ಪುತ್ತೂರು: ಗೋಣಿ ಚೀಲ ಹಾಗೂ ಡಬ್ಬಿಗಳನ್ನು ಬಳಸಿ ಹುಲಿವೇಷ ತಯಾರಿಸಿಕೊಂಡು, ಎರಡು ದಿನಗಳ ಕಾಲ ಕುಣಿದು ಸಂಗ್ರಹಿಸಿದ ಹಣವನ್ನು ಬಡ ರೋಗಿಯೊಬ್ಬರಿಗೆ ನೀಡುವ ಮೂಲಕ ಬಂಟ್ವಾಳ ತಾಲೂಕಿನ ಸಜಿಪ ಪಡು ಗ್ರಾಮದ ಏಳು ಪುಟಾಣಿ ಮಕ್ಕಳು ಮಾನವೀಯತೆ ಮೆರೆದಿದ್ದಾರೆ.ಸಜಿಪ ಗುತ್ತು ಪಡು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಗ್ ಹಾಗೂ ರಿತೇಶ್ ಈ ಸತ್ಕಾರ್ಯ ಮಾಡಿದ ಮಕ್ಕಳು. ತಾವೇ ಸಿದ್ಧಪಡಿಸಿದ ಹುಲಿವೇಷ ಧರಿಸಿ ಕುಣಿದು ₹5,000 ಸಂಗ್ರಹಿಸಿದ ಇವರು, ಕಳೆದ ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಬಡ ರೋಗಿಯೊಬ್ಬರಿಗೆ ಹಣವನ್ನು ಹಸ್ತಾಂತರಿಸಿದ್ದಾರೆ.ಮಕ್ಕಳ ಈ ಸೇವಾ ಕಾರ್ಯದ ಬಗ್ಗೆ ತಿಳಿದ ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಅವರು, ಮಕ್ಕಳನ್ನು ಪಿಲಿನಲಿಕೆ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು. ಅಲ್ಲದೆ, ಅವರ ಮಾನವೀಯ ಕಾರ್ಯವನ್ನು ಮೆಚ್ಚಿ ₹25,000 ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.ಚಿಕ್ಕ ವಯಸ್ಸಿನಲ್ಲೇ ಪರರ ಕಷ್ಟಕ್ಕೆ ಸ್ಪಂದಿಸಿ, ತಾವು ಸಂಗ್ರಹಿಸಿದ ಹಣವನ್ನು ಅಸಹಾಯಕ ವ್ಯಕ್ತಿಯ ನೆರವಿಗೆ ನೀಡಿದ ಮಕ್ಕಳ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.









