ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ತಾ| ಯುವ ಪ್ರಶಸ್ತಿ ಘೋಷಣೆ- 4 ಯುವಕ ಮಂಡಲ, 2 ಮಹಿಳಾ ಮಂಡಲ, 7 ಮಂದಿಗೆ ವೈಯಕ್ತಿಕ ಪ್ರಶಸ್ತಿ

Posted by Vidyamaana on 2023-01-12 12:28:55 |

Share: | | | | |


ತಾ| ಯುವ ಪ್ರಶಸ್ತಿ ಘೋಷಣೆ- 4 ಯುವಕ ಮಂಡಲ, 2 ಮಹಿಳಾ ಮಂಡಲ, 7 ಮಂದಿಗೆ ವೈಯಕ್ತಿಕ ಪ್ರಶಸ್ತಿ

ಪುತ್ತೂರು: ತಾಲೂಕು ಯುವಜನ ಒಕ್ಕೂಟದ ವತಿಯಿಂದ ನೀಡಲಾಗುವ 2021-22ನೇ ಸಾಲಿನ ‘ಯುವ ಪ್ರಶಸ್ತಿ’ಗೆ ವಿಷ್ಣು ಯುವಕರ ಬಳಗ ಮಜ್ಜಾರಡ್ಕ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ನವೋದಯ ಮಹಿಳಾ ಮಂಡಲ ಬನ್ನೂರು ಹಾಗೂ ಸ್ಪೂರ್ತಿ ಮಹಿಳಾ ಮಂಡಲ ಆಯ್ಕೆಯಾಗಿದೆ. ವೈಯಕ್ತಿಕ ವಿಭಾಗದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಮನು ಕುಮಾರ್, ಕ್ರೀಡೆಯಲ್ಲಿ ನಿಶ್ಚಲ್ ಕೆ.ಜೆ., ಯುವ ಜನತೆಯಲ್ಲಿ ಹರಿಪ್ರಸಾದ್, ಧಾರ್ಮಿಕದಲ್ಲಿ ಮನ್ಮಥ ಶೆಟ್ಟಿ, ಕ್ರೀಡೆಯಲ್ಲಿ ಧನ್ವಿ ಜೆ.ರೈ, ಸಾಹಿತ್ಯದಲ್ಲಿ ಅಪೂರ್ವ ಕಾರಂತ್ ಹಾಗೂ ಸಂಘಟನೆಯಲ್ಲಿ ರಾಜೇಶ್ ಮಯೂರ ಆಯ್ಕೆಯಾಗಿದ್ದಾರೆ.

ನಿಶ್ಚಲ್ ಕೆ.ಜೆ: ನೆಹರು ನಗರ ರಕ್ತೇಶ್ವರಿ ವಠಾರದ ಜನಾರ್ದನ ಹಾಗೂ ಜ್ಯೋತಿ ದಂಪತಿ ಪುತ್ರ ನಿಶ್ಚಲ್ ವಿವೇಕಾನಂದ ಪ.ಪೂ ಕಾಲೇಜಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ. ಕ್ರೀಡೆ ಹಾಗೂ ಯೋಗದಲ್ಲಿ ತೊಡಗಿಸಿಕೊಂಡಿರುವ ಇವರು ಯೋಗಾಭ್ಯಾಸದಲ್ಲಿ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಧನ್ವಿ ಜೆ.ರೈ: ಮುಕ್ರಂಪಾಡಿ ಮಲ್ಲಿಕಾ ಜಯರಾಮರೈ ಎನ್ ರವರ ಪುತ್ರಿಯಾಗಿರುವ ಧನ್ವಿ ಯವರು 2019ರಲ್ಲಿ ನಡೆದ ರಾಷ್ಟ್ರ ಲೈಫ್ ಸೇವಿಂಗ್‌ನಲ್ಲಿ ಒಟ್ಟು ಏಳು ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಪದಕ, ಇನ್ನೂರು ಮೀಟರ್ ಒಬ್ಸ್‌ಸ್ಟೆಲ್‌ಸ್ವಿಮ್‌ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿರುತ್ತಾರೆ. ಇವರ ಸಾಧನೆಗೆ ನೂರಾರು ಸನ್ಮಾನ,ಪುರಸ್ಕಾರಗಳು ದೊರೆತಿದೆ.‌

ಮನ್ಮಥ ಶೆಟ್ಟಿ; ಕೊಡಿಪ್ಪಾಡಿ ಗ್ರಾಮದ ಶೇರ ದಿ.ಚಂದ್ರಹಾಸ ಶೆಟ್ಟಿಯವರ ಪುತ್ರನಾಗಿರುವ ಮನ್ಮಥ ಶೆಟ್ಟಿಯವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತುಳುನಾಡಿನ ದೈವಾರಾಧನೆಯಲ್ಲಿ ಹಲವಾರು ವರ್ಷಗಳಿಂದ ಮಧ್ಯಸ್ಥರಾಗಿ ತೊಡಗಿಸಿಕೊಂಡು ದೈವಗಳಿಗೆ ಮದಿಪು ಹೇಳುತ್ತಾ ತುಳುನಾಡಿನ ಮೂಲ ಸಂಪ್ರದಾಯ ಉಳಿಸುವಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ನಿರೂಪಣೆ ನಡೆಸುತ್ತಿದ್ದಾರೆ. ಇವರ ಸೇವೆಗೆ ಹಲವು ಪ್ರಶಸ್ತಿ ಸನ್ಮಾನಗಳು ಲಭಿಸಿದೆ.

