ಪುತ್ತೂರು: ವಿಟ್ಲ ಪಿಎಂಶ್ರೀ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ಪುತ್ತೂರಿನ ದರ್ಬೆಯ ಪಾಂಗ್ಲಾಯ್‌ನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಿಯೋನ್ ಲಸ್ರಾದೋ ಅವರು ಅಂಡರ್-41 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ರಿಯೋನ್ ಲಸ್ರಾದೋ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ರಿಯೋನ್ ಅವರಿಗೆ ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್. ಅವರು ತರಬೇತಿ ನೀಡುತ್ತಿದ್ದಾರೆ. ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಅವರು ರಿಯೋನ್ ಅವರ ಸಾಧನೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ರಿಯೋನ್ ಅವರು ರೋಶನ್ ಲಸ್ರಾದೋ ಮತ್ತು ಸುಶಾಂತಿ ಸುಪ್ರಿಯಾ ದಂಪತಿಯ ಪುತ್ರರಾಗಿದ್ದಾರೆ. ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲೆ, ಶಿಕ್ಷಕರು, ಪೋಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ














