ಬಂಟ್ವಾಳ: ಹಣ ವಾಪಸ್ ನೀಡುವಂತೆ ಕೇಳಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಆರೋಪದ ಮೇಲೆ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಅಕ್ಟೋಬರ್ 18ರಂದು ವಶಕ್ಕೆ ಪಡೆದಿದ್ದಾರೆ.ಬಂಟ್ವಾಳ ಬಿ. ಮೂಡ ಗ್ರಾಮದ ಲೋಕೇಶ್ (27) ಎಂಬವರು ನೀಡಿದ ದೂರಿನ ಪ್ರಕಾರ, ಅವರ ಸಹೋದರ ಉದಯ್ ಎಂಬವರಿಗೆ ಆರೋಪಿ ಅಜಿತ್ ಕಲ್ಲಗುಡ್ಡೆ ಹಣ ನೀಡಬೇಕಿತ್ತು. ಉದಯ್ ಅವರು ಹಣ ವಾಪಸ್ ನೀಡುವಂತೆ ಕೇಳುತ್ತಿದ್ದರು ಎನ್ನಲಾಗಿದೆ.ಅಕ್ಟೋಬರ್ 17ರಂದು ರಾತ್ರಿ ಹಣ ವಾಪಸ್ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ. ಅದರಂತೆ ಉದಯ್ ಅವರು ಹಣ ಪಡೆಯಲು ಪಲ್ಲಮಜಲು ಜಂಕ್ಷನ್‌ಗೆ ತೆರಳಿದ್ದರು. ಲೋಕೇಶ್ ಅವರಿಗೂ ಅಲ್ಲಿಗೆ ಬರುವಂತೆ ತಿಳಿಸಲಾಗಿತ್ತು.ಲೋಕೇಶ್ ಅವರು ಸ್ಥಳಕ್ಕೆ ತಲುಪಿದಾಗ ಆರೋಪಿ ಅಜಿತ್ ಚೂರಿಯಿಂದ ಉದಯ್ ಅವರಿಗೆ ಇರಿಯುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯಲು ಮುಂದಾದಾಗ ಆರೋಪಿ ತಮ್ಮನ್ನು ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ಲೋಕೇಶ್ ದೂರಿನಲ್ಲಿ ತಿಳಿಸಿದ್ದಾರೆ.ಬಳಿಕ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 144/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(2), 109(1) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಆರೋಪಿಯಾದ ಬಂಟ್ವಾಳ ತಾಲೂಕು ಪಲ್ಲಮಜಲು ಮನೆಯ ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಅವರನ್ನು ಪೊಲೀಸರು ಅಕ್ಟೋಬರ್ 18ರಂದು ತನಿಖೆಗಾಗಿ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!