ಬೆಳ್ತಂಗಡಿ: ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯಗಳು ಹಾಗೂ ಸಾಧನೆಗಳು ಆದರ್ಶಪ್ರಾಯವಾಗಿದ್ದು, ವಿಶ್ವಮಾನ್ಯತೆ ಗಳಿಸಿವೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.ಅವರು ಅ. 24ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.ಧರ್ಮದ ತಳಹದಿಯಲ್ಲಿ ಮಾನವೀಯ ಮೌಲ್ಯಗಳೊಂದಿಗೆ, ವಿಶೇಷವಾಗಿ ಮಹಿಳಾ ಸಬಲೀಕರಣ ಹಾಗೂ ಅಸಹಾಯಕರಿಗೆ ಅಭಯ ನೀಡುವ ನಿಟ್ಟಿನಲ್ಲಿ ಹೆಗ್ಗಡೆಯವರು ನಡೆಸುತ್ತಿರುವ ಸಮಾಜಮುಖಿ ಸೇವಾಕಾರ್ಯಗಳು ಅಪೂರ್ವವಾಗಿವೆ. ಅವರಿಗೆ ನೀಡಿರುವ ‘ರಾಜರ್ಷಿ’ ಬಿರುದು ಅನ್ವರ್ಥಕ ಹಾಗೂ ಅರ್ಥಪೂರ್ಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್‌ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ರಾಘವೇಂದ್ರ ಭಟ್, ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಅವರು ಬ್ಯಾಂಕ್‌ನ ನಿರ್ದೇಶಕರಾಗಿ ಅದರ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿ, ರಾಜಯೋಗಿ ಹಾಗೂ ಕರ್ಮಯೋಗಿಯಾಗಿ ಸಮಾಜದ ಏಳಿಗೆಗಾಗಿ ಹೆಗ್ಗಡೆಯವರು ಸಲ್ಲಿಸುತ್ತಿರುವ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.26 ಹಿರಿಯ ನೌಕರರಿಗೆ ಸನ್ಮಾನಸಂಸೆ ಹೊಸನೆಲ ಎಸ್ಟೇಟ್‌ನ ಪ್ರಬಂಧಕ ಶ್ರೀವರ್ಮ ಸೇರಿದಂತೆ 26 ಮಂದಿ ಹಿರಿಯ ನೌಕರರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಡಾ. ಪವನ್ ರಚಿಸಿದ ‘ಮುಹೂರ್ತ ಪದವೀ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಹಲವು ಹೊಸ ಯೋಜನೆಗಳ ಘೋಷಣೆಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ, ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾ ವಸತಿ ನಿಲಯ, ನರ್ಸಿಂಗ್ ಕಾಲೇಜು ಹಾಗೂ ಫಿಸಿಯೋಥೆರಪಿ ಕಾಲೇಜು ಆರಂಭ, ಶಿಕ್ಷಣ ಸಂಸ್ಥೆಗಳ ಹಳೆಯ ಕಟ್ಟಡಗಳ ನವೀಕರಣ ಮತ್ತು ಉಜಿರೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಪ್ರಮುಖ ಯೋಜನೆಗಳಾಗಿವೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಅನುಕೂಲಕ್ಕಾಗಿ ಎಟಿಎಂ ಬಳಕೆಗೆ ವ್ಯವಸ್ಥೆ ಕಲ್ಪಿಸುವುದು, ಉಜಿರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಆರಂಭಿಸುವುದು ಹಾಗೂ ಕೆರೆಗಳ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.ಈ ಸೌಲಭ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ. ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.ಚಿಕಿತ್ಸೆಗಾಗಿ ನೆರವು ಕೋರಿ ಧರ್ಮಸ್ಥಳಕ್ಕೆ ಆಗಮಿಸುವವರಿಗೆ ಸೂಕ್ತ ಸಹಾಯ ಒದಗಿಸಲಾಗುವುದು ಎಂದ ಅವರು, ಉಡುಪಿ, ಹಾಸನ ಮತ್ತು ಬೆಂಗಳೂರಿನ ಆಯುರ್ವೇದ ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳ ಮೂಲಕ ಪಾರಂಪರಿಕ ಚಿಕಿತ್ಸಾ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.ಗಣ್ಯರ ಉಪಸ್ಥಿತಿಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.