ಹರಿಪ್ರಸಾದ್ ಎಸ್; ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿರುವ ಹರಿಪ್ರಸಾದ್ ಬಡಗನ್ನೂರು ಕೆಮನಡ್ಕ ರಮೇಶ್ ರೈ ಮತ್ತು ರತ್ನಾವತಿ ಎಸ್ ದಂಪತಿ ಪುತ್ರ. ಸಾಮಾಜಿಕ ಪ್ರಜ್ಞೆ ಮತ್ತು ಪರಿಸರದ ಬಗ್ಗೆ ಕಾಳಜಿಯಿಂದ ವನಪರ್ವ ಅಭಿಯಾನ ಮತ್ತು ಮಳೆಕೊಯ್ಲು ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿ ಬಳಸುವಲ್ಲಿ ತರಬೇತಿ, ಆರೋಗ್ಯ ಜಾಗೃತಿ, ಡಿಜಿಟಲ್ ಜಾಗೃತಿ, ಬಸ್ಸು ತಂಗುದಾಣ ಸ್ವಚ್ಚತೆ, ನಾಯಕತ್ವ ಪೂರಕ ವೇದಿಕೆಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ.

ಎಚ್.ಎಸ್ ಮನು ಕುಮಾರ್; ನೆಹರುನಗರದ ಶಿವನಗರ ಸುಂದರ ಹಾಗೂ ದೇವಕಿ ದಂಪತಿ ಪುತ್ರನಾಗಿರುವ ಮನುಕುಮಾರ್, ಶಿವಮಣಿ ಕಲಾ ತಂಡವನ್ನು ಸ್ಥಾಪಿಸಿ, ಹಲವಾರು ಹಿರಿಯ, ಕಿರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುತ್ತಾ ವೇದಿಕೆಗಳನ್ನು ಒದಗಿಸಿದ್ದಾರೆ. ಹಲವಾರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ನೃತ್ಯ, ಯಕ್ಷಗಾನ, ಹುಲಿ ಕುಣಿತ ಇನ್ನಿತರ ಕಲೆಗಳಲ್ಲಿ ವೇದಿಕೆಗಳನ್ನು ಒದಗಿಸಿದ್ದಾರೆ. ಸಾಹಿತ್ಯ, ನಾಟಕ ರಚನೆ, ನಿರ್ದೇಶನವನ್ನು ನೀಡುತ್ತಿದ್ದಾರೆ. ಇವರ ಶಿವಮಣಿ ಕಲಾತಂಡ ಸರ್ಕಾರದ ಮಾನ್ಯತೆ ಪಡೆದ ಕಲಾ ಸಂಘವಾಗಿ ಮುನ್ನ ನಡೆಯುತ್ತಿದೆ.


ಅಪೂರ್ವ ಕಾರಂತ; ದರ್ಬೆ ವೆಂಕಟ್ರಮಣ ಕಾರಂತ, ಸಂಧ್ಯಾ ದಂಪತಿ ಪುತ್ರಿ ಯಾಗಿರುವ ಅಪೂರ್ವ ಇಂಜಿನಿಯರಿಂಗ್ ಪದವೀಧರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ, ಕಾರ್ಯಕ್ರಮ ನಿರೂಪಣೆ, ಸಾಹಿತ್ಯ ಸಮ್ಮೇಳನ ಜಿಲ್ಲೆ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗವಹಿರುತ್ತಾರೆ. ಹಲವಾರು ಕಥೆ,ಕವನಗಳನ್ನು ರಚಿಸಿರುತ್ತಾರೆ.


ರಾಜೇಶ್ ಮಯೂರ: ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿಯಾದ ರಾಜೇಶ್ ಕೆ ಮಯೂರ ಗೋಳ್ತಿಲ ಇವರು ದಿ| ಕೊರಗಪ್ಪ ರೈ ಮತ್ತು ಶ್ಯಾಮಲ ದಂಪತಿ ಪುತ್ರ. ಅತೀ ಮೆಚ್ಚಿನ ಡ್ರಾಯಿಂಗ್ ನಲ್ಲಿ ಒಲವು ಇದ್ದ ಕಾರಣ ಶಾಲಾ ಶಿಕ್ಷಕರ ಪ್ರೋತ್ಸಾಹದೊಂದಿಗೆ ಮುಂದೆ ಕಲಾವಿದನಾಗಿ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರೂ ಹತ್ತು ಹಲವು ಸಮಾಜಮುಖಿ ಕೆಲಸಗಳೊಂದಿಗೆ ಪರಿಸರದಲ್ಲಿ ಚಿರಪರಿಚತರಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ಮರಣಾನಂತರ ಕೆ.ಎಸ್.ಹೆಗ್ಡೆ ದೇರಲಕಟ್ಟೆಗೆ ದಾನ ಮಾಡಿರುತ್ತಾರೆ. ಈಗಾಗಲೇ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿರುತ್ತಾರೆ. ಜೊತೆಗೆ ಹಲವು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ವಿಷ್ಣು ಯುವ ಶಕ್ತಿ ಬಳಗ; 2018 ರಲ್ಲಿ ಪ್ರಾರಂಭಗೊಂಡ ಮಜ್ಜಾರಡ್ಕ ಶ್ರೀ ವಿಷ್ಣು ಯುವ ಶಕ್ತಿ ಬಳಗವು ಶ್ರಮ, ಸೇವೆ, ಸಹಾಯ ಎಂಬ ಧ್ಯೆಯ ವಾಕ್ಯದೊಂದಿಗೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದೆ. ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಸಂಘವು ನೆಹರು ಯುವ ಕೇಂದ್ರ ಮಂಗಳೂರು ಇದರಲ್ಲಿ ನೋಂದಾವಣೆಯನ್ನು ಮಾಡಿಕೊಂಡು ನಿತ್ಯ ನಿರಂತರವಾಗಿ ವಿಭಿನ್ನ ಕಾರ್ಯದ ಮೂಲಕ ಯುವಜನತೆಗೆ ಮಾದರಿಯಾಗುತ್ತಿದೆ. ಕೆಸರುಡೊಂಜಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುತ್ತಿದೆ.


ವಿಕ್ರಂ ಯುವಕ ಮಂಡಲ: ಶಾಂತಿಗೋಡು ವಿಕ್ರಂ ಯುವಕ ಮಂಡಲವು ಸುಮಾರು 30 ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ, ಸಾಹಿತ್ಯ ಹಾಗೂ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ.


ನವೋದಯ ಮಹಿಳಾ ಮಂಡಲ; ಬನ್ನೂರು ನವೋದಯ ಮಹಿಳಾ ಮಂಡಲವು ಗ್ರಾಮೀಣ ಕ್ರೀಡೆ, ಮಳೆಕೊಯ್ಲ, ಜಲಮರುಪೂರಣ ಮಾಹಿತಿ ಕಾರ್ಯಾಗಾರ, ಡಿಜಿಟಲ್ ಕಾರ್ಯಾಗಾರ, ಚಿಣ್ಣರ ಸಂಭ್ರಮ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.


ರೋಟರ‍್ಯಾಕ್ಟ್ ಕ್ಲಬ್; ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ರೋಟರ‍್ಯಾಕ್ಟ್ ಕ್ಲಬ್ ಸ್ವಚ್ಚತಾ ಅಭಿಯಾನ, ಮೇಕ್ ಇನ್ ಇಂಡಿಯಾ, ಮಣ್ಣಿನ ಸಂರಕ್ಷಣೆ, ನೀರಿನ ಸಂರಕ್ಷಣೆ ಹಾಗೂ ಜಲಮರುಪೂರಣ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುತ್ತದೆ. ಜೊತೆಗೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.


ಸ್ಪೂರ್ತಿ ಮಹಿಳಾ ಮಂಡಲ; ಧಾರ್ಮಿಕ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಬನ್ನೂರು ಸ್ಪೂರ್ತಿ ಮಹಿಳಾ ಮಂಡಲ ಕಳೆದ ಎಂಟು ವರ್ಷಗಳಿಂದ ಹಲವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಸ್ವಚ್ಚತೆ, ಗಾಂಧಿ ಜಯಂತಿ, ಆರೋಗ್ಯ ತಪಾಸಣೆ, ಆಯುಷ್ಮಾನ್ ಕಾರ್ಡ್ ನೋಂದಣಿ ಮೊದಲಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.


ಜ.14 ಯುವ ಸಪ್ತಾಹ, ಪ್ರಶಸ್ತಿ ಪ್ರದಾನ: ತಾ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಇದರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ಯುವ ಸಪ್ತಾಹ, ವಿವೇಕ ರಥ-ಯುವ ಪಥ ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭ ಜ.14ರಂದು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆಯಲಿದೆ.


ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಯುವ ಸಂದೇಶ ನೀಡಲಿದ್ದಾರೆ.


ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ವಿವೇಕಾನಂದ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್, ತಹಶೀಲ್ದಾರ್ ನಿಸರ್ಗಪ್ರಿಯ ಜೆ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ವೈ ನಾಯಕ್, ಪೊಲೀಸ್ ಉಪ ಅಧೀಕ್ಷಕ ಡಾ.ವೀರಯ್ಯ ಹೀರೇಮಠ್, ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಹಾಗೂ ತಾ.ಪಂ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ತಾಯಿ ಮಕ್ಕಳ ಕಗ್ಗೋಲೆ ಪ್ರಕರಣ:

Posted by Vidyamaana on 2023-11-18 22:02:36 |

Share: | | | | |


ಉಡುಪಿಯಲ್ಲಿ ತಾಯಿ ಮಕ್ಕಳ ಕಗ್ಗೋಲೆ  ಪ್ರಕರಣ:

ಉಡುಪಿ, ನ.18: ನೇಜಾರಿನ ತಾಯಿ, ಮಕ್ಕಳ ಕೊಲೆಗಾರ ಪ್ರವೀಣ್ ಚೌಗುಲೆ(39) ತನ್ನ ಕೃತ್ಯಕ್ಕಾಗಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು ಮತ್ತು ಕ್ರಿಮಿನಲ್ ಮೈಂಡ್ ಉಪಯೋಗಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಯಾವುದೇ ಸಾಕ್ಷ್ಯ ಅಥವಾ ಮುಖ ಪರಿಚಯವೂ ಸಿಸಿಟಿವಿಯಲ್ಲಿ ದಾಖಲಾಗಬಾರದೆಂದು ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಅಷ್ಟೇ ಅಲ್ಲ, ಪ್ರಯಾಣದ ಉದ್ದಕ್ಕೂ ವಾಹನ ಬದಲಿಸುತ್ತಾ ಸಾಗಿದ್ದ. ಹಲವು ಬಾರಿ ಆಟೋ ಬದಲಿಸಿದ್ದಾನೆ, ಕೆಲವು ಕಡೆ ದಾರಿಯಲ್ಲಿ ಸಿಕ್ಕಿದ್ದ ಬಸ್, ಬೈಕ್ ಗಳನ್ನೂ ಪ್ರಯಾಣಕ್ಕೆ ಬಳಸಿದ್ದಾನೆ.

ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟುಕೊಂಡಿದ್ದನು. ಏರ್ ಇಂಡಿಯಾದಲ್ಲಿ ಉದ್ಯೋಗಿ ಆಗೋದಕ್ಕೂ ಮುನ್ನ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೆಲ ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಪ್ರವೀಣ್ ಕೃತ್ಯಕ್ಕಾಗಿ ಕ್ರಿಮಿನಲ್ ಮೈಂಡ್ ಬಳಸಿಕೊಂಡಿದ್ದು ತನಿಖೆಯಲ್ಲಿ ಪತ್ತೆಯಾಗಿದೆ. ನ.12ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ, ಮಂಗಳೂರಿನ ಮನೆಯಿಂದ ತನ್ನ ಕಾರಿನಲ್ಲೇ  ಹೊರಟಿದ್ದರೂ ಅದನ್ನು ಹೆಜಮಾಡಿ ಟೋಲ್ ಗೇಟ್ ದಾಟೋದಕ್ಕೂ ಮೊದಲೇ ಪಾರ್ಕ್ ಮಾಡಿದ್ದ. ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗುತ್ತೆ ಮತ್ತು ತನ್ನ ಜಾಡನ್ನು ಪೊಲೀಸರು ಪತ್ತೆ ಮಾಡಬಾರದು ಎನ್ನುವ ನೆಲೆಯಲ್ಲಿ ಹೀಗೆ ಮಾಡಿದ್ದಾನೆ.  

ತಾನು ಉಡುಪಿಗೆ ಬಂದಿರುವ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಕಾರನ್ನು ಹೆಜಮಾಡಿ ಟೋಲ್‌ಗೇಟ್‌ಗಿಂತ ಮೊದಲೇ ರಸ್ತೆ ಬದಿ ಪಾರ್ಕ್ ಮಾಡಿದ್ದ. ಅಲ್ಲಿಂದ ಬೈಕ್, ಬಸ್ ಹಿಡಿದು ಉಡುಪಿಗೆ ಆಗಮಿಸಿದ್ದ ಪ್ರವೀಣ್, ಸಂತೆಕಟ್ಟೆಯಿಂದ ಆಟೊ ರಿಕ್ಷಾದಲ್ಲಿ ತೆರಳಿದ್ದ. ಈ ವೇಳೆ, ಮುಖಕ್ಕೆ ತಿಳಿ ನೀಲಿ ಬಣ್ಣದ ಮಾಸ್ಕ್ ಹಾಕ್ಕೊಂಡೇ ಇದ್ದ. ನೇಜಾರಿನ ಮನೆಗೆ ನುಗ್ಗಿ ನಾಲ್ವರನ್ನು ಕಗ್ಗೊಲೆ ಮಾಡಿದ್ದು ಅಲ್ಲಿಂದ ಏನೂ ಆಗಿಯೇ ಇಲ್ಲವೆಂಬಂತೆ ಹಿಂತಿರುಗಿದ್ದ. ಬಳಿಕ ದಾರಿ ಹೋಕರ ಬೈಕಿನಲ್ಲಿ ಬಂದು ಸಂತೆಕಟ್ಟೆಯಲ್ಲಿ ಬೇರೊಂದು ರಿಕ್ಷಾ ಹಿಡಿದಿದ್ದ. ಉಡುಪಿ ಕರಾವಳಿ ಬೈಪಾಸ್‌ ವರೆಗೆ ಆ ರಿಕ್ಷಾದಲ್ಲಿ ತೆರಳಿ, ಅಲ್ಲಿಂದ ಬೈಕ್ ಏರಿ ಕಿನ್ನಿಮೂಲ್ಕಿಗೆ ಬಂದಿದ್ದ. ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತಿದ್ದ. ಹೆಜಮಾಡಿ ಟೋಲ್ ಗೇಟ್ ಸಮೀಪ ಬಸ್‌ನಿಂದ ಇಳಿದು ಅಲ್ಲಿಂದ ತನ್ನ ಕಾರಿನಲ್ಲಿ ನೇರವಾಗಿ ತನ್ನ ಸುರತ್ಕಲ್ ನಲ್ಲಿರುವ ಮನೆಗೆ ಹೋಗಿದ್ದ ಎನ್ನಲಾಗಿದೆ.

 

ಗಾಯಕ್ಕೆ ಚಿಕಿತ್ಸೆ, ಪಶ್ಚಾತ್ತಾಪ ಇಲ್ಲದೆ ಸುತ್ತಾಟ

 

ಕೃತ್ಯದ ಬಳಿಕ ಮನೆಗೆ ಬಂದಿದ್ದ ಆರೋಪಿ ಪ್ರವೀಣ್, ತನ್ನ ಬಟ್ಟೆಯಲ್ಲಾಗಿದ್ದ ರಕ್ತದ ಕಲೆಗಳನ್ನು ತೊಳೆದಿದ್ದ. 10 ನಿಮಿಷ ಕಾಲ ಮನೆಯಲ್ಲಿದ್ದು, ಕೃತ್ಯದ ವೇಳೆ ಕೈ ಬೆರಳಿಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಎನ್ನಲಾಗಿದೆ. ಬಳಿಕ ಮನೆಗೆ ಬಂದು ತನ್ನ ಪತ್ನಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದುಕೊಂಡು ಹೋಗಿ, ಸುತ್ತಾಡಿ ಸಂಜೆ ವೇಳೆಗೆ ಮನೆಗೆ ಬಂದಿದ್ದ. ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದಿದ್ದರೂ ಯಾವುದೇ ಪಶ್ಚತ್ತಾಪ ಇಲ್ಲದೆ ಮಾಮೂಲಿಯಂತೆ ಮನೆಯವರೊಂದಿಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಕಾರಿನಲ್ಲಿ ಬೆಳಗಾವಿ ತೆರಳಿ ದೀಪಾವಳಿ ಆಚರಣೆ  

 

ಮರುದಿನ ನ.13ರಂದು ಬೆಳಗ್ಗೆ ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಪತ್ನಿ, ಮಕ್ಕಳೊಂದಿಗೆ ತನ್ನ ಕಾರಿನಲ್ಲಿಯೇ ಬೆಳಗಾವಿಗೆ ಹೊರಟಿದ್ದ. ಕುಡಚಿಯಲ್ಲಿ ತನ್ನ ಸಂಬಂಧಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿಯನ್ನೂ ಆಚರಿಸಿದ್ದ. ಇತ್ತ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಏರ್ಪೋರ್ಟ್ ನಲ್ಲಿ ನಾಪತ್ತೆಯಾಗಿದ್ದರಿಂದ ಈತನೇ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಸಮಯಕ್ಕೆ ಕುಡಚಿಯಲ್ಲಿದ್ದಾಗಲೇ ಮೊಬೈಲ್ ಸ್ವಿಚ್ ಆನ್ ಮಾಡಿದ್ದು ಅಲರ್ಟ್ ಆಗಿದ್ದ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರು.


ಆರೋಪಿ ಪ್ರವೀಣ್ ಮನೆಯಿಂದ ಕೃತ್ಯಕ್ಕೆ ಬಳಸಿದ ಚೂರಿ ವಶ

ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಆಯುಧಕ್ಕಾಗಿ ತೀವ್ರ ಶೋಧ ನಡೆಸಿದಾಗ, ಆತನ ಬಿಜೈ ಫ್ಲಾಟ್‌ನಲ್ಲಿ ಕೃತ್ಯಕ್ಕೆ ಬಳಸಿಕ ಚೂರಿ ಪತ್ತೆಯಾಗಿತ್ತು. ಅದಲ್ಲದೆ ಕೃತ್ಯಕ್ಕೆ ಬಳಸಿದ ಮಾಸ್ಕ್ ರಕ್ತಸಿಕ್ಕ ಬಟ್ಟೆ, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಆರೋಪಿ ಪ್ರವೀಣ್‌ ಚೌಗುಲೆ ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಬಳಸಿದ ಚೂರಿ ಮತ್ತು ಇತರ ವಸ್ತುಗಳನ್ನು ನಿನ್ನೆ ಮತ್ತು ಇಂದು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಳಿದ ಮಾಹಿತಿಗಳನ್ನು ತನಿಖೆ ಸಂಪೂರ್ಣಗೊಂಡ ಬಳಿಕ ನೀಡಲಾಗುವುದು


-ಡಾ.ಕೆ.ಅರುಣ್, ಎಸ್ಟಿ ಉಡುಪಿ

 

ರಕ್ತದ ಕಲೆಗಳಿದ್ದ ಬಟ್ಟೆಯನ್ನೇ ಬದಲಿಸಿರಲಿಲ್ಲ


ನಾಲ್ಕು ಮಂದಿಯನ್ನು ಕೊಲೆಗೈದ ಬಳಿಕ ಆರೋಪಿ ತನ್ನ ಬಟ್ಟೆಯನ್ನು ಬದಲಾಯಿಸಿದ್ದಾನೆ ಎನ್ನಲಾಗಿತ್ತು. ಆದರೆ ತನಿಖೆಯ ವೇಳೆ ರಕ್ತ ಸಿಕ್ತವಾಗಿದ್ದ ಬಟ್ಟೆಯನ್ನು ಬದಲಾಯಿಸಿಯೇ ಇರಲಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ನಾಲ್ವರ ಹತ್ಯೆಯಿಂದ ಇಡೀ ಮನೆ ರಕ್ತಸಿಕ್ತವಾಗಿತ್ತು. ನಾಲ್ವರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೂ ಆತನ ಬಟ್ಟೆಗೆ ಅಲ್ಪಸ್ವಲ್ಪ ಮಾತ್ರವೇ ರಕ್ತದ ಕಲೆಗಳು ಅಂಟಿದ್ದವು. ಇದನ್ನು ಆತ ಬೈಕು, ರಿಕ್ಷಾ, ಬಸ್‌ನಲ್ಲಿ ಹೋಗುವಾಗ ತನ್ನ ಕೈಯಲ್ಲಿದ್ದ ಬ್ಯಾಗ್‌ನಿಂದ ಮರೆಯಾಗಿಸಿದ್ದು ರಕ್ತದ ಕಲೆಗಳು ಬೇರೆಯವರಿಗೆ ಕಾಣದಂತೆ ನೋಡಿಕೊಂಡಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಲ್ಸಂಕ ರಿಕ್ಷಾ ಚಾಲಕ, ಬಟ್ಟೆಯಲ್ಲಿ ಗುರುತು ಹಿಡಿದಿದ್ದೆ ಎಂದು ಹೇಳಿಕೆ ನೀಡಿದ್ದರು.

 

ಮಂಗಳೂರಿನಲ್ಲಿ ಮಹಜರು ಪ್ರಕ್ರಿಯೆ

 

ಬಂಧಿತ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯದ ಬಗ್ಗೆ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ. ನೇಜಾರಿನ ಮನೆಗೆ ಹಾಗೂ ಮಂಗಳೂರಿನ ಆತನ ಮನೆಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ದು ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ಮುಂದೆ ಹೆಚ್ಚಿನ ತನಿಖೆಗಾಗಿ ಆತನನ್ನು ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಮಂಗಳೂರಿನ ಆಯುಷ್ ಆಸ್ಪತ್ರೆ ಉಪಕರಣ ಖರೀದಿ ಅವ್ಯವಹಾರ ಆರೋಪ ; ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವರು

Posted by Vidyamaana on 2024-09-03 07:11:34 |

Share: | | | | |


ಮಂಗಳೂರಿನ ಆಯುಷ್ ಆಸ್ಪತ್ರೆ ಉಪಕರಣ ಖರೀದಿ ಅವ್ಯವಹಾರ ಆರೋಪ ; ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವರು

ಮಂಗಳೂರು, ಸೆ.3: ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಯಲ್ಲಿ 28 ಲಕ್ಷ ವೆಚ್ಚದ ಸಿಎಸ್.ಆರ್ ನಿಧಿ ಯೋಜನೆಯಡಿ

ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೂಲಂಕುಷವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಆದೇಶಿಸಿದ್ದಾರೆ. 

ಪ್ರಕರಣ ಕುರಿತಂತೆ ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ ಖುದ್ದು ಸಚಿವರನ್ನ ಭೇಟಿ ಮಾಡಿ ಉದ್ದೇಶಪೂರ್ವಕ ತನ್ನ ಮೇಲೆ ಆರೋಪ ಹೊರಿಸುತ್ತಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.‌ ಸಾಮಾಜಿಕ ಕಾರ್ಯಕರ್ತ ವಾಸುದೇವ್ ಹೊಳ್ಳ, ಜಿ.ಎಸ್.ಡಿ ಪಾಣಿ, ಕಿರಣ್ ಪೂಜಾರಿ ಎಂಬವರು ದುರುದ್ದೇಶ ಹೊಂದಿದ್ದು, ಆಯುಷ್ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದಾರೆ. ಅನಗತ್ಯ ದೂರುಗಳನ್ನ ಸಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ. ಸಿಎಸ್.ಆರ್ ಯೋಜನೆಯ ಮೂಲಕ ಹಣವನ್ನ ತಂದು ಆಯುಷ್ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ಶ್ರಮ ವಹಿಸಲಾಗಿತ್ತು. ಆದರೆ ಈ ಮೂವರು ತಮ್ಮ ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರಿ ಕಾರ್ಯಕ್ಕೆ ಅಡ್ಡಿಯುಂಟುಮಾಡಿದ್ದಾರೆ ಎಂದು ದೂರಿದ್ದರು.

ಉಪ್ಪಿನಂಗಡಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ

Posted by Vidyamaana on 2023-08-14 15:37:15 |

Share: | | | | |


ಉಪ್ಪಿನಂಗಡಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ

ಪುತ್ತೂರು:  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಗುತ್ತಿರುವ ಅಭಿವೃದ್ದಿ ಮತ್ತು ಜನಪರ ಯೋಜನೆಗಳನ್ನು ಮನಗಂಡು ಇಂದು ಅನೇಕ ಮಂದಿ ಬಿಜೆಪಿಗರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದು ಉಪ್ಪಿನಂಗಡಿಯಲ್ಲಿ ನಡೆದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿ ಬೆಂಬಲಿತರು ಕಾಂಗ್ರೆಸ್‌ಗೆ ಸೇರಿದ್ದು ಅತ್ಯಂತ ಸಂತೋಷದ ವಿಚಾರವಾಗಿದ್ದು ಇದರಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಉಪ್ಪಿನಂಗಡಿ ಗ್ರಾಪಂ ಇಂದು ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಮುಂದೆ ಉಪ್ಪಿನಂಗಡಿ ಗ್ರಾಪಂ ನ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ ಬೆಂಬಲಿತರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ವಾರ್ಡನ್ನು ಅಭಿವೃದ್ದಿ ಮಾಡಿಲ್ಲ ಇದೇ ಕಾರಣಕ್ಕೆ ಜನ ಇಂದು ಕಾಂಗ್ರೆಸ್‌ಗೆ ತಂಢೋಪತಂಡವಾಗಿ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಇಂದು ಜನರ ಮನಸ್ಸನ್ನು ತಲುಪಿದೆ. ಮುಂದೆ ಅನೇಕ ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಪಂ ಸದಸ್ಯರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರನ್ನು ಪಕ್ಷಕ್ಕೆ ಸೇರಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಗ್ರಾಪಂ ಆಡಳಿತವನ್ನು ಕಾಂಗ್ರೆಸ್ ಬಿಜೆಪಿಯಿಂದ ಕಸಿದುಕೊಂಡಿದೆ. ಆರ್ಯಾಪು ಗ್ರಾಪಂ ನ ನಿಕಟಪೂರ್ವ ಉಪಾಧ್ಯಕ್ಷರು ಸಹಿತ ಇಬ್ಬರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ . ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ , ಸಿದ್ದರಾಮಯ್ಯ ಸರಕಾರದ ಬಡವರ ಪರ ಯೋಜನೆಗಳು ಜನರನ್ನು ಕಾಂಗ್ರೆಸ್‌ನತ್ತ ಆಕರ್ಷಿಸುವಂತೆ ಮಾಡಿದೆ ಎಂದು ಶಾಸಕರು ಹೇಳಿದರು.

ಪಕ್ಷಕ್ಕೆ ಸೇರ್ಪಡೆಯಾದವರನ್ನು ಅತ್ಯಂತ ಗೌರವಾದರಗಳಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಹೇಳಿದ ಶಾಸಕರು ಇಂದು ನನಗೆ ಅತ್ಯಂತ ಸಂತೋಷ ದಿನವಾಗಿದೆ ಎಂದು ಹೇಳಿದರು. ಉಪ್ಪಿನಂಗಡಿ ಗ್ರಾಪಂ ನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಬಡವರ ಕೆಲಸಗಳು ಆಗಲಿದೆ ಇದರಲ್ಲಿ ಯಾವುದೇ ಅನುಮಾನವೇ ಬೇಡ. ಪಕ್ಷಕ್ಕೆ ಇನ್ನಷ್ಟು ಮಂದಿಯನ್ನು ಸೇರ್ಪಡೆಗೊಳಿಸುವ ಮೂಲಕ ನಾವು ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಿ ಕ್ಷೇತ್ರದ ಪ್ರತೀ ಮನೆಗೂ ಕಾಂಗ್ರೆಸ್‌ನ ಯೋಜನೆಗಳು ದೊರಕುವಂತೆ ಮಾಡಬೇಕು ಎಂದು ಹೇಳಿದರು.ಪಕ್ಷೇತರ ಸದಸ್ಯರಾದ ಸಣ್ಣಣ್ಣ ಮಡಿವಾಳ, ನಾಲ್ವರು ಎಸ್‌ಡಿಎಪಿಐ ಸದಸ್ಯರಾದ ರಶೀದ್, ಸೌಧ, ಮೈಶಿದಿ ಮತ್ತು ನೆಬಿಸಾ ರವರು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲ ನೀಡಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಪಕ್ಷೇತರ ಸದಸ್ಯರನ್ನು ಶಾಸಕರು ಶಾಲು ಹೊದಿಸಿ ಗೌರವಿಸಿದರು.

ಬಿಜೆಪಿ ಆಡಳಿತದ ವೈಫಲ್ಯದಿಂದ ಕಾಂಗ್ರೆಸ್ ಸೇರಿದ್ದಾರೆ

ಹಿಂದಿನ ಅವಧಿಯಲ್ಲಿದ್ದ ಬಿಜೆಪಿ ಗ್ರಾಪಂ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೇ ಇರುವ ಕಾರಣ ಬಿಜೆಪಿ ಬೆಂಬಲಿತರು ಅಭಿವೃದ್ದಿಯ ದೃಷ್ಟಿಯಿಂದ ಕಾಂಗ್ರೆಸ್ ಸೇರಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಣ್ಣನ್ನ ಅವರು ಬೆಂಬಲ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಎಸ್‌ಡಿಪಿಐ ಯವರು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಪ್ಪಿನಂಘಡಿ ಬಿಜೆಪಿ ಮುಕ್ತವಾಗಲಿದೆ , ಜನರು ನಮಗೆ ಖಂಡಿತವಾಗಿಯೂ ಆಶೀರ್ವಾದ ಮಡಲಿದ್ದಾರೆ. ಇನ್ನಷ್ಟು ಬಿಜೆಪಿ ಬೆಂಬಲಿತ ಸದಸ್ಯರು ನಮ್ಮ ಶಾಸಕರ ಅಭಿವೃದ್ದಿ ಕೆಲಸವನ್ನು ಮನಗಂಡು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿಯವರು ಹೇಳಿದರು.

ವಿಟ್ಲ ಉಪ್ಪಿನಗಂಡಿ ಬ್ಲಾಕ್ ಮಾಜಿ ಅಧ್ಯಕ್ಷಮುರಳೀಧರ್ ರೈ ಮಠಂತಬೆಟ್ಟು ಮಾತನಾಡಿ ಗ್ರಾಪಂ ಉಪ್ಪಿನಂಗಡಿ ಗ್ರಾಪಂ ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗ್ರಾಪಂ ಸದಸ್ಯರುಗಳಾದ ಯು ಟಿ ತೌಸೀಫ್, ಅಬ್ದುಲ್‌ರಹಿಮಾನ್ ಮಠ, ಇಬ್ರಾಹಿಂ ಪುಳಿತ್ತಡಿ, ವಿನಾಯಕ ಪೈ, ವಿಟ್ಲ ಉಪ್ಪಿನಂಗಡಿ ಮಾಜಿ ಬ್ಲಾಕ್ ಅಧ್ಯಕ್ಷರಾದ ಪ್ರವೀಣ್‌ಚಂಧ್ರ ಆಳ್ವ, ಡಿಸಿಸಿ ಕಾರ್ಯದರ್ಶಿ ಉಮಾನಾಥ ಶೆಟ್ವ ಪೆರ್ನೆ, ಮಹಮ್ಮದ್ ಕೆಂಪಿ, ಸಿದ್ದಿಕ್ ಕೆಂಪಿ, ಶಬ್ಬೀರ್ ಕೆಂಪಿ, ಸೋಮನಾಥ ರಾಮನಗರ, ವೆಂಕಪ್ಪ ಪೂಜಾರಿ, ಕೃಷ್ಣ ರಾವ್ ಅರ್ತಿಲ, ಅಝೀಝ್ ಬಸ್ತಿಕ್ಕಾರ್, ಉಮೇಶ್ ರಾಮನಗರ , ಮಜೀದ್ , ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸುಶಾನ್ ಶೆಟ್ಟಿ, ಸುಮಿತ್ ಶೆಟ್ಟಿ, ದಾಮೋಧರ ಭಂಡಾರ್ಕರ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಝೀರ್ ಮಠ, ವಲಯಾಧ್ಯಕ್ಷ ಆದಂ ಮಠ, ಕೃಷ್ಣಪ್ಪ ಎನ್, ಇಬ್ರಾಹಿಂ ಆಚಿ ಕೆಂಪಿ, ಝಕರಿಯ್ಯಾ ಕೊಡಿಪ್ಪಾಡಿ, ಮುಸ್ತಫಾ, ಯು ಟಿ ಫೌಝರ್, ರಫೀಕ್ ಝೆನ್  ಮತ್ತಿತರರು ಉಪಸ್ಥಿತರಿದ್ದರು.

BREAKING : ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಸಂಸದೆ ಸುಮಲತಾ ಅಂಬರೀಶ್

Posted by Vidyamaana on 2024-04-05 14:00:14 |

Share: | | | | |


BREAKING : ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಸಂಸದೆ ಸುಮಲತಾ ಅಂಬರೀಶ್

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಮಂಡ್ಯ ಸಂಸದೆ ಅಂಬರೀಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಸರಿ ಶಾಲು ಹಾಕಿ ಬಿಜೆಪಿ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್ ಶೆಟ್ಟಿ ಆಯ್ಕೆ

Posted by Vidyamaana on 2023-11-24 12:25:24 |

Share: | | | | |


ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ  ಧನೇಶ್ ಶೆಟ್ಟಿ  ಆಯ್ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಧನೇಶ್ ಶೆಟ್ಟಿ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಧನೇಶ್ ಶೆಟ್ಟಿ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರರಾಗಿದ್ದಾರೆ. ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಇವರು ವಿವಾಹಿತರಾಗಿದ್ದು ಪತ್ನಿಯೊಂದಿಗೆ ಇಂಡೋನೇಷಿಯದ ಆರೋಗ್ಯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Recent News


Leave a Comment: