ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ

Posted by Vidyamaana on 2023-12-13 21:29:16 |

Share: | | | | |


ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ

ನವದೆಹಲಿ: ಇಂದು ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಕುರ್ಚಿಯತ್ತ ನುಗ್ಗಿದ ಇಬ್ಬರು ಕಿಡಿಗೇಡಿಗಳಲ್ಲಿ ಓರ್ವ ಸಂಸದ ಪ್ರತಾಪ್​ ಸಿಂಹ ಹೆಸರಲ್ಲಿ ವಿಸಿಟರ್​ ಪಾಸ್​ ಪಡೆದಿದ್ದು, ಈ ವಿಚಾರವಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವ ಪ್ರತಾಪ್​ ಸಿಂಹ ವಿವರಣೆ ನೀಡಿದ್ದಾರೆ.ಘಟನೆಯ ಬೆನ್ನಲ್ಲೇ ಇಂದು ಸಂಜೆ ಸ್ಪೀಕರ್​ ಕಚೇರಿಗೆ ತೆರಳಿದ ಪ್ರತಾಪ್​ ಸಿಂಹ, ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.


ಸಾಗರ್ ಶರ್ಮಾ, ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇದನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಸ್ಪೀಕರ್​ ಮುಂದೆ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಇಂದು ಸದನದ ಒಳಗೆ ಕಲರ್​ ಗ್ಯಾಸ್​ ಕ್ಯಾನಿಸ್ಟರ್​ನಿಂದ ಗದ್ದಲ ಎಬ್ಬಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇದರಲ್ಲಿ ಸಾಗರ್​ ಶರ್ಮಾ ಬಳಿ

ಪ್ರತಾಪ್​ ಸಿಂಹ ವಿಸಿಟರ್​ ಪಾಸ್​ ಪತ್ತೆಯಾಗಿದ್ದು, ಈ ವಿಚಾರವನ್ನು ಉಚ್ಛಾಟಿತ ಬಿಎಸ್​ಪಿ ಸಂಸದ ಡ್ಯಾನಿಶ್​ ಅಲಿ ಮಾಧ್ಯಮಗಳ ಮೂಲಕ ಬೆಳಕಿಗೆ ತಂದರು. ಬಳಿಕ ಪ್ರತಿಪಕ್ಷಗಳು ಪ್ರತಾಪ್​ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಗೆ ಕಾಂಗ್ರೆಸ್​ ಕಾರ್ಯಕರ್ತರು ಮುತ್ತಿಗೆ ಸಹ ಹಾಕಿದ್ದಾರೆ. ಮುತ್ತಿಗೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಕೃತ್ಯಕ್ಕೆ ಸಂಸದರೇ ನೇರ ಹೊಣೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಸಂಸದರ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸದನದ ಒಳಗೆ ಗದ್ದಲ ಏರ್ಪಟ್ಟ ಸಂದರ್ಭದಲ್ಲೇ ಸಂಸತ್ತಿನ ಹೊರಭಾಗದಲ್ಲಿ ಓರ್ವ ಮಹಿಳೆ ಮತ್ತು ಯುವಕ ಕಲರ್ ಗ್ಯಾಸ್​ ಸಿಂಪಡಿಸಿ, ಘೋಷಣೆ ಕೂಗಿ

ಪ್ರತಿಭಟನೆ ನಡೆಸಿದರು. ಇವರನ್ನು ಅನ್ಮೋಲ್​ ಶಿಂಧೆ ಮತ್ತು ನೀಲಂ ಎಂದು ಗುರುತಿಸಲಾಗಿದೆ. ನಾಲ್ವರು ಸಹ ಒಬ್ಬರಿಗೊಬ್ಬರು ಪರಿಚಿತರು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕದಲ್ಲಿದ್ದ ನಾಲ್ವರು ಸಂಚು ರೂಪಿಸಿದ್ದರು. ಈ ಸಂಚಿನಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ. ಇಬ್ಬರು ಸದನದ ಒಳಗೆ, ಮತ್ತಿಬ್ಬರು ಸಂಸತ್ತಿನ ಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದರೆ, ಇನ್ನಿಬ್ಬರು ಶಂಕಿತರು ಪರಾರಿಯಾಗಿದ್ದಾರೆ. ಅವರಿಗಾಗಿ ತನಿಖಾ ಏಜೆನ್ಸಿಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.


ಐವರು ವ್ಯಕ್ತಿಗಳು ಗುರುಗ್ರಾಮ್‌ನಲ್ಲಿ ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಐವರ ಗುರುತು ದೃಢಪಟ್ಟಿದ್ದು, ಆರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.ಶಂಕರ್​ ಲಾಲ್​ ಶರ್ಮರ ಪುತ್ರ ಸಾಗರ್​ ಶರ್ಮ ಎಂಬಾತ ಮೈಸೂರು ಲೋಕಸಭಾ ಸಂಸದ ಪ್ರತಾಪ್​ ಸಿಂಹ ಹೆಸರಿನಲ್ಲಿ ಪಾಸ್​ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಆಗಮಿಸಿದ್ದ. ಮತ್ತೊಬ್ಬ ಆರೋಪಿ ಮನೋರಂಜನ್​ ಡಿ ಮೈಸೂರಿನ ನಿವಾಸಿ. ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಇ ವ್ಯಾಸಾಂಗ ಮಾಡಿದ್ದಾನೆ. ಇವರಿಬ್ಬರು ಪ್ರೇಕ್ಷಕರ ಗ್ಯಾಲರಿಯ ಚೇಂಬರ್​ನಿಂದ ಜಿಗಿದು ಸ್ಪೀಕರ್​ ಕುರ್ಚಿಯತ್ತ ನುಗ್ಗಿದರು. ತಕ್ಷಣ ಅವರನ್ನು ಅಲ್ಲಿಯೇ ಇದ್ದ ಕೆಲವು ಸಂಸದರು ಹಿಡಿದುಕೊಂಡರು.


ಸಂಸತ್ತಿನ ಹೊರಗಡೆ ಕಲರ್​ ಗ್ಯಾಸ್​ ಸಿಂಪಡಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ನೀಲಂ ಎಂಬಾಕೆ, ಹರಿಯಾಣದ ಹಿಸರ್​ನಲ್ಲಿ ಪಿಜಿಯಲ್ಲಿ ವಾಸವಿದ್ದಳು. ಹರಿಯಾಣದ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿದ್ದಳು. ಇನ್ನೊಬ್ಬ ಆರೋಪಿ ಅನ್ಮೋಲ್​ ಶಿಂಧೆ ಮಹಾರಾಷ್ಟ್ರ ಲಾತೂರ್ ಜಿಲ್ಲೆಯವನು. ನೀಲಂ ಅಥವಾ ಅನ್ಮೋಲ್ ಮೊಬೈಲ್ ಫೋನ್ ತಂದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಬಳಿ ಯಾವುದೇ ಬ್ಯಾಗ್ ಅಥವಾ ಗುರುತಿನ ಪುರಾವೆಯೂ ಇರಲಿಲ್ಲ. ಅವರು ತಾವಾಗಿಯೇ ಸಂಸತ್ತನ್ನು ತಲುಪಿದರು ಮತ್ತು ಯಾವುದೇ ಸಂಘಟನೆಯೊಂದಿಗೆ ತಮ್ಮ ಸಂಪರ್ಕವನ್ನು ನಿರಾಕರಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಮುಂದುವರಿದಿದೆ.


ಲೋಕಸಭೆ ಸ್ಪೀಕರ್​ ಹೇಳಿದ್ದೇನು?

ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು

ಬಾಯಿ ಹುಣ್ಣಿಗೆ ಮನೆಮದ್ದು ಹಾಗೂ ಆಯುರ್ವೇದ ಪರಿಹಾರಗಳು

Posted by Vidyamaana on 2023-02-05 02:44:35 |

Share: | | | | |


ಬಾಯಿ ಹುಣ್ಣಿಗೆ ಮನೆಮದ್ದು ಹಾಗೂ ಆಯುರ್ವೇದ ಪರಿಹಾರಗಳು

ಬಾಯಿ ಹುಣ್ಣು ಒಂದು ಸಾಮಾನ್ಯ ಸಮಸ್ಯೆ. ಬಾಯಿ ಹುಣ್ಣು ಇದ್ದರೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಉಪ್ಪು ಮಸಾಲೆ ಇದ್ದರಂತೂ ಉರಿಯುತ್ತದೆ. ಆಹಾರವನ್ನು ಜಗಿಯಲೂ ಕಷ್ಟವಾಗುತ್ತದೆ, ಅಲ್ಲದೆ ಮಾತನಾಡಲೂ ಕಷ್ಟವಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಕೆಲವರಿಗೆ ಪದೇ ಪದೇ ಕಾಡುತ್ತಿದ್ದರೆ ಮತ್ತೆ ಕೆಲವರಿಗೆ ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.

ಬಾಯಿಯ ಹುಣ್ಣು ಏಕೆ ಬರುತ್ತದೆ?

ಬಾಯಿ ಹುಣ್ಣಿಗೆ ನಿರ್ದಿಷ್ಟ ಕಾರಣ ಏನೂ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಮತ್ತು ಬಾಯಿ ಹುಣ್ಣುಗಳು ಉಂಟಾಗಲು ವಿವಿಧ ಕಾರಣಗಳು ಇರುತ್ತವೆ. ಇದು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ಆಮ್ಲೀಯತೆ, ಮಲಬದ್ಧತೆ, ವಿಟಮಿನ್ ಬಿ ಮತ್ತು ಸಿ ಕೊರತೆ, ಜೊತೆಗೆ ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಬಾಯಿ ಹುಣ್ಣು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು.ಕೆಲವರಿಗೆ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಬಾಯಿಯನ್ನು ಸ್ವಚ್ಛವಾಗಿ, ಸರಿಯಾಗಿ ಇಟ್ಟುಕೊಳ್ಳದಿದ್ದರೂ ಕೂಡ ಈ ಸಮಸ್ಯೆ ಉಂಟಾಗಬಹುದು. ಕೆಲವರಿಗೆ ಒತ್ತಡ, ನಿದ್ರೆಯ ಕೊರತೆ ಅಥವಾ ಹಾರ್ಮೋನುಗಳ ಬದಲಾವಣೆಯಿಂದಲೂ ಬಾಯಿ ಹುಣ್ಣು ಉಂಟಾಗಬಹುದು. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲರೂ ಒಮ್ಮೆಯಾದರೂ ಬಾಯಿ ಹುಣ್ಣಿನ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದ್ದರಿಂದಲೇ ಇದೊಂದು ಸಾಮಾನ್ಯ ಸಮಸ್ಯೆ ಎನಿಸಿದೆ.ಬಾಯಿ ಹುಣ್ಣು ಆದಾಗ ಏನು ಮಾಡಬೇಕು?

ಬಾಯಿಯ ಹುಣ್ಣುಗಳು ಒಸಡುಗಳ ಕೆಳಭಾಗದಲ್ಲಿ ಮತ್ತು ಬಾಯಿಯ ಇತರ ಸ್ಥಳಗಳಲ್ಲಿ ಕಂಡುಬರುವ ಸಣ್ಣ ಸಣ್ಣ ಗಾಯಗಳಾಗಿವೆ. ಬಾಯಿ ಹುಣ್ಣು ಸಾಮಾನ್ಯವಾಗಿ ಕೆಂಪು ಅಂಚಿನೊಂದಿಗೆ ಬಿಳಿಯ ಬಣ್ಣದ್ದಾಗಿರುತ್ತದೆ. ಇದು ಸಾಂಕ್ರಾಮಿಕವಲ್ಲ ಮತ್ತು ಸೂಕ್ತವಾದ ಕ್ರಮ ಕೈಗೊಂಡಲ್ಲಿ ಕೆಲವೇ ದಿನಗಳಲ್ಲಿ ಅಥವಾ ಒಂದೆರಡು ವಾರಗಳಲ್ಲಿ ವಾಸಿಯಾಗುತ್ತವೆ. ದೀರ್ಘಕಾಲದವರೆಗೆ ಬಾಯಿಯಲ್ಲಿ ಹುಣ್ಣು ಮತ್ತು ನೋವಿನ ಹುಣ್ಣುಗಳು ಗಂಭೀರವಾದ ವೈದ್ಯಕೀಯ ಸಮಸ್ಯೆಯ ಸಂಕೇತವಾಗಬಹುದು. ಉದಾಹರಣೆಗೆ ಸಣ್ಣ ಅಥವಾ ದೊಡ್ಡ ಕರುಳಿನ ಸೋಂಕುಗಳು, ಅಸಮರ್ಪಕ ಜೀರ್ಣಕ್ರಿಯೆ, ತೀವ್ರ ಆಮ್ಲೀಯತೆಯ ಇಂತಹ ಸಮಸ್ಯೆಗಳು ಇರಬಹುದು. ಆದ್ದರಿಂದ ಹೆಚ್ಚು ಕಾಲ ಬಾಯಿ ಹುಣ್ಣು ನೋವು ಕೊಡುತ್ತಿದ್ದು ದೀರ್ಘಕಾಲದವರೆಗೆ ಇದ್ದರೆ ವೈದ್ಯರನ್ನು ತಡಮಾಡದೇ ಕಾಣಬೇಕು.

ಬಾಯಿ ಹುಣ್ಣಿಗೆ ಮನೆಮದ್ದುಗಳು

ಬಾಯಿ ಹುಣ್ಣಿನ ನೋವಿನ ತಕ್ಷಣ ಕಡಿಮೆಯಾಗಲು ಸ್ವಚ್ಛವಾದ ಹತ್ತಿಯನ್ನು ಜೀನುತುಪ್ಪಕ್ಕೆ ಅದ್ದಿ ನೋವಿರುವ ಭಾಗಕ್ಕೆ ಇಟ್ಟುಕೊಳ್ಳಬೇಕು.ಹೀಗೆಯೇ ತುಪ್ಪವನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೂ ನೋವು ಉಪಶಮನವಾಗುತ್ತದೆ. ತೆಂಗಿನ ಎಣ್ಣೆಯನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೆ ನೋವು ಬೇಗ ತಣಿಯುತ್ತದೆ. ಹಾಗೆಯೇ ಸ್ವಲ್ಪ ಅಲೋವೆರಾದ ತಾಜಾ ತಿರುಳನ್ನು (ಲೋಳೆಸರ) ಹುಣ್ಣಿನ ಮೇಲೆ ದಿನವೂ ಹಚ್ಚುತ್ತಿದ್ದರೆ ಒಂದೆರಡು ದಿನಗಳಲ್ಲಿ ವಾಸಿವಾಗಬಹುದು. ಅಲೋವೆರಾ ಕೂಡ ದೇಹವನ್ನು ತಂಪಾಗಿರಿಸಲು ಸಹಕಾರಿ.ಬಾಯಿ ಹುಣ್ಣು ಆದಾಗ ಎಳನೀರು ಕುಡಿದರೆ ಬಹಳ ಒಳ್ಳೆಯದು. ದಿನಕ್ಕೆ ಎರಡು ಅಥವಾ ಮೂರು ಸಲ ತಾಜಾ ಮಜ್ಜಿಗೆಯನ್ನೂ ತೆಗೆದುಕೊಳ್ಳಬಹುದು. ಇದರಿಂದ ದೇಹದ ತಾಪಮಾನ ಕಡಿಮೆಯಾಗಿ ಬಾಯಿಯಲ್ಲಿನ ಹುಣ್ಣುಗಳು ವಾಸಿಯಾಗಲು ಸಹಾಯವಾಗುತ್ತದೆ.

ಬಾಯಿ ಹುಣ್ಣಿಗೆ ಆಯುರ್ವೇದ ಪರಿಹಾರಗಳು

ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಹೊಂದಿರುವ ಅರಿಶಿನದಲ್ಲಿಯೂ ಕೂಡ ಬಾಯಿ ಹುಣ್ಣಿನ ಸಮಸ್ಯೆಯ ವಿರುದ್ಧ ಹೋರಾಡುವ ಗುಣವಿದೆ. ಒಂದು ಟೇಬಲ್ ಚಮಚ ಜೇನುತುಪ್ಪ, ಅರ್ಧ ಟೀ ಚಮಚ ಅರಿಶಿನವನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಬಾಯಿ ಹುಣ್ಣಿರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಬೇಕು. ನಾಲ್ಕೈದು ದಿನಗಳ ಪ್ರತಿದಿನ ಹೀಗೆ ಮಾಡುತ್ತಾ ಬರುವುದರಿಂದ ಕೂಡಲೇ ಈ ಸಮಸ್ಯೆ ವಾಸಿಯಾಗುತ್ತದೆ.

ಪ್ರತಿದಿನ ತುಳಸಿ ಗಿಡದ ಎಲೆಗಳನ್ನು ಚೆನ್ನಾಗಿ ಜಗಿದು ಅದರ ರಸವನ್ನು ಹೀರಬೇಕು. ತುಳಸಿ ಎಲೆಗಳ ಚಹಾ ತಯಾರು ಮಾಡಿಕೊಂಡು ದಿನದಲ್ಲಿ ಎರಡು ಬಾರಿಯಾದರೂ ಕುಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಒಂದು ಚಮಚ ನೆಲ್ಲಿಕಾಯಿ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.ಬಾಯಿ ಹುಣ್ಣು ಆದಾಗ ಆಮ್ಲೀಯ ಹಣ್ಣುಗಳಾದ ನಿಂಬೆ, ಕಿತ್ತಳೆ, ಅನಾನಸ್, ಚಿಪ್ಸ್ ಮತ್ತು ಮಸಾಲೆಯುಕ್ತ ಆಹಾರ ಸೇವಿಸಬಾರದು. ನಿಧಾನವಾಗಿ ಮೆದುವಾಗಿರುವ ಬ್ರಿಸಲ್ಲುಗಳಿರುವ ಬ್ರಶ್ ಉಪಯೋಗಿಸಿ ಹಲ್ಲು ಉಜ್ಜಬೇಕು. ಯಾವುದೇ ರೀತಿಯ ಮಾನಸಿಕ ಒತ್ತಡ ಇದ್ದರೆ ಧ್ಯಾನ ಮಾಡಲು ಪ್ರಯತ್ನಿಸಿ. ಒತ್ತಡವನ್ನು ನಿವಾರಿಸಲು ನೀವು ಮಾಡಲು ಇಷ್ಟಪಡುವ ಯಾವುದೇ ಚಟುವಟಿಕೆಯನ್ನು ತೊಡಗಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು. ಸಾಕಷ್ಟು ನೀರು ಕುಡಿಯುವುದು ಬಾಯಿ ಹುಣ್ಣುಗಳ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೋಷಕಾಂಶಗಳು ಇರುವಂತಹ ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಬಾಯಿಯ ಹುಣ್ಣು ಕಡಿಮೆ ಆಗುವುದು. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳಬೇಕು. ಆಲ್ಕೋಹಾಲ್, ಕಾಫಿ ಮತ್ತು ತಂಪು ಪಾನೀಯಗಳ ಸೇವನೆ ಹೆಚ್ಚು ಬೇಡ. ಹಾಗೆಯೇ ಅತಿ ಮಸಾಲೆಯುಕ್ತ ಪದಾರ್ಥಗಳ ಸೇವನೆ ಸಲ್ಲ. ಪ್ರತಿದಿನ ಮೂರು ಲೀಟರ್ ನೀರನ್ನು ಕುಡಿಯಬೇಕು. ಹೀಗೆ ಮಾಡಿದರೆ ಬಾಯಿಯ ಹುಣ್ಣು ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ.

ವಿಟ್ಲ ಪೊಲೀಸರ ಕಾರ್ಯಾಚರಣೆ : ಅಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾ ಸಹಿತ ಆರೋಪಿ ಸುಳ್ಯ ಮೂಲದ ಕಲಂದರ್ ಶಾ ಪೊಲೀಸ್ ವಶಕ್ಕೆ

Posted by Vidyamaana on 2023-09-17 04:30:01 |

Share: | | | | |


ವಿಟ್ಲ ಪೊಲೀಸರ ಕಾರ್ಯಾಚರಣೆ : ಅಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾ ಸಹಿತ ಆರೋಪಿ  ಸುಳ್ಯ ಮೂಲದ ಕಲಂದರ್ ಶಾ ಪೊಲೀಸ್ ವಶಕ್ಕೆ

ಬಂಟ್ವಾಳ: ತಾಲೂಕಿನ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಶನಿವಾರ ಅಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 


ಬಂಧಿತ ಆರೋಪಿಯನ್ನು ಸುಳ್ಯ ಕಸಬಾ ಗ್ರಾಮದ ನಿವಾಸಿ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಎಂದು ಹೆಸರಿಸಲಾಗಿದೆ. ಕಲಂದರ್ ಶಾ ಶನಿವಾರ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ತನ್ನ ಕೆಎ21 ಬಿ7248 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ವಿಟ್ಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. 


ಕಾರ್ಯಾಚರಣೆ ವೇಳೆ ಅಟೋ ರಿಕ್ಷಾ ಸಹಿತ ರಿಕ್ಷಾದಲ್ಲಿದ್ದ 1.35 ಲಕ್ಷ ರೂಪಾಯಿ ಮೌಲ್ಯದ 6.110 ಕೆ ಜಿ ತೂಕದ ಗಾಂಜಾ, ಮೊಬೈಲ್ ಫೋನ್, 900 ರೂಪಾಯಿ ನಗದು ಹಾಗೂ ರಿಕ್ಷಾ ಚಾಲಕನ ಚಾಲನಾ ಪರವಾನಗಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,96,900/- ಎಂದು ಅಂದಾಜಿಸಲಾಗಿದೆ. ಆರೋಪಿ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2023 ಕಲಂ 8(ಸಿ),20(ಬಿ) (3) (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

Posted by Vidyamaana on 2023-12-20 09:53:04 |

Share: | | | | |


ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

ಮಂಗಳೂರು : ಸಿಟಿ ಬಸ್ ಚಾಲಕನೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಮೃತರನನ್ನು ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಎಂದು ಗುರುತಿಸಲಾಗಿದೆಇವರು ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು, ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕನ್ನು ಇಟ್ಟು ಟವಲೊಂದರಲ್ಲಿ ಬೈಕ್ ಕೀ, ಪರ್ಸ್‌ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪಸ್೯ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ.

ಸರ್ಕಾರ ಕೊಟ್ಟ ಮೊಬೈಲ್‌ ವಾಪಸ್‌ ನಾಳೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

Posted by Vidyamaana on 2023-07-09 05:27:32 |

Share: | | | | |


ಸರ್ಕಾರ ಕೊಟ್ಟ ಮೊಬೈಲ್‌ ವಾಪಸ್‌  ನಾಳೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಬೆಂಗಳೂರು : ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ವಾಪಸ್‌ ನೀಡೋದಾಗಿ ಅಂಗನವಾಡಿ ಕಾರ್ಯಕರ್ತೆಯರು ಜುಲೈ 10 ರಂದು(ನಾಳೆ) ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಸರ್ಕಾರ ನೀಡಿದ 64,000 ಹ್ಯಾಂಡ್‌ಸೆಟ್‌ಗಳನ್ನು ಹಿಂದಿರುಗಿಸುವುದಾಗಿ ಮತ್ತು ನಡೆಯುತ್ತಿರುವ ಸಮೀಕ್ಷೆಗಳಿಗೆ ಡೇಟಾ ಸಂಗ್ರಹಿಸುವುದನ್ನು ನಿಲ್ಲಿಸುವುದಾಗಿ ಕಾರ್ಯಕರ್ತೆಯರು ಬೆದರಿಕೆ ಹಾಕಿದ್ದಾರೆ.ʻಯಾವುದೇ ಎಲೆಕ್ಟ್ರಾನಿಕ್ಸ್ ಉತ್ಪನ್ನಕ್ಕೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ವಾರಂಟಿ ಇರುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಫೋನ್‌ಗಳು ಈಗಾಗಲೇ ನಾಲ್ಕು ವರ್ಷಗಳಷ್ಟು ಹಳೆಯದಾಗಿದೆ. ಸರ್ಕಾರ ನೀಡಿದ ಫೋನ್‌ಗಳಲ್ಲಿ ಸ್ಟೋರೇಜ್‌ ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲʼ ಎಂದು ಕರ್ನಾಟಕ ಅಂಗನವಾಡಿ ನೌಕರರ ಸಂಘವು ಹೊರಡಿಸಿದ ಪತ್ರಿಕಾ ಹೇಳಿಕೆ ತಿಳಿಸಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಅನುರಾಧ ಕೆಎನ್ ಮಾತನಾಡಿ, "ಜಿಲ್ಲಾ ನಿರ್ದೇಶಕರು ನನಗೆ ವರದಿಯನ್ನು ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮೊಬೈಲ್ ಫೋನ್‌ಗಳನ್ನು ಹಿಂದಿರುಗಿಸಲು ಯೋಜಿಸುತ್ತಿದ್ದಾರೆ. ಹ್ಯಾಂಡ್‌ಸೆಟ್‌ಗಳು ಹಳೆಯದಾಗಿದ್ದರೆ, ನಾವು ಅವುಗಳನ್ನು ಬದಲಾಯಿಸುತ್ತೇವೆ. ಅಲ್ಲದೆ, ನಾವು ಅವರಿಗೆ ರೀಚಾರ್ಜ್ ಭತ್ಯೆ ನೀಡುತ್ತಿದ್ದೇವೆ" ಎಂದರು.


ಜುಲೈ 10 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ನನಗೆ ತಿಳಿದಿಲ್ಲ. ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಕೇಳಲಾಗಿದೆ ಎಂದು ಅವರು ನಿರಾಕರಿಸಿದರು.

ISRO: ಹೊಸ ವರ್ಷಕ್ಕೆ ಇಸ್ರೋದ ಮತ್ತೊಂದು ಸಾಧನೆ…: ನಭಕ್ಕೆ ಜಿಗಿದ ಎಕ್ಸ್‌ಪೋಸ್ಯಾಟ್‌

Posted by Vidyamaana on 2024-01-01 12:40:22 |

Share: | | | | |


ISRO: ಹೊಸ ವರ್ಷಕ್ಕೆ ಇಸ್ರೋದ ಮತ್ತೊಂದು ಸಾಧನೆ…: ನಭಕ್ಕೆ ಜಿಗಿದ ಎಕ್ಸ್‌ಪೋಸ್ಯಾಟ್‌

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಇತಿಹಾಸವನ್ನು ಸೃಷ್ಟಿಸಿದೆ. ಇಸ್ರೋ ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸ್ಯಾಟ್ ಅನ್ನು ಬೆಳಗ್ಗೆ 9.10ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್‌ ಮೂಲಕ ಎಕ್ಸ್‌ಪೋಸ್ಯಾಟ್‌ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದು ಇದರೊಂದಿಗೆ ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್‌ ಹೋಲ್‌) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲವನ್ನು ಅಧ್ಯಯನ ಮಾಡಲಿದೆ.ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C58) ರಾಕೆಟ್, ತನ್ನ 60 ನೇ ಕಾರ್ಯಾಚರಣೆಯಲ್ಲಿ, ಮುಖ್ಯ ಪೇಲೋಡ್ ‘ಎಕ್ಸ್‌ಪೋಸ್ಯಾಟ್’ ಅನ್ನು 10 ಇತರ ಉಪಗ್ರಹಗಳೊಂದಿಗೆ ಹೊತ್ತೊಯ್ದಿದೆ.


‘ಎಕ್ಸ್ ರೇ ಪೋಲಾರಿಮೀಟರ್ ಸ್ಯಾಟಲೈಟ್’ (XPoSAT) ಎಕ್ಸ್ ರೇ ಮೂಲಗಳ ರಹಸ್ಯಗಳನ್ನು ಬಿಚ್ಚಿಡಲು ಮತ್ತು ‘ಕಪ್ಪು ರಂಧ್ರಗಳ’ ನಿಗೂಢ ಜಗತ್ತನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ISRO ಪ್ರಕಾರ, ಬಾಹ್ಯಾಕಾಶ-ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಖಗೋಳ ಮೂಲಗಳಿಂದ ಎಕ್ಸ್-ರೇ ಹೊರಸೂಸುವಿಕೆಯನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆಯ ಮೊದಲ ಮೀಸಲಾದ ವೈಜ್ಞಾನಿಕ ಉಪಗ್ರಹವಾಗಿದೆ ಎನ್ನಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಹೊರತುಪಡಿಸಿ, ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಡಿಸೆಂಬರ್ 2021 ರಲ್ಲಿ ಸೂಪರ್ನೋವಾ ಸ್ಫೋಟದ ಅವಶೇಷಗಳು, ಕಪ್ಪು ಕುಳಿಗಳಿಂದ ಹೊರಹೊಮ್ಮುವ ಕಣಗಳ ಸ್ಟ್ರೀಮ್ ಗಳು ಮತ್ತು ಇತರ ಖಗೋಳ ವಿದ್ಯಮಾನಗಳ ಬಗ್ಗೆ ಇದೇ ರೀತಿಯ ಅಧ್ಯಯನವನ್ನು ನಡೆಸಿತು. ಎಕ್ಸ್ ರೇ ಧ್ರುವೀಕರಣದ ಬಾಹ್ಯಾಕಾಶ ಆಧಾರಿತ ಅಧ್ಯಯನವು ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಎಕ್ಸ್‌ಪೋಸಾಕ್ಟ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಸ್ರೋ ಹೇಳಿದೆ.

Recent News


Leave a Comment: