ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ

Posted by Vidyamaana on 2023-04-15 23:08:57 |

Share: | | | | |


ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ

ಧಾರವಾಡ: ಈ ಬಾರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು(ಏಪ್ರಿಲ್ 15) ರಾತ್ರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದ್ರೆ, ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ

ಘೋಷಣೆ ಮಾಡಿದರು.ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ಬಳಿಕ ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸಿದರು. ನಾಳೆ (ಏಪ್ರಿಲ್ 16) ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಕೊಟ್ಟ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನದು ಯಾವುದೇ ಭ್ರಷ್ಟಾಚಾರ, ಸೆಕ್ಸ್ ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್‌ ಘೋಷಿಸಿಲ್ಲ ಎಂದು ಭಾವುಕರಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್‍ಗೆ ಬಂದರೆ ಸ್ವಾಗತ: ಸಿದ್ದರಾಮಯ್ಯ

ಬೆಳಗಾವಿ: ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಾಲಿ ಶಾಸಕರಾಗಿದ್ದರೂ ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ದೂರಿದರು.

ಸದಾ ಪಕ್ಷ, ಸಿದ್ಧಾಂತ ಎನ್ನುತ್ತಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಇದೀಗ ಎಲ್ಲಿಗೆ ಹೋದರು ಎಂದು ಗೊತ್ತಿಲ್ಲ. ಶೆಟ್ಟರ್ ಅವರು ನನ್ನೊಂದಿಗೆ ಮಾತನಾಡಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಲಕ್ಷ್ಮಣ ಸವದಿ ಆಗಮನದಿಂದ ಕಾಂಗ್ರೆಸ್‍ಗೆ ಲಾಭವಾಗಲಿದೆ. ಸವದಿ ಕೇಳಿದ ಕಡೆ ಪ್ರಚಾರ ಮಾಡಲು ಜವಾಬ್ದಾರಿ ನೀಡುತ್ತೇವೆ ಎಂದು ಹೇಳಿದರು.

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಸ್ಪರ್ಧಿಸುತ್ತಿದ್ದು, ಆ ಕ್ಷೇತ್ರದಲ್ಲಿ ಸೋಮಣ್ಣನ ಪರವಾಗಿ ಒಂದು ಮತವೂ ಇಲ್ಲ. ಅವನು ಹೊರಗಿನವನು’ ಎಂದು ಸಿದ್ದರಾಮಯ್ಯ ಟೀಕಿಸಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಶಾಸಕ

Posted by Vidyamaana on 2023-05-13 15:32:11 |

Share: | | | | |


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಶಾಸಕ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಮೀಸಲಾತಿ ರದ್ಧತಿ: ಪುತ್ತೂರು ಎಸ್‌ಡಿಪಿಐ ಖಂಡನೆ, ಪ್ರತಿಭಟನೆ

Posted by Vidyamaana on 2023-03-28 07:49:59 |

Share: | | | | |


ಮುಸ್ಲಿಂ ಮೀಸಲಾತಿ ರದ್ಧತಿ: ಪುತ್ತೂರು ಎಸ್‌ಡಿಪಿಐ ಖಂಡನೆ, ಪ್ರತಿಭಟನೆ

ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಾ.28ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.

ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಬರುವ ಚುನಾವಣೆಯಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸಬೇಕಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಮೂಲಕ ನ್ಯಾಯಾಲಯದಲ್ಲ ಪ್ರಶ್ನಿಸಲಿದ್ದೇವೆ:ಅಬ್ದುಲ್ ಮಜೀದ್ ಖಾನ್ 

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಖಾನ್ ಅವರು ಮಾತನಾಡಿ ವಿವಿಧ ಆಯೋಗ ಕೂಡ ಮುಸ್ಲಿಂಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗಿದೆ. ಧರ್ಮವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೆಯಿಸಲು ನಾವು ಬಿಡುವುದಿಲ್ಲ. ಟಿಪ್ಪು ಮತ್ತು ಅಸ್ಮತ್ತುಲ್ಲಾ ಖಾನ್ ಅವರ ಸಂತತಿಯಾಗಿರುವ ನಾವು ಹೋರಾಟದ ಮೂಲಕ ನ್ಯಾಯಾಲಯದಲ್ಲಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು.

ಮೀಸಲಾತಿ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಎಚ್ಚರಿಕೆ:ಇಬ್ರಾಹಿಂ ಸಾಗರ್ 

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರು ಮಾತನಾಡಿ ಬಿಜೆಪಿ ಸರಕಾರ ಬಂದ ಬಳಿಕ ಮುಸಲ್ಮಾನರ ಮೇಲೆ ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ಮುಸಲ್ಮಾನರಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಸೌಲಭ್ಯವನ್ನು ಸರಕಾರ ಕಿತ್ತುಕೊಳ್ಳುವ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಸಲ್ಮಾನರನ್ನು ಇಲ್ಲದಂತೆ ಮಾಡುವ ಹುನ್ನಾರವನ್ನು ಕೋಮುವಾದಿ ಸರಕಾರ ಮಾಡುತ್ತಿದೆ. ಮೀಸಲಾತಿ ಪುನಃ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಹಸಿವು, ಭಯಮುಕ್ತ ಸಮಾಜವನ್ನು ಪಡೆದೇ ಪಡೆಯುತ್ತೇವೆ:ಅಬ್ದುಲ್ ಹಮೀದ್ ಸಾಲ್ಮರ 

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ಮಾತನಾಡಿ ಬೇತಾಳ ಶವವನ್ನು ಎತ್ತಿಕೊಂಡು ಹೋಗುವ ಕಥೆಯಂತೆ ಬಿಜೆಪಿಗೂ ತನ್ನ ಕೊನೆ ಹಂತದ ಪರಿಸ್ಥಿತಿ ಬರಲಿದೆ. ರಾಜ್ಯದಲ್ಲಿ ಹಸಿವು ಮುಕ್ತ, ಭಯಮುಕ್ತ ಸಮಾಜವನ್ನು ನಾವು ಪಡೆದೇ ಪಡೆಯುತ್ತೇವೆ ಎಂದರು.


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಮುಖಂಡರಾದ ಅಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ರಹೀಮ್, ಕಬಕ ಗ್ರಾ.ಪಂ ಸದಸ್ಯ ಪಾರೂಕ್ ಕಬಕ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ರಶೀದ್ ಪುಣ್ಚಪ್ಪಾಡಿ, ವಿಶ್ವನಾಥ್ ಪುಣ್ಚತ್ತಾರ್, ಪಿಬಿಕೆ ಮಹಮ್ಮದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪ್ರತಿಭಟ‌ನೆ ಬಳಿಕ ಸಹಾಯಕ ಆಯುಕ್ತರ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್.

Posted by Vidyamaana on 2023-05-06 07:45:04 |

Share: | | | | |


ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್.

ಮಂಗಳೂರು: 2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ ಈ ಚುನಾವಣೆಯಲ್ಲಿ ಕಾರ್ಮಿಕ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸುತ್ತದೆ ಎಂದು SDTU ರಾಜ್ಯಾಧ್ಯಕ್ಷ ಫಝಲುಲ್ಲಾ ರವರ ಅಧ್ಯಕ್ಷತೆಯಲ್ಲಿ ಏ.28 ರಂದು ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, SDTU ಕಾರ್ಮಿಕರ ಹಕ್ಕು ಮತ್ತು ಅವಕಾಶಗಳಿಗಾಗಿ ನಡೆಸುವ ಎಲ್ಲಾ ಪ್ರಜಾಸತ್ತಾತ್ಮಕ ಹೋರಾಟಗಳಿಗೆ SDPI ಬೆಂಬಲ ಸೂಚಿಸಿ ಸಹಕರಿಸಿವೆ. ಮಾತ್ರವಲ್ಲ ದುಡಿಯುವ ಮತ್ತು ದುರ್ಬಲ ವರ್ಗಗಳ ಮಧ್ಯೆ ಸಾಮಾಜಿಕ ಚಳುವಳಿಯ ಪ್ರಜ್ಞೆ ಹುಟ್ಟಿಸಿ ದೇಶದಾದ್ಯಂತ ಒಂದು ಆಂದೋಲನವಾಗಿ ಪಕ್ಷವೂ ರುಪುಗೊಂಡಿದೆ. ಕಾರ್ಮಿಕರು ಮತ್ತು ಅನ್ನದಾತ ರೈತ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಕಾರ್ಯನಿರ್ವಹಿಸುವ ಕ್ಯಾಡರ್ ಆಧಾರಿತ ಪಕ್ಷವಾಗಿದ್ದು, ಈ ನಿಟ್ಟಿನಲ್ಲಿ SDPI ಪಕ್ಷಕ್ಕೆ ಕಾರ್ಮಿಕರ ಪರ ಇರುವ ಬಲವಾದ ಗುರಿ SDTU ಸಂಘಟನೆಗಿರುವ ಗುರಿಯಲ್ಲಿ ಸಾಮಿಪ್ಯ ಇದೆ. ಹಾಗಾಗಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಮಟ್ಟದಲ್ಲಿ SDPI ಪಕ್ಷವನ್ನು ಬೆಂಬಲಿಸುತ್ತದೆ ನಮ್ಮ ಎಲ್ಲಾ ಯೂನಿಯನ್ ಸದಸ್ಯರು SDPI ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ SDTU ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪಾರ್ಲಿಯಾ, ಮಂಗಳೂರು ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, SDTU ಮಂಗಳೂರು ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆ ಉಪಸ್ಥಿತರಿದ್ದರು.

ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಕೇಂದ್ರಕ್ಕೆ ಸೇರಿದ್ದು

Posted by Vidyamaana on 2024-02-27 16:21:42 |

Share: | | | | |


ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಕೇಂದ್ರಕ್ಕೆ ಸೇರಿದ್ದು

ಪುತ್ತೂರು: ಪುತ್ತೂರಿನ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮತ್ತು ಪುತ್ತೂರು ಬಿಜೆಪಿಯಲ್ಲಿ ತನ್ಙ ಯಾಜಮಾನ್ಯ ಪುನರ್ ಸ್ಥಾಪಿಸಲು ಹೆಣಗಾಡುವ ಸಂಜೀವ ಮಠಂದೂರು ಅವರ, ಪ್ರಯತ್ನದ ಅಂಗವಾಗಿ ಅಡಿಕೆಯ ಬೆಲೆ ಕುಸಿತವನ್ನು ಬಳಸಿಕೊಂಡು ಕರ್ನಾಟಕ ಸರಕಾರವನ್ನು ರೈತ ವಿರೋಧಿ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸಿಯುತ್ತಿರುವ ಅಡಿಕೆ ಬೆಲೆಗೆ ಕರ್ನಾಟಕ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಲ್ಲಿ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ಒಂದು ಕಡೆ ಹೇಳುವ ಸಂಜೀವ ಮಠಂದೂರ್ರವರು ಎಪಿಎಂಸಿಯಲ್ಲಿ  ಸಂಗ್ರಹವಾಗುವ ಸೆಸ್ ಹಣ  ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಈ ಹಣದ ಆವರ್ತನ ನಿಧಿಯಿಂದ ರಾಜ್ಯ ಸರ್ಕಾರ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು ಎಂದು ಹೇಳುತ್ತಾರೆ. ಹೀಗೆ ಸ್ಪಷ್ಟತೆ ಇಲ್ಲದೆ ಮಾತನಾಡಿದ ಸಂಜೀವ ಮಠಂದೂರ್ರವರಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಂದರೆ ಏನು ಅನ್ನುವುದೇ ಗೊತ್ತಿಲ್ಲ. ಎಪಿಎಂಸಿಯಲ್ಲಿ ಏನು ಆಗುತ್ತಿದೆ ಅನ್ನುವುದೂ ಗೊತ್ತಿಲ್ಲ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕುಟುಕಿದರು.

ರಾಜ್ಯ ಸರ್ಕಾರ ನಿರ್ದಿಷ್ಟ ಬೆಳೆಯ ಮಾರುಕಟ್ಟೆ ದರ ಕುಸಿದಿರುವುದನ್ನು ಉಲ್ಲೇಖಿಸಿ ಕೇಂದ್ರ ಸರಕಾರಕ್ಕೆ ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿ ಶೇಕಡ 50:50ರ ಅನುಪಾತದ ಪಾಲುಗಾರಿಕೆಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಿದ್ದು ಇದೇ ವ್ಯವಸ್ಥೆಯಲ್ಲಿ. ಈಗ ಭಾರತದ ಗಡಿಗಳಲ್ಲಿ ವಿದೇಶೀ ಅಡಿಕೆ  ಭಾರತದ ಮಾರುಕಟ್ಟೆಗೆ ಕಳ್ಳಸಾಗಾಟದ ಮುಖಾಂತರ ಬಂದು ಮಾರುಕಟ್ಟೆ ದರ ತೀವ್ರವಾಗಿ ಕುಸಿದ ಈ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಲ್ಲಿ ರಾಜ್ಯ ಸರ್ಕಾರ ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಸಂಜೀವ ಮಠಂದೂರ್ರವರು ಒತ್ತಾಯಿಸುತ್ತಿರುವುದು ಮತ್ತು ಈಗ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಬೆಂಬಲ ಬೆಲೆಗಾಗಿ ಸರಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಹೇಳಿರುವುದು ನಗೆ ಪಾಟಲಿನ ವಿಚಾರವಾಗಿದೆ ಎಂದರು.

ಸಂಜೀವ ಮಠಂದೂರ್ರವರಿಗೆ ಈ ರಾಜ್ಯದಲ್ಲಿ ಏನು ಆಗುತ್ತಾ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಾವ ರೀತಿಯಲ್ಲಿ ರೈತರ ಪರವಾಗಿ ಕೆಲಸ ಮಾಡುತ್ತಿದೆ ಅನ್ನುವುದರ ಅರಿವೇ ಇಲ್ಲ. ಅವರು ದಯವಿಟ್ಟು ಮೊನ್ನೆ ನಡೆದ ಬಜೆಟ್ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾಡಿದ ಬಜೆಟ್ ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಬೇಕು. ಕೇಳುವುದಕ್ಕೆ ಸಾಧ್ಯವಿಲ್ಲವೆಂದಾದರೆ ಬಜೆಟ್ ಪ್ರತಿಯನ್ನು ಪಡೆದು ಅದನ್ನು ಓದಬೇಕು. ಈ ಬಾರಿಯ  ಕರ್ನಾಟಕ ರಾಜ್ಯ ಸರ್ಕಾರದ ಬಜೆಟಿನಲ್ಲಿ ಇತರ ಕೆಲವು ಬೆಳೆಗಳು ಸೇರಿದಂತೆ ಅಡಿಕೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವುದಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಅಧಿಕೃತವಾಗಿ ಮತ್ತು ಸ್ಪಷ್ಟವಾಗಿ ಘೋಷಿಸಿದ್ದಾರೆ.  ಇದರ ಅರಿವಿಲ್ಲದ ಮಾಜಿ ಶಾಸಕರು ಈಗ ಬೆಂಬಲೆ ಬೆಲೆಗಾಗಿ ಬೇಡಿಕೆ ಇಟ್ಟಿದ್ದಾರೆ. 

ಅಡಿಕೆಗೆ ಬೆಂಬಲ ಬೆಲೆ ನೀಡಬೇಕೆಂಬ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಆಗಿದೆ. ಆದ್ದರಿಂದ ಸಂಜೀವಣ್ಣ, ನಿದ್ದೆಯಿಂದ ಬೇಗ ಏಳಬೇಕಿತ್ತು ಎಂದು ಲೇವಡಿ ಮಾಡಿದರು.

ಕರ್ನಾಟಕ ಸರಕಾರದ ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಇರುವುದು ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ. ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆಯೇ ಹೊರತು ರಾಜ್ಯ ಸರಕಾರದಿಂದ ಯಾವ ನಿರ್ಲಕ್ಷವೂ ಆಗಿಲ್ಲ. ಸಂಜೀವ ಮಠಂದೂರ್ರವರಿಗೆ ಈ ಹಂತದಲ್ಲಿ ಅಡಿಕೆಗೆ ಬೆಂಬಲ ಬೆಲೆ ಸಿಗಬೇಕೆಂಬ  ಅವರ ಮಾತಿನಲ್ಲಿ ಕಿಂಚಿತ್ತಾದರೂ ಸತ್ಯ ಇರುವುದಾದರೆ, ಅಡಿಕೆ ಬೆಳೆಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇರುವುದಾದರೆ ಅವರು ಒತ್ತಾಯ ಮಾಡಬೇಕಾಗಿರುವುದು ಕರ್ನಾಟಕ ಕಾಂಗ್ರೆಸ್ ಸರಕಾರವನ್ನಲ್ಲ,  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಆಡಳಿತವನ್ನು. ಕಳ್ಳ ಸಾಗಾಟದ ಮೂಲಕ ದೇಶವನ್ನು ಪ್ರವೇಶಿಸಿ ಇಲ್ಲಿನ ಅಡಿಕೆ ಮಾರುಕಟ್ಟೆಯನ್ನು ಕೆಡಿಸುತ್ತಿರುವ ವಿದೇಶೀ ಅಡಿಕೆಯನ್ನು ದೇಶ ಪ್ರವೇಶಿಸದಂತೆ ತಡೆಯುವುದಕ್ಕೆ ಸಾದ್ಯವಾಗದ ಕೇಂದ್ರ ಸರಕಾರದ ವೈಫಲ್ಯಗಳನ್ನು ಮರೆಮಾಚಿ ಜನರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ಸಂಜೀವ ಮಠಂದೂರು ಈ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದರು.

ಅಕ್ರಮ ಅಡಕೆ ಅಂದರೆ ಕಳ್ಳಸಾಗಾಣಿಕೆಯೇ!!:

ಅಡಿಕೆ ಮಾರುಕಟ್ಟೆ ಪುನಶ್ಚೇತನಕ್ಕೆ ಈಗ ಆಗಬೇಕಾಗಿರುವುದಾದರೂ ಏನು?: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರಿಂದ ತೊಡಗಿ ಅಡಿಕೆಯ ಕಟ್ಟ ಕಡೆಯ ಕೃಷಿಕರವರೆಗೆ  ಭಾರತಕ್ಕೆ ಕಳ್ಳ ಸಾಗಾಣಿಕೆಯ ಮೂಲಕ ಅವ್ಯಾಹತವಾಗಿ  ಕಳಪೆ ಗುಣಮಟ್ಟದ ಅಡಿಕೆ ಪೂರೈಕೆ ಆಗುತ್ತಿದೆ. ಈ ಕಳಪೆ ಗುಣಮಟ್ಟದ ಅಡಿಕೆಯನ್ನು ನಮ್ಮ ರೈತರು ಬೆಳೆದ ಶ್ರೇಷ್ಠ ಗುಣಮಟ್ಟದ ಅಡಿಕೆಗೆ ಮಿಶ್ರಣ ಮಾಡಿ, ಅಡಿಕೆಯ ಮಾರುಕಟ್ಟೆಯನ್ನು ಹಾಳುಗೆಡಹಿ ಅಡಿಕೆಯ ಬೆಲೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ತಕ್ಷಣ ದೇಶದ ಗಡಿಗಳನ್ನು ಭದ್ರಪಡಿಸಿ, ವಿದೇಶೀ ಅಡಿಕೆಯ ಅಕ್ರಮ ಕಳ್ಳಸಾಗಾಟವನ್ನು ತಡೆದು, ತನ್ಮೂಲಕ ಅಡಿಕೆಯ ಕಲಬೆರಕೆಯನ್ನು ನಿಲ್ಲಿಸಿ ಮಾರುಕಟ್ಟೆ ಚೇತರಿಕೆಗೆ ಕ್ರಮ ಕೈಗೊಳ್ಳುವುದೇ ಅಡಿಕೆ ಮಾರುಕಟ್ಟೆಯ ಪುನಶ್ಚೇತನಕ್ಕೆ ಅಗತ್ಯವಾಗಿ ಆಗಬೇಕಾಗಿರುವುದಾಗಿದೆ. ಇದನ್ನೇ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಹೇಳಿದ್ದಾರೆ. ಯಾವ ಕ್ಷಣದಲ್ಲಿ ಸಂಜೀವ ಮಠಂದೂರ್ರವರು ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರೋ ಅದರ ಮರು ದಿವಸವೇ ಕ್ಯಾಂಪ್ಕೋ ಅಧ್ಯಕ್ಷರು ಅಡಿಕೆ ಮಾರುಕಟ್ಟೆಯ ಪುನಶ್ಚೇತನಕ್ಕೆ ಕಳ್ಳ ಸಾಗಾಣಿಕೆಯನ್ನು  ತಡೆಯುವಬೇಕು ಎಂದು ಹೇಳಿಕೆ ನೀಡಿ ಸಂಜೀವ ಮಠಂದೂರ್ರವರ ವಾದವನ್ನು ಸುಳ್ಳು ಎಂದು ನಿರೂಪಿಸಿದ್ದಾರೆ ಎಂದರು.

ಅಡಿಕೆಯ ಕಳ್ಳ ಸಾಗಾಣಿಕೆಯಿಂದಾಗಿ  ಅಡಿಕೆಯ ಮಾರುಕಟ್ಟೆ ಕುಸಿದಿದೆ ಎಂದು ಕ್ಯಾಂಪ್ಕೋದ ಅಧ್ಯಕ್ಷರೇ ಮತ್ತೆ ಮತ್ತೆ ಹೇಳುತ್ತಿದ್ದರೂ  ದಕ್ಷಿಣ ಕನ್ನಡ ಜಿಲ್ಲೆಯ ಸಂಸತ್ ಸದಸ್ಯರಾದ ಮಾನ್ಯ ನಳಿನ್ ಕುಮಾರ್ ಕಟೀಲ್ ಆಗಲಿ ಕೇಂದ್ರದ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆಯವರಾಗಲಿ ಈ ವಿಚಾರದಲ್ಲಿ ಯಾಕೆ ಬಾಯಿಯನ್ನೇ ಬಿಡುತ್ತಿಲ್ಲ?  ಅಡಿಕೆ ಕಳ್ಳ ಸಾಗಾಣಿಕೆಯ ಕಿಂಗ್ ಪಿನ್ನುಗಳು ಇವರ ಬಾಯಿಯನ್ನು ಮುಚ್ಚಿದ್ದಾರೆಯೇ?  ಊರಿಗೆಲ್ಲ ತಿಳಿದಿರುವಂತೆ ಬಿಜೆಪಿಯ ದೊಡ್ಡ ದೊಡ್ಡ ಕುಳಗಳು  ಅಡಿಕೆ ಮಾರುಕಟ್ಟೆಯಲ್ಲಿ ಕೈಯಾಡಿಸುತ್ತಿರುವುದೇ ಇದಕ್ಕೆ ಕಾರಣ. ಬಿಜೆಪಿಯ ಚುನಾವಣಾ ಚಾಣಕ್ಯರ ಸುಪುತ್ರ ನಡೆಸುತ್ತಿರುವ ಅಡಿಕೆ ವ್ಯವಹಾರಕ್ಕೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದಲೇ ಈ ಅಡಿಕೆ ಕಳ್ಳ ಸಾಗಾಣಿಕೆಯನ್ನು ಕೇಂದ್ರ ಸರಕಾರ  ಕಂಡು ಕಾಣದಂತೆ ಕಣ್ಣು ಮುಚ್ಚಿ  ಕುಳಿತಿದೆ.  ಇದೇ ಕಾರಣಕ್ಕಾಗಿಯೇ ಕ್ಯಾಂಪ್ಕೋ ಅಧ್ಯಕ್ಷರಾದಿಯಾಗಿ ಬಿಜೆಪಿಯವರೆಲ್ಲರೂ  ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ ಎಂದು ಹೇಳುತ್ತಾರಷ್ಟೇ ಹೊರತು  ಅಂತರಾಷ್ಟ್ರೀಯ ಗಡಿಗಳಲ್ಲಿ ವಿದೇಶಿ ಅಡಿಕೆ ಕಳ್ಳ ಸಾಗಾಣಿಕೆಯಾಗಿ ಭಾರತಕ್ಕೆ  ಬಂದು ನಮ್ಮ ಮಾರುಕಟ್ಟೆಯನ್ನು ಹಾಳುಗೆಡಹುತ್ತಿದೆ ಎಂದು ಹೇಳುತ್ತಿಲ್ಲ . ಅಕ್ರಮ ಆಮದು ಎಂದರೆ ಕಳ್ಳ ಸಾಗಾಣಿಕೆಯಲ್ಲದೆ ಮತ್ತೇನು ? ಎಂದು ಪ್ರಶ್ನಿಸಿದರು.

ಎ.ಪಿ.ಎಂ.ಸಿ. ಸೆಸ್ : 

ಎಪಿಎಂಸಿಯಲ್ಲಿ ಸೆಸ್ ರೂಪದಲ್ಲಿ ಹಣ ಸಂಗ್ರಹವಾಗುತ್ತದೆ,  ಈ ಹಣ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ,  ಈ ಹಣದಲ್ಲಿ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಬೇಕು ಎಂದು ಹೇಳುತ್ತಿರುವ ಮಾನ್ಯ ಸಂಜೀವ ಮಠಂದೂರ್ರವರಿಗೆ  ಎಪಿಎಂಸಿಯ ಪರಿಸ್ಥಿತಿಯ ಬಗ್ಗೆ ಯಾವುದೇ ರೀತಿಯ ತಿಳುವಳಿಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಪಿಎಂಸಿಯಲ್ಲಿ ಸೆಸ್ ರೂಪದಲ್ಲಿ  ಸಂಗ್ರಹವಾಗುವ  ಹಣ ಇಂದು ರಾಜ್ಯ ಸರ್ಕಾರಕ್ಕೆ ಹೋಗುತ್ತಿಲ್ಲ.  ಸೆಸ್ ಹಣ ಒಂದಷ್ಟು ರಸ್ತೆಗಳನ್ನು ನಿರ್ಮಿಸುವುದಕ್ಕೆ ಎಪಿಎಂಸಿ ಸದಸ್ಯರಿಗೆ ನೀಡುವ ಅನುದಾನ, ರೈತರು ಅಪಘಾತದಿಂದ ಅಕಾಲಿಕ ಮರಣ ಹೊಂದಿದಾಗ ನೀಡುವ ಪರಿಹಾರ, ಇತ್ಯಾದಿ ಬಳಕೆಗೆ ಎಪಿಎಂಸಿ ಸೆಸ್ ಹಣ ಬಳಕೆಯಾಗುತ್ತದೆಯಷ್ಟೇ ಹೊರತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆ ಹಣ ಹೋಗುತ್ತಿಲ್ಲ ಎನ್ನುವ  ಪ್ರಾಥಮಿಕ ಜ್ಞಾನವೂ ಮಾಜಿ ಶಾಸಕರಿಗೆ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. ಕೇಂದ್ರ ಸರಕಾರ 3 ಕರಾಳ  ಕೃಷಿ ಕಾಯಿದೆಗಳನ್ನು ತಂದು ಎಪಿಎಂಸಿ ಕಾಯ್ದೆಯನ್ನ ತಿದ್ದುಪಡಿ ಮಾಡುವವರೆಗೆ ಎಪಿಎಂಸಿಗೆ ಸೆಸ್ ರೂಪದಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ  ಆದಾಯ ಬರುತ್ತಿತ್ತು.  ಕೇಂದ್ರ ಸರ್ಕಾರವನ್ನು ಅನುಸರಿಸಿ ಕರ್ನಾಟಕ ರಾಜ್ಯವನ್ನು ಆಗ ಆಳುತ್ತಿದ್ದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ  ಕರ್ನಾಟಕ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದು,   ರೈತರ ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ಈ ವಿವಾದಿತ ಎಪಿಎಂಸಿ ಮಸೂದೆಯನ್ನು ಹಿಂತೆಗೆದುಕೊಂಡರೂ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ತಾನು ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಂಡಿರಲಿಲ್ಲ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು  ಎಪಿಎಂಸಿಯಲ್ಲಿಯೇ  ಮಾರಾಟ ಮಾಡಬೇಕೆಂದೇನಿಲ್ಲ , ಎಲ್ಲಿ ಬೇಕಿದ್ದರೂ ಮಾರಬಹುದು ಎಂಬ ಕಾನೂನು ಬಂದ ನಂತರ ನಗರ ಮತ್ತು ಹಳ್ಳಿಗಳ ಅಡಿಕೆ ವ್ಯಾಪಾರಿಗಳ ಮೇಲಿದ್ದ ಎಪಿಎಂಸಿ ಹಿಡಿತ ತಪ್ಪಿ ಹೋಗಿ ಏಪಿಎಂಸಿಗೆ ಬರುತ್ತಿದ್ದ ಆದಾಯ ಕುಸಿದು ಹೋಯಿತು. ಇದರ ಜೊತೆಗೆ 2020ರಲ್ಲಿ  ಬಿಜೆಪಿ ಸರಕಾರವು 1.5℅  ಇದ್ದ ಸೆಸ್ ಧರವನ್ನು 1℅ ಕ್ಕೆ , ತದನಂತರ 0.35ಕ್ಕೆ ಇಳಿಸಿ  ಎಪಿಎಂಸಿ ಆದಾಯವನ್ನು ಕನಿಷ್ಠ ಮಟ್ಟಕ್ಕೆ ತಂದು ಹಾಕಿತು. 2020ನೇ ಇಸವಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಅಂದಿನ ಬಿಜೆಪಿ ಸರಕಾರದ ಕಾನೂನು ಸಚಿವರಾದ ಮಾಧುಸ್ವಾಮಿಯವರು ವ್ಯಾಪಾರಿಗಳ ಒತ್ತಡದಿಂದಾಗಿ ಈ ಸೆಸ್ ದರವನ್ನು ಇಳಿಕೆ ಮಾಡಲಾಗಿದೆ ಮತ್ತು ಇದರಿಂದಾಗಿ ಎಪಿಎಂಸಿಯನ್ನು ನಡೆಸುವುದೇ ನಮಗೆ ಕಷ್ಟವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದನ್ನು ಗಮನಿಸಬಹುದಾಗಿದೆ. ಹೀಗಿದ್ದರೂ ಸಂಜೀವ ಮಠಂದೂರ್ರವರು ಎಪಿಎಂಸಿ ಸೆಸ್ ಹಣದಲ್ಲಿ ಬೆಂಬಲ ಬೆಲೆ ನೀಡಿ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.

ಅಡಿಕೆ ಬೆಳೆಗಾರರ ಲಾಬಿಯಂತೆ :  

ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರ್ರವರು, ಅಡಿಕೆ ವ್ಯಾಪಾರಿಗಳ ಲಾಬಿ ಇದೆ, ಬೆಳೆಗಾರರ ಲಾಬಿ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ.  ಈ ಮಾತನ್ನು ಹೇಳಲು ಅವರಿಗೆ ನಾಚಿಕೆ ಆಗಬೇಕು.  ವ್ಯಾಪಾರಿಗಳ ಲಾಭಿಯನ್ನು ವ್ಯಾಪಾರಿಗಳೇ ತಮ್ಮ ಹಣ ಬಲದಿಂದ ಮಾಡುತ್ತಾರೆ.  ಆದರೆ ಅಡಿಕೆ ಬೆಳೆಗಾರರ ಲಾಭಿಯನ್ನು ಮಾಡಬೇಕಾದವರು ಯಾರು?  ಅಡಿಕೆ ಬೆಳೆಗಾರರ ಲಾಬಿಯನ್ನು ಮಾಡಬೇಕಾದವರು ನಮ್ಮ ಜನಪ್ರತಿನಿಧಿಗಳು. ಅಡಿಕೆ ಬೆಳೆಗಾರರಿಗೆ ಸಮಸ್ಯೆ ಬಂದಾಗ, ಅಡಿಕೆ ಮಾರುಕಟ್ಟೆ ಕುಸಿದು ಹೋದಾಗ, ಸರಕಾರಗಳಿಗೆ ಒತ್ತಡವನ್ನು ತಂದು, ಬೆಳಗಾರರ ಹಿತರಕ್ಷಣೆಗೆ ಜನಪ್ರತಿನಿಧಿಗಳೇ ಪ್ರಯತ್ನಿಸಬೇಕು. ಇದೇ ಲಾಬಿ.  ಇಂದು ಅಡಿಕೆ ಬೆಳೆಗಾರರಿಗೆ ಲಾಬಿ ಇಲ್ಲ ಎಂದು ಹೇಳುತ್ತಿರುವ ಮಾನ್ಯ ಸಂಜೀವ ಮಠಂದೂರ್ರವರು  ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಯಾವುದೇ ಲಾಬಿಯನ್ನು ಮಾಡಿದವರಲ್ಲ.  ವಿಧಾನಸಭೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಯಾವುದೇ ಒತ್ತಡವನ್ನು ಸರಕಾರದ ಮೇಲೆ ತಂದಿಲ್ಲ.  "ಅಡಿಕೆ ಒಂದು ಜಗಿದು ಉಗಿಯುವ ವಸ್ತು" ಎಂದು ಮತ್ತೆ ಮತ್ತೆ ಹೀಯಾಳಿಸಿದವರು ಮಾನ್ಯ ಸಂಜೀವ ಮಠಂದೂರ್ರವರು.  ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ  ಪತ್ರಕರ್ತರ ತೀವ್ರ ಆಕ್ಷೇಪದ ಹೊರತಾಗಿಯೂ ಮಾನ್ಯ ಸಂಜೀವ ಮಠಂದೂರ್ರವರು  "ಅಡಿಕೆ ಒಂದು ಜಗಿದು ಉಗುಳುವ ವಸ್ತು" ಎಂದು ಮತ್ತೆ ಮತ್ತೆ ಪ್ರತಿಪಾದಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಅಡಿಕೆಯನ್ನು ಹೀಯಾಳಿಸಿದವರು ಅಡಿಕೆ ಬೆಳೆಗಾರರ ಪರವಾಗಿ ಇರುವುದಕ್ಕೆ ಸಾಧ್ಯವೇ?  ಕಳೆದ ವರ್ಷ ನಡೆದ ಕ್ಯಾಂಪ್ಕೋ  ಮಹಾಸಭೆಯಲ್ಲಿ ಮಾನ್ಯ ಸಂಜೀವ ಮಠಂದೂರ್ರವರು  ಎಲೆ ಚುಕ್ಕಿ ರೋಗ ಮತ್ತು  ಅಡಿಕೆಯ ಹಳದಿ ರೋಗಕ್ಕೆ  ಸಂಶೋಧನೆಗಳನ್ನು ನಡೆಸಬೇಕೆಂದು  ಒತ್ತಾಯಿಸಿದಾಗ ಸಭಾಧ್ಯಕ್ಷತೆಯನ್ನು ವಹಿಸಿದ್ದ ಕ್ಯಾಂಪ್ಕೋದ ಅಧ್ಯಕ್ಷರು  ನಾವು 3-4 ಬಾರಿ ಒತ್ತಾಯಿಸಿದರೂ ಅಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ನೀವೆಷ್ಟು ಮಾತನಾಡಿದ್ದೀರಿ ಎಂದು ಛೇಡಿಸುವ ಮೂಲಕ  ಮಾನ್ಯ ಸಂಜೀವ ಮಠಂದೂರ್ರವರ ನಿಜ ಬಣ್ಣವನ್ನು ಸಾರ್ವಜನಿಕವಾಗಿ ಬಯಲುಗೊಳಿಸಿದ್ದರು. ಅಡಿಕೆಯನ್ನು ಜಗಿದು ಉಗಿಯುವ ವಸ್ತು ಎಂದು ಹೀಯಾಳಿಸಿ ಬೆಳೆಗಾರರ ಮನಸ್ಸನ್ನು ನೋಯಿಸಿದ ಕಾರಣಕ್ಕಾಗಿಯೇ ಅವರನ್ನು ಅವರ ಕಳೆದ ಚುನಾವಣೆಯಲ್ಲಿ ಪಕ್ಷ ಜಗಿದು ಉಗಿದಿದೆ. ಅಡಿಕೆ ಬೆಳೆಗಾರರ ಪರವಾದ ಲಾಭಿ ಮಾಡುವುದೆಂದರೆ  ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಸಮರ್ಥವಾಗಿ ಸರಕಾರಗಳ ಮುಂದೆ ಇಡುವುದು. ವ್ಯಾಪಾರಿಗಳು ಹಣಬಲದಿಂದ ತಮ್ಮ ಲಾಬಿಯನ್ನು ನಡೆಸಿದರೆ ಜನಪ್ರತಿನಿಧಿಗಳು ಜನ ಬಲದಿಂದ ಬೆಳೆಗಾರರ ಲಾಬಿಯನ್ನು ನಡೆಸಬೇಕಾಗಿದೆ. ಈಗ ಅಡಿಕೆ ಬೆಳೆಗಾರರ ಪರವಾದ ಲಾಬಿ ಪುತ್ತೂರಿನಿಂದ  ಆರಂಭವಾಗಿದೆ. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈಯವರು ಅಡಿಕೆ ಬೆಳೆಗಾರರ ಪರವಾದ ಲಾಬಿಯ ನೇತೃತ್ವವನ್ನು ವಹಿಸಿದ್ದಾರೆ. ತಾವು ಎದುರಿಸಿದ ಮೊದಲನೆಯ ಅಧಿವೇಶನದಲ್ಲಿಯೇ ಅಡಿಕೆ ಹಳದಿ ರೋಗದ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಮಾನ್ಯ ಶಾಸಕರು, ಇತ್ತೀಚೆಗೆ ಅಡಕೆಯ ಕಲಬೆರಕೆಯ ವಿಚಾರದಲ್ಲಿ ಧ್ವನಿ ಎತ್ತಿ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದು ಅಡಿಕೆಯ ಆಮದು ನಿಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಅಡಿಕೆ ಕಳ್ಳಸಾಗಾಣಿಕೆಯ ವಿರುದ್ಧ ಮಾತನಾಡಿದ ಮೊದಲ ಮತ್ತು ಏಕೈಕ ಶಾಸಕರಾಗಿದ್ದಾರೆ.  ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ತೊಡಕಾಗಿರುವ ಕುಮ್ಕಿ ಭೂಮಿಯ ವಿಚಾರವನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಮಂಡಿಸಿ ಕುಮ್ಕಿ ಭೂಮಿಯನ್ನು ಸಕ್ರಮಗೊಳಿಸಿ ರೈತರಿಗೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಮೊನ್ನೆ ನಡೆದ ಬಜೆಟ್ ಅಧಿವೇಶಕ್ಕೆ  ಪೂರ್ವಭಾವಿಯಾಗಿ,  ಸರಕಾರದ ಮೇಲೆ ಒತ್ತಡ ತಂದು,  ಬಜೆಟ್ ಭಾಷಣದಲ್ಲಿ ಅಡಿಕೆಯ ಬೆಂಬಲ ಬೆಲೆಯ ವಿಚಾರ ಪ್ರಸ್ತಾಪವಾಗುವುದಕ್ಕೆ, ಅಡಿಕೆಯ ಬೆಂಬಲ ಬೆಲೆಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾಪನೆಯನ್ನು ಈಗಾಗಲೇ ಸಲ್ಲಿಸಲಿರುವುದಕ್ಕೆ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಮೂಲ ಕಾರಣಕರ್ತರಾಗಿದ್ದಾರೆ. ಸಂಜೀವ ಮಠಂದೂರ್ರವರು ಅಡಿಕೆ ಬೆಳೆಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ತೊರೆದು ಇನ್ನಾದರೂ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ್ ಶೆಟ್ಟಿ, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಎಪಿಎಂಸಿ ಮಾಜಿ ಸದಸ್ಯ ಶಶಿಕಿರಣ್ ರೈ ಉಪಸ್ಥಿತರಿದ್ದರು.

ಹತ್ತೂರ ಒಡೆಯನ ಸಮಕ್ಷಮದಲ್ಲಿ ಸಂಪನ್ನಗೊಳ್ಳಲಿದೆ ಭಕ್ತಿ ಭಾವದ ಶ್ರೀನಿವಾಸ ಕಲ್ಯಾಣೋತ್ಸವ

Posted by Vidyamaana on 2023-12-21 06:27:24 |

Share: | | | | |


ಹತ್ತೂರ ಒಡೆಯನ ಸಮಕ್ಷಮದಲ್ಲಿ ಸಂಪನ್ನಗೊಳ್ಳಲಿದೆ ಭಕ್ತಿ ಭಾವದ ಶ್ರೀನಿವಾಸ ಕಲ್ಯಾಣೋತ್ಸವ

ಪುತ್ತೂರು : ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರು ಗದ್ದೆಯಲ್ಲಿ ಡಿ.24 ಮತ್ತು 25 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ನಡೆಯುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ  ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವುದು. ಡಿ.24ರಂದು ಬೆಳಿಗ್ಗೆ 6.30ರಿಂದ ಭಜನಾ ಕಾರ್ಯಕ್ರಮ. ಸಂಜೆ 4ಗಂಟೆಗೆ ನಗರದ ಬೊಳುವಾರಿನಲ್ಲಿ ಶ್ರೀದೇವಿ,ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಭಕ್ತಿಪೂರ್ವಕ ಸ್ವಾಗತಿಸಿ, ಬಳಿಕ ಅಲ್ಲಿಂದ ಮಹಾಲಿಂಗೇಶ್ವರ ದೇವಳದ ಗದ್ದೆ ತನಕ ಪುಷ್ಪವೃಷ್ಠಿ, ವಿದ್ವಾಂಸರ ವೇದಪಠಣ,ಶಂಕನಾದ, ಚೆಂಡೆವಾದ್ಯಗಳ ಪೋಷದೊಂದಿಗೆ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಸಂಜೆ 5.30ಕ್ಕೆ ದ.ಕ.ಮತ್ತು ಉಡುಪಿ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸನಾತನ ಸಮಾಗಮ ಕಾರ್ಯಕ್ರಮ ನೆಡೆಯಲಿದೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ,ಆನೆಗುಂಡಿ ಮಹಾಸಂಸ್ಥಾನಂ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಮಂಗಳೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಅರೆಮಾದೇನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕನ್ಯಾನ ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಕನ್ಯಾಡಿ ಮಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ವಿಟ್ಲ ಯೋಗೀಶ್ವರ ಮಠದ ರಾಜಗುರು ಯೋಗಿ ಶ್ರದ್ಧಾನಾಥ ಜೀ, ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಕೃಷ್ಣ ಗುರೂಜಿ ಭಾಗವಹಿಸುವರು.  ಬಳಿಕ ರಾಜ್ಯದ ಪ್ರತಿಷ್ಠಿತ ತಂಡಗಳಿಂದ ಸಾಂಸ್ಕೃತಿ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯುವುದು ಎಂದು ಅವರು ತಿಳಿಸಿದರು.


ಡಿ.25ರಂದು ಬೆಳಿಗ್ಗೆ 6ಗಂಟೆಗೆ ಸುಪ್ರಭಾತ ಪೂಜೆ ಆರಂಭಗೊಳ್ಳುವುದು.ಅಪರಾಹ್ನ ಗಂಟೆ 2ರಿಂದ ಭಜನೋತ್ಸವ ನಡೆಯಲಿದೆ.ಸಂಜೆ 6ಗಂಟೆಗೆ ವೈಭವದ ಕಲ್ಯಾಣೋತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸುಮಾರು 50 ಸಾವಿರ ಮಂದಿಗೆ ಲಡ್ಡು ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.


ಹೊರೆಕಾಣಿಕೆ ಸಮರ್ಪಣೆ

ಡಿ.23ರಂದು ಗ್ರಾಮ ಮಟ್ಟಗಳಲ್ಲಿ ಹೊರೆಕಾಣಿಕೆ ಸಂಗ್ರಹಿಸಿ, ಸಂಜೆ 5 ಗಂಟೆಗೆ ನಗರದ ದರ್ಬೆ ಯಿಂದ ಮಹಾಲಿಂಗೇಶ್ವರ ದೇವಳ ಗದ್ದೆ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಕಾರ್ಯಕ್ರಮಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ನೀಡಿ ಅನ್ನದಾನಕ್ಕೆ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಿಕೊಂಡರು.


ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು, ಸ್ವಯಂ ಸೇವಕ ಸಮಿತಿಯ ಸಂಚಾಲಕ ಅನಿಲ್ ತೆಂಕಿಲ, ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಸಂಚಾಲಕ ನವೀನ್ ರೈ ಪಂಜಳ, ಕಾರ್ಯದರ್ಶಿ ಪ್ರಜ್ವಲ್ ಘಾಟೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.



Leave a Comment: