ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

Posted by Vidyamaana on 2023-01-29 08:38:59 |

Share: | | | | |


ಆಟ, ಹುಡುಗಾಟ! ಯಾಮಾರಿದ್ರೆ ಸಾವಿನೂಟ! ಮುದ್ದು ಮನಸ್ಸಿನ ವಿದ್ಯಾರ್ಥಿಗಳೇ ಟಾರ್ಗೆಟ್! ಪೋಷಕರೇ ಎಚ್ಚರ! ಸಾವಿನೊಡನೆ ಸರಸವಾಡುತ್ತಿದೆ ಆನ್ಲೈನ್ ಗೇಮ್

ಶಾಲಾ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಆನ್ಲೈನ್ ಗೇಮ್ಗಳ ಹಾವಳಿ ಜೋರಾಗಿದೆ. ಬೇಡ ಬೇಡ ಎಂದರೂ ಮಕ್ಕಳು ಇಂತಹ ಆನ್ಲೈನ್ ಗೇಮ್ಗಳ ದಾಸರಾಗುತ್ತಿದ್ದಾರೆ. ಇನ್ನೊಂದರ್ಥದಲ್ಲಿ ದಾಸರಾಗುವಂತೆ ಮಾಡಲಾಗುತ್ತಿದೆ. ಆದ್ದರಿಂದ ಪೋಷಕರೇ, ಶಿಕ್ಷಕರೇ ಎಚ್ಚರೆಚ್ಚರ ಎಚ್ಚರ!!

ಮಕ್ಕಳು ಹೇಳಿದಂತೆ ಕೇಳುತ್ತಿಲ್ಲ ಎಂದು ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರೇ, ಆನ್ಲೈನ್ ಕ್ಲಾಸ್ಗೆಂದು ಮೊಬೈಲ್ ಕಡ್ಡಾಯ ಮಾಡಿರುವ ಶಿಕ್ಷಕರೇ, ದಯವಿಟ್ಟು ಇತ್ತ ಕಡೆ ಸ್ವಲ್ಪ ಗಮನ ಕೊಡಿ. ಒಂದಷ್ಟು ಸಮಯ ಫ್ರೀ ಮಾಡಿಕೊಂಡು, ಓದಿ. ಸಾವನ್ನು ಮೈಮೇಲೆ ಎಳೆದುಕೊಂಡ ವಿದ್ಯಾರ್ಥಿಗಳ ಅಪ್ಪ - ಅಮ್ಮನ ಸ್ಥಾನದಲ್ಲಿ ನಿಂತು ಯೋಚಿಸಿ.

ಕರಾವಳಿಯ ಒಂದು ಮನೆ. ಪುಟ್ಟ ಸಂಸಾರದ ಸಂತೋಷಕ್ಕೆ ಕೊಳ್ಳಿ ಇಟ್ಟದ್ದೇ ಮೊಬೈಲ್. ಮೊದಮೊದಲು ಮಗ ಆಡಿಕೊಂಡಿರಲಿ ಎಂದು ಕೈಗೆ ಮೊಬೈಲ್ ನೀಡಿದರು ಪೋಷಕರು. ಆತ ಮಾಡುತ್ತಿದ್ದ ಚೇಷ್ಟೇಗಳನ್ನು ಕಂಡು ಸಂತೋಷ ಪಡುತ್ತಿದ್ದರು. ಬರಬರುತ್ತಾ, ಮಗ ಆನ್ಲೈನ್ ಗೇಮ್ಗಳ ದಾಸನಾದ.

ಗೇಮ್ ಒಂದರಲ್ಲಿ ಸಂಭಾಷಣೆ ಮಾಡುವ ಮೂಲಕ ಆಟ ಮುಗಿಸಲಾಗುತ್ತದೆ - ಅಲ್ಲಿ ಯಾರಾದರೂ ಇದ್ದೀರಾ ಎಂದು ಹುಡುಗ ಪ್ರಶ್ನಿಸುತ್ತಾನೆ. ಆ ಕ್ಷಣ ಮೊಬೈಲ್ ಸ್ಕ್ರೀನ್ ಮೇಲ್ಗಡೆ ವ್ಯಕ್ತಿಯೋರ್ವ ಕಾಣಿಸಿಕೊಳ್ಳುತ್ತಾನೆ. ಆತನ ತಲೆಗೇ ಗನ್ನಿಂದ ಶೂಟ್ ಮಾಡಬೇಕು. ಅಲ್ಲಿಗೆ ಹುಡುಗ ಜಯಶಾಲಿ ಎಂದು ಘೋಷಿಸಲಾಗುತ್ತದೆ.

ಇನ್ನೊಂದು ಗೇಮ್ ಹೀಗಿತ್ತು - ಆಟದ ಕೊನೆಯಲ್ಲಿ ಒಂದು ಮೆಟ್ಟಿಲಿನಿಂದ ಇನ್ನೊಂದು ಮಗ್ಗುಲಿಗೆ ಹಾರುವಂತೆ ಸೂಚನೆ ನೀಡಲಾಯಿತು. ಅದರಂತೆ ಹುಡುಗ ಹಾರಿದ. ಅಲ್ಲಿಗೆ ಜಯಶಾಲಿ ಎಂದು ಘೋಷಿಸಲಾಯಿತು.

ಈ ಎರಡು ಘಟನೆಗಳು ಪೋಷಕರ ಗಮನಕ್ಕೆ ಬಂದಿತು. ಇದ್ಯಾಕೋ ಅನಾಹುತಕ್ಕೆ ದಾರಿ ಎನ್ನುವುದನ್ನು ಮನಗಂಡರು. ಈಗ, ಮಗನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ನೋಡಿದರು. ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆತ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ. ದಾರಿ ಕಾಣದ ತಂದೆ, ಮೊಬೈಲ್ ಕಿತ್ತುಕೊಂಡು ನೆಲಕ್ಕಪ್ಪಳಿಸಿಯೇ ಬಿಟ್ಟರು. ಅಲ್ಲಿಗೀಕಥೆ ಮುಗಿಯಿತು.

ವಾಸ್ತವ ಹೇಗಿದೆ ನೋಡಿ. ಪುತ್ತೂರಿನಂತಹ ಬೆಳೆಯುತ್ತಿರುವ ಪಟ್ಟಣದಲ್ಲಿ ಒಂದಾದ ನಂತರ ಒಂದರಂತೆ ವಿದ್ಯಾರ್ಥಿಗಳ ಸಾವು ದಾಖಲಾಗುತ್ತಿದೆ. ಪೋಷಕರು ಹೇಳದೇ ಇದ್ದರೂ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇದ್ದರೂ, ಆನ್ಲೈನ್ ಆಟದ ಹುಡುಗಾಟವೇ, ಸಾವಿನೂಟಕ್ಕೆ ಕಾರಣ ಎನ್ನುವುದು ಖಾತ್ರಿಯಾಗಿದೆ.

ಅದೇಷ್ಟು ವಿದ್ಯಾರ್ಥಿಗಳು ಆನ್ಲೈನ್ ಗೇಮ್ಗಳ ದಾಸರಾಗಿದ್ದಾರೋ? ಮುಂದೆ ಅದೆಷ್ಟು ವಿದ್ಯಾರ್ಥಿಗಳು ಇದೇ ರೀತಿ ಸಾವನ್ನು ಮೈಮೇಲೆ ಎಳೆದುಕೊಳ್ಳುತ್ತಾರೋ? ಕಾದು ನೋಡುವುದಲ್ಲದೇ ಬೇರೆ ವಿಧಿಯಿಲ್ಲ. ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಸಾವಿನ ಹಿಂದಿನ ರಹಸ್ಯವನ್ನು ಬಿಡಲೊಪ್ಪದ ಪೋಷಕರು, ಇನ್ನೊಂದಷ್ಟು ಮಕ್ಕಳ ಸಾವಿಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಸಾವಿನ ಹಿಂದಿನ ಮರ್ಮವನ್ನು ಬಗೆದು ತೆಗೆಯಲು ವಿಫಲವಾದ ಪೊಲೀಸರು, ಮತ್ತಷ್ಟು ಮಕ್ಕಳ ಸಾವನ್ನು ಕಣ್ಣಾರೆ ಕಾಣುವ ಭಾಗ್ಯವನ್ನು ಎದುರು ನೋಡುತ್ತಿದ್ದಾರೆ.


ಇದೆಲ್ಲಾ ಬೇಕಾ!?

ಹೌದು ಇದೆಲ್ಲಾ ಬೇಕು ಎನ್ನುತ್ತಿವೆ ಆನ್ಲೈನ್ ಗೇಮಿಂಗ್ ಕಂಪೆನಿಗಳು. ಯಾಕೆ ಗೊತ್ತಾ? ಅದರಿಂದ ಬರುವ ಆದಾಯವೇ ಲೆಕ್ಕವಿಲ್ಲದಷ್ಟು. ಇಂದು ಭಾರತದಲ್ಲಿ ಅದೇಷ್ಟೋ ಆನ್ಲೈನ್ ಗೇಮಿಂಗ್ ಕಂಪೆನಿಗಳಿವೆ. ಆ ಕಂಪೆನಿಗಳು ಅದೇಷ್ಟು ದುಡ್ಡನ್ನು ಬಾಚಿಕೊಳ್ಳುತ್ತಿವೆ. ಕೊರೋನಾ ಸಾಂಕ್ರಾಮಿಕ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಾಗ, ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗ ಆನ್ಲೈನ್ ಗೇಮಿಂಗ್ ಕಂಪೆನಿಗಳು ಯದ್ವಾತದ್ವಾ ಮಾರುಕಟ್ಟೆ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ ಅದರ ಲಾಭವನ್ನು ಕ್ರಮೇಣವಾಗಿ ಪಡೆಯತೊಡಗಿದವು. ಆನ್ಲೈನ್ ಕ್ಲಾಸ್ಗಳು ಹೆಚ್ಚುತ್ತಿದ್ದಂತೆ, ಆನ್ಲೈನ್ ಗೇಮ್ಗಳು ತಮ್ಮ ಅಸ್ತಿತ್ವವನ್ನು ಪೋಷಕರ ಅರಿವಿಗೆ ಬಾರದಂತೆ ಸ್ಥಾಪಿಸಿಕೊಂಡಿವೆ. ವಿದ್ಯಾರ್ಥಿಗಳು ದಾಸರಾದರೆ, ಪೋಷಕರು ಲೂಸರ್ಸ್ತ ಆಗುತ್ತಿದ್ದಾರೆ.

ಆತ್ಮಹತ್ಯೆಯ ಹಿಂದಿನ ಅಸಲಿಯತ್ತು

ಸಾಲ ಮಾಡಲಿಲ್ಲ, ಪೋಷಕರೋ - ಶಿಕ್ಷಕರೋ ಗದರಲಿಲ್ಲ, ಲವ್ ಫೈಲ್ಯೂರ್ ಆಗಿಯೇ ಇಲ್ಲ, ಪರೀಕ್ಷಾ ಒತ್ತಡವೇ ಎಂದು ಕೇಳಿದರೆ - ಪರೀಕ್ಷಾ ಸಮಯವೇ ಅಲ್ಲ... ಹಾಗಾದರೆ ಪ್ರೌಢಶಾಲಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ? ಪುತ್ತೂರಿನಲ್ಲಿ ಅದೇಷ್ಟೋ ವಿದ್ಯಾರ್ಥಿಗಳು ತಮ್ಮ ಜೀವವನ್ನು ಸಾವಿಗೆ ಆಹುತಿ ನೀಡಿದ್ದಾರೆ. ಆತ್ಮಹತ್ಯೆಯ ಜಾಡು ಹಿಡಿದು ನೋಡಿದರೆ, ಆನ್ಲೈನ್ ಗೇಮ್ಗಳ ವಾಸನೆ. ಸರಿಯಾಗಿ ಗಮನಿಸಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕೊನೆ ಕ್ಷಣದ ಚಲನವಲನ. ಇವೆಲ್ಲಾ ಏನನ್ನು ಸೂಚಿಸುತ್ತವೆ. ಆತ್ಮಹತ್ಯೆಯ ವಿಚಿತ್ರ ಸ್ಟೈಲ್ಗಳನ್ನು. ಅಂದರೆ ಯಾರೋ ಸೂಚನೆ ನೀಡುತ್ತಿದ್ದಾರೆ, ವಿದ್ಯಾರ್ಥಿಗಳು ಅದನ್ನು ಅನುಸರಿಸುತ್ತಿದ್ದಾರೆ.

ಆನ್ಲೈನ್ ಕ್ಲಾಸ್ಗಳು!!!

ಕೊರೋನಾ ಸಾಂಕ್ರಾಮಿಕದ ವೇಳೆಯಲ್ಲಿ ಶುರುವಾದ ಆನ್ಲೈನ್ ಕ್ಲಾಸ್ಗಳು ಇಂದು ನಡೆಯುತ್ತಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಆನ್ಲೈನ್ ಟ್ಯೂಷನ್ಗೂ ಶುರುವಿಟ್ಟುಕೊಂಡಿವೆ. ಪ್ರತಿಯೊಬ್ಬ ಪೋಷಕರಿಗೂ, ಶಿಕ್ಷಕರಿಗೂ ಮೊಬೈಲ್ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವಿರುವಾಗ ಇಂತಹದ್ದೊಂದು ಆನ್ಲೈನ್ ಟ್ಯೂಷನ್ ಬೇಕೇ? ಭೌತಿಕ ತರಗತಿಗಳು ಆರಂಭವಾದ ಈ ದಿನಗಳಲ್ಲಿ, ಆನ್ಲೈನ್ ಕ್ಲಾಸ್ಗಳ ಅಗತ್ಯವಿದೆಯೇ? ಸ್ವಲ್ಪ ಗಮನಿಸಿ! ಮಕ್ಕಳ ಕೈಗೆ ಮೊಬೈಲ್ ಸಿಕ್ಕಿತೆಂದರೆ, ಹಿರಿಯರನ್ನು ಯಾಮಾರಿಸುವಷ್ಟು ನಿಸ್ಸೀಮರಾಗುತ್ತಾರೆ. ಟಚ್ ಸ್ಕ್ರೀನ್ನಲ್ಲಿ ಒಂದು ಟಚ್ಗೆ ಆಪ್ ಬದಲಾಯಿಸಲು ಸಾಧ್ಯ. ಹಾಗಾದರೆ, ಮಕ್ಕಳ ಕೈಯಲ್ಲಿರುವ ಮೊಬೈಲ್ಗೆ ನಿಯಂತ್ರಣ ಹೇಗೆ? ಈ ಆನ್ಲೈನ್ ಕ್ಲಾಸ್ಗಳು ಇನ್ನಾದರೂ ಕಡಿಮೆಯಾದೀತೇ? ಓದು.. ಓದೆಂಬ... ಹಪಹಪಿಗೆ ಮಕ್ಕಳು ಕೈತಪ್ಪುವ ಈ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಕೆ? ಮತ್ತೊಮ್ಮೆ ಆಲೋಚಿಸಿ...

ಯಾಕಿಲ್ಲ ಗಂಭೀರ ತನಿಖೆ!

ವಿದ್ಯಾರ್ಥಿಗಳ ಆತ್ಮಹತ್ಯೆಯ ಕಾರಣ ಕೇಳಿದರೆ, ಇದುವರೆಗೂ ‘ತಿಳಿದುಬಂದಿಲ್ಲ’. ಸುಖಾಸುಮ್ಮನೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಹಾಗಾದರೆ ಇದನ್ನು ಯಾರೂ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ. ಪೋಷಕರು, ಪೊಲೀಸರು, ಸಾರ್ವಜನಿಕರಿಗೆ ಇದರ ಹಿಂದಿನ ಮರ್ಮ ತಿಳಿದುಕೊಳ್ಳಬೇಕು ಎಂದು ಅನಿಸಲೇ ಇಲ್ಲವೇ? ಅಥವಾ ಅವರ ಮಕ್ಕಳು, ನಮಗೇನು ಎಂಬ ತಾತ್ಸಾರವೇ? ಇಂದು ಅಲ್ಲೊಂದು- ಇಲ್ಲೊಂದು ಘಟಿಸುವ ಆತ್ಮಹತ್ಯೆಗಳು, ನಾಳೆ ಮನೆಮನೆಯಲ್ಲೂ ನಡೆದೀತು! ಎಚ್ಚರ!!! ಆದ್ದರಿಂದ ತಿಳಿದವರು ದೂರು ದಾಖಲಿಸುವುದು ಉತ್ತಮ. ಅಥವಾ ಪೊಲೀಸರಾದರೂ ಯಾಕೆ ಇದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿಲ್ಲ. ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶ ಅವರಿಗೂ ಇದೆಯಲ್ಲವೇ? ನಾಳೆ ಘಟಿಸುವ ಅವಘಡಕ್ಕೆ ಇಂದೇ ಯಾಕೆ ಮುನ್ನೆಚ್ಚರಿಕೆ ಕೈಗೊಳ್ಳಬಾರದು? ಒಟ್ಟು ಪ್ರಕರಣಗಳ ಮಾಹಿತಿ ಕಲೆ ಹಾಕಿ, ಗಂಭೀರ ತನಿಖೆಯನ್ನು ಯಾಕೆ ಕೈಗೊಳ್ಳುತ್ತಿಲ್ಲ?


ನೈತಿಕ ಶಿಕ್ಷಣ ನೀಡಿ: ಡಿವೈಎಸ್ಪಿ

ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಮೊಬೈಲ್ ಪ್ರವೇಶಿಸಿತು. ಶೈಕ್ಷಣಿಕ ವಿಷಯಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮೊಬೈಲನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಉತ್ತಮ. ಇಂದು ಕೂಡು ಕುಟುಂಬದ ಕಲ್ಪನೆ ಇಲ್ಲವಾಗಿದೆ. ಅಲ್ಲಿ ಮಕ್ಕಳಿಗೆ ಆಟವಾಡಲು ಅವಕಾಶ ಹಾಗೂ ಸಹವರ್ತಿಗಳು ಸಿಗುತ್ತಿದ್ದರು. ಆದರೆ ಇಂದು ಮಕ್ಕಳು ಒಬ್ಬಂಟಿಯಾಗುತ್ತಿದ್ದಾರೆ. ಮಕ್ಕಳು ಕೀಟಲೆ ಮಾಡುತ್ತಿದ್ದರೆ ಅವರನ್ನು ಸುಮ್ಮನಿರುವಂತೆ ಮಾಡಲು ಮೊಬೈಲ್ ನೀಡುತ್ತಿದ್ದಾರೆ. ಪರಿಣಾಮ, ಸೋಶಿಯಲ್ ಲೈಫ್ ಸಿಂಗಲ್ ಲೈಫ್ ಆಗಿದೆ. ಅಂದರೆ ಇಂತಹ ಪರಿಸ್ಥಿತಿಗೆ ಸಮಾಜವೇ ಒತ್ತಡ ಹಾಕುತ್ತಿದೆ. ಮೃದು ಮನಸ್ಸಿನ ವಿದ್ಯಾರ್ಥಿಗಳ ಮನಸ್ಸಿಗೆ ಇದು ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳು ಮನೆಯಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರೆ, ಪೋಷಕರು ಉತ್ತಮ ಅಭ್ಯಾಸಗಳನ್ನು ಪಾಲಿಸುತ್ತಿರಬೇಕು. ಮಕ್ಕಳು ಅದನ್ನು ಅನುಕರಿಸುತ್ತಾರೆ. 

ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಯಾವ ರೀತಿ ಇರಬೇಕು, ಎದುರಿನ ವ್ಯಕ್ತಿಗೆ ಯಾವ ರೀತಿ ಗೌರವ ನೀಡಬೇಕು ಹಾಗೂ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳು ಮೈದಾನದಲ್ಲಿ ಆಟದಲ್ಲಿ ನಿರತರಾದಂತೆ, ಅವರು ಮೊಬೈಲ್ನಿಂದ ದೂರವಾಗುತ್ತಾರೆ. ಸೈಬರ್ ಕ್ರೈಮ್ ಅಥವಾ ಇನ್ನಾವುದೋ ವಿಚಾರದಲ್ಲಿ ಪೊಲೀಸರ ಪ್ರವೇಶ, ಮಕ್ಕಳ ಬೆಳವಣಿಗೆಗೆ ಪೂರಕವಲ್ಲ. ಬದಲಿಗೆ ಶಿಕ್ಷಕರು, ಪೋಷಕರೇ ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು.                                  ಡಾ.ವೀರಯ್ಯ ಹಿರೇಮಠ್, ಡಿವೈಎಸ್ಪಿ


ಮಕ್ಕಳ ಮೇಲೆ ವಿಶೇಷ ನಿಗಾ ಅಗತ್ಯ: ಬಿಇಓ

ನಮ್ಮಲ್ಲಿ ಆನ್ಲೈನ್ ಕ್ಲಾಸ್ಗಳು ಆಗುತ್ತಿಲ್ಲ. ಎಲ್ಲಾ ಆಫ್ಲೈನ್ ಕ್ಲಾಸ್ಗಳೇ ನಡೆಯುತ್ತಿವೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ನೀಡುವ ಅವಕಾಶವೇ ಇಲ್ಲ. ಮೊಬೈಲ್ಗೆ ಹಣ ಹಾಕಿ, ಯಾವುದೋ ಆಟ ಆಡಿ ತೊಂದರೆ ಅನುಭವಿಸುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು. ಮಕ್ಕಳ ಮೇಲೆ ವಿಶೇಷ ಗಮನ ಕೊಡಬೇಕು. ಅಂತರ್ಜಾಲದಿಂದ ದೂರವಿರಬೇಕು, ಪೋಷಕರು ಜಾಗೃತೆ ವಹಿಸಬೇಕು ಮೊದಲಾದ ವಿಚಾರಗಳನ್ನು ಪೋಷಕರಿಗೂ ತಿಳಿಸಿದ್ದೇವೆ. ಅಂತರ್ಜಾಲದಿಂದ ವ್ಯತಿರಿಕ್ತ ಪರಿಣಾಮ ಉಂಟಾದ ಘಟನೆ ಪುತ್ತೂರಿನಲ್ಲಿಲ್ಲ.

ಲೊಕೇಶ್ ಎಸ್.ಆರ್., ಬಿಇಓ, ಪುತ್ತೂರು

ಸೌದಿ ಜೈಲಿನಲ್ಲಿ ಕಡಬ ಯುವಕ ; ಬಿಡುಗಡೆ ಕೋರಿ ವಿದೇಶಾಂಗ ಸಚಿವರಿಗೆ ಕಟೀಲ್ ಪತ್ರ

Posted by Vidyamaana on 2023-08-20 09:06:42 |

Share: | | | | |


ಸೌದಿ ಜೈಲಿನಲ್ಲಿ ಕಡಬ ಯುವಕ ; ಬಿಡುಗಡೆ ಕೋರಿ ವಿದೇಶಾಂಗ ಸಚಿವರಿಗೆ ಕಟೀಲ್ ಪತ್ರ

ಮಂಗಳೂರು: ನಕಲಿ ಬ್ಯಾಂಕ್​ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಿರುವ ಪ್ರಕರಣದಡಿ ಜಿಲ್ಲೆಯ ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ ಯುವಕನನ್ನು ಸೌದಿ ಅರೇಬಿಯಾದ ರಿಯಾದ್​ನಲ್ಲಿ ಬಂಧಿಸಲಾಗಿದೆ. ಹ್ಯಾಕರ್​ಗಳು ನಕಲಿ ಖಾತೆ ಸೃಷ್ಟಿಸಿ ವಂಚಿಸಿದ್ದು, ನಿರಪರಾಧಿ ಯುವಕನ ಬಿಡುಗಡೆಗೆ ಪ್ರಯತ್ನಿಸುವಂತೆ ಒತ್ತಾಯಿಸಿ ವಿದೇಶಾಂಗ ಸಚಿವ ಡಾ.ಎಸ್.​ ಜೈಶಂಕರ್​ ಅವರಿ​ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರ ಬರೆದಿದ್ದಾರೆ.


ವಿದೇಶಾಂಗ ಸಚಿವವರಿಗೆ ನಳಿನ್ ಕಟೀಲ್ ಪತ್ರ ; 


ಪತ್ರದ ವಿವರ:ನನ್ನ ಸಂಸದೀಯ ಕ್ಷೇತ್ರದ ನಿವಾಸಿ 33 ವರ್ಷದ ಚಂದ್ರಶೇಖರ್​​ ಮುಜೂರ್ ಕೆಂಚಪ್ಪ ಎಂಬವರು 2022ರಿಂದ ಸೌದಿ ಅರೇಬಿಯಾದ AL FANAR ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸದ್ಯ ಅವರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಿದಾಗ ಅನಿರೀಕ್ಷಿತ ಘಟನೆಗಳ ಸರಣಿಗೆ ಒಳಗಾಗಿ ಬಂಧಿಸಲ್ಪಟ್ಟಿದ್ದಾರೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ, ಚಂದ್ರಶೇಖರ ಅವರ ಬಯೋಮೆಟ್ರಿಕ್ ಡೇಟಾ, ಹೆಬ್ಬೆರಳ ಗುರುತನ್ನು ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸುವ ಪ್ರಕ್ರಿಯೆ ವೇಳೆ ಎರಡು ಬಾರಿ ಸೆರೆಹಿಡಿಯಲಾಗಿದೆ. ತದನಂತರ ಅವರಿಗೆ ಅರೇಬಿಕ್ ಭಾಷೆಯಲ್ಲಿ ಸಂದೇಶವೊಂದು ಬಂದಿದೆ. ಭಾಷೆ ತಿಳಿಯದೇ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ಅವರಿಗೆ ತಮ್ಮ ಸಿಮ್ ಕಾರ್ಡ್ ವಿವರ ನೀಡುವಂತೆ ಕರೆ ಬಂದಿದೆ. ಕರೆ ಮಾಡಿದವರೊಂದಿಗೆ ಅವರ OTP ಹಂಚಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಳಿಕ ಅವರು ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್​​ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಂಡಿರುವ ಹ್ಯಾಕರ್‌ಗಳು ಅವರ ಹೆಸರಿನಲ್ಲಿ ವಂಚನೆಯ ಬ್ಯಾಂಕ್ ಖಾತೆ ತೆರೆದಿದ್ದಾರೆ. ಸ್ಥಳೀಯ ಮಹಿಳೆಯ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹಣವನ್ನು ತ್ವರಿತವಾಗಿ ವಿದೇಶಕ್ಕೆ ರವಾನಿಸಲಾಗಿದೆ. ಇದರ ಪರಿಣಾಮ, ಚಂದ್ರಶೇಖರ ಅವರನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ರಿಯಾದ್​ನ ಲಾಬನ್ ಉಪನಗರ ಠಾಣೆ ಪೊಲೀಸರ ವಶದಲ್ಲಿದ್ದಾರೆ. ಪೊಲೀಸ್ ಕಸ್ಟಡಿಯಿಂದ ಚಂದ್ರಶೇಖರ ಮುಜೂರ್ ಅವರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಪತ್ರದ ಮೂಲಕ ಆಗ್ರಹಿಸಿದ್ದಾರೆ.


ಸಹೋದರಿ ಹೇಳಿಕೆ;


ಚಂದ್ರಶೇಖರ್ ಅವರ ಸಹೋದರಿ ಪುನೀತ ಮಾತನಾಡಿ, " ಅಲ್ಫಾನರ್ ಸೆರಾಮಿಕ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಚಂದ್ರಶೇಖರ್, ಹ್ಯಾಕರ್​ಗಳ ವಂಚನೆಯ ಸುಳಿಗೆ ಸಿಲುಕಿ 2022ರ ನವೆಂಬರ್​ನಿಂದ ರಿಯಾದ್​ನ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಕಳೆದ ವರ್ಷ ಮೊಬೈಲ್ ಹಾಗೂ ಸಿಮ್ ಖರೀದಿಗೆ ರಿಯಾದ್​ನ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಎರಡು ಬಾರಿ ಅವರ ತಂಬ್ ಪಡೆಯಲಾಗಿತು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲೊಂದು ಸಂದೇಶ ಬಂದಿದೆ. ಅದನ್ನು ಕ್ಲಿಕ್ ಮಾಡಿದ್ದು, ಎರಡು ದಿನಗಳ ಬಳಿಕ ದೂರವಾಣಿ ಕರೆ ಬಂದಿದೆ. ಸಿಮ್ ಮಾಹಿತಿ ಕೇಳಿ ಒಟಿಪಿ ಸಂಖ್ಯೆ ಪಡೆದಿದ್ದಾರೆ. ಆದರೆ, ವಾರದ ಬಳಿಕ ಏನೂ ಮಾಹಿತಿ ನೀಡದೆ ಅವರನ್ನು ರಿಯಾದ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಮಗೆ ರಿಯಾದ್​ನಲ್ಲಿರುವ ಕೊಡಗು ಮೂಲದ ಅರುಣ್ ಎಂಬವರು ವಿಚಾರ ತಿಳಿಸಿದ್ದಾರೆ.


ಬಳಿಕ ಚಂದ್ರಶೇಖರ್​ಗೆ ತಿಳಿಯದೆ ರಿಯಾದ್​ನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದು ಗೊತ್ತಾಗಿದೆ. ಖಾತೆಗೆ ರಿಯಾದ್​ನ ಮಹಿಳೆಯೊಬ್ಬರಿಂದ 22 ಸಾವಿರ ರಿಯಲ್ ಹಣ ಜಮೆಯಾಗಿದ್ದು, ಅದು ಇನ್ನಾವುದೋ ದೇಶಕ್ಕೆ ವರ್ಗಾವಣೆಯಾಗಿದೆ. ಆಕೆ ನೀಡಿರುವ ದೂರಿನಂತೆ ಚಂದ್ರಶೇಖರ್‌ ಅವರನ್ನು ಬಂಧಿಸಲಾಗಿದೆ. ಜೈಲುಪಾಲಾದ ಚಂದ್ರಶೇಖರ್​ ಬಿಡುಗಡೆಗೆ ರಿಯಾದ್ ವಕೀಲರ ಮೂಲಕ ಪ್ರಯತ್ನಪಟ್ಟರೂ 10 ಲಕ್ಷ ರೂ. ಖರ್ಚಾಗಿದೆಯೇ ವಿನಃ ಬೇರಾವುದೇ ಫಲಿತಾಂಶ ದೊರಕಿಲ್ಲ" ಎಂದು ಅವರು ಹೇಳಿದ್ದಾರೆ

ಫಳ್ನೀರ್ ಇಂದಿರಾ ಆಸ್ಪತ್ರೆಗೆ 25 ವರ್ಷಗಳ ಸಂಭ್ರಮ ; ಆ.15ರಂದು ವಾರ್ಷಿಕೋತ್ಸವ

Posted by Vidyamaana on 2024-08-13 05:30:13 |

Share: | | | | |


ಫಳ್ನೀರ್ ಇಂದಿರಾ ಆಸ್ಪತ್ರೆಗೆ 25 ವರ್ಷಗಳ ಸಂಭ್ರಮ ; ಆ.15ರಂದು ವಾರ್ಷಿಕೋತ್ಸವ

ಮಂಗಳೂರು, ಆಗಸ್ಟ್.13: ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟದ ಛಾಪನ್ನು ಮೂಡಿಸಿದ ಮಂಗಳೂರಿನ ಫಳ್ನೀರಿನ ಇಂದಿರಾ ಆಸ್ಪತ್ರೆ 25ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಾರ್ಯಕ್ರಮ ಹಮ್ಮಿಕೊಂಡಿದೆ. 25 ವರ್ಷಗಳಲ್ಲಿ ಆಸ್ಪತ್ರೆ ಜೊತೆಗೆ ನರ್ಸಿಂಗ್ ಕಾಲೇಜು ಬೃಹತ್ತಾಗಿ ಮತ್ತು ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದು ನಿಂತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಯ್ಯದ್ ನಿಜಾಮುದ್ದೀನ್ ಹೇಳಿದರು.‌

1999ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಸಾರ್ವಜನಿಕರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುತ್ತ ಬಂದಿದೆ. ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲವಾದ ಸೇವೆಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ, ಇಂದಿರಾ ಎಜ್ಯುಕೇಶನಲ್

ಟ್ರಸ್ಟ್ ಆರಂಭಿಸಿದ್ದು ನರ್ಸಿಂಗ್, ಅಲೈಡ್ ಸೈನ್ಸ್ ಮತ್ತು ಫಿಸಿಯೋಥೆರಪಿ ಕೋರ್ಸ್‌ಗಳನ್ನು ನೀಡುತ್ತಿದ್ದೇವೆ. 60 ವಿದ್ಯಾರ್ಥಿಗಳಿಂದ ಆರಂಭಗೊಂಡ ನಮ್ಮ ಕಾಲೇಜಿನಲ್ಲಿ ಈಗ ವಿವಿಧ 12 ವಿಭಾಗದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನೀಡುತ್ತಿದ್ದು 1200 ವಿದ್ಯಾರ್ಥಿಗಳಿದ್ದಾರೆ ಎಂದವರು ಹೇಳಿದರು. ‌

ಕಾಪು : ಕಾಲೇಜು ವಿದ್ಯಾರ್ಥಿನಿ ಶೈನಾಜ್ ನಾಪತ್ತೆ

Posted by Vidyamaana on 2024-02-28 04:26:48 |

Share: | | | | |


ಕಾಪು : ಕಾಲೇಜು ವಿದ್ಯಾರ್ಥಿನಿ ಶೈನಾಜ್ ನಾಪತ್ತೆ

ಕಾಪು: ರಾತ್ರಿ ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿ, ಕಟಪಾಡಿ ಏಣಗುಡ್ಡೆ ಗ್ರಾಮದ ಜೆ. ಎನ್‌. ನಗರ ನಿವಾಸಿ ಶೈನಾಜ್‌ (20) ಫೆ. 26 ರಿಂದ ನಾಪತ್ತೆಯಾಗಿದ್ದಾರೆ.ಉಡುಪಿ ಅಜ್ಜರಕಾಡು ಸರಕಾರಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಶೈನಾಜ್‌ ಫೆ.25 ರಂದು ರಾತ್ರಿ ತನ್ನ ಅಜ್ಜಿಯೊಂದಿಗೆ ಮಲಗಿದ್ದು ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು.

ಈ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿ, ಉಡುಪಿ ಬಸ್‌ ನಿಲ್ದಾಣ, ಅಜ್ಜರಕಾಡು ಮಹಿಳಾ ಕಾಲೇಜು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಆಕೆಯ ತಾಯಿ ನೂರ್‌ ಜಹಾನ್‌ ಕಾಪು ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಶೈನಾಜ್‌ 20 ವರ್ಷ ಪ್ರಾಯದವರಾಗಿದ್ದು 5 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು ಮನೆಯಿಂದ ತೆರಳುವಾಗ ನೇವಿ ಬ್ಲೂ ಬಣ್ಣದ ಬುರ್ಕಾ ಧರಿಸಿದ್ದಳು. ಕನ್ನಡ, ತುಳು, ಹಿಂದಿ, ಉರ್ದು ಭಾಷೆ ಬಲ್ಲವಳಾಗಿದ್ದು ಈಕೆಯನ್ನು ಗುರುತಿಸಿದವರು ಕಾಪು ಪೊಲೀಸ್‌ ಠಾಣೆ 0820-2551033 ಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಪುತ್ತೂರು : ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ

Posted by Vidyamaana on 2023-11-09 16:48:21 |

Share: | | | | |


ಪುತ್ತೂರು : ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ

ಪುತ್ತೂರು: ಖ್ಯಾತ ಹುಲಿವೇಷ ತಂಡದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ದ. ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ತಿಳಿಸಿದ್ದಾರೆ.

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆರೋಪಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ. ಸದ್ಯ ಅಪಘಾತದ ವಿಚಾರಕ್ಕೆ ಹತ್ಯೆಯಾಗಿದೆ ಎಂಬುದು ಸದ್ಯದ ತನಿಖೆಯಿಂದ ಹೊರ ಬಂದಿರುವ ಮಾಹಿತಿಯಾಗಿದ್ದು, ಹಳೇ ವೈಷಮ್ಯದಿಂದ ಹತ್ಯೆ ನಡೆಯಿತಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದರು.

ಇನ್ನು ಅಕ್ಷಯ್ ಕಲ್ಲೇಗ ಓರ್ವ ರೌಡಿ ಶೀಟರ್ ಆತನ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲರೂ ಅಕ್ಷಯ್ ಕಲ್ಲೇಗನ ಪರಿಚಯಸ್ಥರೇ ಆಗಿದ್ದರು. ಹತ್ಯೆಯ ಹಿಂದೆ ಬೇರೇ ಏನಾದರು ಕಾರಣವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

Posted by Vidyamaana on 2023-08-17 04:48:48 |

Share: | | | | |


ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

ಪುತ್ತೂರು:ಎಚ್‌.ಪಿ.ಗ್ಯಾಸ್‌ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ಕಡ್ಡಾಯವಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಅಡುಗೆ ಕೋಣೆಯಲ್ಲಿ ಗ್ಯಾಸ್ ಅನ್ನು ಪರಿಶೀಲಿಸಿ,ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕವಾಗಿ ರೂ.236 ಅನ್ನು ತರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.190 ಅನ್ನು ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ.ಆದರೆ, ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ, ಗ್ಯಾಸ್‌ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದ್ದೇ ಆದಲ್ಲಿ ಅವರ ಅನುಮತಿ ಮೇರೆಗೆ ಮಾತ್ರ ಗ್ರಾಹಕರ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ.ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಅಡುಗೆ ಅನಿಲ ತಪಾಸಣೆಯನ್ನು ಕೈಗೊಳ್ಳಬೇಕಾಗಿದ್ದಲ್ಲಿ ತಮ್ಮ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Leave a Comment: