ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಚೈತ್ರಾ ಕುಂದಾಪುರ ಡೀಲ್ ಪ್ರಕರಣ

Posted by Vidyamaana on 2023-09-15 04:43:05 |

Share: | | | | |


ಚೈತ್ರಾ ಕುಂದಾಪುರ ಡೀಲ್ ಪ್ರಕರಣ

ಬೆಂಗಳೂರು: ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಭಿನವ ಹಾಲಶ್ರೀ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ, ಸ್ವಾಮೀಜಿ ಇತ್ತೀಚೆಗೆ ಹೈಫೈ ಜೀವನ ನಡೆಸಿಕೊಂಡಿದ್ದರು. ಅಲ್ಲದೆ, ಬೇರೆ ಬೇರೆ ಕಡೆ ಆಸ್ತಿ ಖರೀದಿಸಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿದೆ.


ಉದ್ಯಮಿ ಗೋವಿಂದ ಬಾಬು ಪೂಜಾರಿ ಬಳಿಯಿಂದ ಸ್ವಾಮೀಜಿ ಒಂದೂವರೆ ಕೋಟಿ ಹಣ ಪಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಮೂರನೇ ಆರೋಪಿಯಾಗಿದ್ದಾರೆ. ಸ್ವಾಮೀಜಿ, ಹಿರೇಹಡಗಲಿ ಬಳಿಯಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದು ಆ ಜಾಗದಲ್ಲಿ ಕಬ್ಬು ಬೆಳೆದಿದ್ದಾರೆ. ಆ ಜಮೀನಿಗೆ 68 ಲಕ್ಷ ಹಣ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.




ಇದಲ್ಲದೆ, ಪತ್ನಿಯ ತಂದೆಯಾದ ಮಲ್ಲಯ್ಯ ತುಂಬಿನಕೇರ ಅವರ ಹೆಸರಿನಲ್ಲಿ 40 ಲಕ್ಷ ರೂ. ಹಣ ನೀಡಿ ಜಾಗ ಖರೀದಿಸಿದ್ದು, ಅಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಚಂದ್ರಪ್ಪ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಖರೀದಿಸಲಾಗಿತ್ತು. ಹಿರೇಹಡಗಲಿ ರಸ್ತೆಯ ಬದಿಯಲ್ಲಿ ಎಚ್ ಪಿ ಪೆಟ್ರೋಲ್ ಪಂಪ್ ನಿರ್ಮಾಣ ಆಗಿದ್ದು ಇದನ್ನು ಸ್ವಾಮೀಜಿ ಅವರೇ ನಿರ್ವಹಿಸುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ನೀಡಿದ್ದ ಹಣದಲ್ಲಿಯೇ ಸ್ವಾಮೀಜಿ ಹೂಡಿಕೆ ಮಾಡಿದ್ದು, ಉದ್ಯಮ ಆರಂಭಿಸಿದ್ದರು.


ಆಬಳಿಕ ಗೋವಿಂದ ಬಾಬು ಪೂಜಾರಿ ತನ್ನ ಹಣವನ್ನು ವಾಪಸ್ ಕೇಳಿದಾಗ, ಪೇಚಿಗೆ ಸಿಲುಕಿದ್ದ ಸ್ವಾಮೀಜಿ ಸ್ವಲ್ಪ ಹಣ ಕೊಟ್ಟು ಸಂಭಾಳಿಸಲು ಯತ್ನಿಸಿದ್ದರು. ಇದಕ್ಕಾಗಿ ಹತ್ತು ಲಕ್ಷ ಸಾಲವನ್ನು ತನ್ನ ಪರಿಚಿತರ ಬಳಿ ಸ್ವಾಮೀಜಿ ಕೇಳಿದ್ದರಂತೆ. ಸಾಲ ಪಡೆದು ಉದ್ಯಮಿಗೆ ಹಣ ನೀಡಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಹಣ ಹಿಂತಿರುಗಿಸುವಂತೆ ಕೇಳಿಕೊಂಡರೂ ನೀಡದೇ ಇರುವುದರಿಂದ ಗೋವಿಂದ ಬಾಬು ಪೂಜಾರಿ ಪೊಲೀಸ್ ಕೇಸು ದಾಖಲಿಸಿದ್ದರು. ಈ ನಡುವೆ, ಗೋವಿಂದ ಬಾಬು ಪೂಜಾರಿ ಹಾಗೂ ಚೈತ್ರಾ ಕುಂದಾಪುರ ಅವರು ಅಭಿನವ ಹಾಲಶ್ರೀ ಅವರ ಮಠಕ್ಕೆ ಬಂದು ಸ್ವಾಮೀಜಿಯ ಆಶೀರ್ವಾದ ಪಡೆಯುವ ಫೋಟೋಗಳು ಹೊರಬಂದಿದ್ದು, ವೈರಲ್ ಆಗಿವೆ.

ಪತ್ನಿಯ ಕಿರುಕುಳ ಆರೋಪ: ಮನನೊಂದು ಸಾವಿಗೆ ಶರಣಾದ ನವವಿವಾಹಿತ ಕಿರಣ್

Posted by Vidyamaana on 2023-08-02 12:14:01 |

Share: | | | | |


ಪತ್ನಿಯ ಕಿರುಕುಳ ಆರೋಪ: ಮನನೊಂದು ಸಾವಿಗೆ ಶರಣಾದ ನವವಿವಾಹಿತ ಕಿರಣ್

ಹಾಸನ: ನವವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.

ಕಿರಣ್ ಬಿ.ಬಿ. (26) ಮೃತ ಯುವಕ. ಇನ್ನು ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ ಕಿರಣ್, ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಪತ್ನಿ ಸ್ಪಂದನಾ ಸೇರಿ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಜೈಲುಪಾಲಾಗಿದ್ದ ಕಿರಣ್,ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಎಲ್ಲಾ ಘಟನೆಯಿಂದ ಮನನೊಂದು ಜುಲೈ 31ರ ರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿ ಜಯಂತಿ ದಿನ 1 ಗಂಟೆ ಶ್ರಮದಾನ ಮಾಡಿ : ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

Posted by Vidyamaana on 2023-09-25 14:38:42 |

Share: | | | | |


ಗಾಂಧಿ ಜಯಂತಿ ದಿನ 1 ಗಂಟೆ ಶ್ರಮದಾನ ಮಾಡಿ : ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಸೇವಾ ಕಾರ್ಯಕ್ರಮದಲ್ಲಿ ಎಲ್ಲಾ ಜನರು ಭಾಗವಹಿಸಬೇಕೆಂದು ಅವರು ಒತ್ತಾಯಿಸಿದರು.ಮನ್ ಕಿ ಬಾತ್ ಮತ್ತು ವಂದೇ ಭಾರತ್ ರೈಲುಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದರು. “ನಿಮ್ಮ ಬೀದಿಯಲ್ಲಿ ಅಥವಾ ನಿಮ್ಮ ನೆರೆಹೊರೆಯಲ್ಲಿ, ಉದ್ಯಾನವನ, ನದಿ, ಸರೋವರ ಅಥವಾ ಇತರ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನೀವು ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಬಹುದು. ಅಮೃತ ಸರೋವರ ನಿರ್ಮಾಣವಾಗುವ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು” ಎಂದು ಪ್ರಧಾನಿ ಹೇಳಿದರು.


ಆದರೆ.. ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್ (ಒಂದು ದಿನಾಂಕ ಒಂದು ಗಂಟೆ ಒಟ್ಟಿಗೆ) ಎಂದು ಕರೆಯಲ್ಪಡುವ ಅಭಿಯಾನದ ಭಾಗವಾಗಲು ಅವರು ಬಯಸುತ್ತಾರೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮಾರುಕಟ್ಟೆ ಸ್ಥಳಗಳು, ರೈಲ್ವೆ ಹಳಿಗಳು, ಜಲಮೂಲಗಳು, ಪ್ರವಾಸಿ ಸ್ಥಳಗಳು, ಧಾರ್ಮಿಕ ಸ್ಥಳಗಳು ಮುಂತಾದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಚಟುವಟಿಕೆಗಳಲ್ಲಿ ಭಾಗವಹಿಸಲು ಎಲ್ಲಾ ವರ್ಗದ ನಾಗರಿಕರನ್ನು ಕೇಳಲಾಗಿದೆ. ಗ್ರಾಮ ಪಂಚಾಯತ್, ನಾಗರಿಕ ವಿಮಾನಯಾನ, ರೈಲ್ವೆ, ಮಾಹಿತಿ ಮತ್ತು ತಂತ್ರಜ್ಞಾನ, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಸರ್ಕಾರದ ಎಲ್ಲಾವಲಯಗಳು ನಾಗರಿಕರ ನೇತೃತ್ವದ ಸ್ವಚ್ಚತಾ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಿವೆ ಎಂದು ಅದು ಹೇಳಿದೆ.


ಅಭಿಯಾನಕ್ಕಾಗಿ swachhtahiseva.com ವೆಬ್ಸೈಟ್ ಅನ್ನು ಸಹ ರಚಿಸಲಾಗಿದೆ, ಅಲ್ಲಿ ಎಲ್ಲಾ ಕಾರ್ಯಕ್ರಮಗಳು ಲಭ್ಯವಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್ಜಿಒಗಳು, ಆರ್ಡಬ್ಲ್ಯೂಎಗಳು ಮತ್ತು ಖಾಸಗಿ ಸಂಸ್ಥೆಗಳು ಸಹ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಬಹುದು. ಸ್ವಯಂಸೇವಕರು ತಮ್ಮ ಚಟುವಟಿಕೆಗಳ ಫೋಟೋಗಳನ್ನು ತೆಗೆದುಕೊಳ್ಳಬಹುದು ಮತ್ತು ಅವುಗಳನ್ನು ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು.


ಆದರೆ.. ಈ ಅಭಿಯಾನವನ್ನು ಸಾಮಾಜಿಕ ಮಾಧ್ಯಮಗಳು, ಇನ್ಪುಟ್ಗಳು ಮತ್ತು ಬ್ರಾಂಡ್ ಅಂಬಾಸಿಡರ್ಗಳಂತಹ ಸರ್ಕಾರಿ ಸಂಸ್ಥೆಗಳು ಉತ್ತೇಜಿಸುತ್ತವೆ. ಮನೆಯ ತ್ಯಾಜ್ಯವನ್ನು ಸಂಗ್ರಹಿಸಲು ಬಳಸುವ ಕಸದ ವ್ಯಾನ್ ಗಳು ಈ ಕಾರ್ಯಕ್ರಮವನ್ನು ಉತ್ತೇಜಿಸಲು ಜಾಹೀರಾತುಗಳು ಮತ್ತು ಜಿಂಗಲ್ಸ್ ಗಳನ್ನು ನುಡಿಸುತ್ತವೆ. ಜನರನ್ನುಸಂವೇದನಾಶೀಲಗೊಳಿಸಲು ವಿಶೇಷ ಮೊಬೈಲ್ ಕಾಲರ್ ಟ್ಯೂನ್ ಗಳನ್ನು ಸ್ಥಾಪಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಮಧ್ಯೆ.. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಒಂಬತ್ತನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 2 ರಂದು ಆಚರಿಸಲಾಗುವುದು.

ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

Posted by Vidyamaana on 2023-03-15 09:47:10 |

Share: | | | | |


ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

ಪುತ್ತೂರು: ಇಲ್ಲಿನ ಪುಣಚದಲ್ಲಿ ಬುಧವಾರ ಮಧ್ಯಾಹ್ನ‌ ಮಳೆಯಾಗಿದೆ.ಪುತ್ತೂರು ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ‌ ಸದ್ದು ಕೇಳಿಬರುತ್ತಿತ್ತು.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇನ್ನು ಕೆಲ ದಿನ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚೆಗೆ ಹವಾಮಾನ ಇಲಾಖೆ, ಕರಾವಳಿ ಸಹಿತ ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ, ಹವಾಮಾನ ಇಲಾಖೆಯ ವರದಿ ನಿಜವಾಗಿದೆ.

ಮಂಗಳೂರು: ಜೂ.22-23 ರಂದು ಲುಲು ಸಮೂಹ ಸಂಸ್ಥೆಯಿಂದ ನೇಮಕಾತಿ ಸಂದರ್ಶನ.

Posted by Vidyamaana on 2023-06-21 14:34:12 |

Share: | | | | |


ಮಂಗಳೂರು: ಜೂ.22-23 ರಂದು ಲುಲು ಸಮೂಹ ಸಂಸ್ಥೆಯಿಂದ ನೇಮಕಾತಿ ಸಂದರ್ಶನ.

ಮಂಗಳೂರು: ಏಷ್ಯಾದ ಅತಿದೊಡ್ಡ ಹೈಪರ್ ಮಾರ್ಕೆಟ್ ಲುಲು ಸಮೂಹವು ಜೂನ್ 22 ಮತ್ತು 23 ರಂದು ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಮಂಗಳೂರಿನಲ್ಲಿ ಏರ್ಪಡಿಸಿದೆ.


ಮಂಗಳೂರಿನ ಫೆರ್ನಾಂಡಿಸ್ ಗ್ರೂಪ್ ಕಚೇರಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಂದರ್ಶನ ನಡೆಯಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕ ವಿಲ್ಸನ್ ಫೆರ್ನಾಂಡಿಸ್ ಮಾಹಿತಿ ನೀಡಿದರು.

ಯುಎಇ, ಕತರ್, ಬಹರೈನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳನ್ನು ಒಳಗೊಂಡಂತೆ ಏಷ್ಯಾದಾದ್ಯಂತ ವ್ಯಾಪಕವಾಗಿ ನಡೆಸುತ್ತಿರುವ ಲುಲು ಸಂಸ್ಥೆ, ಈ ಪ್ರಮುಖ ರಿಟೈಲ್ ಉದ್ಯಮದ ವಿವಿಧ ಹುದ್ದೆಗಳಿಗೆ ಯುವ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.


ಉದ್ಯೋಗವು ಮಾರಾಟ, ಕೌಂಟರ್ ಮಾರಾಟ ಮತ್ತು ಕ್ಯಾಷಿಯರ್ ಹುದ್ದೆಗಳನ್ನು ಒಳಗೊಂಡಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಪೂರ್ವ ಅನುಭವವಿಲ್ಲದವರು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಟ ವಿದ್ಯಾರ್ಹತೆ ಪಿಯುಸಿ ಆಗಿದೆ. ಅರ್ಜಿದಾರರು 21 ರಿಂದ 28 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಇಂಗ್ಲಿಷ್‌ನಲ್ಲಿ ಸಂವಹನ ಮಾಡುವುದು ಅಭ್ಯರ್ಥಿಗಳಿಗೆ ಕಡ್ಡಾಯವಾಗಿದೆ.


ಹುದ್ದೆಗಳಿಗೆ ವೇತನ ಶ್ರೇಣಿಯು 1200 ಯುಎಇ ದಿರ್ಹಮ್‌ಗಳಿಂದ 1400 ದಿರ್ಹಮ್‌ ತನಕ ಮತ್ತು 200 ದಿರ್ಹಮ್‌ ಆಹಾರ ಭತ್ತೆ ದೊರೆಯಲಿದೆ. ವಸತಿ, ವೀಸಾ ಮತ್ತು ವಿಮಾನ ಟಿಕೆಟ್ ವ್ಯವಸ್ಥೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ. ಸುಮಾರು 400 ಉದ್ಯೋಗ ಅವಕಾಶಗಳಿವೆ ಎಂದರು.

ಈ ಸಂದರ್ಭ ಸಂಸ್ಥೆ ನಿರ್ದೇಶಕಿ ಲೀನಾ ಫೆರ್ನಾಂಡಿಸ್, ಡೈರೆಕ್ಟರ್‌ ಅಪರೇಶನ್ಸ್ ಥೋಮಸ್ ಆಳ್ವ ಉಪಸ್ಥಿತರಿದ್ದರು.

ಸಂದರ್ಶನ ಕಚೇರಿ ವಿಳಾಸ: ಫೆರ್ನಾಂಡಿಸ್‌ ಗ್ರೂಪ್, ಮೆಟ್ರೋ ಪ್ಲಾಝಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ, ವೆಲೆನ್ಸಿಯಾ, ಮಂಗಳೂರು 575 002.

ಚಾರ್ಮಾಡಿ ಘಾಟ್ ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ

Posted by Vidyamaana on 2023-07-07 13:49:31 |

Share: | | | | |


ಚಾರ್ಮಾಡಿ ಘಾಟ್  ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೂ ತೀವ್ರ ಗಾಯಗಳಾಗಿದ್ದು ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಘಟನೆ ನಡೆದಿದ್ದು, ಎರಡು ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು.

ಅಪಘಾತಕ್ಕೆ ರಸ್ತೆ ಕಾಮಗಾರಿ ಮತ್ತು ಕವಿದಿದ್ದ ದಟ್ಟ ಮಂಜು ಕಾರಣ ಎಂದು ಹೇಳಲಾಗಿದೆ.

ಅಪಘಾತದಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಕೆಲವು ಪ್ರಯಾಣಿಕರು ಹತ್ತು ಕಿಲೋ ಮೀಟರ್ ದೂರ ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.



Leave a Comment: