ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಶಾಸಕ ಅಶೋಕ್ ರೈ ಹಾಗೂ ಮಂಜುನಾಥ ಭಂಡಾರಿಯವರ ಅತ್ಯಾಗ್ರಹವನ್ನು ಈಡೇರಿಸುತ್ತೇನೆ

Posted by Vidyamaana on 2023-10-29 08:11:50 |

Share: | | | | |


ಶಾಸಕ ಅಶೋಕ್ ರೈ ಹಾಗೂ ಮಂಜುನಾಥ ಭಂಡಾರಿಯವರ ಅತ್ಯಾಗ್ರಹವನ್ನು ಈಡೇರಿಸುತ್ತೇನೆ

ಉಡುಪಿ, ಅ.29: ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟರ ಸಮ್ಮೇಳನ ಹಾಗೂ ಬಂಟರ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಅಜ್ಜರಕಾಡು ಮೈದಾನದಲ್ಲಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಮಧ್ಯಾಹ್ನ ಜರುಗಿತು. ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. 


ಬಳಿಕ ಮಾತಾಡಿದ ಅವರು, "ಬಂಟರು ಜಾತ್ಯತೀತರು. ಎಲ್ಲ ಜಾತಿ, ಸಮುದಾಯದ ಜನರನ್ನು ತಮ್ಮವರೆಂದು ಕಾಣುವ ಮೂಲಕ ಮನುಷ್ಯತ್ವವನ್ನು ಗೌರವಿಸುವ ಬಂಟರು ನಾಡಿಗೆ ಮಾದರಿಯಾಗಿದ್ದಾರೆ. ಇಡೀ ವಿಶ್ವದೆಲ್ಲೆಡೆಯಿಂದ ಇಂದು ಬಂಟ ಸಮಾಜದ ಜನರು ಒಗ್ಗಟ್ಟಾಗಿ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು. ಬಹಳ ಸಂತೋಷವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಬಂಟರು ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ಪ್ರದೇಶಗಳಿಗೆ ಉದ್ಯೋಗ, ವ್ಯವಹಾರ ನಿಮಿತ್ತ ವಲಸೆ ಹೋಗಿದ್ದಾರೆ. ಬಂಟರೆಂದರೆ ಸಾಹಸ ಪ್ರವೃತ್ತಿ ಉಳ್ಳವರು. ಉದ್ಯೋಗ ಗಳಿಸಲು, ಜೀವನ ನಿರ್ವಹಣೆ ಉದ್ದೇಶದಿಂದ ಪ್ರಪಂಚದ ಎಲ್ಲ ಕಡೆಗಳಲ್ಲಿ ಬಂಟರನ್ನು ಇವತ್ತು ಕಾಣಬಹುದಾಗಿದೆ. 




ಕರ್ನಾಟಕ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಶಿಕ್ಷಣ, ಕ್ರೀಡೆ, ಹೋಟೆಲ್ ಉದ್ಯಮ, ಸಿನಿಮಾ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟರು ತಮ್ಮದೇ ಛಾಪು ಮೂಡಿಸಿದವರು. ಬಂಟರು ಎಲ್ಲಾದರೂ ಸಿಕ್ಕಿದರೆ ಅವರು ತುಳು ಭಾಷೆಯಲ್ಲೇ ಮಾತಾಡುತ್ತಾರೆ. ಅಷ್ಟರಮಟ್ಟಿಗೆ ಅವರು ಭಾಷೆಯನ್ನು ಗೌರವಿಸುತ್ತಾರೆ. ಬಂಟರಿಂದ ಕನ್ನಡ ಸಂಸ್ಕೃತಿ, ಪರಂಪರೆ, ಭಾಷೆಗೂ ಗೌರವ ಸಿಗುತ್ತಿದೆ. ಇದು ಶ್ಲಾಘನೀಯ ವಿಚಾರ" ಎಂದರು.


"ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾನೆ. ಬೆಳೆಯುತ್ತ ಅವರು ಅಲ್ಪಮಾನವರಾಗುತ್ತಾನೆ. ಇದಕ್ಕೆ ಆಸ್ಪದ ನೀಡದೆ ನಾವೆಲ್ಲರೂ ವಿಶ್ವಮಾನವರಾಗಿಯೇ ಉಳಿಯಬೇಕು. ಎರಡು ದಿನಗಳ ಕಾಲ ನಡೆಯಲಿರುವ ಬಂಟ ಸಮ್ಮೇಳನ ಯಶಸ್ವಿಯಾಗಲಿ. ಈ ಮೂಲಕ ಬಂಟರ ಸಂಸ್ಕೃತಿಯನ್ನು ಬೇರೆಯವರು ಕೂಡ ಅನುಕರಣೆ ಮಾಡುವಂತಾಗಲಿ ಎಂದರು. 


ಮುಂದಿನ ಬಜೆಟ್ ನಲ್ಲಿ ಬಂಟ ಅಭಿವೃದ್ಧಿ ನಿಗಮ ಘೋಷಣೆ


"ಬಂಟರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ ಎಂದು ನೀವಿಲ್ಲಿ ಜ್ಞಾಪಿಸಿದ್ದೀರಿ.ಬಂಟ ಸಮುದಾಯದ ನಾಯಕರುಗಳ ಒತ್ತಾಯ ಮತ್ತು ಕಾರ್ಯಕ್ರಮಕ್ಕೆ ಬರಲೇಬೇಕು ಎಂಬ ಆಗ್ರಹಕ್ಕೆ ಮಣಿದು ನಾನು ಸರಕಾರಿ ಕಾರ್ಯಕ್ರಮವನ್ನು ಐದೇ ನಿಮಿಷದಲ್ಲಿ ಮುಗಿಸಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಶಾಸಕ ಅಶೋಕ್ ರೈ ಹಾಗೂ ಮಂಜುನಾಥ ಭಂಡಾರಿಯವರ ಅತ್ಯಾಗ್ರಹವನ್ನು ಈಡೇರಿಸುತ್ತೇನೆ. ಬಂಟರ ನಿಗಮವನ್ನು ಘೋಷಣೆ ಮಾಡಿಯೇ ಮಾಡುತ್ತೇನೆ ಎಂದು 

 ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‌


ಸಭೆಯನ್ನು ಉದ್ದೇಶಿಸಿ ಮಾತಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಂಟರ ಸಂಸ್ಕೃತಿ, ಕಲೆ, ಆಸಕ್ತಿಯನ್ನು ನೋಡಿ ಮಂತ್ರಮುಗ್ಧಳಾಗಿದ್ದೇನೆ, ಈ ದೇಶಕ್ಕೆ ರಾಜ್ಯಕ್ಕೆ ಬಂಟರು ಕೊಟ್ಟಿರುವ ಕೊಡುಗೆ ಅಪಾರ. ಇಡೀ ವಿಶ್ವದಲ್ಲಿನ ಬಂಟರನ್ನು ಒಗ್ಗೂಡಿಸುವ ಈ ಸಮ್ಮೇಳನದ ಆಶಯ ಶ್ಲಾಘನೀಯ. ಬೆಳಗಾವಿಯಲ್ಲಿ ಅನೇಕ ಬಂಟರು ಹೋಟೆಲ್ ಉದ್ಯಮವನ್ನು ನಡೆಸಿಕೊಂಡಿದ್ದಾರೆ. ಅತಿಥಿಗಳನ್ನು ಹೃದಯ ಶ್ರೀಮಂತಿಕೆಯಿಂದ ಸತ್ಕರಿಸುವುದು ಬಂಟರಿಂದ ಮಾತ್ರ ಸಾಧ್ಯ ಎಂದರು.

ಆಶಯ ಮಾತನ್ನಾಡಿದ ಸ್ಪೀಕರ್ ಯು.ಟಿ. ಖಾದರ್, "ಬಂಟರ ಮೇಲಿನ ಪ್ರೀತಿಯಿಂದ ಒಬ್ಬ ಸೋದರನಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ವಿಶ್ವ ಬಂಟರ ಸಮ್ಮೇಳನ, ಕ್ರೀಡಾಕೂಟ ಯಶಸ್ವಿಯಾಗಿ ಜರುಗಲಿ. ಒಳ್ಳೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ದೇವರ ದಯೆ ಇರಲಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.


ವೇದಿಕೆಯಲ್ಲಿ ಬಾರ್ಕೂರು ಸಂಸ್ಥಾನದ ಡಾ. ವಿಶ್ವ ಸಂತೋಷ್ ಭಾರತಿ ಸ್ವಾಮೀಜಿ, ಉಡುಪಿ ಮಠಾಧೀಶ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಪೀಕರ್ ಯು.ಟಿ. ಖಾದರ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಬಂಟರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಡಾ.ಎನ್. ವಿನಯ ಹೆಗ್ಡೆ, ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ, ಬಂಜಾರ ಗ್ರೂಪ್ ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ, ಪುಣೆ ಸಂತೋಷ್ ಶೆಟ್ಟಿ,  ಪಟ್ಲ ಸತೀಶ್ ಶೆಟ್ಟಿ, ಅರವಿಂದ್ ಶೆಟ್ಟಿ ಮೀರಾರೋಡ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಐವಾನ್ ಡಿಸೋಜ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ.ಪಿ.ವಿ. ಶೆಟ್ಟಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್, ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಹ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ, ಸಂಯೋಜಕರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ಮೋಹನ್ ಶೆಟ್ಟಿ ಉಡುಪಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಕೆ.ಪಿ. ಸುಚರಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಕ್ರೀಡಾಕೂಟ ಉದ್ಘಾಟನೆಗೂ ಮುನ್ನ ಉಡುಪಿಯ ಬೋರ್ಡ್ ಹೈಸ್ಕೂಲ್ ನಿಂದ ಮೈದಾನದ ವರೆಗೆ ಆಕರ್ಷಕ ಸ್ಥಬ್ಧಚಿತ್ರಗಳ ಮೆರವಣಿಗೆ, 62 ಬಂಟರ ಸಂಘಗಳ ಪಥ ಸಂಚಲನ ನಡೆಯಿತು. ಉಳ್ತೂರು ಮೋಹನದಾಸ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ಬೆಳ್ಳಿ ಹಬ್ಬ ಸಮಾರಂಭ

Posted by Vidyamaana on 2023-12-25 08:50:42 |

Share: | | | | |


ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್  ಬೆಳ್ಳಿ ಹಬ್ಬ ಸಮಾರಂಭ

ಪುತ್ತೂರು:  ಮಕ್ಕಳಿಗೆ ಕೇವಲ ಲೌಕಿಕ ಶಿಕ್ಷಣವನ್ನು ಮಾತ್ರ ಕೊಡಬೇಡಿ ಅದರ ಜೊತೆಗೆ ನಮ್ಮ ಸಂಸ್ಕಾರ ಶಿಕ್ಷಣವನ್ನು ಕೊಡಿಸಿ, ಮನುಷ್ಯ ಜೀವವನ್ನು ಪ್ರೀತಿಸಲು ಇಲ್ಲದೇ ಇದ್ದರೆ ಮುದಿ ಪ್ರಾಯದಲ್ಲಿ ಆಶ್ರಮದಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಜೈನರಭವನದಲ್ಲಿ ನಡೆದ ಸಂಪ್ಯ ಆನಂದಾಶ್ರಮ ಇದರ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದರು.


ಒಂದು ದೇಶದಲ್ಲಿ ಆಶ್ರಮದ ಸಂಖ್ಯೆ ಅಧಿಕವಾಗುತ್ತಲೇ ಇದ್ದರೆ ಅಲ್ಲಿ ಸಂಸ್ಕಾರ ಇರುವ ಮಕ್ಕಳಿಲ್ಲ ಎಂದು ನಾವು ಭಾವಿಸಬೇಕು. ಹೆತ್ತು ಹೊತ್ತು , ಕಷ್ಟಪಟ್ಟು ಸಾಕಿದ ಮಕ್ಕಳು ಒಂದು ಹಂತಕ್ಕೆ ಬೆಳೆದಾಗ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸಿ ಯಾವುದೋ ದೇಶದಲ್ಲಿ ಸೆಟ್ಲ್ ಆಗಿ ಬಿಡುತ್ತಾರೆ. ಮುದಿ ಪ್ರಾಯದಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಾದ ಹಿರಿಯ ಜೀವಗಳು ಆಶ್ರಮದ ಕಿಟಕಿಯ ಸರಳುಗಳನ್ನು ಎಣಿಸಿ ದಿನ ದೂಡಬೇಕಾದ ಅನಿವಾರ್ಯತೆ ಯಾವ ತಂದೆ ತಾಯಿಗಳಿಗೂ ಬಾರದಿರಲಿ. ನಾವು ನಮ್ಮ ದೇಹದ ಶಕ್ತಿ ಕಳೆದುಕೊಂಡಾಗ ನಮಗೆ ಮಕ್ಕಳು ಆಶ್ರಯ ಕೊಡಬೇಕಾದರೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ , ವಿಚಾರ , ಕುಟುಂಬ ಸಂಬಂದಗಳನ್ನು ಕಲಿಸಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಬೇಕಾಗಿ ಬರಬಹುದು. ಸಂಪತ್ತು ಶಾಸ್ವತವಲ್ಲ, ಸಂಪತ್ತಿನಿಂದ ಎಲ್ಲವೂ ದೊರೆಯುವುದಿಲ್ಲ. ವಯಸ್ಸಾಗುವ ಕಾಲದಲ್ಲಿ ಮಕ್ಕಳು ನಮ್ಮ ಬಳಿ ಇದ್ದರೆ ಅದುವೇ ನಮಗೆ ದೊಡ್ಡ ಸಂಪತ್ತು ಎಂದು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Posted by Vidyamaana on 2024-06-16 17:20:11 |

Share: | | | | |


ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯ ಮೊದಲು ಶಿಲಾನ್ಯಾಸಗೈದ ಕಾಮಗಾರಿಗಳು ಆರಂಭಗೊಂಡಿದೆ, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಕುರಿಯ ಗ್ರಾಮದ ಎನ್ ಆರ್ ಸಿ ಸಿ - ಅಮ್ಮುಂಜ ರಸ್ತೆಯು ರೂ ೧೦ ಲಕ್ಷದಲ್ಲಿ ಕಾಂಕ್ರೀಟ್ ಆಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಧ್ಯತೆ ಮೇರೆಗೆ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ರಸ್ತೆ ಕಾಂಕ್ರೀಟ್ ಆಗಿಲ್ಲವೆಂದು ಬೇಜಾರುಮಾಡಬೇಡಿ ಮುಂದಿನ ದಿನಗಳಲ್ಲಿ ಅಗತ್ಯ ಬೇಡಿಕೆ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು. ಪಾಲಿಂಜೆ ಶ್ರೀ ಮಹಾವಿಷ್ಣು ದೇವಸ್ಥಾನದ ಅಭಿವೃದ್ದಿಗೆ ೧೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

Posted by Vidyamaana on 2023-04-27 05:50:02 |

Share: | | | | |


ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ ಏ.28 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ಏ.27 ಗುರುವಾರ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 12.15 ಕ್ಕೆ ದೇವತಾ ಪ್ರಾರ್ಥನೆ, ಮಹಾಪೂಜೆ, ಸಂಜೆ 6 ಕ್ಕೆ ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ 9 ಕ್ಕೆ ತಂಬಿಲಾದಿಗಳು ನಡೆದು ಪ್ರಸಾದ ವಿತರಣೆ, 9.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ.

ಏ.28 ಶುಕ್ರವಾರ ಬೆಳಿಗ್ಗೆ 9 ರಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ, 10 ರಿಂದ ಶ್ರೀ ಉಳ್ಳಾಲ್ತಿ ನೇಮ, ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 2 ರ ನಂತರ ಶ್ರೀ ಕಾಳರಾಹು ಮತ್ತು ಶ್ರೀ ಮಲರಾಯ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

Posted by Vidyamaana on 2023-10-22 08:15:37 |

Share: | | | | |


ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

ನಾಗಪುರ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಒಂದೇ ಕುಟುಂಬದ ಐವರು ತಿಂಗಳೊಳಗೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅ.18 ರಂದು ಸೊಸೆ ಮತ್ತು ಸಂಬಂಧಿ ಮಹಿಳೆಯ ಬಂಧನವಾಗಿತ್ತು. ಇವರಿಬ್ಬರು ಕಳೆದ ಒಂದು ತಿಂಗಳಿಂದ ಎಲ್ಲರಿಗೂ ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಗೂಗಲ್​ನಲ್ಲಿ ಅತಿ ಭಯಂಕರ ವಿಷದ ಬಗ್ಗೆ ಸರ್ಚ್​ ಮಾಡಿ, ತೆಲಂಗಾಣದಿಂದ ತರಿಸಿಕೊಂಡು ಚಾಲಾಕಿತನ ಮೆರೆದ ಸೊಸೆ ಈಗ ಜೈಲುಪಾಲಾಗಿದ್ದಾಳೆ.

ಇದರ ಪೂರ್ಣ ವಿವರ ಇಲ್ಲಿದೆ….

ಸಂಘಮಿತ್ರ ಕುಂಬಾರೆ (22), ರೋಜಾ ರಾಮಟೆಕೆ (36) ಆರೋಪಿಗಳು. ಮೃತರನ್ನು ಸಂಘಮಿತ್ರ ಪತಿ ರೋಷನ್ ಕುಂಬಾರೆ, ಶಂಕರ ಕುಂಬಾರೆ (ಮಾವ), ವಿಜಯ (ಅತ್ತೆ), ಕೋಮಲ್ (ಅತ್ತಿಗೆ) ಮತ್ತು ವರ್ಷಾ ಉರಾಡೆ (ಅತ್ತೆಯ ಸಹೋದರಿ) ಸೆ.26ರಿಂದ ಅ.15ರ ನಡುವೆ ಮೃತಪಟ್ಟಿದ್ದರು.

ಕೊಲ್ಲಲು ಕಾರಣ:

ಅಕೋಲಾದ ಸಂಘಮಿತ್ರ ಮನೆಯವರ ವಿರೋಧದ ನಡುವೆ ಡಿಸೆಂಬರ್​ 2022 ರಲ್ಲಿ ರೋಷನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ರೋಷನ್ ಥಳಿಸಲು ಆರಂಭಿಸಿದ್ದ. ಆತನ ಕುಟುಂಬಸ್ಥರೂ ಕೆಟ್ಟದಾಗಿ ನಡೆಸಿಕೊಂಡರು. ಆಕೆ ತಂದೆಗೆ ವಿಷಯ ತಿಳಿದಾಗ ಆತ ಏಪ್ರಿಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ತವರಿಗೆ ಹೋಗಬೇಕೆಂದು ಒತ್ತಾಯಿಸಿದರೂ ಪತಿ ಮತ್ತು ಅತ್ತೆ ಇದಕ್ಕೆ ಅನುಮತಿಸಲಿಲ್ಲ. ಇದರಿಂದ ಆಕೆ ಚಿಂತತೆಗೀಡಾದಳು.

ಈ ವಿಷ ವೈದ್ಯಕೀಯ ಪರೀಕ್ಷೆಯಲ್ಲೂ ಪತ್ತೆಯಾಗದು!:

ಆಸ್ತಿ ವಿಚಾರವಾಗಿ ಸಂಬಂಧಿ ರೋಜಾ ಹಾಗೂ ಸಂಗಮಿತ್ರಾ ಅತ್ತೆ ವಿಜಯಾ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಅರಿತಿದ್ದ ಸಂಘಮಿತ್ರಾ ರೋಜಾಗೆ ತನ್ನ ಅತ್ತೆಯನ್ನು ಕೊಲ್ಲಲು ಬಯಸಿರುವುದಾಗಿ ಹೇಳಿದಾಗ ಆಕೆ ಕೈಜೋಡಿಸುತ್ತಾಳೆ. ಇಬ್ಬರೂ ಸೇರಿ ಗೂಗಲ್ ನಲ್ಲಿ ಜನರನ್ನು ಕೊಲ್ಲಲು ಇರುವ ಮಾರ್ಗಗಳನ್ನು ಹುಡುಕುತ್ತಾರೆ. ಆಗ ಥಾಲಿಯಮ್ ವಿಷದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರ ಸೇವನೆಯಿಂದ ವ್ಯಕ್ತಿಯು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾನವ ದೇಹದಲ್ಲಿ ಥಾಲಿಯಮ್ ಅನ್ನು ಕಂಡುಹಿಡಿಯುವುದು ಕಷ್ಟ. ಹೀಗಾಗಿ ಸಿಕ್ಕಿಬೀಳುವುದಿಲ್ಲ ಎಂಬುದನ್ನು ಮನಗಾಣುತ್ತಾರೆ. ಬಳಿಕ ತೆಲಂಗಾಣದಿಂದ ವಿಷ ಖರೀದಿಸಿ ಸೆ.20 ರಂದು ಮೊದಲು ರೋಷನ್ ತಂದೆ ಶಂಕರ್ ಮತ್ತು ಆತನ ತಾಯಿ ವಿಜಯಾಗೆ ಆಹಾರದಲ್ಲಿ ಬೆರೆಸಿ ನೀಡುತ್ತಾರೆ. ಅವರ ಆರೋಗ್ಯ ಹದಗೆಟ್ಟು ಸೆ.26ಮತ್ತು 27 ರಂದು ಮೃತಪಡುತ್ತಾರೆ. ನಂತರ ಅ.8 ರಂದು ಕೋಮಲ್, ಅ.14 ರಂದು ವರ್ಷ ಮತ್ತು ಅ.15 ರಂದು ರೋಷನ್ ಕೂಡ ಸಾವನ್ನಪ್ಪುತ್ತಾರೆ.


ತುಟಿ ಕಪ್ಪಾಗಿದ್ದರೂ ವಿಷ ಪತ್ತೆಯಾಗಿರಲಿಲ್ಲ:

ಸತ್ತವರೆಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರು. ಪ್ರತಿಯೊಬ್ಬರಿಗೂ ದೇಹದಲ್ಲಿ ಜುಮ್ಮೆನಿಸುವಿಕೆ, ಕೆಳ ಬೆನ್ನು ಮತ್ತು ತಲೆಯಲ್ಲಿ ತೀವ್ರವಾದ ನೋವು ಇತ್ತು. ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೆ ವಿಷ ಪತ್ತೆಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರ ನಂತರ, ಪೊಲೀಸರಿಗೆ ಆರೋಗ್ಯದಿಂದ ಇದ್ದ ಸಂಘಮಿತ್ರಾ ಬಗ್ಗೆ ಅನುಮಾನ ಬಂದಿತ್ತು. ಆಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಸಂಪೂರ್ಣ ಸತ್ಯ ಹೊರಬಂದಿದೆ. ರೋಜಾ ಪಾತ್ರವನ್ನೂ ಸಂಘಮಿತ್ರ ಬಹಿರಂಗಪಡಿಸಿದ್ದಾಳೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸೊಸೆ ನೀಡಿದ ಸ್ಲೋಪಾಯ್ಸನ್​ಗೆ ಒಂದಿಡೀ ಕುಟುಂಬ ಅವಸಾನ ಕಂಡಿದೆ. ಆಕೆ ಜೈಲು ಸೇರಿದ್ದಾಳೆ.

ಸುಳ್ಯ; ಅಜ್ಜಾವರದಲ್ಲಿ ತಾಯಾನೆಯಿಂದ ಬೇರ್ಪಟ್ಟ ಮರಿಯಾನೆ ದುಬಾರೆಯಲ್ಲಿ ಸಾವು

Posted by Vidyamaana on 2023-05-10 06:48:15 |

Share: | | | | |


ಸುಳ್ಯ; ಅಜ್ಜಾವರದಲ್ಲಿ ತಾಯಾನೆಯಿಂದ ಬೇರ್ಪಟ್ಟ ಮರಿಯಾನೆ ದುಬಾರೆಯಲ್ಲಿ ಸಾವು

ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ತಾಯಾನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೀಗ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.

ಏಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ ಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಬಳಿಕ ಮೂರು ಆನೆಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಆದ್ರೆ ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ.ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು . ಬಳಿಕ ಆನೆ ತಜ್ಞರ ಅಭಿಪ್ರಾಯದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕೊಂಡುಯೊಯ್ಯಲಾಗಿತ್ತು. ಶಿಬಿರದಲ್ಲಿ ಈ ಮರಿಯಾನೆಯು ಚುರುಕಾಗಿದ್ದು ಹಾಲು ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಬೆರೆಯುತ್ತಿತ್ತು. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.

Recent News


Leave a Comment: