್ನು ಕರೆಸಿಕೊಳ್ಳುತ್ತಿದೆ.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಜೊತೆಯಲ್ಲಿದ್ದ ಭಿನ್ನ ಕೋಮಿನ ಯುವಕ, ಯುವತಿಗೆ ತರಾಟೆ

Posted by Vidyamaana on 2023-12-23 13:24:19 |

Share: | | | | |


ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ  ಜೊತೆಯಲ್ಲಿದ್ದ ಭಿನ್ನ ಕೋಮಿನ ಯುವಕ, ಯುವತಿಗೆ ತರಾಟೆ

ಮಂಗಳೂರು: ಜೊತೆಯಲ್ಲಿ ಇದ್ದ ಬೇರೆ ಬೇರೆ ಕೋಮಿನ ಯುವಕ ಮತ್ತು ಯುವತಿ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರು ನಗರದ ಮಿಲಾಗ್ರಿಸ್ ಬಳಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಇದ್ದಿದ್ದನ್ನು ಗಮನಿಸಿ ಯುವಕನನ್ನ ಹಿಂದೂ ಸಂಘಟನೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.


ಇಂದು ಸಂಜೆ ವೇಳೆಗೆ ಘಟನೆ ನಡೆದಿದ್ದು ಹಲ್ಲೆಗೆ ಯತ್ನ ಕೂಡಾ ನಡೆದಿದೆ ಎನ್ನಲಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


ಹಲ್ಲೆಗೆ ಯತ್ನಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಿಂದ ಪರಾರಿಯಾಗಿದ್ದು, ಬಂದರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Recent News


Leave a Comment: