ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO

Posted by Vidyamaana on 2023-10-03 09:08:58 |

Share: | | | | |


ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO

ಇರಾಕ್‌: ಮದುವೆ ಎಂದರೆ ಜೀವನದ ಅವಿಸ್ಮರಣೀಯ ಸಮಯ. ಆದರೆ ನಮಗೆ ಈ ಮದುವೆಯೇ (Wedding) ದುಸ್ವಪ್ನವಾಗಿದ್ದು, ನಾವು ದೈಹಿಕವಾಗಿ ಬದುಕಿದ್ದರೂ, ಮಾನಸಿಕವಾಗಿ ನಾವು ಸತ್ತುಹೋಗಿದ್ದೇವೆ ಎಂದು 107 ಜನರನ್ನು ಬಲಿ ತೆಗೆದುಕೊಂಡ ಮದುವೆಯ ವರ (Groom) ರಿವಾನ್‌ ತಿಳಿಸಿದ್ದಾರೆ.ವಾರದ ಹಿಂದೆ ಉತ್ತರ ಇರಾಕ್‌ನ (Iraq) ಹಮ್ದನಿಹಾಯ್‌ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತವಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ಈ ದುರ್ಘಟನೆಗೆ ಕಾರಣವಾಗಿದ್ದ ಮದುವೆಯಲ್ಲಿ ವರನಾಗಿದ್ದ ರಿವಾನ್ ಹಾಗೂ ವಧು ಹನೀನ್‌ ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ.


💥 ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO


ನಾವು ಬಾಹ್ಯವಾಗಿ ಓಡಾಡುತ್ತಿದ್ದರೂ ಒಳಗೊಳಗೆ ಪ್ರತೀ ಕ್ಷಣ ಸಾಯುತ್ತಿದ್ದೇವೆ. ನನ್ನ ಪತ್ನಿ ಹನೀನ್ ಇನ್ನೂ ಆಘಾತದಲ್ಲಿದ್ದಾರೆ. ಇದರ ಜೊತೆಗೆ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಮಾತನಾಡಲು ಆಗದ ಸ್ಥಿತಿಯಲ್ಲಿದ್ದೇವೆ. ಆಕೆಯ ತಂದೆಯು ಘಟನೆ ವೇಳೆ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ವರ ಬೇಸರ ವ್ಯಕ್ತಪಡಿಸಿದರು.ಮದುವೆ ವೇಳೆ ಪಟಾಕಿಯನ್ನು ಒಳಾಂಗಣದಲ್ಲಿ ಸಿಡಿಸಲಾಗಿತ್ತು. ಇದರಿಂದಾಗಿ ಛಾವಣಿಗೆ ಬೆಂಕಿ ತಗುಲಿ ಅನಾಹುತ ಆಗಿರುವ ಸಾಧ್ಯತೆಯಿದೆ. ಇದು ಶಾರ್ಟ್-ಸರ್ಕ್ಯೂಟ್ ಆಗಿರಬಹುದು, ಈ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದರು.


ಮಂಗಳವಾರ ಮೊಸುಲ್‌ನ ಪೂರ್ವದಲ್ಲಿರುವ ಕ್ರಿಶ್ಚಿಯನ್ನರು ಹೆಚ್ಚು ವಾಸಿಸುವ ಪಟ್ಟಣವಾದ ಹಮ್ದನಿಯಾದದಲ್ಲಿ ಮದುವೆ ನಡೆದಿತ್ತು. ಈ ವೇಳೆ ನೂತನ ವಧು ವರರು ನರ್ತಿಸುತ್ತಿದ್ದರು. ಇದನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ ಅಲಂಕಾರಕ್ಕೆಲ್ಲ ಬೆಂಕಿ ತಗುಲಿದೆ. ಈ ವೇಳೆ ಮದುವೆ ಸಂಭ್ರಮ ಕಳೆಗುಂದಿ ಸ್ಮಶಾನದ ವಾತಾವರಣ ನಿರ್ಮಾಣವಾಗಿತ್ತು. ವಧು ತನ್ನ ತಾಯಿ, ಸಹೋದರನನ್ನು ಕಳೆದುಕೊಂಡಿದ್ದಳು. ದುರಂತದ ವೇಳೆ ಸುಮಾರು 107 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಸೋರಿಕೆ ಪ್ರಕರಣ

Posted by Vidyamaana on 2023-10-29 17:18:52 |

Share: | | | | |


ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಸೋರಿಕೆ ಪ್ರಕರಣ

ಮಂಗಳೂರು, ಅ.29: ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನಕಲಿ ಮಾಡಿಸಿ ವಂಚನೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮೂವರು ಬಿಹಾರ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.‌


ದೀಪಕ್ ಕುಮಾರ್ ಹೆಂಬ್ರಮ್ (33), ವಿವೇಕ್ ಕುಮಾರ್ ಬಿಶ್ವಾಸ್ (24) ಮತ್ತು ಮದನ್ ಕುಮಾರ್ (24) ಬಂಧಿತರು. ಇವರನ್ನು ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯಿಂದ ವಶಕ್ಕೆ ಪಡೆಯಲಾಗಿದೆ. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆಯಂತೆ ಸೈಬರ್ ಅಪರಾಧ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಿಹಾರದಲ್ಲಿ ಅಡಗಿಕೊಂಡಿದ್ದ ಮೂವರನ್ನು ಬಂಧಿಸಿ ಕರೆತಂದಿದ್ದಾರೆ.‌


ಆರೋಪಿಗಳಿಗೆ ಸಂಬಂಧಪಟ್ಟ ಹತ್ತು ಬ್ಯಾಂಕ್ ಖಾತೆಗಳಿಂದ 3,60,242 ರುಪಾಯಿಗಳನ್ನು ಸೀಜ್ ಮಾಡಲಾಗಿದೆ. ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ತಾಂತ್ರಿಕ ಸಾಕ್ಷ್ಯಗಳ ತನಿಖೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿ ಒಂದು ಸಾವಿರಕ್ಕೂ ಹೆಚ್ಚು ಪಿಡಿಎಫ್ ದಾಖಲಾತಿ ಪ್ರತಿಗಳನ್ನು ಹಾಗೂ ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳಿಗೆ ಸಂಬಂಧಪಟ್ಟ 300 ಕ್ಕೂ ಹೆಚ್ಚು ಪಿಡಿಎಫ್ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಮಂಗಳೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2.0 ವೆಬ್ ಸೈಟ್ ನಿಂದ ಹ್ಯಾಕ್ ಮಾಡಿ, ಗ್ರಾಹಕರ ಆಧಾರ್ ಮಾಹಿತಿಗಳನ್ನು ಸಂಗ್ರಹಿಸಿ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡಿದ್ದರು.


ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ವಿಶೇಷ ತನಿಖೆಗಾಗಿ ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಇತ್ತೀಚೆಗೆ ಎಎಸ್ಐ ಒಬ್ಬರ ಖಾತೆಯಿಂದಲೂ ಸಬ್ ರಿಜಿಸ್ಟ್ರಾರ್ ಕಚೇರಿಯಿಂದಲೇ ಆಧಾರ್ ಮಾಹಿತಿ ಸೋರಿಕೆಯಾಗಿ ಹಣ ಕಳೆದುಹೋಗಿತ್ತು. ಇದೇ ರೀತಿಯ ಅಕ್ರಮ ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಕಡೆ ಆಗಿದ್ದು ಪ್ರಕರಣ ದಾಖಲಾಗಿತ್ತು.

ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

Posted by Vidyamaana on 2023-12-21 16:34:47 |

Share: | | | | |


ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

ಉಡುಪಿ : ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಉದ್ಯಾವರದ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಅಪಘಾತದಲ್ಲಿ ಮೃತರಾದವರನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ.ಉದ್ಯಾವರದ ಐಸಿವೈಎಂ ಘಟಕದ ಸದಸ್ಯರಿದ್ದ ಫಿಗೋ ಕಾರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ.


ಪರಿಣಾಮ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.ಯುವ ನಾಯಕನ ಅಗಲಿಕೆಗೆ ಕ್ರೈಸ್ತ ಸಮುದಾಯ ಸಂತಾಪ ಸೂಚಿಸಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 18

Posted by Vidyamaana on 2023-09-18 08:23:18 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 18

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 18 ರಂದು

ಬೆಳಗ್ಗೆ 10.30 ಖಾಸಗಿ ಕಾರ್ಯಕ್ರಮ


 ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆಯಲ್ಲಿ ಕಂಬಳ ಕುರಿತ ಸಭೆಭಾಗವಹಿಸಲಿದ್ದಾರೆ 

ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

Posted by Vidyamaana on 2023-12-07 13:15:26 |

Share: | | | | |


ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ, ಮಹಾನ್ ಸುಳ್ಳುಗಾರ, ಚುನಾವಣೆ ಗೆಲ್ಲಲು ಈ ರೀತಿ ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ನಂಟಿರುವ ಪೀರಾ ಮೌಲಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಬಿಜೆಪಿ ನಾಯಕ ಯತ್ನಾಳ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಅವರ ಜೊತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಅವರು ಸುಮ್ಮನಿದ್ದರು? ಪೀರಾ ಮೌಲಿ ಅವರು ಆರೋಪ ಸಾಬೀತು ಮಾಡಿ ಎಂದು ಹೇಳಿದ್ದಾರೆ.


ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈಗ ಆರೋಪ ಮಾಡುತ್ತಿರುವ ಯತ್ನಾಳ್, ಅವರದ್ದೇ ಸರ್ಕಾರ ಇದ್ದಾಗ ಏನು ಮಾಡ್ತಿದ್ರು? ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪ್ರಯತ್ನ ಮಾಡಿದ್ದರು. ಎರಡೂ ಸಿಗಲಿಲ್ಲ ಅದಕ್ಕೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

Posted by Vidyamaana on 2023-02-26 16:07:56 |

Share: | | | | |


ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಫೆ.27ರ ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಲಿದ್ದು, ಉಡುಪಿಯ 5 ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ 5 ಪ್ರಗತಿ ರಥಗಳಿಗೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ 3:00 ಗಂಟೆಗೆ ಕಾರ್ಕಳದಲ್ಲಿ ನಡೆಯುವ ಬೃಹತ್ ಬೈಕ್ ಜಾಥಾದಲ್ಲಿ ಭಾಗವಹಿಸಿ, ಸಂಜೆ 4:00 ಗಂಟೆಗೆ ಅಜೆಕಾರಿನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಚಿವ ವಿ.ಸುನೀಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕೆ.ಸಿ. ಸಹಿತ ರಾಜ್ಯ ಮತ್ತು ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Recent News


Leave a Comment: