ಪುತ್ತೂರು: ಪೆಟ್ರೋಲ್ ಬಂಕ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್ ಮೋಟಾರ್ ಸೈಕಲ್ ನಾಪತ್ತೆಯಾಗಿರುವ ಘಟನೆ ಸತ್ತಿಕಲ್ಲು ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನಾಗಂಡ ಮನೆಯ ನವೀನ್ (45) ಅವರಿಗೆ ಸೇರಿದ KA 70 H 2035 ನೋಂದಣಿ ಸಂಖ್ಯೆಯ ಯಮಹಾ ಎಫ್‌ಝಡ್ ಬೈಕ್ ನಾಪತ್ತೆಯಾಗಿದೆ. ನವೀನ್ ಅವರು ತಮ್ಮ ದೂರದ ಸಂಬಂಧಿ, ಪುತ್ತೂರು ತಾಲೂಕಿನ ಕಬಕ ಗ್ರಾಮದ ಪಂಜುರ್ಲಿಪಾದೆ ನಿವಾಸಿ ಹರೀಶ್ ಅವರಿಗೆ ಬೈಕ್ ಬಳಸಲು ನೀಡಿದ್ದರು.ಹರೀಶ್ ಅವರು ಟ್ಯಾಂಕರ್ ಲಾರಿಯ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಅ. 21ರಂದು ಬೆಳಿಗ್ಗೆ ಸುಮಾರು 7.50ಕ್ಕೆ ಬೈಕ್‌ನಲ್ಲಿ ಸತ್ತಿಕಲ್ಲು ಭಾರತ್ ಪೆಟ್ರೋಲ್ ಬಂಕ್‌ಗೆ ತೆರಳಿ, ಅಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದರು. ಬಳಿಕ ಮಂಗಳೂರಿನ ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದ ಟ್ಯಾಂಕರ್ ಲಾರಿಯನ್ನು ನೋಡಲು ಸ್ನೇಹಿತ ಮುರಳಿ ಅವರ ಬೈಕ್‌ನಲ್ಲಿ ಮಂಗಳೂರಿಗೆ ತೆರಳಿದ್ದರು.

ಕೆಲಸ ಮುಗಿಸಿ ಅದೇ ಬೈಕ್‌ನಲ್ಲಿ ಸತ್ತಿಕಲ್ಲಿಗೆ ಮರಳಿದ ಹರೀಶ್, ಸಂಜೆ ಸುಮಾರು 3.30ಕ್ಕೆ ಪೆಟ್ರೋಲ್ ಬಂಕ್‌ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಕಾಣೆಯಾಗಿತ್ತು. ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ. 21ರಂದು ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 303(2)ರ ಅಡಿಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!