ಬೆಳ್ತಂಗಡಿ: ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಕ್ಕಡ ಮತ್ತು ಸೌತಡ್ಕದಲ್ಲಿ ನಡೆದ ಗಲಾಟೆ, ಹಲ್ಲೆ ಹಾಗೂ ಸ್ವತ್ತುಗಳಿಗೆ ಹಾನಿ ಮಾಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಕೊಕ್ಕಡ ಗ್ರಾಮದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಅ.18ರಂದು ಬೆಳಿಗ್ಗೆ ರಾಘವ ಭಂಡಾರಿ ಹಾಗೂ ಅವರ ಕೆಲಸಗಾರರು ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ಈ ಹಿಂದೆ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್, ಅವರ ಪತ್ನಿ, ಮಕ್ಕಳು ಹಾಗೂ ಇತರರು ಏಕಾಏಕಿ ಒಳನುಗ್ಗಿ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಆರೋಪಿಗಳು ಸುಮಾರು ₹25 ಸಾವಿರ ಮೌಲ್ಯದ ಕಟ್ಟಡ ಹಾಗೂ ಸ್ವತ್ತುಗಳಿಗೆ ಹಾನಿ ಮಾಡಿ, ರಾಘವ ಭಂಡಾರಿ ಮತ್ತು ಅವರ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೊಕ್ಕಡ ನಿವಾಸಿ ಕೃಷ್ಣ ಭಟ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದಕ್ಕೆ ಸಂಬಂಧಿಸಿದಂತೆ, ಸೌತಡ್ಕ ದೇವಸ್ಥಾನದ ಸಮೀಪದ ಅಂಗಡಿಯಲ್ಲಿ ಹರಿಶ್ಚಂದ್ರ ಅವರು ವ್ಯಾಪಾರ ನಡೆಸುತ್ತಿದ್ದಾಗ, ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಹಾಗೂ ಚೇತನ್ ಎಂಬವರು ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸೊತ್ತುಗಳನ್ನು ಹೊರಗೆ ಎಸೆದು, ಹರಿಶ್ಚಂದ್ರ, ಅವರ ಪತ್ನಿ ಹಾಗೂ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಈ ಕುರಿತು ಹರಿಶ್ಚಂದ್ರ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.









