ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಯುವಕ

ಸುದ್ದಿಗಳು News

Posted by vidyamaana on 2024-07-24 16:19:59 |

Share: | | | | |


ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಯುವಕ

ಶಿವಮೊಗ್ಗ, ಜುಲೈ.24: ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ (Love) ಯುವಕ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ (Murder) ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್​ನನ್ನು ಪೀಡಿಸುತ್ತಿದ್ದಳು. ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಸೃಜನ್ ಕೊಲೆ ಮಾಡಿ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದು ವಿಚಾರ ಬೆಳಕಿಗೆ ಬಂದಿದೆ.


ತೀರ್ಥಹಳ್ಳಿಯಲ್ಲಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್​ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯಾಳ ಪರಿಚಯವಾಗಿತು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಇದೇ ವೇಳೆ ಯುವತಿ ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಜುಲೈ 2 ರಂದು‌ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು.

ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ‌ಕರೆದುಕೊಂಡು‌ ಹೋಗುವಂತೆ ‌ಒತ್ತಡ ಹಾಕಿದ್ದಾಳೆ.


ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಮನವೊಲಿಸಲು ಪ್ರಯತ್ನಿಸಿದ್ದಾನೆ. ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದು ಸಮಾಧಾನದ ಮಾತುಗಳನ್ನಾಡಿದ್ದಾನೆ. ಇದರಿಂದ ಅನುಮಾನಗೊಂಡ ಸೌಮ್ಯ ನನ್ನನ್ನು ದೂರ ಮಾಡುತ್ತಿದ್ದಾನೆ. ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ವಾದ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಕೋಪಗೊಂಡ ಸೃಜನ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಕತ್ತು ಹಿಸುಕಿ ಹಲ್ಲೆ ಮಾಡಿದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.ಇದರಿಂದ ಗಾಬರಿಗೊಂಡ ಆರೋಪಿ ಸೃಜನ್ ಮುಂಬಾಳು ಬಳಿ ಶವವನ್ನು ಹೂತಿಟ್ಟಿದ್ದಾನೆ. ಮತ್ತೊಂದೆಡೆ ಮಗಳು ಮನೆಗೆ ಬರದಿದ್ದಕ್ಕೆ ಟೆನ್ಷನ್ ಆಗ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ‌ಬಂದಿದ್ದು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಸೃಜನ್ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.

 Share: | | | | |


ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

Posted by Vidyamaana on 2023-10-29 11:01:02 |

Share: | | | | |


ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

ಧರ್ಮಶಾಲಾ :ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ (AUS vs NZ) ನಡುವಿನ ವಿಶ್ವಕಪ್‌ 2023ರ 27ನೇ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಆಸೀಸ್‌ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಆಸೀಸ್‌ ವಿಶ್ವಕಪ್‌ ಸೆಮಿ ಫೈನಲ್‌ ಹಾದಿ ಸುಲಭವಾಗಿದೆ. ಇನ್ನು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 388 ರನ್ ಗಳಿಗೆ ಆಲೌಟಾಯಿತು.ಈ ಟಾರ್ಗೆಟ್‌ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ತಂಡ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದರೂ ಸಹ ಅಂತಿಮ ಹಂತದಲ್ಲಿ ಎಡವಿದ ಕಾರಣ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.

ವಿಡಿಯೋ ನೋಡಲು ಕ್ಲಿಕ್ ಮಾಡಿ....ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

ಅಲ್ಲದೇ ಕರ್ನಾಟಕ ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ ಶತಕದ ಆಟವೂ ತಂಡದ ಗೆಲುವಿಗೆ ಸಹಾಕವಾಗಲಿಲ್ಲ. ಅಂತಿಮವಾಗಿ ನ್ಯೂಜಿಲ್ಯಾಂಡ್‌ ತಂಡವು 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 383 ರನ್‌ ಗಳಿಸಿತು. ಈ ಮೂಲಕ 5 ರನ್‌ಗಳಿಂದ ಸೋಲನ್ನಪ್ಪಿತು.


ಭರ್ಜರಿ ಶತಕ ಸಿಡಿಸಿದ್ದ ರಚಿನ್‌ ರವೀಂದ್ರ:


ನ್ಯೂಜಿಲೆಂಡ್ ಪರ 6 ತಿಂಗಳ ಹಿಂದೆಯಷ್ಟೇ ಪದಾರ್ಪಣೆ ಮಾಡಿದ ಆಟಗಾರ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಕಾಂಗರೂ ತಂಡದ ವಿರುದ್ಧ ಪಂದ್ಯದ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದ ರಚಿನ್ ರವೀಂದ್ರ ಮತ್ತೊಮ್ಮೆ ಅಬ್ಬರಿಸಿದರು. ರಚಿನ್ ರವೀಂದ್ರ ಆಸ್ಟ್ರೇಲಿಯದ ಮೇಲೆ ಪ್ರಾಬಲ್ಯ ಮೆರೆದ ಏಕೈಕ ಬ್ಯಾಟ್ಸ್‌ಮನ್. ಇದರ ಹೊರತಾಗಿ ಡೆರಿಲ್ ಮಿಚೆಲ್ ಅರ್ಧಶತಕ ಇನಿಂಗ್ಸ್ ಆಡಿದರು.ರವೀಂದ್ರ ಅಂಗದ ಹಾಗೆ ಇನ್ನೊಂದು ತುದಿಯಲ್ಲಿ ಹೆಪ್ಪುಗಟ್ಟಿದ. ಅವರು ಕೇವಲ 89 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಗಗನಚುಂಬಿ ಸಿಕ್ಸರ್‌ಗಳ ಸಹಾಯದಿಂದ 116 ರನ್ ಗಳಿಸಿದರು. ಆದರೆ ಅವರ ವಿಕೆಟ್ ನಂತರ ನ್ಯೂಜಿಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು. ಇದಲ್ಲದೆ ಡೇರಿಲ್ ಮಿಚೆಲ್ ಮತ್ತು ಜೇಮ್ಸ್ ನೀಶಮ್ ತಮ್ಮ ಬಿರುಸಿನ ಅರ್ಧಶತಕಗಳ ಮೂಲಕ ಕಾಂಗರೂ ತಂಡಕ್ಕೆ ಕೊನೆ ಕ್ಷಣದವರೆಗೂ ಕಾಡಿದರು. ಈ ವೇಳೆ ಜೇಮ್ಸ್ ನೀಶಮ್ 39 ಎಸೆತದಲ್ಲಿ 3 ಸಿಕ್ಸ್‌ ಮತ್ತು 3 ಫೋರ್‌ ಮೂಲಕ 58 ರನ್‌ ಸಿಡಿಸುವ ಮೂಲಕ ಕಿವೀಸ್‌ ಪರ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಇವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಗೆಲುವೂ ಸಹ ಕೈಜಾರಿತು. ಈ ಮೂಲಕ ತಂಡ 383 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಕೊನೆಗೊಳಿಸಿತು.


ಭರ್ಜರಿ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ:


ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ ಭರ್ಜರಿ ಬ್ಯಾಟಿಂಗ್‌ ಮೂಲಕ ಬೃಹತ್‌ ಸ್ಕೋರ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಆಸೀಸ್‌ ಪರ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 109; 10 ಬೌಂಡರಿ, 7 ಸಿಕ್ಸರ್), ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 81; 5 ಬೌಂಡರಿ, 6 ಸಿಕ್ಸರ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (24 ಎಸೆತಗಳಲ್ಲಿ 41; 5 ಬೌಂಡರಿ, 2 ಸಿಕ್ಸರ್) ಮಿಂಚಿದರು.ಬ್ಯಾಟ್ಸ್‌ಮನ್‌ಗಳು. ಕೊನೆಯಲ್ಲಿ ಜೋಸ್ ಇಂಗ್ಲಿಸ್ (28 ಎಸೆತಗಳಲ್ಲಿ 38 ರನ್) ಮತ್ತು ಪ್ಯಾಟ್ ಕಮಿನ್ಸ್ (14 ಎಸೆತಗಳಲ್ಲಿ 37 ರನ್) ಮಿಂಚಿದರು. ಮ್ಯಾಕ್ಸಿ 24 ಎಸೆತಗಳಲ್ಲಿ 41 ರನ್ ಗಳಿಸಿದರು. ಅಂತಿಮವಾಗಿ ಪ್ಯಾಟ್ ಕಮಿನ್ಸ್ ಮತ್ತು ಜೋಸ್ ಇಂಗ್ಲಿಸ್ ಕೂಡ ಮಿಂಚಿದ್ದರಿಂದ ಆಸ್ಟ್ರೇಲಿಯಾ ಬೃಹತ್ ಸ್ಕೋರ್ ದಾಖಲಿಸಿತು.

ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

Posted by Vidyamaana on 2023-04-06 06:28:39 |

Share: | | | | |


ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

ಉಪ್ಪಿನಂಗಡಿ : ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ನೆಕ್ಕಿಲಾಡಿ ಸಮೀಪದ ಮಹಿಳೆ ಎ.5 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪೋಟೊವನ್ನು ನಕಲು ಮಾಡಲಾಗಿದೆಯೋ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೋಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Posted by Vidyamaana on 2024-05-02 11:06:52 |

Share: | | | | |


ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮೇ. 1(ಬುಧವಾರ) ದಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಧರಿಸಿದ್ದ ಪುತ್ತೂರು ಅವರು ರಾತ್ರಿ 12.25 ರ ಸುಮಾರಿಗೆ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

Posted by Vidyamaana on 2021-06-30 18:30:00 |

Share: | | | | |


ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ಬಡ ಕುಟುಂಬಕ್ಕೆ ವಿಜಯ ಸಾಮ್ರಾಟ್ ತಂಡ ನಿರ್ಮಾಣ ಮಾಡಿಕೊಟ್ಟ ಮನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.

ಗೋಪಾಲಶೆಟ್ಟಿ ಅವರ ಕುಟುಂಬ ಭದ್ರವಾದ ಮನೆ ಇರದೇ ಪರಿತಪಿಸುತ್ತಿದ್ದ ಸಂಕಷ್ಟ ಹಾಗೂ ಈ ದಂಪತಿ ಪುತ್ರಿಯ ವಿದ್ಯಾಭ್ಯಾಸದ ಸಮಸ್ಯೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿದ ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ, ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಂಡದ ಸದಸ್ಯರು ಕೈಲಾದಷ್ಟು ನೆರವು ನೀಡಿ, ಕುಟುಂಬಕ್ಕಾಗಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಡಿ. ೧೦ರಂದು ಈ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು ಹಾಗೂ ಅತಿಥಿಗಳು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ನೀಡಿ, ಶುಭಹಾರೈಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯುವ ಸಾಮ್ರಾಟ್ ತಂಡದ ಯುವಕರ ಕಾರ್ಯವನ್ನು ಶ್ಲಾಘಿಸಿದರು.

ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಏಕ, ಪಿಡಿಒ ಚಿತ್ರಾ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮುಖಂಡ ರಾಮದಾಸ್, ವಿಜಯ ಸಾಮ್ರಾಟ್ ತಂಡದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಆಪಲ್‌ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡ ಮೈಕ್ರೋಸಾಫ್ಟ್‌!

Posted by Vidyamaana on 2024-01-12 06:20:00 |

Share: | | | | |


ಆಪಲ್‌ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡ ಮೈಕ್ರೋಸಾಫ್ಟ್‌!

ನವದೆಹಲಿ (ಜ.12): ಭಾರತದ ಸತ್ಯ ನಾದೆಳ್ಳೆ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಮೈಕ್ರೋಸಾಫ್ಟ್‌ನ ಅಧಿಕಾರ ವಹಿಸಿಕೊಂಡ ಬಳಿಕ ಮೈಕ್ರೋಸಾಫ್ಟ್‌ ಕಂಪನಿಯ ಚಹರೆಯೇ ಬದಲಾಗಿದೆ ಎನ್ನುವ ಸೂಚನೆಗಳು ಸಿಗುತ್ತಿವೆ. ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್‌, ಐಫೋನ್‌ ಮೇಕರ್‌ ಕಂಪನಿಯಾಗಿರುವ ಆಪಲ್‌ಅನ್ನು ಹಿಂದಿಕ್ಕಿದೆ.2024ರಲ್ಲಿ ಆಪಲ್‌ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿರುವ ಅಂದಾಜಿನಲ್ಲಿ ಈ ವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಆಪಲ್‌ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದೆ. ಇನ್ನೊಂದೆಡೆ ಮೈಕ್ರೋಸಾಫ್ಟ್‌ ಷೇರು ಬೆಲೆಯಲ್ಲಿ ಏರಿಕೆಯಾಗಿದ್ದು, ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಸಂಪಾದಿಸಿದೆ. ವಾಷಿಂಗ್ಟನ್‌ ಮೂಲಕ ಮೈಕ್ರೋಸಾಫ್ಟ್‌ ಕಂಪನಿಯ ಷೇರು ಬೆಲೆಗಳಲ್ಲಿ ಶೇ. 1.6ರಷ್ಟು ಏರಿಕೆ ಆಗಿದ್ದರಿಂದ ಈ ಕಂಪನಿಯ ಮಾರುಕಟ್ಟೆ ಮೌಲ್ಯ 2.875 ಟ್ರಿಲಿಯನ್‌ ಯುಎಸ್‌ ಡಾಲರ್‌ ದಾಟಿತು. ಅರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಹಣ ಸಂಪಾದಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್‌ ಮುಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಂಪನಿಯ ಷೇರುಗಳಲ್ಲಿ ಏರಿಕೆಯಾಗಿದೆ.ಇನ್ನು ಆಪಲ್‌ ಕಂಪನಿಯ ಷೇರುಗಳು ಶೇ. 0.9ರಷ್ಟು ಕುಸಿದು ಅದರ ಮಾರುಕಟ್ಟೆ ಮೌಲ್ಯ 2.871 ಟ್ರಿಲಿಯನ್‌ ಯುಎಸ್‌ ಡಾಲರ್‌ ಎನಿಸಿಕೊಂಡಿತು. 2021ರ ಬಳಿಕ ಇದೇ ಮೊದಲ ಬಾರಿಗೆ ಮಾರುಕಟ್ಟೆ ಮೌಲ್ಯದಲ್ಲಿ ಆಪಲ್‌ ಕಂಪನಿ ಮೈಕ್ರೋಸಾಫ್ಟ್‌ಗಿಂತ ಕೆಳಗೆ ಇಳಿದಿದೆ. ಜನವರಿಯಲ್ಲಿ ಈವರೆಗೆ ಕ್ಯಾಲಿಫೋರ್ನಿಯಾ ಮೂಲದ ಆಪಲ್‌ ಕಂಪನಿಯ ಷೇರುಗಳು ಶೇ. 3.3ರಷ್ಟು ಕುಸಿದಿದ್ದರೆ, ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳು ಶೇ. 1.8ರಷ್ಟು ಏರಿಕೆ ಕಂಡಿದೆ.


"ಮೈಕ್ರೋಸಾಫ್ಟ್ ವೇಗವಾಗಿ ಬೆಳೆಯುತ್ತಿರುವ ಕಾರಣ ಮೈಕ್ರೋಸಾಫ್ಟ್ ಆಪಲ್ ಅನ್ನು ಹಿಂದಿಕ್ಕುವುದು ಅನಿವಾರ್ಯವಾಗಿತ್ತು ಮತ್ತು ಈಗಾಗಲೇ AI ಕ್ರಾಂತಿಯಿಂದ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ" ಎಂದು ಗಿಲ್ ಲೂರಿಯಾದ ವಿಶ್ಲೇಷಕ ಡಿ.ಎ. ಡೇವಿಡ್ಸನ್ ಹೇಳಿದ್ದಾರೆ.ಆಪಲ್‌ ಕಂಪನಿಯ ಪಾಲಿಗೆ ಅತಿದೊಡ್ಡ ಲಾಭ ಬರುವುದು ಐಫೋನ್‌ ಮಾರಾಟದಿಂದ. ಆದರೆ, ಇತ್ತೀಚಿನ ದಿನಗಳಲ್ಲಿ ಐಫೋನ್‌ ಮಾರಾಟ ಕಡಿಮೆಯಾಗಬಹುದು ಎನ್ನುವ ಅಂದಾಜು ಬಂದಿರುವ ಕಾರಣ ಆಪಲ್‌ ಷೇರುಗಳು ಕುಸಿತ ಕಂಡಿವೆ. ಅದರಲ್ಲೂ ಚೀನಾದಂಥ ಪ್ರಮುಖ ಮಾರುಕಟ್ಟೆಯಲ್ಲಿ ಆಪಲ್‌ ಮಾರಾಟ ಇನ್ನಷ್ಟು ಕುಸಿತವಾಗಿದೆ.ಮುಂದಿನ ದಿನಗಳಲ್ಲಿ ಆಪಲ್‌ ಮಾರುಕಟ್ಟೆ ಮೌಲ್ಯದ ಕುಸಿತಕ್ಕೆ ಚೀನಾ ಕಾರಣವಾಗಲಿದೆ. ಚೀನಾ ಹಾಗೂ ಅಮೆರಿಕ ನಡುವಿನ ಕೆಟ್ಟ ಸಂಬಂಧ ಆಪಲ್‌ನ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ 14 ರಂದು ಆಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ 3.081 ಟ್ರಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು. ಒಂದೇ ವರ್ಷದಲ್ಲಿ ಆಪಲ್‌ ಶೇ. 48ರಷ್ಟು ಮೌಲ್ಯ ಏರಿಸಿಕೊಂಡಿತ್ತು.2018 ಹಾಗೂ ತೀರಾ ಇತ್ತೀಚೆಗೆ 2021ರಲ್ಲಿ ಆಪಲ್‌ ಕಂಪನಿಯಲ್ಲಿ ಹಿಂದಿಕ್ಕಿ ಮೈಕ್ರೋಸಾಫ್ಟ್‌ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿತ್ತು. ಆದರೆ, ಪ್ರಸ್ತುತ ವಾಲ್‌ ಸ್ಟ್ರೀಟ್‌ ಮೈಕ್ರೋಸಾಫ್ಟ್‌ ಬಗ್ಗೆ ಧನಾತ್ಕವಾಗಿದ್ದಾರೆ. ಶೇ. 90ರಷ್ಟು ಬ್ರೋಕರೇಜ್‌ಗಳು ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳನ್ನು ಖರೀದಿ ಮಾಡಿ ಎನ್ನುವ ಸಲಹೆ ನೀಡಿದ್ದಾರೆ.

ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ!!!?

Posted by Vidyamaana on 2023-05-26 16:24:56 |

Share: | | | | |


ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ!!!?

ಪುತ್ತೂರು: ತಾಲೂಕು ಆಡಳಿತ ಸೌಧದಲ್ಲಿದ್ದ ಹಿಂದಿನ ಶಾಸಕರ ಕಚೇರಿಗೆ ವಾಸ್ತುದೋಷ ಎದುರಾಗಿತ್ತಂತೆ! ಆದ್ದರಿಂದ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಹೊಸ ಕಚೇರಿಯ ತಲಾಷ್’ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿರುವ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರು, ಸಹಾಯಕ ಆಯುಕ್ತರ ಜೊತೆ ಮಾತನಾಡುತ್ತಾ ಹೊಸ ಕಚೇರಿಯನ್ನು ಹುಡುಕಿ ಕೊಡಲು ಸೂಚಿಸಿದ್ದಾರೆ.

ಹಳೆ ಕಚೇರಿಯಲ್ಲಿ ವಾಸ್ತುದೋಷ ಇದೆಯೋ ಏನೋ ಗೊತ್ತಿಲ್ಲ. ಆದರೆ ಆ ಕಚೇರಿ ತೀರಾ ಚಿಕ್ಕದಾಗಿದ್ದು, ಸ್ಥಳಾವಕಾಶದ ಕೊರತೆಯಿದೆ. ನನ್ನನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸರಿಯಾಗಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇರಬೇಕು. ಆದ್ದರಿಂದ ದೊಡ್ಡ ಕೊಠಡಿಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ನೂತನ ಕಚೇರಿಯು ಕೆಲವೇ ದಿನಗಳಲ್ಲಿ ತೆರೆದುಕೊಳ್ಳಲಿದ್ದು, ತುರ್ತಾಗಿ ಕಚೇರಿ ಕೆಲಸ ನಡೆಯಲಿದೆ ಎಂದು ತಿಳಿದುಬಂದಿದೆ.

Recent News


Leave a Comment: