ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ: ಸಕಲೇಶಪುರದಲ್ಲಿ ಚಡ್ಡಿ ಗ್ಯಾಂಗ್ ಪೊಲೀಸ್ ಬಲೆಗೆ

ಸುದ್ದಿಗಳು News

Posted by vidyamaana on 2024-07-10 06:18:20 |

Share: | | | | |


ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ: ಸಕಲೇಶಪುರದಲ್ಲಿ ಚಡ್ಡಿ ಗ್ಯಾಂಗ್ ಪೊಲೀಸ್ ಬಲೆಗೆ

ಮಂಗಳೂರು: ಉರ್ವಾದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆಗೈದು ಚಿನ್ನಾಭರಣ ದರೋಡೆ ಮಾಡಿದ್ದ ಮಧ್ಯಪ್ರದೇಶ ಮೂಲದ ಚಡ್ಡಿ ಬನಿಯಾನ್ ಗ್ಯಾಂಗ್ ಸದಸ್ಯರನ್ನು ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಸಕಲೇಶಪುರದಲ್ಲಿ ಬಂಧಿಸಿದ್ದಾರೆ. 


ಮಧ್ಯಪ್ರದೇಶ ಗುಣಾ ಜಿಲ್ಲೆಯ ರಗೋಗರ್ ತಾಲೂಕಿನ ವಿಶ್ವನಗರ ನಿವಾಸಿ ರಾಜು ಸಿಂಗ್ವಾನಿಯ (24), ಭೋಪಾಲ್ ಜಿಲ್ಲೆಯ ಗುಲಾಬ್ಗಂಜ್ ನಿವಾಸಿ ಮಯೂರ್ (30), ಮಾಧವ್ಗಡ್ ಅಶೋಕನಗರ ನಿವಾಸಿ ಬಾಲಿ (22), ಗುಣಾ ಜಿಲ್ಲೆಯ ಕೋತ್ವಾಲಿ ನಿವಾಸಿ ವಿಕ್ಕಿ (21) ಬಂಧಿತರು.‌ 


ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ಉರ್ವಾ ಬಳಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ಸ್ ತುಂಡರಿಸಿ ಒಳನುಗ್ಗಿದ್ದು ವೃದ್ಧ ದಂಪತಿಗೆ ಹಲ್ಲೆಗೈದು ಬೆದರಿಸಿ, ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಕಪಾಟಿನ ಲಾಕರ್ ಒಳಗೆ ಇರಿಸಿದ್ದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ. 3000 ನಗದು ಹಣವನ್ನು ಸುಲಿಗೆ ಮಾಡಿ, ಸದ್ರಿ ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ವಿಕ್ಟರ್ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೊನ್ಸಾ ನೀಡಿದ ದೂರಿನಂತೆ ಉರ್ವಾ ಠಾಣೆಯಲ್ಲಿ ಅ.ಕ್ರ 69/2024 ಕಲಂ 309(6), 331(7), 311, 305, 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು‌.

ಪ್ರಕರಣ ನಡೆದ ಬೆನ್ನಲ್ಲೇ ಪೊಲೀಸರು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಎಲ್ಲ ಠಾಣೆಯ ಪೊಲೀಸರಿಗೆ ಅಲರ್ಟ್ ಸೂಚನೆ ಹೋಗಿತ್ತು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆ ಮಾಡಿ ಆಸುಪಾಸಿನಲ್ಲಿದ್ದ  ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಶಂಕಿತ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡುಬಂದಿತ್ತು.   

ಕೂಡಲೇ ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮಾಹಿತಿ ಪಡೆದಿದ್ದು ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು  ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದರು. ಸದರಿ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ನಿರ್ವಾಹಕರನ್ನು ಸಂಪರ್ಕಿಸಿ ಅವರ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿತ್ತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಸದರಿ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದರೋಡೆ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅವರ ಬಳಿಯಲ್ಲಿದ್ದ ಮಂಗಳೂರಿನಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಹಾಗೂ ಹಣವನ್ನು ವಶಪಡಿಸಿ ಉರ್ವಾ ಪೊಲೀಸರಿಗೆ ನೀಡಿರುತ್ತಾರೆ. 

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸುಳಿವೇ ಇಲ್ಲದ ಕೃತ್ಯದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ದಿನೇಶ್ ಕುಮಾರ್, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್,  ಉರ್ವಾ ಠಾಣೆಯ ನಿರೀಕ್ಷಕರಾದ ಭಾರತೀ ಜಿ. ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆಯ ಎಸ್.ಐ ಹರೀಶ ಹೆಚ್.ವಿ , ಅನಿತಾ ಹೆಚ್.ಬಿ, ಎ.ಎಸ್.ಐ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ಕಾರ್ಯಾಚರಣೆ ನಡೆಸಿದ್ದಾರೆ. ಶೀಘ್ರ ಪತ್ತೆ ಕಾರ್ಯಕ್ಕೆ  ಹಾಸನ ಜಿಲ್ಲೆಯ ಎಸ್ಪಿ ಮಹಮ್ಮದ್ ಸುಜೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ ಎಂ.ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ,  ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್ ಎ.ಎಸ್.ಐ ಕಿಶೋರ್ ಕೋಟ್ಯಾನ್ , ಚಂದ್ರಶೇಖರ್ ಹಾಗೂ ಶಶಿಧರ್ ಸಹಕರಿಸಿರುತ್ತಾರೆ.

 Share: | | | | |


ನೇತ್ರಾವತಿ ನದಿಗೆ ಹಾರಿದ್ದ ಚಿಕ್ಕಮಗಳೂರಿನ ಉದ್ಯಮಿಯ ಮೃತದೇಹ ಪತ್ತೆ

Posted by Vidyamaana on 2023-10-31 15:40:15 |

Share: | | | | |


ನೇತ್ರಾವತಿ ನದಿಗೆ ಹಾರಿದ್ದ ಚಿಕ್ಕಮಗಳೂರಿನ ಉದ್ಯಮಿಯ ಮೃತದೇಹ ಪತ್ತೆ

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಿಂದ ಸೋಮವಾರ ನದಿಗೆ ಹಾರಿದ್ದ ಚಿಕ್ಕಮಗಳೂರಿನ ಉದ್ಯಮಿಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಮಂಗಳೂರಿನ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ಪೂರೈಸುತ್ತಿದ್ದ ಚಿಕ್ಕಮಗಳೂರು ಮುಗುಳವಳ್ಳಿ ಗೋಕುಲ್‌ ಫಾರ್ಮ್ಸ್ ನಿವಾಸಿ, ಕೃಷಿ ಉದ್ಯಮಿ ಪ್ರಸನ್ನ ಬಿ.ಎಸ್‌ (37) ಅವರು ನದಿಗೆ ಹಾರಿ ಮೃತಟಪಟ್ಟವರು.


ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೇಂಗ್ರೆ ಬಳಿಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಪ್ರಸನ್ನ ಬಿ.ಎಸ್‌ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಮೀನುಗಾರರ ಸಹಕಾರದಿಂದ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.


ಆರ್ಥಿಕ ಸಮಸ್ಯೆಯಿಲ್ಲ


ಚಿಕ್ಕಮಗಳೂರಿನ ರೈತರಿಂದ ಕೊತ್ತಂಬರಿ ಸೊಪ್ಪು ಸಂಗ್ರಹಿಸಿ ಮಂಗಳೂರಿನ ಗ್ಲೋಬಲ್‌ ಮಾರು ಕಟ್ಟೆಯ ತರಕಾರಿ ವ್ಯಾಪಾರಿ ಗಳಿಗೆ ಪೂರೈಸುತ್ತಿದ್ದ ಪ್ರಸನ್ನ ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಿಲ್ಲದಿದ್ದರೂ, ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ನದಿಗೆ ಹಾರಿದ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರಸನ್ನ ಅವರ ಕುಟುಂಬದ ಸದಸ್ಯರು ಆಗಮಿಸಿದ್ದರು.

12 ವರ್ಷಗಳಿಂದ ವ್ಯವಹಾರ

ಚಿಕ್ಕಮಗಳೂರಿನಲ್ಲಿ ಸುಮಾರು 12 ವರ್ಷಗಳಿಂದ ತರಕಾರಿ, ಕೊತ್ತಂಬರಿ ಸೊಪ್ಪು ವ್ಯವಹಾರ ಮಾಡುತ್ತಿದ್ದ ಪ್ರಸನ್ನ ಅ. 27ರಂದು ತನ್ನ ಸಹಾಯಕ ಸುಮನ್‌ ನೊಂದಿಗೆ ಮಂಗಳೂರಿಗೆ ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ತಂದು ಬಳಿಕ ನಗರದ ಹೊಟೇಲ್‌ನಲ್ಲಿ ತಂಗಿದ್ದರು. ಸೋಮವಾರ ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಿದ ಬಳಿಕ ಕಂಕನಾಡಿ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಿ ಹಣ ನೀಡಿ ಬಂದಿದ್ದರು. ಬಳಿಕ ಸುಮನ್‌ ಅವರನ್ನು ಅಲ್ಲೇ ನಿಲ್ಲುವಂತೆ ತಿಳಿಸಿ ಕಾರಿನಲ್ಲಿ ವಾಪಸ್‌ ನೇತ್ರಾವತಿ ಸೇತುವೆಯ ಬಳಿಗೆ ಬಂದು ನದಿಗೆ ಹಾರಿದ್ದಾರೆ.

ಪೈಪ್‌ ಮೂಲಕ ತೆರಳಿ ಆತ್ಮಹತ್ಯೆ

ಪ್ರಸನ್ನ ಮಂಗಳೂರಿನಿಂದ ಕಲ್ಲಾಪುವಿನವರೆಗೆ ಆಗಮಿಸಿ ಬಳಿಕ ಯೂ ಟರ್ನ್ ತೆಗೆದುಕೊಂಡು ವಾಪಸ್‌ ಮಂಗಳೂರು ಕಡೆ ಸಂಚರಿಸಿದ್ದು, ಸೇತುವೆ ಬಳಿ ಕಾರನ್ನು ನಿಲ್ಲಿಸಿ ಪರ್ಸ್‌, ಮೊಬೈಲ್‌ ಅನ್ನು ಕಾರಿನಲ್ಲೇ ಇಟ್ಟು ಸೇತುವೆಯ ಒಂದು ಬದಿಯಿಂದ ಪೈಪ್‌ ಮೂಲಕ ತೆರಳಿ ಅಲ್ಲಿಂದ ನದಿಗೆ ಹಾರಿದ್ದರೆನ್ನಲಾಗಿದೆ.


ಈ ಘಟನೆಯನ್ನು ಸ್ಥಳೀಯವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದು, ಹತ್ತಿರ ಬಂದಾಗ ನದಿಗೆ ಹಾರಿ ಮುಳುಗೇಳುತ್ತಿದ್ದರು. ನದಿಯಲ್ಲಿ ಮುಳುಗುತ್ತಿರುವ ದೃಶ್ಯವನ್ನು ಪ್ರಸನ್ನ ಅವರು ಬಂದಿದ್ದ ಕಾರು. ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆ ಸಂದರ್ಭ ಸ್ಥಳೀಯವಾಗಿ ಈಜುಗಾರರು ಇಲ್ಲದೆ ರಕ್ಷಣೆಗೆ ಸಾಧ್ಯವಾಗಿಲ್ಲ.

ಖಾಸಗಿ ಕ್ಷಣದ ವಿಡಿಯೋ ವೈರಲ್

Posted by Vidyamaana on 2023-07-29 11:24:46 |

Share: | | | | |


ಖಾಸಗಿ ಕ್ಷಣದ ವಿಡಿಯೋ ವೈರಲ್

ದಾವಣಗೆರೆ: ಖಾಸಗಿ ಕ್ಷಣದ ವಿಡಿಯೋ ವೈರಲ್​ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳಿಬ್ಬರು ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಗುರುತಿಸಲಾಗಿದೆ. ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳದುಬಂದಿದೆ.


ಕಾಲೇಜಿನ ಟೆರೆಸ್​ ಮೇಲೆ ಇಬ್ಬರು ಏಕಾಂತದಲ್ಲಿರುವುದನ್ನು ಗಮನಿಸಿ, ಅರಿವಿಗೆ ಬಾರದಂತೆ ಪಕ್ಕದ ಕಟ್ಟದಿಂದ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಾಟ್ಸ್​ಆ್ಯಪ್​ಗಳಲ್ಲಿಯೂ ವಿಡಿಯೋ ಹರಿದಾಡಿತ್ತು. ಅಲ್ಲದೆ, ಕೆಲ ವೆಬ್​ಸೈಟ್​ಗಳಲ್ಲೂ ಸುದ್ದಿ ಪ್ರಕಟವಾಗಿತ್ತುಖಾಸಗಿ ವಿಡಿಯೋ ವೈರಲ್ ಆಗಿ, ತಲೆತಗ್ಗಿಸುವಂತಾಗಿದ್ದಕ್ಕೆ ತೀವ್ರ ಮನನೊಂದಿದ್ದ ವಿದ್ಯಾರ್ಥಿನಿ ನಿನ್ನೆ ಆತ್ಮಹತ್ಯೆಗೆ ಶರಣಾದಳು. ಆಕೆಯ ಸಾವಿನ ಸುದ್ದಿ ಕೇಳಿದ ಆಲೂರಟ್ಟಿ ತಾಂಡಾದ ರತನ್ ಸಹ ಸಾವನ್ನಪ್ಪಿದ್ದಾನೆ. ರತನ್​ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದ. ನಿನ್ನೆ ಸಂಜೆ ಆಲೂರಟ್ಟಿ ತಾಂಡಕ್ಕೆ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಮಕ್ಕಳನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಯುವಕ ಮತ್ತು ಯುವತಿಯ ಪಾಲಕರು ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ.

ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

Posted by Vidyamaana on 2024-02-20 07:33:57 |

Share: | | | | |


ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ರಾಜಸ್ಥಾನ ಜೆ.ಜೆ.ಟಿ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊರವರು ಡಾ.ಬಾಪು ನರಸಿಂಗ ಚೌಗುಲೆರವರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲೆಯ ಜನರ ಮನರಂಜನಾ ಚಟುವಟಿಕೆಗಳು ಮತ್ತು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅವರ ಬಿಡುವಿನ ವೇಳೆಯ ಚಟುವಟಿಕೆಗಳು (A Study on the Recreational Activities of People In Dakshina Kann

non

a District and their leisure time activities during Covid-19 Pandamic)"ಕುರಿತಾಗಿ ಮಂಡಿಸಿದ ಮಹಾ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಎಲ್ಯಾಸ್ ಪಿಂಟೋರವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ್ಯಾಂಕಿನೊಂದಿಗೆ ಎಂ.ಪಿ.ಎಡ್ ಪದವಿಯನ್ನು ಗಳಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಕೆ.ಎಸ್.ಇ.ಟಿ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ. ಎಲ್ಯಾಸ್ ಪಿಂಟೋರವರು ಯೋಗದ ಆಯಾಮಗಳು ಮತ್ತು ಆರೋಗ್ಯಕರ ಜೀವನ ಎಂಬ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ ಜೊತೆಗೆ ಖಿನ್ನತೆಗೆ ಯೋಗ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಎಂಬ ಪುಸ್ತಕವೂ ಪ್ರಕಟವಾಗಿದೆ. ಇದರೊಂದಿಗೆ 3 ಅಂತರಾಷ್ಟ್ರೀಯ ಸೆಮಿನಾರ್ ಗಳು 4 ರಾಷ್ಟ್ರೀಯ ವಿಚಾರ ಸಂಕಿರಣಗಳು, ಹಲವಾರು ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾರೆ.


ಎಲ್ಯಾಸ್ ಪಿಂಟೋರವರು ಪೂರ್ವ ಮತ್ತು ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ 5 ಬಾರಿ ರಾಜ್ಯ ಮಟ್ಟದ ವಿಜೇತರಾಗಿ, ಜಿಲ್ಲಾ ಮಟ್ಟದ ಫಿಲ್ಮ ಡ್ಯಾನ್ಸ್ ಸ್ಪರ್ಧೆಯಲ್ಲಿ 10 ಬಾರಿ ವಿಜೇತರಾಗಿ, ಜಿಲ್ಲೆಯಲ್ಲಿ 1990 ರಿಂದ 2000ರ ವರಗೆ ನಂಬರ್‌ವನ್ ಡ್ಯಾನ್ಸ್ ಗ್ರೂಪ್ ಪಿಂಟೋ ಬ್ರದರ್ಸ್ ಇದರ ಸಂಯೋಜಕರಾಗಿ ಮನ ಸೆಳೆದಿದ್ದರು.

ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

Posted by Vidyamaana on 2024-02-22 16:40:09 |

Share: | | | | |


ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

ಪುತ್ತೂರು: ಮುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಡಿಯೋ ಸವಾರ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರನ್ನು ಗೋಳಿತ್ತೊಟ್ಟಿನ ತೇಜಸ್ (24) ಎಂದು ಗುರುತಿಸಲಾಗಿದೆ. ಇನ್ನೋರ್ವ ಸವಾರ ಪವನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಲ್ಲಿ ಡಿಯೋವನ್ನು ಚಲಾಯಿಸುತ್ತಿದವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.


ಟಿಪ್ಪರ್ ಹಾಗೂ ಡಿಯೋ ದ್ವಿಚಕ್ರ ವಾಹನಗಳ ನಡುವೆ ಮುರದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕಬಕ ಕಡೆ ತೆರಳುತ್ತಿದ್ದ ಡಿಯೋ ಹಾಗೂ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಪದ್ಮನಾಭ ಸಾಮಂತ್ ಅನುಮಾನಾಸ್ಪದ ಸಾವು-ಕೊಲೆ ಶಂಕೆ

Posted by Vidyamaana on 2024-04-01 04:33:59 |

Share: | | | | |


ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಪದ್ಮನಾಭ ಸಾಮಂತ್ ಅನುಮಾನಾಸ್ಪದ ಸಾವು-ಕೊಲೆ ಶಂಕೆ

ಬಂಟ್ವಾಳ : ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತನೊರ್ವನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

 ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ   ಗ್ರಾಮದ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ್ (34) ಎಂಬವರ ಮೃತದೇಹ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೊಂದು ಕೊಲೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

    ಪದ್ಮನಾಭ ಸಾಮಂತ್ ಮಾ.28 ಗುರುವಾರ ಬಿ.ಸಿ.ರೋಡಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ಮುಗಿದ ಬಳಿಕ ಸುಮಾರು 6.30 ರ ನಂತರ  ನಾಪತ್ತೆಯಾಗಿದ್ದರು. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.

    ಭಾನುವಾರ ಬೆಳಿಗ್ಗೆ ಅವರ ಮೃತದೇಹ ಮನೆ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದು ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ದರೂ ಮನೆಮಂದಿ ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

 ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ ಸಾಮಂತ್ ಕಾಂಗ್ರೇಸ್ ಸಾಮಾಜಿಕ ಜಾಲತಾಣದ ಪ್ರಮುಖನಾಗಿಯೂ ಕರ್ತವ್ಯ ನಿರ್ವಹಿಸಿದ್ದು ಇತ್ತೀಚೆಗೆ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷನಾಗಿದ್ದರು.

ಸೌಜನ್ಯ ಕೊಲೆಪ್ರಕರಣ

Posted by Vidyamaana on 2023-08-10 14:07:05 |

Share: | | | | |


ಸೌಜನ್ಯ ಕೊಲೆಪ್ರಕರಣ

ಪುತ್ತೂರು: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಜನರಿಗೆ ಸಂಶಯ ಮತ್ತು ಗೊಂದಲ ಈಗಲೂ ಇದೆ. ಕೊಲೆ ಆರೋಪದಲ್ಲಿ ಬಂಧಿತನಾಗಿರುವ ವ್ಯಕ್ತಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪ್ರಕರಣ ಮಗದೊಮ್ಮೆ ಜೀವ ಪಡೆದುಕೊಂಡಿದೆ. ಅತ್ಯಾಚಾರ ನಡೆಸಿ ಸೌಜನ್ಯಳನ್ನು ಕೊಲೆ ಮಾಡಿರುವ ಬಗ್ಗೆ ಮರು ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಮರುತನಿಖೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖತ ಭೇಟಿಯಾಗಿ ಮನವಿಯನ್ನು ಮಾಡುತ್ತೇನೆ.ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಮತ್ತು ನೈಜ ಆರೋಪಿಗಳ ಬಂಧನವೂ ಆಗಬೇಕು, ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಎಲ್ಲೂ ಮರುಕಳಿಸಬಾರದು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ಮರುತನಿಖೆಯಾಗಲೇಬೇಕಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಆಗ್ರಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ಜನರಲ್ಲಿ ಇನ್ನೂ ಸಂಶಯ ಹಾಗೇ ಉಳಿದುಕೊಂಡಿದ್ದು ಅದನ್ನು ಕೂಡಾ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಹೇಳಿದರು.



Leave a Comment: