ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ರಾಯಲ್ ಟ್ರಾವಂಕೂರ್ ಸಂಸ್ಥೆ ಹೆಸರಲ್ಲಿ ವಂಚನೆ ಆರೋಪ ; ಪಿಗ್ಮಿ ಠೇವಣಿದಾರರಿಂದ ಪೊಲೀಸ್ ಆಯುಕ್ತರಿಗೆ ದೂರು

Posted by Vidyamaana on 2023-12-08 04:24:07 |

Share: | | | | |


ರಾಯಲ್ ಟ್ರಾವಂಕೂರ್ ಸಂಸ್ಥೆ ಹೆಸರಲ್ಲಿ ವಂಚನೆ ಆರೋಪ ; ಪಿಗ್ಮಿ ಠೇವಣಿದಾರರಿಂದ ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ರಾಯಲ್ ಟ್ರಾವಂಕೂರ್ ಹೆಸರಿನ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರಿಗೆ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಣ ಕಳಕೊಂಡ ಗ್ರಾಹಕರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.


ಮಂಗಳೂರು ನಗರದ ಪಿವಿಎಸ್ ವೃತ್ತದಲ್ಲಿ ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹೆಸರಿನ ಹಣಕಾಸು ಸಂಸ್ಥೆಯಿದ್ದು, ಸೊಸೈಟಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಹೊಸ ಕಚೇರಿ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ಪ್ರತಿ ದಿನ ಪಿಗ್ಮಿ ಕಲೆಕ್ಷನ್ ಆಗುತ್ತಿದ್ದರಿಂದ ಹೆಚ್ಚಾಗಿ ಅಂಗಡಿ, ವ್ಯಾಪಾರಸ್ಥರೇ ಇದರ ಗ್ರಾಹಕರಾಗಿದ್ದರು.ಹಂಪನಕಟ್ಟೆಯ ದುಬೈ ಮಾರ್ಕೆಟ್ ನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಅಬ್ದುಲ್ ಅಜೀಜ್ ಎಂಬವರು 70 ಸಾವಿರ ಕಳಕೊಂಡಿದ್ದು, ಆಯುಕ್ತರಿಗೆ ದೂರು ನೀಡಲು ಹೋದವರಲ್ಲಿ ಒಬ್ಬರು. ಅವರು ಹೇಳುವ ಪ್ರಕಾರ, ಹಂಪನಕಟ್ಟೆಯಲ್ಲೇ 100ಕ್ಕೂ ಹೆಚ್ಚು ಗ್ರಾಹಕರಿದ್ದು, ದಿನವೂ ಒಂದಷ್ಟು ದುಡ್ಡು ಉಳಿತಾಯ ಆಗಲಿ ಎಂದು ಪಿಗ್ಮಿ ಕಟ್ಟುತ್ತಿದ್ದರು. ಆದರೆ ವಾರದ ಹಿಂದೆ ಕಲೆಕ್ಷನ್ ಆದ ಮೊತ್ತದಲ್ಲಿ ಹಣವನ್ನು ತೆಗೆಯೋಣ ಎಂದಾಗ, ಸಂಸ್ಥೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ಬಂದಿತ್ತು. ಪಿವಿಎಸ್ ನಲ್ಲಿರುವ ಕಚೇರಿಗೆ ತೆರಳಿ ನೋಡಿದಾಗ, ಮೇಲಿನಿಂದಲೇ ಹಣ ಇಲ್ಲ ಎಂದು ಸೂಚನೆ ಬಂದಿದೆ ಎನ್ನುವ ಮಾಹಿತಿಯನ್ನು ಸಿಬಂದಿ ನೀಡಿದ್ದಾರಂತೆ.


ಹೆಚ್ಚಿನ ಮಂದಿಗೆ ಸಂಸ್ಥೆಯಲ್ಲಿ ಸಮಸ್ಯೆ ಆಗಿರುವ ಮಾಹಿತಿ ಇಲ್ಲ. ಹೀಗಾಗಿ ಪೊಲೀಸ್ ದೂರು ನೀಡಲು ಬಂದಿಲ್ಲ. ಹಲವಾರು ಮಂದಿ 40-50 ಸಾವಿರ ಅಂತ ಹಣ ಕಳಕೊಂಡಿದ್ದಾರೆ ಎಂದು ಅಬ್ದುಲ್ ಅಜೀಜ್ ತಿಳಿಸಿದ್ದಾರೆ. ರಾಯಲ್ ಟ್ರಾವಂಕೂರ್ ಹಣಕಾಸು ಸಂಸ್ಥೆ 2021ರಲ್ಲಿ ಆರಂಭಗೊಂಡಿದ್ದು ಕೇರಳದ ಕಣ್ಣೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕಾಸರಗೋಡು, ಕಣ್ಣೂರು ಸೇರಿದಂತೆ ಉತ್ತರ ಕೇರಳದ ಹಲವು ಕಡೆಗಳಲ್ಲಿ ಶಾಖಾ ಕಚೇರಿಯಿದ್ದು, ಕರ್ನಾಟಕದ ಮಂಗಳೂರು ಮತ್ತು ತೊಕ್ಕೊಟ್ಟಿನಲ್ಲಿ ಕಳೆದ ವರ್ಷ ಕಚೇರಿ ಆರಂಭಿಸಿತ್ತು. ರಾಹುಲ್ ಚಕ್ರಪಾಣಿ ಎಂಬವರು ಸಂಸ್ಥೆಯ ಎಂಡಿ ಆಗಿದ್ದಾರೆ.

ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO

Posted by Vidyamaana on 2023-10-03 09:08:58 |

Share: | | | | |


ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO

ಇರಾಕ್‌: ಮದುವೆ ಎಂದರೆ ಜೀವನದ ಅವಿಸ್ಮರಣೀಯ ಸಮಯ. ಆದರೆ ನಮಗೆ ಈ ಮದುವೆಯೇ (Wedding) ದುಸ್ವಪ್ನವಾಗಿದ್ದು, ನಾವು ದೈಹಿಕವಾಗಿ ಬದುಕಿದ್ದರೂ, ಮಾನಸಿಕವಾಗಿ ನಾವು ಸತ್ತುಹೋಗಿದ್ದೇವೆ ಎಂದು 107 ಜನರನ್ನು ಬಲಿ ತೆಗೆದುಕೊಂಡ ಮದುವೆಯ ವರ (Groom) ರಿವಾನ್‌ ತಿಳಿಸಿದ್ದಾರೆ.ವಾರದ ಹಿಂದೆ ಉತ್ತರ ಇರಾಕ್‌ನ (Iraq) ಹಮ್ದನಿಹಾಯ್‌ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತವಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ಈ ದುರ್ಘಟನೆಗೆ ಕಾರಣವಾಗಿದ್ದ ಮದುವೆಯಲ್ಲಿ ವರನಾಗಿದ್ದ ರಿವಾನ್ ಹಾಗೂ ವಧು ಹನೀನ್‌ ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ.


💥 ಮದುವೆ ಮಂಟಪದಲ್ಲಿ 107 ಸಾವು : ನಮ್ಮ ಮದುವೆಯೇ ದುರಂತವೆಂದ ನವದಂಪತಿ : VIDEO


ನಾವು ಬಾಹ್ಯವಾಗಿ ಓಡಾಡುತ್ತಿದ್ದರೂ ಒಳಗೊಳಗೆ ಪ್ರತೀ ಕ್ಷಣ ಸಾಯುತ್ತಿದ್ದೇವೆ. ನನ್ನ ಪತ್ನಿ ಹನೀನ್ ಇನ್ನೂ ಆಘಾತದಲ್ಲಿದ್ದಾರೆ. ಇದರ ಜೊತೆಗೆ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಮಾತನಾಡಲು ಆಗದ ಸ್ಥಿತಿಯಲ್ಲಿದ್ದೇವೆ. ಆಕೆಯ ತಂದೆಯು ಘಟನೆ ವೇಳೆ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ವರ ಬೇಸರ ವ್ಯಕ್ತಪಡಿಸಿದರು.ಮದುವೆ ವೇಳೆ ಪಟಾಕಿಯನ್ನು ಒಳಾಂಗಣದಲ್ಲಿ ಸಿಡಿಸಲಾಗಿತ್ತು. ಇದರಿಂದಾಗಿ ಛಾವಣಿಗೆ ಬೆಂಕಿ ತಗುಲಿ ಅನಾಹುತ ಆಗಿರುವ ಸಾಧ್ಯತೆಯಿದೆ. ಇದು ಶಾರ್ಟ್-ಸರ್ಕ್ಯೂಟ್ ಆಗಿರಬಹುದು, ಈ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದರು.


ಮಂಗಳವಾರ ಮೊಸುಲ್‌ನ ಪೂರ್ವದಲ್ಲಿರುವ ಕ್ರಿಶ್ಚಿಯನ್ನರು ಹೆಚ್ಚು ವಾಸಿಸುವ ಪಟ್ಟಣವಾದ ಹಮ್ದನಿಯಾದದಲ್ಲಿ ಮದುವೆ ನಡೆದಿತ್ತು. ಈ ವೇಳೆ ನೂತನ ವಧು ವರರು ನರ್ತಿಸುತ್ತಿದ್ದರು. ಇದನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ ಅಲಂಕಾರಕ್ಕೆಲ್ಲ ಬೆಂಕಿ ತಗುಲಿದೆ. ಈ ವೇಳೆ ಮದುವೆ ಸಂಭ್ರಮ ಕಳೆಗುಂದಿ ಸ್ಮಶಾನದ ವಾತಾವರಣ ನಿರ್ಮಾಣವಾಗಿತ್ತು. ವಧು ತನ್ನ ತಾಯಿ, ಸಹೋದರನನ್ನು ಕಳೆದುಕೊಂಡಿದ್ದಳು. ದುರಂತದ ವೇಳೆ ಸುಮಾರು 107 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

ಆ. 28: ಪುತ್ತೂರು ಶಾಸಕರ ನೂತನ ಕಚೇರಿ ಉದ್ಘಾಟನೆ

Posted by Vidyamaana on 2023-08-22 16:20:28 |

Share: | | | | |


ಆ. 28: ಪುತ್ತೂರು ಶಾಸಕರ ನೂತನ ಕಚೇರಿ ಉದ್ಘಾಟನೆ

ಪುತ್ತೂರು: ನೂತನ‌ ಶಾಸಕ ಅಶೋಕ್ ಕುಮಾರ್ ರೈ ಅವರ ನೂತನ ಕಚೇರಿ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಆ. 28ರಂದು ಪುತ್ತೂರು ಶಾಸಕರ ಸುಸಜ್ಜಿತ ಕಚೇರಿ ಲೋಕಾರ್ಪಣೆಗೊಳ್ಳಲಿದೆ.

ಹಿಂದಿನ ಸಹಾಯಕ ಆಯುಕ್ತರ ಕಚೇರಿ, ನಂತರ‌ ಪುಡಾ ಆಫೀಸ್ ಆಗಿದ್ದ ಕಟ್ಟಡದಲ್ಲೇ ಶಾಸಕರ ನೂತನ ಕಚೇರಿ ಇರಲಿದೆ. ಸಾರ್ವಜನಿಕರ ಅನುಕೂಲತೆ ದೃಷ್ಟಿಯನ್ನಿಟ್ಟುಕೊಂಡು ಹೊಸ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ.

ಸಾಕಷ್ಟು ಸ್ಥಳಾವಕಾಶ ಇಟ್ಟುಕೊಂಡು ನೂತನ ಕಚೇರಿಯ ಪ್ಲ್ಯಾನ್ ಸಿದ್ಧಪಡಿಸಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಸುವ್ಯವಸ್ಥಿತವಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ.

ಪುರುಷರಿಗೂ ಬಂತು ಗರ್ಭನಿರೋಧಕ ಚುಚ್ಚುಮದ್ದು; ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ ಎನ್ನುತ್ತದೆ ಅಧ್ಯಯನ!

Posted by Vidyamaana on 2023-10-22 21:23:55 |

Share: | | | | |


ಪುರುಷರಿಗೂ ಬಂತು ಗರ್ಭನಿರೋಧಕ ಚುಚ್ಚುಮದ್ದು; ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ ಎನ್ನುತ್ತದೆ ಅಧ್ಯಯನ!

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿಶ್ವದಲ್ಲೇ ಮೊದಲು ಚುಚ್ಚುಮದ್ದಿನ ಪುರುಷ ಗರ್ಭನಿರೋಧಕದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದು ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.25-40 ವರ್ಷ ವಯಸ್ಸಿನ 303 ಅಭ್ಯರ್ಥಿಗಳನ್ನು ಒಳಗೊಂಡಿರುವ ಮೂರು ಹಂತದ ಕ್ಲಿನಿಕಲ್ ಪ್ರಯೋಗದ ಸಂಶೋಧನೆಗಳು ಕಳೆದ ತಿಂಗಳು ಅಂತರರಾಷ್ಟ್ರೀಯ ಮುಕ್ತ-ಪ್ರವೇಶ ಆಂಡ್ರೊಲಜಿ ಜರ್ನಲ್‌ನಲ್ಲಿ ಪ್ರಕಟವಾಗಿವೆ.ಮೂರು ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಇಂಡಿಯಾ (DCGI) ಅನುಮತಿ ನೀಡಿದೆ ಮತ್ತು ಆಯಾ ಕೇಂದ್ರಗಳ ಸಾಂಸ್ಥಿಕ ನೈತಿಕ ಸಮಿತಿಗಳಿಂದ ಅನುಮೋದಿಸಲಾಗಿದೆ. ಆಸ್ಪತ್ರೆ ಆಧಾರಿತ ಅಧ್ಯಯನವನ್ನು ಐದು ಕೇಂದ್ರಗಳಲ್ಲಿ ನಡೆಸಲಾಯಿತು. ಮೂರು ಹಂತ ಕ್ಲಿನಿಕಲ್ ಪ್ರಯೋಗಗಳನ್ನು ಐದು ವಿಭಿನ್ನ ಕೇಂದ್ರಗಳಲ್ಲಿ (ನವದೆಹಲಿ, ಉಧಂಪುರ್, ಲುಧಿಯಾನ, ಜೈಪುರ ಮತ್ತು ಖರಗ್‌ಪುರ) ನಡೆಸಲಾಗಿದೆ.


ಅಧ್ಯಯನ ನಡೆದಿದ್ದು ಹೇಗೆ?: ಕಳೆದ ಏಳು ವರ್ಷಗಳ ಕಾಲ 303 ಆರೋಗ್ಯವಂತ ವಿವಾಹಿತ ಪುರುಷರ ಮೇಲೆ ಈ ಇಂಜೆಕ್ಷನ್‌ನ ಪ್ರಯೋಗ ಮಾಡಲಾಗಿತ್ತು. ಇದರ ಫಲಿತಾಂಶದ ಮೇಲೆ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ. ಹಾರ್ಮೋನ್ ಅಲ್ಲದ ಚುಚ್ಚುಮದ್ದಿನ ಪುರುಷ ಗರ್ಭನಿರೋಧಕ RISUG (ಮಾರ್ಗದರ್ಶನದ ಅಡಿಯಲ್ಲಿ ವೀರ್ಯದ ಹಿಮ್ಮುಖ ಪ್ರತಿಬಂಧ) ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಈ ಅಧ್ಯಯನವು ಬಹಿರಂಗಪಡಿಸಿದೆ. ವೀರ್ಯ ಕೋಶಗಳು ವೃಷಣದಿಂದ ವೀರ್ಯ ನಾಳದ ಮೂಲಕ ಶಿಶ್ನವನ್ನು ತಲುಪುತ್ತವೆ.ಇದು ದೀರ್ಘಕಾಲ ಕೆಲಸ ಮಾಡುತ್ತದೆ. ಮೂರನೇ ಹಂತದ ಅಧ್ಯಯನದ ಆವಿಷ್ಕಾರಗಳನ್ನು ಅಂತಾರಾಷ್ಟ್ರೀಯ ಮುಕ್ತ ಪ್ರವೇಶ ಜರ್ನಲ್ ಆಂಡ್ರೊಲಜಿಯಲ್ಲಿ ಪ್ರಕಟಿಸಲಾಗಿದೆ.25-40 ವರ್ಷ ವಯಸ್ಸಿನವರನ್ನು ಕುಟುಂಬ ಯೋಜನೆಗಾಗಿ ಆಯ್ಕೆ ಮಾಡಲಾಯಿತು ಮತ್ತು ಅವರಿಗೆ 60 mg ರಿವರ್ಸಿಬಲ್ ಚುಚ್ಚುಮದ್ದನ್ನು ನೀಡಲಾಯಿತು. ವಿಶೇಷವೆಂದರೆ ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ RISUG ನೊಂದಿಗೆ 99 ಪ್ರತಿಶತ ಗರ್ಭಧಾರಣೆಯನ್ನು ತಡೆಯಬಹುದು ಎಂದು ಐಸಿಎಂಆರ್‌ ತನ್ನ ಪ್ರಯೋಗದ ಮೂಲಕವಾಗಿ ತಿಳಿಸಿದೆ. ಗರ್ಭನಿರೋಧಕ ಅಭಿವೃದ್ಧಿಯಲ್ಲಿ, RISUG ಎಲ್ಲಾ ಇತರ ಗರ್ಭನಿರೋಧಕಗಳಿಗೆ ಹೋಲಿಸಿದರೆ ಗಂಡು ಮತ್ತು ಹೆಣ್ಣು ಎರಡೂ ಗರ್ಭನಿರೋಧಕ ಕಾರ್ಯಕ್ರಮಕ್ಕೆ ಪ್ರವೇಶದ ಹೊಸ್ತಿಲಲ್ಲಿರುವುದರಿಂದ ಹೆಚ್ಚಿನ ಪರಿಣಾಮಕಾರಿತ್ವವನ್ನು ಪ್ರಸ್ತುತಪಡಿಸುತ್ತದೆ. ಪ್ರಯೋಗಕ್ಕೆ ಒಳಪಟ್ಟ ವಿವಾಹಿತ ಪುರುಷರ ಪತ್ನಿಯರ ಆರೋಗ್ಯದ ಮೇಲೂ ನಿಗಾ ಇಡಲಾಗಿದ್ದು, ಯಾವುದೇ ದುಷ್ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಈ ಗರ್ಭನಿರೋಧಕವು 13 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಫಾರ್ಮಾ ಕಂಪನಿಯು ಈ ರೀತಿಯ ಉತ್ಪನ್ನವನ್ನು ಮಾರಾಟ ಮಾಡಲು ಬಯಸುವುದಿಲ್ಲ, ಅದು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿ ಉಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಮಾರುಕಟ್ಟೆಗೆ ತರುವ ಪ್ರಕ್ರಿಯೆಯು ಸವಾಲಾಗಬಹುದು. ವೀರ್ಯ ಕೋಶಗಳು ವೃಷಣದಿಂದ ವೀರ್ಯ ನಾಳದ ಮೂಲಕ ಶಿಶ್ನವನ್ನುತಲುಪುತ್ತವೆ. RISUG ಅನ್ನು ಐಐಟಿ ಖರಗ್‌ಪುರದ ಡಾ. ಸುಜೋಯ್ ಕುಮಾರ್ ಗುಹಾ ಅಭಿವೃದ್ಧಿಪಡಿಸಿದ್ದಾರೆ.


ಅಧ್ಯಯನದ ಪ್ರಕಾರ, ನಿರಂತರವಾಗಿ ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯೊಂದಿಗೆ, ಜನಸಂಖ್ಯೆಯ ನಿಯಂತ್ರಣಕ್ಕಾಗಿ ಪುರುಷ ಗರ್ಭನಿರೋಧಕ ಆಧುನಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ. ಸಂತಾನಹರಣವು ಗರ್ಭನಿರೋಧಕ ಕ್ರಮವಾಗಿ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ ಸಹ, ಈ ವಿಧಾನದ ಕೆಲವು ಪ್ರಮುಖ ಮಿತಿಗಳು ಸುಧಾರಿತ ತಂತ್ರಗಳ ಅಭಿವೃದ್ಧಿಗೆ ಕರೆ ನೀಡುತ್ತವೆ.

ಮಾ.2, 3ಕ್ಕೆ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಮಟ್ಟದ ತುಳುವೆರೆ ಮೇಳೊ

Posted by Vidyamaana on 2024-02-27 13:11:22 |

Share: | | | | |


ಮಾ.2, 3ಕ್ಕೆ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ  ಪುತ್ತೂರು ತಾಲೂಕು ಮಟ್ಟದ ತುಳುವೆರೆ ಮೇಳೊ

ಪುತ್ತೂರು: ತುಳು ಕೂಟೊ ಪುತ್ತೂರು ತಾಲೂಕು ಇದರ ವತಿಯಿಂದ ತುಳುವೆರೆ ಮೇಳೊ-2024 ಮತ್ತು ತೆನೆಸ್ ಮೇಳೊ ಕಾರ್ಯಕ್ರಮ ಮಾ.2 ಮತ್ತು 3ರಂದು ಪುತ್ತೂರು ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರುಗಲಿದೆ ಎಂದು ತುಳುವೆರೆ ಮೇಳೊ ಸಮಿತಿ ಇದರ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವಿರೇಂದ್ರ ಹೆಗ್ಗಡೆಯವರ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಅವರ ಆಶಿರ್ವಾದ ಪಡೆದು ಕೊಂಡು ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.2ರಂದು ಮೇಳದಲ್ಲಿ ತೆನೆಸ್ ಮೇಳೊ, ತುಳು ಪದ ನಲಿಕೆ, ತುಡರ ಪದ(ಕತ್ತಲ ಹಾಡು) ಜರುಗಲಿದ್ದು, ಮಾ.3ರಂದು ತುಳುವೆರೆ ಮೇಳೊ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಐವರಿಗೆ ಪ್ರಶಸ್ತಿ ಪ್ರದಾನ, ಅಮೃತ ಸೋಮೇಶ್ವರ ಅವರ ನೆನಪು, ಪ್ರಬಂದ ಮಂಡನೆ, ಕವಿ ಕೂಟೊ, ತುಳು ಮನರಂಜನೆ, ಯಕ್ಷಗಾನ ತಾಳಮದ್ದಳೆ, ಬಲೆ ತೆಲಿಪುಕೊ, ತುಳು ಸಿನಿಮದ ಹಾಡುಗಳು, ನಾಟಕ ಮೇಳ ಜರುಗಲಿದೆ ಎಂದವರು ಹೇಳಿದರು.ತುಳುವೆರೆ ಮೇಳೊ ಇದರ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅವರು ಮಾತನಾಡಿ ಮಾ.2ರಂದು ಬೆಳಿಗ್ಗೆ ಆಹಾರ ಮೇಳ ಮತ್ತು ವ್ಯಾಪಾರ ಮಳಿಗೆಯ ಉದ್ಘಾಟನೆ ನಡೆಯಲಿದೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಅವರು ಉದ್ಘಾಟಿಸಲಿದ್ದಾರೆ. ಮೂಡಾಯಿ ತೆನೆಸ್ ಅನ್ನು ಡಾ. ಸುರೇಶ್ ಪುತ್ತೂರಾಯ, ಪಡ್ಡಾಯಿ ತೆನೆಸ್ ಅನ್ನು ಹೊಟೇಲ್ ಅಭಿಮಾನ್ ಇದರ ಮಾಲಕ ಅಭಿಜಿತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರೂಪೇಶ್ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್ ಇದರ ಅಧ್ಯಕ್ಷ ಡಾ. ಹರ್ಷಕುಮಾ‌ರ್ ರೈ ಮಾಡಾವು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಮಧ್ಯಾಹ್ನ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರದ ವ್ಯವಸ್ಥೆಯಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಗಂಟೆ 3.30ರಿಂದ

ಶರಣ್ಯ, ಶ್ರಾವಣ್ಯ ರೈ, ಧನ್ವಿ ರೈ ಪಾಣಾಜೆ, ನವ್ಯ ರೆಂಜಲಾಡಿ ಮತ್ತು ಬಳಗದಿಂದ ತುಳು ಪದ ನಲಿಕೆ, ಗುರುಕುಲ ಕಲಾ ಕೇಂದ್ರ ಪುರುಷರಕಟ್ಟೆ ಇದರ ವತಿಯಿಂದ ಗಾನ ನೃತ್ಯ ವೈಭವ ನಡೆಯಲಿದೆ. ಸಂಜೆ ಗಂಟೆ 7ರಿಂದ ಮಣಿನಾಲ್ಕೂರ ಅವರಿಂದ ತುಡ ಪದ (ಕತ್ತಲ ಹಾಡು) ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ಸಾಹಿತಿ ನಾರಾಯಣ ಕುಕ್ಕುವಳ್ಳಿ ದೀಪ ಪ್ರಜ್ವಲಿಸಲಿದ್ದಾರೆ.ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾ.3ಕ್ಕೆ ತುಳುವೆರೆ ಮೇಳೊ-2024

ಮಾ.೩ರಂದು ತುಳುವೆರೆ ಮೇಳೊ ಕಾರ್ಯಕ್ರಮ ಬೆಳಿಗ್ಗೆ ಗಂಟೆ 9.30ರಿಂದ ಆರಂಭಗೊಳ್ಳಲಿದೆ. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಮಂಡಳಿ ಪುತ್ತೂರು ಘಟಕದವತಿಯಿಂದ ತುಳು ಪದರಂಗಿತ ನಡೆಯಲಿದ್ದು ಬಳಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಕಲಸೆಗೆ ಭತ್ತವನ್ನು ತುಂಬಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಳುವೆರೆ ಮೇಳೊ ಇದರ ಅಧ್ಯಕ್ಷ ರೇ ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಎ.ಸಿ.ಭಂಡಾರಿ, ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಕಾರ್ಯದರ್ಶಿ ಕೆ.ವಿಶ್ವಾಸ್‌ ಶೆಣೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಸಿಟಿ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕೋಟಿ ಚೆನ್ನಯಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರಭೆ ಮಾಜಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ, ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಇದೇ ಸಂದರ್ಭ ತುಳುವೆರೆ ಮೇಳದಲ್ಲಿ ಐವರು ಸಾಧಕರಿಗೆ ಬಿರ್ದ್‌ದ ತುಳುವೆ‌ರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಜಯ ಕುಮಾ‌ರ್ ಹೆಬ್ಬಾರಬೈಲು, ಯೂಸೂಪ್ ಮಠ, ಕೊಳ್ತಿಗೆ ನಾರಾಯಣ ಗೌಡ, ಯಮುನಾ ಪೂಜಾರಿ, ಗುಬ್ಬಿ ಕೆಮ್ಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ತುಳುವಾಮೃತ:

ಮಧ್ಯಾಹ್ನ ಗಂಟೆ 12ಕ್ಕೆ ಅಮೃತ ಸೋಮೇಶ್ವರ ಅವರ ನೆನಪು ತುಳುವಾಮೃತ ಕಾರ್ಯಕ್ರಮ ನಡೆಯಲಿದೆ. ತುಳುಕೂಟೊ ಇದರ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಸುದ್ದಿ ಬಿಡುಗಡೆ ಪತ್ರಿಕೆಯ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ವಿಶ್ರಾಂಶ ಪ್ರಾಂಶುಪಾಲ ಝೇವಿಯ‌ರ್ ಡಿಸೋಜ, ಬಿ.ವಿ.ಸೂರ್ಯನಾರಾಯಣ ಅವರು ಮಾತನಾಡಲಿದ್ದಾರೆ. ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಮಹಿಳಾ ಕಾಲೇಜಿನ ಉಪನ್ಯಾಸಕ ನರೇಂದ್ರ ರೈ ದೇರ್ಲ, ರಂಗ ನಿರ್ದೇಶಕ ಐ.ಕೆ.ಬೊಳುವಾರು, ಯಕ್ಷಗಾನ ಕಲಾವಿದ ಜಬ್ಬ‌ರ್ ಸಮೊ ಪ್ರಬಂದ ಮಂಡನೆ ಮಾಡಲಿದ್ದಾರೆ.ಇದಾದ ಬಳಿಕ ಕಬಿ ಕುಟೊ ನಡೆಯಲಿದ್ದು, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈ, ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎ.ಪಿ.ಭಟ್, ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ರಾವ್ ಮಾತನಾಡಲಿದ್ದಾರೆ. ಸಂಜೆ ಗಂಟೆ 4ರಿಂದ ತುಳು ಮನರಂಜನೆ ನಡೆಯಲಿದ್ದು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಶಾವಸವಿ, ರೋಟರಿ ವಲಯ 4ರ ಸಹಾಯಕ ಗವರ್ನರ್ ರತ್ನಾಕರ ರೈ ಕೆದಂಬಾಡಿಗುತ್ತು, ತುಳು ಅಪ್ಪೆಕೂಟೊ ಇದರ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡಲಿದ್ದಾರೆ. ಸಂಜೆ ಗಂಟೆ 4 ರಿಂದ ಧೀಶಕ್ತಿ ಮಹಿಳಾ ಯಕ್ಷ ಬಳದಿಂದ ಸಮರ ಸೌಗಂಧಿಕಾ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಗಂಟೆ 5.30ರಿಂದ ಬಲೆ ತಲಿಪುಕೊ ಕಾರ್ಯಕ್ರಮ ನಡೆಯಲಿದೆ. ಗಂಟೆ 6.30ರಿಂದ ಮಿಥುನ್ ರಾಜ್ ವಿದ್ಯಾಪುರ ಮತ್ತು ಚಂದ್ರಶೇಖರ ಹೆಗ್ಡೆ ಬಳಗದಿಂದ ತಳು ಸಿನಿಮಾ ಹಾಡುಗಳ ಪ್ರಸ್ತುತಿ ನಡೆಯಲಿದೆ. ಗಂಟೆ 7 ರಿಂದ ನಾಟಕ ಮೇಳ ನಡೆಯಲಿದೆ. ರೋಶನ್ ರೈ ಬನ್ನೂರು ಅವರು ಅಧ್ಯಕ್ಷತೆ ವಹಿಸಲಿದ್ದು, ನಾಟಕ ನಿರ್ದೇಶಕ ಮತ್ತು ಸಿನಿಮಾ ಕಲಾವಿದ ಸುಂದರ ರೈ ಮಂದಾರ, ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಮಾತನಾಡಲಿದ್ದಾರೆ. ಬಳಿಕ ತುಳು ಹಾಸ್ಯ ನಾಟಕ ನಂಬಕೆ ದಾಯೆಗ್ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಎಂದು ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ತುಳುವೆರೆ ಮೇಳೊ ಸಮಿತಿ ಇದರ ಕಾರ್ಯದರ್ಶಿ ಡಾ| ರಾಜೇಶ್ ಬೆಜ್ಜಂಗಳ, ಜೊತೆ ಕಾರ್ಯದರ್ಶಿ ಉಲ್ಲಾಸ್ ಪೈ ಉಪಸ್ಥಿತರಿದ್ದರು.

ಸೌಜನ್ಯಾ ಪ್ರಕರಣ ; ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ತಂತ್ರ - ವೀರೇಂದ್ರ ಹೆಗ್ಗಡೆ

Posted by Vidyamaana on 2023-07-20 02:00:53 |

Share: | | | | |


ಸೌಜನ್ಯಾ ಪ್ರಕರಣ ; ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ತಂತ್ರ - ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿರುವುದು, ಧರ್ಮಸ್ಥಳದ ಹೆಸರನ್ನು ಎಳೆದು ತಂದು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರು ತಮ್ಮ ವ್ಯಾಪ್ತಿಯ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದಾರೆ.‌ ಸಭೆಯಲ್ಲಿ ಪ್ರಸ್ತುತ ವಿದ್ಯಮಾನಗಳು, ಸೌಜನ್ಯಾ ಕೊಲೆ ಪ್ರಕರಣದ ಹೆಸರಲ್ಲಿ ಕ್ಷೇತ್ರದ ಹೆಸರು ಕೆಡಿಸುತ್ತಿರುವ ವಿಚಾರದ ಬಗ್ಗೆ ಹೆಗ್ಗಡೆ ಮಾತನ್ನಾಡಿದ್ದಾರೆ.‌ 


ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆಗಳಾಗಿವೆ. ಹಲವು ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ.‌ ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡ್ತದೆ. ನಮಗೆ ಕೋಟ್ಯಾಂತರ ಅಭಿಮಾನಿಗಳ ಬಳಗ ಇದೆ, ಇದರಲ್ಲಿ ಕೆಲವರಿಗೆ ದ್ವೇಷ ಆಗಿದೆ.‌


ಇದಕ್ಕೆ ದ್ವೇಷ, ಅಸೂಯೆ ಕಾರಣ, ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ ಅಂತ ದ್ವೇಷ ಬೆಳೆಸಿಕೊಂಡಿದ್ದಾರೆ.‌ ಕ್ಷೇತ್ರದ ಸಂಪತ್ತನ್ನ ಹೇಗೆ ಬಳಸ್ತೀವಿ ಅನ್ನೋದ್ರ ಮೇಲೆ ಅದರ ಪರಿಣಾಮ ಇದೆ. ಈಗ ಅವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ. ಆ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಸಿಬಿಐಗೆ ಒಪ್ಪಿಸಿ ಅಂತ ಮುಖ್ಯಮಂತ್ರಿಗಳಿಗೆ ಹೇಳಿದ್ದು ನಾನೇ. ಈಗ ಬೇಕಿದ್ದರೆ ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ, ಅದರಿಂದ ನಮಗೆ ತೊಂದರೆ ಇಲ್ಲ. ಆದರೆ ಕ್ಷೇತ್ರದ ವಿಷಯ ಯಾಕೆ ಎಳೀತಾರೆ ಅಂತ ಗೊತ್ತಾಗ್ತಿಲ್ಲ. 


ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ.‌ ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ. ಶತ್ರುತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರೋ ಸಮಸ್ಯೆ. ನಮ್ಮ ಸಿಬ್ಬಂದಿಗಳಿಗೆ ಇದರ ಹಿಂದಿನ ಸತ್ಯ ಗೊತ್ತಿರಬಹುದು, ಆದರೂ ನಾವು ಯಾಕೆ ಸುಮ್ಮನಿದ್ದೇವೆ ಅಂತ ಅನಿಸಬಾರದು. ನಾವು ಸುಮ್ಮನಿರೋದು ಈ ಕುರಿತು ಪರ- ವಿರೋಧ ಸಂಭಾಷಣೆ ಆರಂಭವಾಗಬಾರದು ಅಂತಷ್ಟೇ. ಅನೇಕರು ಬಂದು ಕಣ್ಣೀರು ಹಾಕ್ತಾ ಇದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ. ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಜನರಿಗೆ ಗೊತ್ತಾಗ್ತಿದೆ. 


ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವೇ ಇಲ್ಲ. ನೀವೆಲ್ಲಾ ನಿಮ್ಮ ಸಿಬ್ಬಂದಿ ಕರೆದು ಈ ಬಗ್ಗೆ ಗಟ್ಟಿಯಾಗಿ ಹೇಳಬೇಕಾಗಿದೆ.‌ ಧರ್ಮಸ್ಥಳದ ಸಿಬ್ಬಂದಿಯ ಕಾರಣಕ್ಕೆ ಇಲ್ಲಿ ಎಲ್ಲವೂ ಚೆನ್ನಾಗಿದೆ. ಸುಸ್ಥಿತಿಯಲ್ಲಿದೆ. ನಮ್ಮ ಒಳ್ಳೆಯ ಕಾರ್ಯಗಳು‌ ಯಾವತ್ತೂ ನಡೆದುಕೊಂಡು ಹೋಗುತ್ತೆ, ಇದು ಮಧ್ಯದಲ್ಲಿ ಬಂದ ಮೋಡವಷ್ಟೇ. ಈ ಪರದೆ ತೆಗೀಬೇಕು, ಅದನ್ನ ದೇವರು ತೆಗೀತಾನೆ. ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ, ನನಗೆ ಯಾವ ಭಯವೂ ಇಲ್ಲ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡಲ್ಲ. 


ವೈಯಕ್ತಿಕ ಅವಮಾನ ಮತ್ತು ವೈಯಕ್ತಿಕ ಆರೋಪ ಸರಿಯಲ್ಲ, ಅದನ್ನು ನಿಲ್ಲಿಸಬೇಕು. ನಮ್ಮ ಅಭಿಮಾನಿಗಳು ರೆಡಿ ಇದ್ದಾರೆ, ಏನಾದ್ರೂ ಮಾಡಲಿಕ್ಕೆ.‌ ಆದರೆ ನಾನು ಏನೂ ಮಾಡಬೇಡಿ ಅಂದಿದ್ದೇನೆ, ನೈತಿಕ ಶಕ್ತಿ ದೊಡ್ಡದು ಅಂದಿದ್ದೇನೆ ಎಂದು ವಿವರವಾಗಿ ಮಾತನಾಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಧರ್ಮಸ್ಥಳದ ಹೆಸರೆತ್ತಿ ಆರೋಪ ಮಾಡಿರುವುದು ತೀವ್ರ ಸಂಚಲನ ಮೂಡಿಸಿದೆ.‌ ಈಗ ಧರ್ಮಾಧಿಕಾರಿ ಹೆಗ್ಗಡೆಯವರೇ ಸ್ಪಷ್ಟನೆಯ ಮೂಲಕ ಸಿಬಂದಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.



Leave a Comment: