ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಂತರ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹17.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಸೆ.1ರಂದು ಮಧ್ಯರಾತ್ರಿ ದೈವಸ್ಥಾನದ ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಸೆ.6ರಂದು ಮುಲ್ಕಿ ಕಾರ್ನಾಡಿನಲ್ಲಿ ಜಾಹೀದ್ ಸಿನಾನ್ (36) ಮತ್ತು ಯಾಸೀನ್ (36) ಹಾಗೂ ಸೆ.7ರಂದು ದಾವಣಗೆರೆಯಲ್ಲಿ ಮಹಮದ್ ಅಫ್ರಿದಿ (26) ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ (26) ಅವರನ್ನು ಬಂಧಿಸಲಾಗಿದೆ.ಆರೋಪಿಗಳಿಂದ 4.521 ಕೆ.ಜಿ. ಬೆಳ್ಳಿ ಹಾಗೂ 34.820 ಗ್ರಾಂ ಚಿನ್ನ ಸೇರಿದಂತೆ ಸುಮಾರು ₹11.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಕಾರನ್ನೂ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು ₹6 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನೆರಡು ಕಳವು ಪ್ರಕರಣ ಪತ್ತೆ: ಆರೋಪಿಗಳ ವಿಚಾರಣೆಯಿಂದ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನ ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಗಳೂ ಪತ್ತೆಯಾಗಿವೆ.ಮೊದಲ ಆರೋಪಿ ಜಾಹೀದ್ ಸಿನಾನ್ ವಿರುದ್ಧ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಈ ಹಿಂದೆ 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶೀಕಾಂತ್ ಕೆ. ನೇತೃತ್ವದಲ್ಲಿ ಸುರತ್ಕಲ್ ಠಾಣೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್, ಮುಲ್ಕಿ ಠಾಣೆ ಪಿಎಸ್‌ಐ ರಾಘವೇಂದ್ರ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!