ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಉಭಯ ತಾಲೂಕುಗಳ ಏಕೈಕ ಡಯಾಲಿಸಿಸ್ ಕೇಂದ್ರ

Posted by Vidyamaana on 2022-11-29 16:47:29 |

Share: | | | | |


ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಉಭಯ ತಾಲೂಕುಗಳ ಏಕೈಕ ಡಯಾಲಿಸಿಸ್ ಕೇಂದ್ರ

 ಇನ್ನೂ ೬ ಡಯಾಲಿಸಿಸ್ ಯಂತ್ರಗಳ ಅವಶ್ಯಕತೆ 

ದಾನಿಗಳ ನೆರವು ಪಡೆಯಲು ಆರೋಗ್ಯ ರಕ್ಷಾ ಸಮಿತಿ ತೀರ್ಮಾನ


ಪುತ್ತೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಸಂದರ್ಭದಲ್ಲಿ ಅವಶ್ಯಕತೆ ಇರುವ ಇನ್ನೂ ೬ ಡಯಾಲಿಸಿಸ್ ಯಂತ್ರಗಳನ್ನು ದಾನಿಗಳ ನೆರವಿನಿಂದ ಹೊಂದಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರು ಹಾಗೂ ಕಡಬ ತಾಲೂಕಿಗೆ ಏಕೈಕ ಡಯಾಲಿಸಿಸ್ ಕೇಂದ್ರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದೆ. ಇದು ಸಾಕಾಗುತ್ತಿಲ್ಲ. ಆದ್ದರಿಂದ ಮಂಗಳೂರು ಸೇರಿದಂತೆ ಇತರ ಕಡೆಗಳಿಗೆ ಜನರು ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಉದ್ಘಾಟನೆಗೆ ಸಿದ್ಧವಾಗಿರುವ ಡಯಾಲಿಸಿಸ್ ಕೇಂದ್ರದ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗುವಂತೆ ಮಾಡಲು ಒತ್ತಡ ಬರುತ್ತಿದೆ. ಉದ್ಘಾಟನೆಯ ಸಂದರ್ಭದಲ್ಲಿ ಅವಶ್ಯಕತೆ ಇರುವ ಇನ್ನೂ ೬ ಡಯಾಲಿಸಿಸ್ ಮೆಷಿನ್‌ಗಳನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ರೋಟರಿ ಮೊದಲಾದ ಸಂಸ್ಥೆ ಹಾಗೂ ದಾನಿಗಳ ಸಹಾಯ ಪಡೆದುಕೊಳ್ಳಬೇಕಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವತಿಯಿಂದ ೪ ಡಯಾಲಿಸಿಸ್ ಮೆಷಿನ್ ಕೊಡಿಸುವುದಾಗಿ ಹಿಂದಿನ ಜಿಲ್ಲಾಧಿಕಾರಿಗಳು ತಿಳಿಸಿದ್ದರು ಎಂದು ನೆನಪಿಸಿದ ಅವರು, ಆರ್.ಓ. ಪ್ಲಾಂಟ್‌ಗೆ ಅಗತ್ಯವಿರುವ ೧೦ ಲಕ್ಷ ರೂ.ವನ್ನು ಸರಕಾರದಿಂದ ಮಂಜೂರುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಮಾಹಿತಿ ನೀಡಿ, ಈಗಾಗಲೇ ಪುತ್ತೂರು ಡಯಾಲಿಸಿಸ್ ಕೇಂದ್ರದಲ್ಲಿ ೫೪ ಮಂದಿಗೆ ನಿರಂತರವಾಗಿ ಡಯಾಲಿಸಿಸ್ ನೀಡಲಾಗುತ್ತಿದೆ. ೪೮ ಮಂದಿ ಇನ್ನೂ ವೈಟಿಂಗ್‌ನಲ್ಲಿದ್ದಾರೆ. ಆದ್ದರಿಂದ ಈ ಬೇಡಿಕೆಯನ್ನು ಪೂರೈಸಲು ಒಟ್ಟು ೧೨ ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಆದರೆ ಆಸ್ಪತ್ರೆಯಲ್ಲಿ ಇರುವುದು ೬ ಡಯಾಲಿಸಿಸ್ ಯಂತ್ರಗಳು ಮಾತ್ರ. ಆದ್ದರಿಂದ ಉಳಿದ ೬ ಯಂತ್ರಗಳನ್ನು ಜೋಡಿಸಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ಅಗತ್ಯವಿರುವ ಡಯಾಲಿಸಿಸ್ ಕೇಂದ್ರದ ಕಾಮಗಾರಿಯನ್ನು ಸುಮಾರು ೬೦ ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಲುಕ್ಕಾಸ್ ಸ್ವರ್ಣ ಮಳಿಗೆಯವರು ಒಂದು ಯಂತ್ರವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ. ಹೊಸ ಯಂತ್ರದ ಕೇಂದ್ರಕ್ಕೆ ಹೊಸದಾಗಿ ಆರ್.ಓ. ಪ್ಲಾಂಟ್ ನಿರ್ಮಿಸಲು ೧೦ ಲಕ್ಷ ರೂ. ಅಗತ್ಯವಿದೆ. ಇದರೊಂದಿಗೆ ಕೊಠಡಿಗೆ ಹವಾನಿಯಂತ್ರಿಣ ಅಳವಡಿಸಲು ೩ ಲಕ್ಷ ರೂ. ಬೇಕಾಗಿದೆ. ೬ ಡಯಾಲಿಸಿಸ್ ಯಂತ್ರ ಖರೀದಿಗೆ ಒಟ್ಟು ೬೦ ಲಕ್ಷ ರೂ. ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿರುವಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯೂ ಬ್ಲಡ್ ಬ್ಯಾಂಕ್ ತೆರೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ವ್ಯವಸ್ಥೆಯಿದೆ. ಬ್ಲಡ್ ಬ್ಯಾಂಕ್ ಮಾಡುವುದಾದಲ್ಲಿ ಅದಕ್ಕೆ ಬೇಕಾದಂತೆ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಅದರೆ ಬ್ಲಡ್ ಬ್ಯಾಂಕ್ ಮಾಡಿದಲ್ಲಿ ಅದಕ್ಕೆ ಸಿಬ್ಬಂದಿಗಳ ನೇಮಕಗೊಳಿಸಬೇಕು. ಇದಕ್ಕೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗೆ ಈ ಬಗ್ಗೆ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.  

ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಒಂದು ವರ್ಷಗಳಾಗಿದೆ. ಅದಕ್ಕೆ ಪೂರಕವಾಗಿ ೫.೧೬ ಎಕ್ರೆ ಜಮೀನು ಮೀಸಲಿಟ್ಟು, ಆಸ್ಪತ್ರೆಯ ಹೆಸರಿನಲ್ಲಿ ಪಹಣಿ ಪತ್ರವನ್ನು ಮಾಡಲಾಗಿದೆ. ಈ ಬಗ್ಗೆ ತಾಂತ್ರಿಕ ವರದಿಯನ್ನು ನೀಡುವಂತೆ ಇಂಜಿನಿಯರ್ ಅವರಿಗೆ ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಪೌರಾಯುಕ್ತ ಮಧು ಎಸ್. ಮನೋಹರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ, ಡಾ. ಕೃಷ್ಣ ಪ್ರಸನ್ನ, ದಿನೇಶ್ ಜೈನ್, ಕೃಷ್ಣ ನಾಯ್ಕ ಉಪಸ್ಥಿತರಿದ್ದರು. ಡಾ. ಜಯದೀಪ್ ಸ್ವಾಗತಿಸಿದರು.


ಕಾರ್ಕಳ - ಖಾಸಗಿ ಬಸ್ ಜೀಪ್ ನಡುವೆ ಭೀಕರ ರಸ್ತೆ ಅಪಘಾತ - ಹಲವರಿಗೆ ಗಂಭೀರ ಗಾಯ

Posted by Vidyamaana on 2023-12-11 07:46:36 |

Share: | | | | |


ಕಾರ್ಕಳ - ಖಾಸಗಿ ಬಸ್ ಜೀಪ್ ನಡುವೆ ಭೀಕರ ರಸ್ತೆ ಅಪಘಾತ - ಹಲವರಿಗೆ ಗಂಭೀರ ಗಾಯ

ಕಾರ್ಕಳ  : ಖಾಸಗಿ ಬಸ್ ಹಾಗೂ ಜೀಪ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಮಂಜಲ್ಪಾಕೆ ಎಂಬಲ್ಲಿ ನಡೆದಿದೆ. ಮೂಡುಬಿದಿರೆಯಿಂದ ಕಾರ್ಕಳವಾಗಿ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ.ಓವರ್ ಟೇಕ್ ಮಾಡುವ ಸಂದರ್ಭ ಘಟನೆ ಸಂಭವಿಸಿದ್ದು, ಜೀಪಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡಿದ್ದ ಓರ್ವ ಗಾಯಾಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಜೀಪಿನಲ್ಲಿದ್ದವರು ಸ್ಥಳಿಯ ದೈವದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ಸಾಗುತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು 108 ಆಂಬುಲೆನ್ಸ್‌ ನಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಪುತೂರು ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

Posted by Vidyamaana on 2023-09-28 22:20:38 |

Share: | | | | |


ಪುತೂರು ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಸೆ 28 ಗುರುವಾರದಂದು ಮುಸ್ಲಿಂ ಬಾಂಧವರು ಆಚರಿಸಿದರು.


ಬೆಳಿಗ್ಗೆ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪರಸ್ಪರ ಶುಭಾಶಯ ಕೋರಿದರು.


ಈದ್ ಮಿಲಾದ್ ಅಂಗವಾಗಿ ತಾ ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ಧಾ ಮಜ್ಜಿಸ್ ಗುರುವಾರ ನಗರದ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿತು.ಸಂಜೆ ಕಬಕ ವೃತ್ತದಲ್ಲಿ ಜಾಥಾ ಕ್ಕೆ  ಕಬಕ ಟೈಲರ್ ಇಸ್ಮಾಯಿಲ್ ಸಾಹೇಬ್ ಚಾಲನೆ ನೀಡಿದರು. ಈಸ್ಟರ್ನ್ ಗ್ರೂಪ್ ಮಾಲಕ ಜ.ಕಲಂದರ್ ಧ್ವಜ ಸ್ವೀಕಾರ ಮಾಡಿದರು. ಬಳಿಕ ಹೊರಟ ಬೃಹತ್ ವಾಹನ ಜಾಥಾ ಮುಖ್ಯರಸ್ತೆಯಾಗಿ ಬೊಳುವಾರು, ದರ್ಬೆಯಿಂದಾಗಿ ಸಂಜೆ ಕಿಲ್ಲೆ ಮೈದಾನಕ್ಕೆ ತೆರಳಿ ಸಮಾಪನ ಗೊಂಡಿತು.


ಸಂಜೆ ಕಿಲ್ಲೆ ಮೈದಾನದಲ್ಲಿ ನಡೆದ ಸಮಾವೇಶವನ್ನು ಬಹು ಎಂ.ಎಂ. ಮಹ್ ರೂಫ್ ಸುಲ್ತಾನಿ ಅಲ್ಪುರ್ಖಾನಿ ಆತೂರು ಉದ್ಘಾಟಿದರು. ಕೇಂದ್ರ ಜುಮ್ಮಾ ಮಸೀದಿ ಮುದಗ್ರಿಸ್ ಬಹು.ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್     ದುವಾಶೀರ್ವಚನ ನೀಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬಹು.ಆಶಿಕ್ ದಾರಿಮಿ ಅಲಂಪುಝ ಪ್ರಭಾಷಣ ಮಾಡಿದರು. ರಾತ್ರಿ ಬಹು. ಫಕ್ರೆ ಆಲಂ ಮುಂಬೈಯವರಿಂದ ನಾತೇ ಶರೀಫ್ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಅನ್ನದಾನ ನಡೆಯಿತು. ನೂರಾರು ಮಂದಿ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರುಸಮಾರಂಭದಲ್ಲಿ ತಾಲೂಕು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಉದ್ಯಮಿ ರಿಯಾಝ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಇಫಾಝ್ ಬನ್ನೂರು, ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ, ನ್ಯಾಯವಾದಿ ಶಾಕಿರ್ ಹಾಜಿ, ನೌಷದ್ ಹಾಜಿ ಬೊಳ್ವಾರ್, ಹಸೈನಾರ್ ಬನಾರಿ, ಅಶ್ರಫ್ ಬಾವ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

Posted by Vidyamaana on 2023-01-29 08:38:59 |

Share: | | | | |


ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

ಶಾಲಾ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಆನ್ಲೈನ್ ಗೇಮ್ಗಳ ಹಾವಳಿ ಜೋರಾಗಿದೆ. ಬೇಡ ಬೇಡ ಎಂದರೂ ಮಕ್ಕಳು ಇಂತಹ ಆನ್ಲೈನ್ ಗೇಮ್ಗಳ ದಾಸರಾಗುತ್ತಿದ್ದಾರೆ. ಇನ್ನೊಂದರ್ಥದಲ್ಲಿ ದಾಸರಾಗುವಂತೆ ಮಾಡಲಾಗುತ್ತಿದೆ. ಆದ್ದರಿಂದ ಪೋಷಕರೇ, ಶಿಕ್ಷಕರೇ ಎಚ್ಚರೆಚ್ಚರ ಎಚ್ಚರ!!

ಮಕ್ಕಳು ಹೇಳಿದಂತೆ ಕೇಳುತ್ತಿಲ್ಲ ಎಂದು ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರೇ, ಆನ್ಲೈನ್ ಕ್ಲಾಸ್ಗೆಂದು ಮೊಬೈಲ್ ಕಡ್ಡಾಯ ಮಾಡಿರುವ ಶಿಕ್ಷಕರೇ, ದಯವಿಟ್ಟು ಇತ್ತ ಕಡೆ ಸ್ವಲ್ಪ ಗಮನ ಕೊಡಿ. ಒಂದಷ್ಟು ಸಮಯ ಫ್ರೀ ಮಾಡಿಕೊಂಡು, ಓದಿ. ಸಾವನ್ನು ಮೈಮೇಲೆ ಎಳೆದುಕೊಂಡ ವಿದ್ಯಾರ್ಥಿಗಳ ಅಪ್ಪ - ಅಮ್ಮನ ಸ್ಥಾನದಲ್ಲಿ ನಿಂತು ಯೋಚಿಸಿ.

ಕರಾವಳಿಯ ಒಂದು ಮನೆ. ಪುಟ್ಟ ಸಂಸಾರದ ಸಂತೋಷಕ್ಕೆ ಕೊಳ್ಳಿ ಇಟ್ಟದ್ದೇ ಮೊಬೈಲ್. ಮೊದಮೊದಲು ಮಗ ಆಡಿಕೊಂಡಿರಲಿ ಎಂದು ಕೈಗೆ ಮೊಬೈಲ್ ನೀಡಿದರು ಪೋಷಕರು. ಆತ ಮಾಡುತ್ತಿದ್ದ ಚೇಷ್ಟೇಗಳನ್ನು ಕಂಡು ಸಂತೋಷ ಪಡುತ್ತಿದ್ದರು. ಬರಬರುತ್ತಾ, ಮಗ ಆನ್ಲೈನ್ ಗೇಮ್ಗಳ ದಾಸನಾದ.

ಗೇಮ್ ಒಂದರಲ್ಲಿ ಸಂಭಾಷಣೆ ಮಾಡುವ ಮೂಲಕ ಆಟ ಮುಗಿಸಲಾಗುತ್ತದೆ - ಅಲ್ಲಿ ಯಾರಾದರೂ ಇದ್ದೀರಾ ಎಂದು ಹುಡುಗ ಪ್ರಶ್ನಿಸುತ್ತಾನೆ. ಆ ಕ್ಷಣ ಮೊಬೈಲ್ ಸ್ಕ್ರೀನ್ ಮೇಲ್ಗಡೆ ವ್ಯಕ್ತಿಯೋರ್ವ ಕಾಣಿಸಿಕೊಳ್ಳುತ್ತಾನೆ. ಆತನ ತಲೆಗೇ ಗನ್ನಿಂದ ಶೂಟ್ ಮಾಡಬೇಕು. ಅಲ್ಲಿಗೆ ಹುಡುಗ ಜಯಶಾಲಿ ಎಂದು ಘೋಷಿಸಲಾಗುತ್ತದೆ.

ಇನ್ನೊಂದು ಗೇಮ್ ಹೀಗಿತ್ತು - ಆಟದ ಕೊನೆಯಲ್ಲಿ ಒಂದು ಮೆಟ್ಟಿಲಿನಿಂದ ಇನ್ನೊಂದು ಮಗ್ಗುಲಿಗೆ ಹಾರುವಂತೆ ಸೂಚನೆ ನೀಡಲಾಯಿತು. ಅದರಂತೆ ಹುಡುಗ ಹಾರಿದ. ಅಲ್ಲಿಗೆ ಜಯಶಾಲಿ ಎಂದು ಘೋಷಿಸಲಾಯಿತು.

ಈ ಎರಡು ಘಟನೆಗಳು ಪೋಷಕರ ಗಮನಕ್ಕೆ ಬಂದಿತು. ಇದ್ಯಾಕೋ ಅನಾಹುತಕ್ಕೆ ದಾರಿ ಎನ್ನುವುದನ್ನು ಮನಗಂಡರು. ಈಗ, ಮಗನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ನೋಡಿದರು. ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆತ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ. ದಾರಿ ಕಾಣದ ತಂದೆ, ಮೊಬೈಲ್ ಕಿತ್ತುಕೊಂಡು ನೆಲಕ್ಕಪ್ಪಳಿಸಿಯೇ ಬಿಟ್ಟರು. ಅಲ್ಲಿಗೀಕಥೆ ಮುಗಿಯಿತು.

ವಾಸ್ತವ ಹೇಗಿದೆ ನೋಡಿ. ಪುತ್ತೂರಿನಂತಹ ಬೆಳೆಯುತ್ತಿರುವ ಪಟ್ಟಣದಲ್ಲಿ ಒಂದಾದ ನಂತರ ಒಂದರಂತೆ ವಿದ್ಯಾರ್ಥಿಗಳ ಸಾವು ದಾಖಲಾಗುತ್ತಿದೆ. ಪೋಷಕರು ಹೇಳದೇ ಇದ್ದರೂ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇದ್ದರೂ, ಆನ್ಲೈನ್ ಆಟದ ಹುಡುಗಾಟವೇ, ಸಾವಿನೂಟಕ್ಕೆ ಕಾರಣ ಎನ್ನುವುದು ಖಾತ್ರಿಯಾಗಿದೆ.

ಅದೇಷ್ಟು ವಿದ್ಯಾರ್ಥಿಗಳು ಆನ್ಲೈನ್ ಗೇಮ್ಗಳ ದಾಸರಾಗಿದ್ದಾರೋ? ಮುಂದೆ ಅದೆಷ್ಟು ವಿದ್ಯಾರ್ಥಿಗಳು ಇದೇ ರೀತಿ ಸಾವನ್ನು ಮೈಮೇಲೆ ಎಳೆದುಕೊಳ್ಳುತ್ತಾರೋ? ಕಾದು ನೋಡುವುದಲ್ಲದೇ ಬೇರೆ ವಿಧಿಯಿಲ್ಲ. ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಸಾವಿನ ಹಿಂದಿನ ರಹಸ್ಯವನ್ನು ಬಿಡಲೊಪ್ಪದ ಪೋಷಕರು, ಇನ್ನೊಂದಷ್ಟು ಮಕ್ಕಳ ಸಾವಿಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಸಾವಿನ ಹಿಂದಿನ ಮರ್ಮವನ್ನು ಬಗೆದು ತೆಗೆಯಲು ವಿಫಲವಾದ ಪೊಲೀಸರು, ಮತ್ತಷ್ಟು ಮಕ್ಕಳ ಸಾವನ್ನು ಕಣ್ಣಾರೆ ಕಾಣುವ ಭಾಗ್ಯವನ್ನು ಎದುರು ನೋಡುತ್ತಿದ್ದಾರೆ.


ಇದೆಲ್ಲಾ ಬೇಕಾ!?

ಹೌದು ಇದೆಲ್ಲಾ ಬೇಕು ಎನ್ನುತ್ತಿವೆ ಆನ್ಲೈನ್ ಗೇಮಿಂಗ್ ಕಂಪೆನಿಗಳು. ಯಾಕೆ ಗೊತ್ತಾ? ಅದರಿಂದ ಬರುವ ಆದಾಯವೇ ಲೆಕ್ಕವಿಲ್ಲದಷ್ಟು. ಇಂದು ಭಾರತದಲ್ಲಿ ಅದೇಷ್ಟೋ ಆನ್ಲೈನ್ ಗೇಮಿಂಗ್ ಕಂಪೆನಿಗಳಿವೆ. ಆ ಕಂಪೆನಿಗಳು ಅದೇಷ್ಟು ದುಡ್ಡನ್ನು ಬಾಚಿಕೊಳ್ಳುತ್ತಿವೆ. ಕೊರೋನಾ ಸಾಂಕ್ರಾಮಿಕ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಾಗ, ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗ ಆನ್ಲೈನ್ ಗೇಮಿಂಗ್ ಕಂಪೆನಿಗಳು ಯದ್ವಾತದ್ವಾ ಮಾರುಕಟ್ಟೆ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ ಅದರ ಲಾಭವನ್ನು ಕ್ರಮೇಣವಾಗಿ ಪಡೆಯತೊಡಗಿದವು. ಆನ್ಲೈನ್ ಕ್ಲಾಸ್ಗಳು ಹೆಚ್ಚುತ್ತಿದ್ದಂತೆ, ಆನ್ಲೈನ್ ಗೇಮ್ಗಳು ತಮ್ಮ ಅಸ್ತಿತ್ವವನ್ನು ಪೋಷಕರ ಅರಿವಿಗೆ ಬಾರದಂತೆ ಸ್ಥಾಪಿಸಿಕೊಂಡಿವೆ. ವಿದ್ಯಾರ್ಥಿಗಳು ದಾಸರಾದರೆ, ಪೋಷಕರು ಲೂಸರ್ಸ್ತ ಆಗುತ್ತಿದ್ದಾರೆ.

ಆತ್ಮಹತ್ಯೆಯ ಹಿಂದಿನ ಅಸಲಿಯತ್ತು

ಸಾಲ ಮಾಡಲಿಲ್ಲ, ಪೋಷಕರೋ - ಶಿಕ್ಷಕರೋ ಗದರಲಿಲ್ಲ, ಲವ್ ಫೈಲ್ಯೂರ್ ಆಗಿಯೇ ಇಲ್ಲ, ಪರೀಕ್ಷಾ ಒತ್ತಡವೇ ಎಂದು ಕೇಳಿದರೆ - ಪರೀಕ್ಷಾ ಸಮಯವೇ ಅಲ್ಲ... ಹಾಗಾದರೆ ಪ್ರೌಢಶಾಲಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ? ಪುತ್ತೂರಿನಲ್ಲಿ ಅದೇಷ್ಟೋ ವಿದ್ಯಾರ್ಥಿಗಳು ತಮ್ಮ ಜೀವವನ್ನು ಸಾವಿಗೆ ಆಹುತಿ ನೀಡಿದ್ದಾರೆ. ಆತ್ಮಹತ್ಯೆಯ ಜಾಡು ಹಿಡಿದು ನೋಡಿದರೆ, ಆನ್ಲೈನ್ ಗೇಮ್ಗಳ ವಾಸನೆ. ಸರಿಯಾಗಿ ಗಮನಿಸಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕೊನೆ ಕ್ಷಣದ ಚಲನವಲನ. ಇವೆಲ್ಲಾ ಏನನ್ನು ಸೂಚಿಸುತ್ತವೆ. ಆತ್ಮಹತ್ಯೆಯ ವಿಚಿತ್ರ ಸ್ಟೈಲ್ಗಳನ್ನು. ಅಂದರೆ ಯಾರೋ ಸೂಚನೆ ನೀಡುತ್ತಿದ್ದಾರೆ, ವಿದ್ಯಾರ್ಥಿಗಳು ಅದನ್ನು ಅನುಸರಿಸುತ್ತಿದ್ದಾರೆ.

ಆನ್ಲೈನ್ ಕ್ಲಾಸ್ಗಳು!!!

ಕೊರೋನಾ ಸಾಂಕ್ರಾಮಿಕದ ವೇಳೆಯಲ್ಲಿ ಶುರುವಾದ ಆನ್ಲೈನ್ ಕ್ಲಾಸ್ಗಳು ಇಂದು ನಡೆಯುತ್ತಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಆನ್ಲೈನ್ ಟ್ಯೂಷನ್ಗೂ ಶುರುವಿಟ್ಟುಕೊಂಡಿವೆ. ಪ್ರತಿಯೊಬ್ಬ ಪೋಷಕರಿಗೂ, ಶಿಕ್ಷಕರಿಗೂ ಮೊಬೈಲ್ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವಿರುವಾಗ ಇಂತಹದ್ದೊಂದು ಆನ್ಲೈನ್ ಟ್ಯೂಷನ್ ಬೇಕೇ? ಭೌತಿಕ ತರಗತಿಗಳು ಆರಂಭವಾದ ಈ ದಿನಗಳಲ್ಲಿ, ಆನ್ಲೈನ್ ಕ್ಲಾಸ್ಗಳ ಅಗತ್ಯವಿದೆಯೇ? ಸ್ವಲ್ಪ ಗಮನಿಸಿ! ಮಕ್ಕಳ ಕೈಗೆ ಮೊಬೈಲ್ ಸಿಕ್ಕಿತೆಂದರೆ, ಹಿರಿಯರನ್ನು ಯಾಮಾರಿಸುವಷ್ಟು ನಿಸ್ಸೀಮರಾಗುತ್ತಾರೆ. ಟಚ್ ಸ್ಕ್ರೀನ್ನಲ್ಲಿ ಒಂದು ಟಚ್ಗೆ ಆಪ್ ಬದಲಾಯಿಸಲು ಸಾಧ್ಯ. ಹಾಗಾದರೆ, ಮಕ್ಕಳ ಕೈಯಲ್ಲಿರುವ ಮೊಬೈಲ್ಗೆ ನಿಯಂತ್ರಣ ಹೇಗೆ? ಈ ಆನ್ಲೈನ್ ಕ್ಲಾಸ್ಗಳು ಇನ್ನಾದರೂ ಕಡಿಮೆಯಾದೀತೇ? ಓದು.. ಓದೆಂಬ... ಹಪಹಪಿಗೆ ಮಕ್ಕಳು ಕೈತಪ್ಪುವ ಈ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಕೆ? ಮತ್ತೊಮ್ಮೆ ಆಲೋಚಿಸಿ...

ಯಾಕಿಲ್ಲ ಗಂಭೀರ ತನಿಖೆ!

ವಿದ್ಯಾರ್ಥಿಗಳ ಆತ್ಮಹತ್ಯೆಯ ಕಾರಣ ಕೇಳಿದರೆ, ಇದುವರೆಗೂ ‘ತಿಳಿದುಬಂದಿಲ್ಲ’. ಸುಖಾಸುಮ್ಮನೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಹಾಗಾದರೆ ಇದನ್ನು ಯಾರೂ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ. ಪೋಷಕರು, ಪೊಲೀಸರು, ಸಾರ್ವಜನಿಕರಿಗೆ ಇದರ ಹಿಂದಿನ ಮರ್ಮ ತಿಳಿದುಕೊಳ್ಳಬೇಕು ಎಂದು ಅನಿಸಲೇ ಇಲ್ಲವೇ? ಅಥವಾ ಅವರ ಮಕ್ಕಳು, ನಮಗೇನು ಎಂಬ ತಾತ್ಸಾರವೇ? ಇಂದು ಅಲ್ಲೊಂದು- ಇಲ್ಲೊಂದು ಘಟಿಸುವ ಆತ್ಮಹತ್ಯೆಗಳು, ನಾಳೆ ಮನೆಮನೆಯಲ್ಲೂ ನಡೆದೀತು! ಎಚ್ಚರ!!! ಆದ್ದರಿಂದ ತಿಳಿದವರು ದೂರು ದಾಖಲಿಸುವುದು ಉತ್ತಮ. ಅಥವಾ ಪೊಲೀಸರಾದರೂ ಯಾಕೆ ಇದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿಲ್ಲ. ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶ ಅವರಿಗೂ ಇದೆಯಲ್ಲವೇ? ನಾಳೆ ಘಟಿಸುವ ಅವಘಡಕ್ಕೆ ಇಂದೇ ಯಾಕೆ ಮುನ್ನೆಚ್ಚರಿಕೆ ಕೈಗೊಳ್ಳಬಾರದು? ಒಟ್ಟು ಪ್ರಕರಣಗಳ ಮಾಹಿತಿ ಕಲೆ ಹಾಕಿ, ಗಂಭೀರ ತನಿಖೆಯನ್ನು ಯಾಕೆ ಕೈಗೊಳ್ಳುತ್ತಿಲ್ಲ?


ನೈತಿಕ ಶಿಕ್ಷಣ ನೀಡಿ: ಡಿವೈಎಸ್ಪಿ

ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಮೊಬೈಲ್ ಪ್ರವೇಶಿಸಿತು. ಶೈಕ್ಷಣಿಕ ವಿಷಯಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮೊಬೈಲನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಉತ್ತಮ. ಇಂದು ಕೂಡು ಕುಟುಂಬದ ಕಲ್ಪನೆ ಇಲ್ಲವಾಗಿದೆ. ಅಲ್ಲಿ ಮಕ್ಕಳಿಗೆ ಆಟವಾಡಲು ಅವಕಾಶ ಹಾಗೂ ಸಹವರ್ತಿಗಳು ಸಿಗುತ್ತಿದ್ದರು. ಆದರೆ ಇಂದು ಮಕ್ಕಳು ಒಬ್ಬಂಟಿಯಾಗುತ್ತಿದ್ದಾರೆ. ಮಕ್ಕಳು ಕೀಟಲೆ ಮಾಡುತ್ತಿದ್ದರೆ ಅವರನ್ನು ಸುಮ್ಮನಿರುವಂತೆ ಮಾಡಲು ಮೊಬೈಲ್ ನೀಡುತ್ತಿದ್ದಾರೆ. ಪರಿಣಾಮ, ಸೋಶಿಯಲ್ ಲೈಫ್ ಸಿಂಗಲ್ ಲೈಫ್ ಆಗಿದೆ. ಅಂದರೆ ಇಂತಹ ಪರಿಸ್ಥಿತಿಗೆ ಸಮಾಜವೇ ಒತ್ತಡ ಹಾಕುತ್ತಿದೆ. ಮೃದು ಮನಸ್ಸಿನ ವಿದ್ಯಾರ್ಥಿಗಳ ಮನಸ್ಸಿಗೆ ಇದು ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳು ಮನೆಯಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರೆ, ಪೋಷಕರು ಉತ್ತಮ ಅಭ್ಯಾಸಗಳನ್ನು ಪಾಲಿಸುತ್ತಿರಬೇಕು. ಮಕ್ಕಳು ಅದನ್ನು ಅನುಕರಿಸುತ್ತಾರೆ. 

ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಯಾವ ರೀತಿ ಇರಬೇಕು, ಎದುರಿನ ವ್ಯಕ್ತಿಗೆ ಯಾವ ರೀತಿ ಗೌರವ ನೀಡಬೇಕು ಹಾಗೂ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳು ಮೈದಾನದಲ್ಲಿ ಆಟದಲ್ಲಿ ನಿರತರಾದಂತೆ, ಅವರು ಮೊಬೈಲ್ನಿಂದ ದೂರವಾಗುತ್ತಾರೆ. ಸೈಬರ್ ಕ್ರೈಮ್ ಅಥವಾ ಇನ್ನಾವುದೋ ವಿಚಾರದಲ್ಲಿ ಪೊಲೀಸರ ಪ್ರವೇಶ, ಮಕ್ಕಳ ಬೆಳವಣಿಗೆಗೆ ಪೂರಕವಲ್ಲ. ಬದಲಿಗೆ ಶಿಕ್ಷಕರು, ಪೋಷಕರೇ ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು.                                  ಡಾ.ವೀರಯ್ಯ ಹಿರೇಮಠ್, ಡಿವೈಎಸ್ಪಿ


ಮಕ್ಕಳ ಮೇಲೆ ವಿಶೇಷ ನಿಗಾ ಅಗತ್ಯ: ಬಿಇಓ

ನಮ್ಮಲ್ಲಿ ಆನ್ಲೈನ್ ಕ್ಲಾಸ್ಗಳು ಆಗುತ್ತಿಲ್ಲ. ಎಲ್ಲಾ ಆಫ್ಲೈನ್ ಕ್ಲಾಸ್ಗಳೇ ನಡೆಯುತ್ತಿವೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ನೀಡುವ ಅವಕಾಶವೇ ಇಲ್ಲ. ಮೊಬೈಲ್ಗೆ ಹಣ ಹಾಕಿ, ಯಾವುದೋ ಆಟ ಆಡಿ ತೊಂದರೆ ಅನುಭವಿಸುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು. ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು. ಅಂತರ್ಜಾಲದಿಂದ ದೂರವಿರಬೇಕು, ಪೋಷಕರು ಜಾಗೃತೆ ವಹಿಸಬೇಕು ಮೊದಲಾದ ವಿಚಾರಗಳನ್ನು ಪೋಷಕರಿಗೂ ತಿಳಿಸಿದ್ದೇವೆ. ಅಂತರ್ಜಾಲದಿಂದ ವ್ಯತಿರಿಕ್ತ ಪರಿಣಾಮ ಉಂಟಾದ ಘಟನೆ ಪುತ್ತೂರಿನಲ್ಲಿಲ್ಲ.

ಲೊಕೇಶ್ ಎಸ್.ಆರ್., ಬಿಇಓ, ಪುತ್ತೂರು

ಪುತ್ತೂರು : ಅನಾರೋಗ್ಯದಿಂದಿದ್ದ ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ ನಿಧನ..

Posted by Vidyamaana on 2023-09-19 06:49:32 |

Share: | | | | |


ಪುತ್ತೂರು : ಅನಾರೋಗ್ಯದಿಂದಿದ್ದ ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ ನಿಧನ..

ಪುತ್ತೂರು: ಪುತ್ತೂರು ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ (37.ವ) ಅಲ್ಪಕಾಲದ ಅನಾರೋಗ್ಯದಿಂದ ಸೆ.18ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂಜೆ ನಿಧನರಾದರು.ಮಹೇಶ್‌ರವರು ಪುತ್ತೂರಿನ ಪ್ರತಿಷ್ಠಿತ ಜವಳಿ ಅಂಗಡಿಯಲ್ಲಿ ಹಲವಾರು ವರ್ಷಗಳಿಂದ ಸೇಲ್ಸ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನಂತರ ಫ್ಯಾನ್ಸಿ ಅಂಗಡಿಯನ್ನು ತೆರೆದಿದ್ದರು. ಮೃತರು ತಾಯಿ ರೇವತಿ, ಸಹೋದರಿಯರಾದ ವಿಜಯ, ಜ್ಯೋತಿರವರನ್ನು ಅಗಲಿದ್ದಾರೆ.

ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

Posted by Vidyamaana on 2024-02-02 12:12:35 |

Share: | | | | |


ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

ಬೆಂಗಳೂರು: ರಾಜ್ಯ ಬಜೆಟ್​ಗೂ ಮೊದಲೇ ಸರ್ಕಾರ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಬಿಗ್ ಶಾಕ್ ನೀಡಿದ್ದು, ಮತ್ತೆ ಬಿಯರ್​ ಬೆಲೆ ಏರಿಕೆಯಾಗಿದೆ.


ಹೌದು, ಸರ್ಕಾರ ಬಿಯ‌ರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ ಶೇ. 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಗುರುವಾರದಿಂದ (ಫೆ.1) ಪ್ರತಿ ಬಾಟಲ್ ಗೆ 5 ರಿಂದ 12 ರೂ. ವರೆಗೆ ಹೆಚ್ಚಳವಾಗಿದೆ.


ಬ್ರಾಂಡ್‌ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ. ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ಗಳ ದರದಲ್ಲಿ ಹೆಚ್ಚಳವಾಗಲಿದೆ.


ಬಿಯರ್ ಪ್ರಿಯರಿಗೆ ಹೊಸ ರೇಟ್


1. KF ಪ್ರಿಮಿಯಂ

ಹಿಂದಿನ ದರ ₹ 175

ಹೊಸ ದರ ₹185


2. ಕೆಎಫ್ ಸ್ಟ್ರಾಂಗ್

ಹಿಂದಿನ ದರ ₹ 180

ಹೊಸ ದರ ₹190


3. ಟ್ಯೂಬರ್ಗ್

ಹಿಂದಿನ ದರ ₹ 180

ಹೊಸ ದರ ₹190


4. ಬಡ್ ವೈಸರ್

ಹಿಂದಿನ ದರ ₹230

ಹೊಸ ದರ ₹240


5. ಕಾರ್ಲ್ಸ್ ಬರ್ಗ್

ಹಿಂದಿನ ದರ ₹230

ಹೊಸ ದರ ₹240


6. UB ಸ್ಟ್ರಾಂಗ್

ಹಿಂದಿನ ದರ ₹140

ಹೊಸ ದರ ₹150


7. KF ಸ್ಟಾರ್ಮ್

ಹಿಂದಿನ ದರ ₹175

ಹೊಸ‌ ದರ ₹195


8. ಹೆನಿಕೇನ್

ಹಿಂದಿನ ದರ ₹225

ಹೊಸ ದರ ₹240


9. ಆಯಮ್‌ಸ್ಟೆಲ್

ಹಿಂದಿನ ದರ ₹225

ಹೊಸ ದರ ₹240


10. ಪವರ್ ಕೂಲ್

ಹಿಂದಿನ ದರ ₹110

ಹೊಸ ದರ ₹130


ಮೇ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಚುನಾವಣೆ ಗೆದ್ದ ನಂತರ ಜುಲೈ 7 ರಂದು ಮಂಡಿಸಿದ ಮೊದಲ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿತ್ತು. ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದರ ನಂತರ ಇತರ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಬಹುದಾದ ಸಾಧ್ಯತೆಯಿದೆ



Leave a Comment: