ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಕೊರಿಯರ್ ಪಾರ್ಸೆಲ್​ನಲ್ಲಿ ಡ್ರಗ್ಸ್ ಹೆಸರಲ್ಲಿ ಮೋಸ

Posted by Vidyamaana on 2023-12-02 11:17:58 |

Share: | | | | |


ಕೊರಿಯರ್ ಪಾರ್ಸೆಲ್​ನಲ್ಲಿ ಡ್ರಗ್ಸ್ ಹೆಸರಲ್ಲಿ ಮೋಸ

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಗಳು, ನಿಮ್ಮ ಕೊರಿಯರ್ ಪಾರ್ಸೆಲ್​ನಲ್ಲಿ ಡ್ರಗ್ಸ್ ಇದೆ ಎಂದು ಬೆದರಿಸಿ, ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ 8 ಮಂದಿ ಸೈಬರ್ ವಂಚಕರನ್ನು ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 


ದಾವಣಗೆರೆ ಮೂಲದ ವಾಸಿಂ, ಹಬ್ಬಿಬುಲಾ, ನಿಜಾಮುದ್ದೀನ್, ಮುಷರಫ್ ಖಾನ್, ಬೆಂಗಳೂರಿನ ನೂರುಲ್ಲಾ ಖಾನ್, ಮೊಹಮ್ಮದ್ ಉಮರ್, ಸೈಯದ್ ಅಹ್ಮದ್​ ಹಾಗೂ ಸೈಯ್ಯದ್ ಹುಸೇನ್ ಬಂಧಿತರು. ಮಲ್ಲೇಶ್ವರದ ನಟರಾಜ್ ಬಿ.ಎಸ್.ರಾವ್ ಎಂಬವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, 13 ಲಕ್ಷ ಹಣ ವಶಪಡಿಸಿಕೊಂಡಿದೆ. ಅಲ್ಲದೆ, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 19 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಫೋನ್, 148 ಬೇನಾಮಿ ಬ್ಯಾಂಕ್ ಖಾತೆಗಳನ್ನ ಜಪ್ತಿ ಮಾಡಲಾಗಿದೆ. ಜೊತೆಗೆ 4500 ಯುಎಸ್ ಡಾಲರ್ ವಶಕ್ಕೆ ಪಡೆದಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ನವೆಂಬರ್ 10ರಂದು ನಟರಾಜ್ ಅವರಿಗೆ ವಾಟ್ಸ್​​ಆ್ಯಪ್ ಕರೆ ಮಾಡಿದ ಆರೋಪಿಗಳು ಮುಂಬೈ ಪೊಲೀಸರು ಎಂದು ತಮ್ಮನ್ನು ಪರಿಚಯಿಸಿ ತಮ್ಮ ಪತ್ನಿ ಹೆಸರಿನಲ್ಲಿ ಮುಂಬೈನಿಂದ ಥಾಯ್ಲೆಂಡ್​​ಗೆ ಕಳುಹಿಸುವ ಫೆಡಕ್ಸ್ ಕೊರಿಯರ್​ ಪಾರ್ಸಲ್​ನಲ್ಲಿ 140 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ಅಲ್ಲದೇ ಹಲವು ಬ್ಯಾಂಕ್ ಖಾತೆಗಳನ್ನ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ತನಿಖೆ ಮುಗಿಯುವ ವರೆಗೂ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಒಪ್ಪಿಸಬೇಕಿದೆ. ತನಿಖೆ ಬಳಿಕ ಹಣ ನಿಮ್ಮ ಖಾತೆಗೆ ಜಮೆ ಮಾಡಲಾಗುವುದು ಎಂದು ನಂಬಿಸಿ ಒಟ್ಟು 1.08 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದರು.


ದಾವಣಗೆರೆ ಹಾಗೂ ಬೆಂಗಳೂರು ಮೂಲದ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸೈಬರ್ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಕೊರಿಯರ್ ಪಾರ್ಸಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಅಮಾಯಕರನ್ನು ಯಾಮಾರಿಸುತ್ತಿದ್ದರು. ಇವರು ಅಮಾಯಕರಿಗೆ ಹಣ ನೀಡಿ ಅವರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್​ ಖಾತೆಗಳನ್ನು ತೆರೆಯುತ್ತಿದ್ದರು. ವರ್ಗಾಯಿಸಿಕೊಂಡಿದ್ದ 1.08 ಕೋಟಿ ಪೈಕಿ ದಾವಣಗೆರೆಯ ಆರ್.ಬಿಎಲ್ ಬ್ಯಾಂಕ್ ನಿಂದ ಆರೋಪಿಗಳು 9.34 ಲಕ್ಷ ರೂಪಾಯಿ ಹಣ ವಿತ್ ಡ್ರಾ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ವಂಚಕರನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


72 ಪ್ರಕರಣಗಳು ಪತ್ತೆ 


ವಾಟ್ಸ್​​ಆ್ಯಪ್​ ಆಡಿಯೋ ಕರೆ ಮಾಡಿದ ಆರೋಪಿಗಳು, ಸಾರ್ವಜನಿಕರಿಂದ ವರ್ಗಾಯಿಸಿಕೊಂಡಿದ್ದ 1.08 ಕೋಟಿ ಹಣವನ್ನು ಕೆಲವೇ ಗಂಟೆಗಳಲ್ಲಿ 72 ಬೇನಾಮಿ ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆರು ಗಂಟೆಗಳ ವಾಟ್ಸಾಆ್ಯಪ್ ಕರೆ ಮಾಡಿ ಪ್ರಕರಣದ ದೂರುದಾರರ ನಟರಾಜ್ ನಂಬಿಸಿ ಯಾಮಾರಿಸಿದ್ದರು. ಆರೋಪಿಗಳ ಬಂಧನದಿಂದ ರಾಷ್ಟ್ರೀಯ ಅಪರಾಧ ಸಂಗ್ರಹ ಘಟಕದಲ್ಲಿ (ಎನ್​ಸಿಆರ್​ಬಿ) ದಾಖಲಾಗಿದ್ದ 72 ಸೈಬರ್ ವಂಚನೆ ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಪಂ ಎನ್.ಓ.ಸಿ. ತಿದ್ದುಪಡಿ ಮಾಡಿದ ವಿಚಾರಕ್ಕೆ ಅರ್ಜಿ ತಿರಸ್ಕೃತ ಮೆಸ್ಕಾಂ ಎಇಇಗೆ ಕೊಲೆ ಬೆದರಿಕೆ: ಆರೋಪಿ ನಿಸಾರ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-06-14 16:35:35 |

Share: | | | | |


ಗ್ರಾಪಂ ಎನ್.ಓ.ಸಿ. ತಿದ್ದುಪಡಿ ಮಾಡಿದ ವಿಚಾರಕ್ಕೆ ಅರ್ಜಿ ತಿರಸ್ಕೃತ  ಮೆಸ್ಕಾಂ ಎಇಇಗೆ ಕೊಲೆ ಬೆದರಿಕೆ: ಆರೋಪಿ ನಿಸಾರ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ವಿದ್ಯುತ್ ಗುತ್ತಿಗೆದಾರನೊಬ್ಬ ಪುತ್ತೂರಿನ  ಬನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಗೆ ತೆರಳಿ ಅವಾಚ್ಯವಾಗಿ ನಿಂಧಿಸಿ ಕೊಲೆ ಬೆದರಿಕೆ ಹಾಕುವ ಜತೆಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪುತ್ತೂರು ಸನಾ ಇಲೆಕ್ಟ್ರಿಕಲ್ಸ್ ಮಾಲೀಕ ಮಹಮ್ಮದ್ ನಿಸಾರ್ ಆರೋಪಿ. ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ (ಎಇಇ) ರಾಮಚಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ದೂರು ನೀಡಿದ್ದಾರೆ.


ಜೂ.14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಹಮ್ಮದ್ ನಿಸಾರ್ ಕಛೇರಿಗೆ ಆಗಮಿಸಿ ಮುಂಡೂರು ಗ್ರಾಮದ ರಮೇಶ್ ಎಂಬವರ ಕೃಷಿ ನೀರಾವರಿ ಪಂಪ್ ಸೆಟ್ ಗೆ ನೀಡಿದ ಅರ್ಜಿಯನ್ನು ತಿರಸ್ಕಾರ ಮಾಡಿದ್ದೇಕೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ಅರ್ಜಿಯನ್ನು ಮಂಜೂರು ಮಾಡದೇ ಹೋದಲ್ಲಿ ನಿನ್ನನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

ಇಲಾಖೆಯ ನಿಯಮದ ತೊಡಕಿನಿಂದ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾಗಿದೆ ಎಂದು ದಾಖಲೆ ಸಮೇತ ದೂರಿನಲ್ಲಿ ರಾಮಚಂದ್ರ ಅವರು ತಿಳಿಸಿದ್ದಾರೆ.

ತಿರಸ್ಕೃತ ಅರ್ಜಿಯನ್ನೇ ಮುಂದುವರಿಸಲು ಒತ್ತಡ, ಬೆದರಿಕೆ: ಮೆಸ್ಕಾಂ ಎಇಇ ರಾಮಚಂದ್ರ

ಗ್ರಾಮ ಪಂಚಾಯತ್ ಎನ್.ಓ.ಸಿ.ಯಲ್ಲಿ ಕೆರೆ ಎಂಬ ಶಬ್ದವನ್ನು‌ ತಿದ್ದುಪಡಿ ಮಾಡಿ, ಕೊಳವೆ ಬಾವಿ ಎಂದು ನಮೂದು ಮಾಡಲಾಗಿತ್ತು. ಇದರ ಬಗ್ಗೆ ಗ್ರಾಮ ಪಂಚಾಯತ್ ಸ್ಪಷ್ಟೀಕರಣ ನೀಡಿದ್ದು, ತಿದ್ದುಪಡಿ ಮಾಡಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ರದ್ದು ಮಾಡಿದ್ದೇವೆ. ಈ ವಿಚಾರವನ್ನು ಗ್ರಾಹಕರಿಗೆ ತಿಳಿಸಿದ್ದು, ಅವರು ಒಪ್ಪಿಕೊಂಡು ಬೇರೆಯೇ ಅರ್ಜಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ನಿಸಾರ್ ಎಂಬವರು ನನ್ನ ಕಚೇರಿಗೆ ಬಂದು, ಅದೇ ಫೈಲನ್ನು ಮುಂದುವರಿಸುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ. ಈ‌ ಹಿನ್ನೆಲೆಯಲ್ಲಿ‌ ದೂರು ನೀಡಿದ್ದೇನೆ.




ಮಿತ್ತೂರು : ಇನ್ನೋವಾ - ಟಿಪ್ಪರ್ ನಡುವೆ ಅಪಘಾತ: ನಾಲ್ವರು ಆಸ್ಪತ್ರೆಗೆ

Posted by Vidyamaana on 2023-07-25 08:33:03 |

Share: | | | | |


ಮಿತ್ತೂರು : ಇನ್ನೋವಾ - ಟಿಪ್ಪರ್ ನಡುವೆ ಅಪಘಾತ: ನಾಲ್ವರು ಆಸ್ಪತ್ರೆಗೆ

ವಿಟ್ಲ: ಇನ್ನೋವಾ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರಿನ ಪರ್ಲೋಟ್ಟು ಎಂಬಲ್ಲಿ ನಡೆದಿದೆ.

ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಹಿತ ನಾಲ್ವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಮುಂಬೈ ಮೂಲದ ಪ್ರಯಾಣಿಕರು ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಘಟನೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ಈ ಭಾಗದಲ್ಲಿ ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಇದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ

ತಿಂಗಳೊಳಗೆ ಬಸ್‌ಗಳಿಗೆ ಬಾಗಿಲು ಅಳವಡಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Posted by Vidyamaana on 2024-02-29 15:25:20 |

Share: | | | | |


ತಿಂಗಳೊಳಗೆ ಬಸ್‌ಗಳಿಗೆ ಬಾಗಿಲು ಅಳವಡಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ದ.ಕ. ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕ ಬಸ್‌ಗಳಲ್ಲಿ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿದಾವಿತ್ ಸಲ್ಲಿಸಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ ಮಾಲಕರು ಅಫಿದಾವಿತ್ ಸಲ್ಲಿಸಬೇಕು ಎಂದು ಡಿಸಿ ಆರ್‌ಟಿಒಗೆ ನಿರ್ದೇಶನ ನೀಡಿದರು. 


ಸಾರ್ವಜನಿಕರ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿವೆೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಫ್ಲೈಓವರ್ ಕತ್ತಲು: ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ 

ರಾ.ಹೆ.ಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ, ಪಂಪ್‌ವೆಲ್ ಮೇಲ್ಸೇತುವೆಗಳಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸಿರುವ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಕಳೆದ 10 ವರ್ಷಗಳಿಂದ ಈ ಸಮಸ್ಯೆ ಇದ್ದರೂ, ರಾ.ಹೆ. ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಂಗಳೂರು ಮನಪಾದೊಂದಿಗೂ ಚರ್ಚಿಸಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿ, ಜೀವಹಾನಿಯಾಗಿರುವ ಘಟನೆಗಳು ನಡೆದಿವೆ.ಹೆದ್ದಾರಿಯ ಮೂಲ ಯೋಜನೆಯಲ್ಲಿಯೇ ಇದನ್ನು ಯಾಕೆ ಸೇರಿಸಿಲ್ಲ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದರು. 


ಜಿಲ್ಲೆಯ ಹಲವೆಡೆ ವಿವಿಧ ಕಾಮಗಾರಿಗಳಿಗಾಗಿ ಕೆಲವು ಏಜನ್ಸಿಗಳು ಅನುಮತಿ ಇಲ್ಲದೆ ಲೋಕೋಪಯೋಗಿ ರಸ್ತೆಗಳನ್ನು ಅಗೆದು, ಪೈಪ್, ಕೇಬಲ್ ಅಳವಡಿಸಿರುವ ಬಗ್ಗೆ ದೂರುಗಳು ಬಂದಿದೆ. ತಕ್ಷಣ ಅಂತಹವರಿಗೆ ನೊಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. 

ಸ್ಟೇಟ್‌ಬ್ಯಾಂಕ್ ವೃತ್ತ ಸಮಸ್ಯೆ 

ನಗರದ ಹೃದಯಭಾಗದ ಸ್ಟೇಟ್‌ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ವೃತ್ತವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ವಾಹನ ಸವಾರರು ತೀವ್ರಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದರು. 


ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಡಿ.ಸಿ. ಕಚೇರಿಯ ಮುಂದಿನ ವೃತ್ತವೇ ಈ ರೀತಿ ಅನಿಶ್ಚಿತತೆ ಸ್ಥಿತಿಯಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಈ ವೃತ್ತದ ಸುತ್ತಮುತ್ತಲಿನಲ್ಲಿ ಪಾರ್ಕಿಂಗ್, ಫ್ಲೆಕ್ಸ್, ಕಟೌಟ್ ಸಮಸ್ಯೆಯೂ ಇದೆ. ಯಾವುದೇ ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನೊಂದು ಸಮಸ್ಯೆ ಸೃಷ್ಟಿಯಾಗಬಾರದು. ಈ ನಿಟ್ಟಿನಲ್ಲಿ ನಗರಪಾಲಿಕೆ, ನಗರ ಪೊಲೀಸ್ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಮನ್ವಯದಿಂದ ಸ್ಟೇಟ್ ಬ್ಯಾಂಕ್ ವೃತ್ತ ಸಂಚಾರ ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಬೇಕು ಎಂದು ಸೂಚಿಸಿದರು. ನಗರದ ಲೇಡಿಹಿಲ್, ಕಂಕನಾಡಿ, ವೆಲೆನ್ಸಿಯಾ ಮತ್ತಿತರ ಕಡೆ ಸಂಜೆಯಾಗುತ್ತಿದ್ದಅತೆ ಹಳೆಯ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಅದರಲ್ಲಿ ತಿಂಡಿ ತಿನಿಸು ಮಾರಾಟ ಮಾಡಲಾಗುತ್ತಿದೆ. ರಸ್ತೆ, ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ಗ್ರಾಹಕರ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ದೂರು ವ್ಯಕ್ತವಾಯಿತು. ಈ ಬಗ್ಗೆ ತಪಾಸಣೆ ನಡೆಸಿ ಕ್ರಮಕೈಗೊಳ್ಳುವಂತೆ ಮಹಾನಗರಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್, ಆರ್‌ಟಿಒ ಶ್ರೀಧರ್ ಮಲ್ನಾಡ್, ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಅಮರನಾಥ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ ಸಿಕ್ತು ಜಾಮೀನು

Posted by Vidyamaana on 2023-12-26 20:50:48 |

Share: | | | | |


ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ ಸಿಕ್ತು ಜಾಮೀನು

ಪುತ್ತೂರು: ತನ್ನ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ  ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ  ಪಾಣಾಜೆಯ ನಿವಾಸಿ ಅಬ್ದುಲ್ ಶೆಹನಾದ್ ಸಮೀಮ್ ಎಂಬವರಿಗೆ  ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.


ಘಟನೆಯ ಹಿನ್ನಲೆ : ತನ್ನ ಮನೆಯ ಸಮೀಪದ ವಾಸಿ ಅಪ್ರಾಪ್ತ ಬಾಲಕಿಯ ಮನೆಯಲ್ಲಿ 2021ನೇ ಅಕ್ಟೋಬರ್ ತಿಂಗಳಿನಲ್ಲಿ  ಆರೋಪಿಯು ಆಕೆಯನ್ನು  ಮರುಳು ಮಾಡಿ ಬಲತ್ಕಾರದಿಂದ             ರಂದು ಲೈಂಗಿಕ ಸಂಪರ್ಕ ನಡೆಸಿ, ಬೆದರಿಕೆ ಒಡ್ಡಿರುವುದಾಗಿದೆ. ಅಲ್ಲದೆ 

ದಿನಾಂಕ 23/10/2023 ರಂದು ರಾತ್ರಿ 07:00 ಗಂಟೆಗೆ ಅಪ್ರಾಪ್ತ ಬಾಲಕಿಯ ತಾಯಿ ಮನೆ ಹತ್ತಿರದಲ್ಲಿರುವ ಅಜ್ಜಿ ಮನೆಗೆ ಬೀಡಿ ಕಟ್ಟಲು ಹೋಗಿದ್ದು, ಆಗ ಅವರ ಮನೆಗೆ ಹೋಗಿ, ಅಪ್ರಾಪ್ತ ಬಾಲಕಿಯ  ಮೈ ಗೆ ಕೈ ಹಾಕಿ , ಆಕೆ ಬೊಬ್ಬೆ ಹೊಡೆದಾಗ, ಈ ವಿಚಾರವನ್ನು ಬೇರೆಯವರಲ್ಲಿ ಹೇಳಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿ ಮನೆಯಿಂದ ಓಡಿ ಹೋಗಿರುವುದಾಗಿದೆ ಎಂದು ಆರೋಪಿಸಿ ಈ ಬಗ್ಗೆ

ಅಪ್ರಾಪ್ತ ಬಾಲಕಿಯು  ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು  ಭಾರತೀಯ ದಂಡ ಸಂಖ್ಯೆಯ ಕಲಂ 376,354(A),506,  ಮತ್ತು ಪೋಕ್ಸೋ ಕಾಯ್ದೆಯ ಕಲಂ 4 ರನ್ವಯ ರಂತೆ ಪ್ರಕರಣ ದಾಖಲಿಸಿದ್ದರು. ನಂತರ ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ ಅಬ್ದುಲ್ ಶೆಹನಾದ್ ಸಮೀಮ್ ರವರನ್ನು ಬಂಧಿಸಿ, ವಿಚಾರಣೆ ಮುಂದುವರಿಸಿ ತದನಂತರ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿ ಆತನಿಗೆ ನ್ಯಾಯಾಂಗ ಬಂದನ ವಿಧಿಸಲಾಗಿತ್ತು. 


               ಹೀಗಿರುವಾಗ,        ಆರೋಪಿಯು ತನ್ನ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ  ಶ್ರೀ ಮಹೇಶ್ ಕಜೆ ಮತ್ತು ಪುತ್ತೂರಿನ ವಕೀಲರಾದ ಶ್ರೀಮತಿ ರಮ್ಲತ್ ಅವರ ಮುಖಾಂತರ   ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್ ವಿ ರವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಸೆ.28: ಪುತ್ತೂರಿನಲ್ಲಿ ಬೃಹತ್ ಮಿಲಾದ್ ಸಮಾವೇಶ

Posted by Vidyamaana on 2023-09-27 07:22:37 |

Share: | | | | |


ಸೆ.28: ಪುತ್ತೂರಿನಲ್ಲಿ ಬೃಹತ್ ಮಿಲಾದ್ ಸಮಾವೇಶ

ಪುತ್ತೂರು: ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ದಾ ಮಜ್ಜಿಸ್ ಸೆ. 28 ಗುರುವಾರ ಸಂಜೆ 7 ಗಂಟೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವಜನ ಪರಿಷತ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಸಂಜೆ 4ಕ್ಕೆ ಕಬಕ ವೃತ್ತದಲ್ಲಿ ಬೃಹತ್ ವಾಹನ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್ ಸಾಹೇಬ್ ಚಾಲನೆ ನೀಡುವರು. ಈಸ್ಟರ್ನ್ ಗ್ರೂಪ್ ಮಾಲಕ ಜ.ಕಲಂದರ್ ಧ್ವಜ ಸ್ವೀಕಾರ ಮಾಡುವರು. ಬಳಿಕ ರ್ಯಾಲಿ ಹೊರಟು ಪ್ರಮುಖ ರಸ್ತೆಯಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ರ್ಯಾಲಿಯಲ್ಲಿ ಸುಮಾರು 200ರಿಂದ 300 ವಾಹನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರುಸಂಜೆ ಕಿಲ್ಲೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಕೇಂದ್ರ ಜುಮ್ಮಾ ಮಸೀದಿ ಮುದಗ್ರಿಸ್ ಬಹು.ಅಪ್ಪಯ್ಯದ್ ಅಹ್ಮದ್ ಪೊಕೋಯ ತಂಜಳ್ ದುವಾಶೀರ್ವಚನ ಮಾಡುವರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸುವರು. ಬಹು ಎಂ.ಎಂ. ಮಹ್ ರೂಫ್ ಸುಲ್ತಾನಿ ಅಲ್ ಪುರ್ಖಾನಿ ಆತೂರು ಉದ್ಘಾಟಿಸುವರು. ಬಹು.ಆಶಿಕ್ ದಾರಿಮಿ ಅಲಂಪುಝ ಪ್ರಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಉದ್ಯಮಿ ರಿಯಾಝ್ ಸಹಿತ ಹಲವಾರು ಧಾರ್ಮಿ ಮುಖಂಡರು, ಉದ್ಯಮಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Recent News


Leave a Comment: