ಬಂಟ್ವಾಳ: ಬರಿಮಾರ್‌ನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ಮಗು ಮೃತಪಟ್ಟ ಹಾಗೂ ಇತರ ಮಕ್ಕಳು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನದ ದಾಖಲೆಗಳು ಅಸಿಂಧುವಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಆಡಳಿತ ಮಂಡಳಿ ಮುಖ್ಯಸ್ಥರು ಸೇರಿದಂತೆ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 22ರಂದು ನಡೆದ ಘಟನೆಯಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಇತರ ಕೆಲವು ಮಕ್ಕಳು ಗಾಯಗೊಂಡಿದ್ದರು. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 35/2026ರಂತೆ ಬಿಎನ್‌ಎಸ್ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ಮುಂದುವರಿಸಿದ ಪೊಲೀಸರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಶಾಲಾ ವಾಹನದ ದಾಖಲೆಗಳ ಮಾನ್ಯತೆ ಕುರಿತು ವರದಿ ಪಡೆದಿದ್ದಾರೆ. ಘಟನೆಯ ಸಂದರ್ಭದಲ್ಲಿ ವಾಹನದ ವಿಮಾ ಪತ್ರ ಹಾಗೂ ಅರ್ಹತಾ ಪ್ರಮಾಣಪತ್ರ (ಎಫ್‌ಸಿ) ಚಾಲ್ತಿಯಲ್ಲಿರಲಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.ಅಲ್ಲದೆ, ವಾಹನವು ಶ್ರೀರಾಮ ವಿದ್ಯಾಕೇಂದ್ರದ ಹೆಸರಿನಲ್ಲಿ ನೋಂದಣಿಯಾಗಿರದೆ, ಬೇರೆ ಟ್ರಸ್ಟ್‌ನ ಮಾಲಕತ್ವದಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಅಗತ್ಯ ದಾಖಲೆಗಳನ್ನು ಹೊಂದಿರದ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದ್ದ ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಚಲಾಯಿಸಲು ಕಾರಣರಾದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 109/2026ರಂತೆ ಬಿಎನ್‌ಎಸ್ ಕಲಂ 125 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 196, 192(1)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ತನಿಖೆ ಮುಂದುವರಿದಿದೆ.









