ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

Posted by Vidyamaana on 2023-05-02 04:48:59 |

Share: | | | | |


ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಕಾಸರಗೋಡು;ಸಾವಿನ‌ ಬಗ್ಗೆ ಅನುಮಾನದ ಹಿನ್ನೆಲೆ‌ ಅನಿವಾಸಿ ಉದ್ಯಮಿಯೋರ್ವರ ಮೃತದೇಹವನ್ನು ಧಪನ ಮಾಡಿದ ಖಬರಸ್ತಾನದಿಂದ ತೆಗೆದು ವಾಪಾಸ್ಸು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


ಪೂಚಕ್ಕಾಡ್ ನಿವಾಸಿ ಉದ್ಯಮಿ ಅಬ್ದುಲ್ ಗಪೂರ್ ಸಾವಿನಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.


ಏ.13ರಂದು ಗಪೂರ್ ನಿಧನರಾಗಿದ್ದರು.ಅವರ ಅಂತ್ಯ ಸಂಸ್ಕಾರ ಏ.14ರಂದು ನಡೆದಿತ್ತು. ಅವರು ನಿಧನದ ದಿನ ಮನೆಯಲ್ಲಿ ಒಬ್ಬರೆ ಇದ್ದರು. ಇದೀಗ ಸಾವಿನಲ್ಲಿ ಅನುಮಾನ ಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಪೂಚಕ್ಕಾಡ್ ಹೈದ್ರೋಸ್ ಮಸೀದಿಯ ದಫನ‌ ಭೂಮಿಯಿಂದ ಹೊರ ತೆಗೆಯಲಾಗಿದೆ.


ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಪರೀಕ್ಷೆ ಕಾರ್ಯ ನಡೆದಿದೆ.


ಆರಂಭದಲ್ಲಿ ಗಪೂರು ಅವರದ್ದು ಸಹಜ ಸಾವು ಎಂದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಆ ಬಳಿಕ ಅವರ ಮನೆಯಲ್ಲಿ 600 ಪವನ್ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.‌‌ನಾಪತ್ತೆಯಾದ ಚಿನ್ನಾಭರಣದ ಮೌಲ್ಯ ಬರೊಬ್ಬರಿ 2.85 ಕೋಟಿ ಎಂದು ಹೇಳಲಾಗಿದೆ.


ಇದೀಗ ಮರಣೋತ್ತರ ಪರೀಕ್ಷೆ ನಡೆದಿದ್ದು ಅಂತಿಮ ವರದಿಯ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬರಲು ಎರಡು ವಾರಗಳ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ.ಫಾರೆನ್ಸಿಕ್ ಸರ್ಜನ್ ಡಾ.ಸರಿತಾ ನೇತೃತ್ವದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ

ಬೆಳ್ಳಾರೆ : ಅಟೋರಿಕ್ಷಾ ತಂಗುದಾಣ ಲೋಕಾರ್ಪಣೆ

Posted by Vidyamaana on 2024-03-10 09:48:48 |

Share: | | | | |


ಬೆಳ್ಳಾರೆ : ಅಟೋರಿಕ್ಷಾ ತಂಗುದಾಣ ಲೋಕಾರ್ಪಣೆ

*ಬೆಳ್ಳಾರೆ* : ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ದ.ಕ.ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಕಳೆದ ಹದಿನೈದು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನಿರ್ಮಿಸಿದ ಅಟೋರಿಕ್ಷಾ ತಂಗುದಾಣವನ್ನು ಮಾ.8 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಸಂಸದನಾಗಿದ್ದ ಮೊದಲ ಅವಧಿಯಲ್ಲಿ 4 ಸಾವಿರ ಕೋಟಿ ರೂ., ಪ್ರಧಾನಿ ಮೋದಿ ಆಡಳಿತದ ಉಳಿದ ಎರಡು ಅವಧಿಯಲ್ಲಿ 1 ಲಕ್ಷ ಕೋ.ರೂ. ಅನುದಾನಗಳು ಜಿಲ್ಲೆಗೆ ಬಂದಿದೆ. ಇದನ್ನು ಅಂಕಿ ಅಂಶ ಸಹಿತ ಜನರ ಮುಂದಿಡಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಹೀಗೆ ಜಿಲ್ಲೆಯ ಭವಿಷ್ಯದ ಹಿತ ದೃಷ್ಟಿಗೆ ಪೂರಕವಾಗಿ ಹತ್ತಾರು ಯೋಜನೆಗಳನ್ನು ಅನುಷ್ಟಾನಿಸಲಾಗಿದೆ ಎಂದರು.

ಆದರ್ಶ ಗ್ರಾಮಕ್ಕೆ 60 ಕೋ.ರೂ.

ದೇಶದಲ್ಲಿ ಆದರ್ಶ ಗ್ರಾಮವೊಂದಕ್ಕೆ ಅತಿ ಹೆಚ್ಚಿನ ಅನುದಾನವನ್ನು ಒದಗಿಸಿದ್ದು ಅದು ಬಳ್ಪ ಗ್ರಾಮಕ್ಕೆ. ಇಲ್ಲಿ ಸುಮಾರು 60 ಕೋ.ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಷ್ಟೆಲ್ಲಾ ಕೆಲಸ ಕಾರ್ಯ ನಡೆದರೂ ಟೀಕೆಗಳು ಬರುತ್ತವೆ. ರಾಜಕಾರಣದಲ್ಲಿ ಟೀಕೆಗಳು ಸಹಜ ಎಂದು ಸ್ವೀಕರಿಸಿದ್ದೇನೆ. ಜಿಲ್ಲೆಗೋಸ್ಕರ ನಾನು ಮಾಡಬೇಕಾದ ಕೆಲಸವನ್ನು ಮಾಡಿದ್ದೇನೆ ಎಂದರು.

*ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,* ಬೆಳ್ಳಾರೆಯ ಅಟೋ ರಿಕ್ಷಾ ಚಾಲಕರ ತಂಡ ಉತ್ತಮ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ತನ್ನ ಇರುವಿಕೆಯನ್ನು ತೋರ್ಪಡಿಸಿದೆ. ಸಂಸದರ ಅನುದಾನದಲ್ಲಿ ಸುಸಜ್ಜಿತ ಅಟೋ ತಂಗುದಾನ ನಿರ್ಮಾಣವಾಗಿದೆ. ಇನ್ನೂ ಕೆಲ ದಿನಗಳಲ್ಲಿ ಬೆಳ್ಳಾರೆ ತಡಗಜೆ ಸಂಪರ್ಕ ರಸ್ತೆ 20 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದರು.

ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬೆಳ್ಳಾರೆ ಗ್ರಾ.ಪಂ.ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ, ಗ್ರಾ.ಪಂ.ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ವಿಠಲದಾಸ್ ಎನ್‍ಎಸ್‍ಡಿ, ದಿನೇಶ್ ಹೆಗ್ಡೆ, ಜಯಶ್ರೀ ಪಡ್ಪು, ಶ್ವೇತಾ ನೆಟ್ಟಾರು, ಗುತ್ತಿಗೆದಾರ ಮಾಧವ ಮಾವೆ, ಬೆಳ್ಳಾರೆ ಮೇಲಿನ ಪೇಟೆ ಅಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹರೀಶ್ ಕಲ್ಲಪಣೆ ಮೊದಲಾದವರಿದ್ದರು.

ಗೌರವಾರ್ಪಣೆ

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಭಾಗೀರಥಿ, ಅಟೋ ನಿಲ್ದಾಣದ ಅನುದಾನಕ್ಕೆ ಶ್ರಮಿಸಿದ ಸಚಿನ್ ರೈ ಪೂವಾಜೆ, ಗುತ್ತಿಗೆದಾರ ಮಾಧವ ಮಾವೆ, ಸಾಮಾಜಿಕ ಸೇವೆಗಾಗಿ  ಕೊರಗಪ್ಪ ಪಾಟಾಜೆ, ಸೀತಾರಾಮ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಯಶಸ್ವಿ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ

Posted by Vidyamaana on 2023-03-31 03:45:36 |

Share: | | | | |


ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ

ಮಂಗಳೂರು: ನಗರದ ಕೆ ಎಸ್ ರಾವ್ ರಸ್ತೆಯಲ್ಲಿನ ಲಾಡ್ಜ್‌‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ದೇವೇಂದ್ರ (46) ಅವರ ಪತ್ನಿ ಮತ್ತು 2 ಮಕ್ಕಳು ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿ ವಿಲಾಸದವರೆಂದು ತಿಳಿದು ಬಂದಿದ್ದು, ಪಕ್ಕದಲ್ಲೇ ಡೆತ್ ನೋಟು ಕೂಡ ಪತ್ತೆಯಾಗಿದೆ ಎನ್ನಲಾಗಿದೆ.

ಇನ್ನು ನಾಲ್ವರ ಪೈಕಿ ಓರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ ಉಳಿದ ಮೂವರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಾ.27ಕ್ಕೆ ಕುಟುಂಬ ಹೊಟೇಲ್ ನಲ್ಲಿ ರೂಂ ಪಡೆದಿದ್ದು ನಿನ್ನೆ ಸಂಜೆ ತೆರಳಬೇಕಿತ್ತು. ಆದರೆ ತೆರಳಿರಲಿಲ್ಲ. ಇಂದು ಬೆಳಗ್ಗೆ ಹೊಟೇಲ್ ಸಿಬಂದಿ ನೋಡಿದಾಗ ಸಾವನ್ನಪ್ಪಿರುವುದು ಕಂಡುಬಂದಿದೆ. ಮೃತರನ್ನು ದೇವೇಂದ್ರ(48), ಪತ್ನಿ ನಿರ್ಮಲಾ (45), ಅವಳಿ ಹೆಣ್ಮಕ್ಕಳಾದ ಚೈತ್ರಾ ಮತ್ತು ಚೈತನ್ಯ ಮೃತರು ಎಂದು ಗುರುತಿಸಲಾಗಿದೆ. 

ಸಾಲ ಇರುವುದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಸ್ಥಳಕ್ಕೆ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಬಂದರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

Posted by Vidyamaana on 2023-12-03 04:14:07 |

Share: | | | | |


ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

ಚಿಕ್ಕಮಗಳೂರು: ನಗರದಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ವಿವಾದ ತಾರಕಕ್ಕೇರುತ್ತಿದ್ದು, ಶನಿವಾರ ಆರು ಠಾಣೆಗಳ ಪೊಲೀಸ್‌ ಸಿಬ್ಬಂದಿ ಕರ್ತವ್ಯ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ಬಳಿಕ ರಸ್ತೆ ತಡೆ ನಡೆಸಿದರು.



ಹೆಲ್ಮೆಟ್‌ ಧರಿಸದ ವಕೀಲನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಆರು ಸಿಬ್ಬಂದಿಗಳ ಅಮಾನತು ಹಿನ್ನೆಲೆಯಲ್ಲಿ ಆರು ಪೊಲೀಸ್‌ ಠಾಣೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಅಸಮಾಧಾನ ಹೊರಹಾಕಿದರು.


ಮಂಗಳೂರಿನಿಂದ ಧಾವಿಸಿದ ಐಜಿಪಿ ಡಾ|ಚಂದ್ರಗುಪ್ತ ಅವರಿಗೂ ಮುತ್ತಿಗೆ ಹಾಕಿದರು. ಅಮಾನತುಗೊಂಡಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವಿಕ್ರಮ್‌ ಅಮಟೆ ಮುಂದೆ ಅಳಲು ತೋಡಿಕೊಂಡರು.


ಹೆಲ್ಮೆಟ್‌ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ವಕೀಲ ಪ್ರೀತಮ್‌ ಠಾಣೆಯ ಬಳಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಬೆಂಬಲಕ್ಕೆ ಬಂದ ವಕೀಲರ ಗುಂಪು ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದೆ. ಪೊಲೀಸರು ತಮ್ಮ ಕರ್ತವ್ಯ ಪಾಲಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಠಾಣೆ ಬಳಿ ಗುಂಪು ಸೇರಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಎಸ್ಪಿ ಡಾ|ಅಮಟೆ ಪ್ರತಿಕ್ರಿಯಿಸಿ, ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾ ಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿದರು. ಪೊಲೀಸರು ಕರ್ತವ್ಯಕ್ಕೆ ಮರಳಬೇಕು ಎಂದೂ ಸೂಚಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಪೊಲೀಸ್‌ ಸಿಬ್ಬಂದಿ ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದ ನಗರ ಪೊಲೀಸ್‌ ಠಾಣೆ ಬಳಿಯಿಂದ ಹನುಮಂತಪ್ಪ ವೃತ್ತಕ್ಕೆ ತೆರಳಿ ರಸ್ತೆ ತಡೆ ನಡೆಸಿದರು. ಪೊಲೀಸ್‌ ಸಿಬ್ಬಂದಿಗಳ ಪ್ರತಿಭಟನೆ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆ ಮತ್ತಷ್ಟು ಸಿಬ್ಬಂದಿ ಜತೆಗೂಡಿದರು.

ಇದಕ್ಕೂ ಮುನ್ನ ಬೆಳಗ್ಗೆ ಪೊಲೀಸರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ, ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್‌ ಸಿಬ್ಬಂದಿ ಗುರುಪ್ರಸಾದ್‌ ಎಂಬವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ರಮ್ಯ ಪೋಯೆರಿಗೆ.. ಸುದ್ದಿ ಫೇಕ್ ಮಾರ್ರೆ – ನಟಿ ರಮ್ಯಾ ಯುರೋಪ್ ನಲ್ಲಿದ್ದಾರೆ

Posted by Vidyamaana on 2023-09-06 14:55:10 |

Share: | | | | |


ರಮ್ಯ ಪೋಯೆರಿಗೆ.. ಸುದ್ದಿ ಫೇಕ್ ಮಾರ್ರೆ  – ನಟಿ ರಮ್ಯಾ ಯುರೋಪ್ ನಲ್ಲಿದ್ದಾರೆ

ಬೆಂಗಳೂರು: ಮೋಹಕ ತಾರೆ ರಮ್ಯಾ ಅಭಿಮಾನಿಗಳು ಬುಧವಾರ (ಸೆ.6 ರಂದು) ಶಾಕ್ ಗೆ ಒಳಗಾಗಿದ್ದಾರೆ. ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಮ್ಯಾ ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದ್ದಾರೆ.


ಮೋಹಕ ತಾರೆ ರಮ್ಯಾ ಕಳೆದ ಕೆಲ ಸಮಯದಿಂದ ಚಿತ್ರರಂಗದಿಂದ ದೂರವಾಗಿದ್ದಾರೆ. ಇತ್ತೀಚೆಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರು. ಡಾಲಿ ಧನಂಜಯ ಅವರ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ತಮ್ಮ ಬ್ಯಾನರ್ ನಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.


ಈ ನಡುವೆ ಬುಧವಾರ ಅವರು ಹಠಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಮಿಳು ಸೋಶಿಯಲ್ ‌ಮೀಡಿಯಾದ ಕೆಲ ಪೇಜ್ ಗಳಲ್ಲಿ ಸುದ್ದಿ ಹರಿದಾಡಿದೆ.ಇದನ್ನು ಕೇಳಿ ಇತ್ತ ಕರ್ನಾಟಕದಲ್ಲಿ ರಮ್ಯಾ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.


ಇದೊಂದು ಸುಳ್ಳು ಸುದ್ದಿ ರಮ್ಯಾ ಅವರು ಆರಾಮವಾಗಿ ಯೂರೋಪ್ ನಲ್ಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಸುಳ್ಳು ಸುದ್ದಿ ಹಬ್ಬಿದ್ದೇಗೆ?:


ಕಾಲಿವುಡ್ ಸಿನಿಮಾರಂಗ ನಟಿ ರಮ್ಯಾ ಎನ್ನುವವರು ನಿಧನರಾಗಿದ್ದಾರೆ. ಇದೇ ಹೆಸರಿನೊಂದಿಗೆ ಕೆಲವರು ಕನ್ನಡದ ನಟಿ ರಮ್ಯಾ ಅವರ ಫೋಟೋವನ್ನು ಬಳಸಿಕೊಂಡು ಅವರು ‌ನಿಧನರಾಗಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಎಲ್ಲಿಯವರೆಗೆ ಅಂದರೆ ಸಿನಿಮಾರಂಗದ ಟ್ವಿಟರ್ ಪೇಜ್ ಗಳಾದ ಎಸ್ಎಸ್ ಸಂಗೀತ ಮತ್ತು ದಿನಕರನ್ ಅವರು ಕೂಡ ರಮ್ಯಾ ಅವರ ಫೋಟೋ ಹಂಚಿಕೊಂಡಿದ್ದರು.


ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ ತಮಿಳು ಮೀಡಿಯಾಗಳ ವಿರುದ್ದ ರಮ್ಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮ್ಯಾ ಸದ್ಯ ಸ್ವಿಜರ್ಲ್ಯಾಂಡ್ ನಲ್ಲಿದ್ದಾರೆ.

ನೇಜಾರು ಹತ್ಯಾಕಾಂಡ ಹಂತಕ ಪ್ರವೀಣ್ ಚೌಗುಲೆ ಸೆಂಟ್ರಲ್ ಜೈಲಿಗೆ

Posted by Vidyamaana on 2023-11-28 07:18:26 |

Share: | | | | |


ನೇಜಾರು ಹತ್ಯಾಕಾಂಡ  ಹಂತಕ ಪ್ರವೀಣ್ ಚೌಗುಲೆ ಸೆಂಟ್ರಲ್ ಜೈಲಿಗೆ

ಉಡುಪಿ : ಭದ್ರತೆಯ ದೃಷ್ಟಿಯಿಂದ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿರುವ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಜೈಲಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.


ನ.22ರಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ಚೌಗುಲೆಯನ್ನು ಗಂಭೀರ ಪ್ರಕರಣದ ಕಾರಣಕ್ಕೆ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್ ಮತ್ತು ವಿಶೇಷ ಭದ್ರತೆಯೊಂದಿಗೆ ಇರಿಸಲಾಗಿದೆ. ಇದೀಗ ಜಿಲ್ಲಾ ಕಾರಾಗೃಹ ದಲ್ಲಿನ ಭದ್ರತೆ ಕೊರತೆಯ ಹಿನ್ನೆಲೆಯಲ್ಲಿ ಆತನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಬಂಧಿಖಾನೆ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಈಗಾಗಲೇ ಉಡುಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದು ಕೊಂಡಿದ್ದಾರೆ. ಇದೀಗ ಬಂಧಿಖಾನೆ ಇಲಾಖೆಯ ಮೇಲಾಧಿಕಾರಿಗಳ ಅನುಮತಿಗೆ ಅಧಿಕಾರಿಗಳು ಕಾಯುತ್ತಿದ್ದು ಅಲ್ಲಿ ಅನುಮತಿ ಸಿಕ್ಕಿದ ಕೂಡಲೇ ಆತನನ್ನು ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಇರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸ ಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ರಾಜ್ಯದಲ್ಲಿ ಒಟ್ಟು ಎಂಟು ಸೆಂಟ್ರಲ್ ಜೈಲುಗಳಿದ್ದು, ಇವುಗಳ ಪೈಕಿ ಯಾವುದಾದರೂ ಒಂದು ಜೈಲಿಗೆ ಈತನನ್ನು ಸ್ಥಳಾಂತರಿಸಲು ಮೇಲಾಧಿಕಾರಿಗಳು ಸೂಚಿಸಬಹುದಾಗಿದೆ. ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಅಥವಾ ಬೆಳಗಾವಿ ಜೈಲಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

Recent News


Leave a Comment: