ಪುತ್ತೂರು: ಗ್ರಾಮ ಪಂಚಾಯತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಕರ್ನಾಟಕ (ಸುಗ್ರಾಮ) ಮತ್ತು ದಿ ಹಂಗರ್ ಪ್ರೊಜೆಕ್ಟ್ ಇದರ ಸಹಭಾಗಿತ್ವದಲ್ಲಿ  ಸುಗ್ರಾಮ ಸದಸ್ಯರ ರಾಜ್ಯ ಮಟ್ಟದ ಸಮಾವೇಶ ನ.೨೭ ಮತ್ತು ೨೮ ರಂದು ಎರಡು ದಿನಗಳ ಕಾಲ ಬೆಂಗಳೂರಿನ ಕಾನಿಷ್ಟ ಗ್ರಾಂಡ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯತ್ ಮಹಿಳಾ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು. ಪುತ್ತೂರು , ಕಡಬ ತಾಲೂಕಿನಿಂದ ರಾಮಕುಂಜ , ಒಳಮೊಗ್ರು, ರಾಮಕುಂಜ, ಕೊಳ್ತಿಗೆ, ಬನ್ನೂರು, ಅರಿಯಡ್ಕ, ಬೆಳಂದೂರು ಹಾಗೂ ಪೆರಾಬೆ ಹಾಗೂ ಬಂಟ್ವಾಳ, ಉಳ್ಳಾಲ ತಾಲೂಕಿನ ಬಾಳೆ ಪುಣೆ ,ಇರಾ,ಮಂಚಿ, ವಿಟ್ಲ ಪಡ್ನೂರು, ಅನಂತಾಡಿ, ಪೆರುವಾಯಿ,ಅಳಿಕೆ ಗ್ರಾಮ ಪಂಚಾಯತ್‌ಗಳ ಚುನಾಯಿತ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು. ಒಳಮೊಗ್ರು ಗ್ರಾಪಂನಿಂದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯೆ ರೇಖಾ ಯತೀಶ್, ರಾಮಕುಂಜ ಪಂಚಾಯತ್‌ನಿಂದ ಸುಗ್ರಾಮದ ತಾಲೂಕು ಅಧ್ಯಕ್ಷೆ ಮಾಲತಿ ಮತ್ತು ಸುಚೇತಾ, ಕೊಳ್ತಿಗೆ ಗ್ರಾಪಂನಿಂದ ನಾಗವೇಣಿ, ಬನ್ನೂರು ಗ್ರಾಪಂನಿಂದ ಸ್ಮಿತಾ,ಅರಿಯಡ್ಕ ಗ್ರಾಪಂನಿಂದ ಮೀನಾಕ್ಷಿ, ಪುಷ್ಪಾಲತಾ, ಬೆಳಂದೂರು ಗ್ರಾಪಂನಿಂದ ಪಾರ್ವತಿ ಹಾಗೂ ಪೆರಾಬೆ ಗ್ರಾಪಂನಿಂದ ಮಮತಾ, ಬಾಳೆ ಪುಣೆ ಗ್ರಾಪಂ ನಿಂದ ಮಾಲತಿ, ಇರಾದಿಂದ ಚಂದ್ರಪ್ರಭಾ, ಮಂಚಿನಿಂದ ಪುಷ್ಪ ಕಾಮತ್,ವಿಜಯ, ವಿಟ್ಲ ಪಡ್ನೂರು ನಿಂದ ಪ್ರೇಮಲತಾ, ಅಮಿತಾ, ಅನಂತಾಡಿಯಿಂದ ಸುಜಾತಾ, ಪೆರುವಾಯಿಯಿಂದ ನೆಬಿಸಾ, ರಶ್ಮಿ, ಅಳಿಕೆಯಿಂದ ಗಿರಿಜಾ ಭಾಗವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಸಮಾವೇಶದಲ್ಲಿ ಸುಗ್ರಾಮದ ಮಾಜಿ ಸದಸ್ಯರಿಂದ ಅನುಭವ ಹಂಚಿಕೆ, ಪಂಚಾಯತ್‌ರಾಜ್‌ನ ಪ್ರಸ್ತುತ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಮತ್ತು ಸವಾಲುಗಳು,ಪಂಚಾಯತ್‌ರಾಜ್ ಯೋಜನೆ ಮತ್ತು ಜನರ ಸಹಭಾಗಿತ್ವ, ನೀರು ಆರೋಗ್ಯ ಮತ್ತು ನೈರ್ಮಲ್ಯ, ಲಿಂಗ ನ್ಯಾಯ, ಸುಗ್ರಾಮ ಜಿಲ್ಲಾ ಮಟ್ಟದ ಸಾಧನೆಗಳು ಇತ್ಯಾದಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಿತು. ಇದಲ್ಲದೆ ಸುಗ್ರಾಮ ಸದಸ್ಯರುಗಳನ್ನು ವಿವಿಧ ವಿಷಯಗಳ ಮೇಲೆ ಗುಂಪುಗಳಾಗಿ ವಿಗಂಡಿಸಿ ಸಮಸ್ಯೆಗಳು, ಸಲಹೆಗಳು, ಶಿಫಾರಸ್ಸುಗಳನ್ನು ಪಡೆದುಕೊಳ್ಳಲಾಯಿತು.
ಬಾಕ್ಸ್
ವಿಷಯಗಳ ಮಂಡನೆ
ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಸದಸ್ಯರುಗಳು ತಮ್ಮ ಹಲವು ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮಂಡಿಸಿದರು. ಮುಖ್ಯವಾಗಿ ಪಂಚಾಯತ್ ಕ್ರಿಯಾಯೋಜನೆ ತಯಾರಿ ವೇಳೆ ಮಹಿಳಾ ಸದಸ್ಯರುಗಳನ್ನು ಕೂಡ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು, ಅನುದಾನ ಹಂಚಿಕೆ ವೇಳೆ ಮಹಿಳಾ ಸದಸ್ಯರುಗಳನ್ನು ಕೂಡ ಪರಿಗಣಿಸಿ ಸಮಾನವಾಗಿ ಹಂಚಿಕೆ ಮಾಡಬೇಕು, ಕೆಡಿಪಿ ಇತ್ಯಾದಿ ಸಭೆಗಳಲ್ಲಿ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ತಾಲೂಕಿನಿಂದಲೇ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು, ಪಂಚಾಯತ್‌ಗಳಿಗೆ ಅಧಿಕಾರಿಗಳು, ಆಡಳಿತ ಮಂಡಳಿಗಳಿಗೆ ಫೀಲ್ಡ್ ಹೋಗಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಆಗಬೇಕು, ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿ ನಡುವೆ ಮಾಹಿತಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಬೇಕು, ಪಂಚಾಯತ್ ಸದಸ್ಯರುಗಳಿಗೂ ಪಿಂಚಣಿ ಸೌಲಭ್ಯ ಬೇಕು, ಪ್ರತಿ ಪಂಚಾಯತ್‌ನಲ್ಲೂ ಮಹಿಳಾ ವಿಶ್ರಾಂತಿ ಕೊಠಡಿಯ ಅವಶ್ಯಕತೆ ಇತ್ಯಾದಿ ವಿಷಯಗಳ ಬಗ್ಗೆ ಸದಸ್ಯರುಗಳು ಸಮಾವೇಶದಲ್ಲಿ ವಿಷಯ ಮಂಡನೆ ಮಾಡಿದರು.

` ಎರಡು ದಿನಗಳ ಕಾಲ ನಡೆದ ಸುಗ್ರಾಮ ಸದಸ್ಯರ ಸಮಾವೇಶ ಒಂದು ಒಳ್ಳೆಯ ಕಾರ್ಯಕ್ರಮವಾಗಿತ್ತು. ಮಹಿಳಾ ಸಬಲೀಕರಣದ ಬಗ್ಗೆ ಬಹಳಷ್ಟು ವಿಷಯಗಳನ್ನು ಅರಿತುಕೊಳ್ಳಲಾಗಿದ್ದು ಇದಲ್ಲದೆ ಚುನಾಯಿತ ಮಹಿಳಾ ಸದಸ್ಯರುಗಳ ಸಮಸ್ಯೆಗಳು, ಬೇಡಿಕೆಗಳನ್ನು ಹೇಳಿಕೊಳ್ಳಲು ವೇದಿಕೆಯಾಗಿತ್ತು, ನಮ್ಮ ಹಲವು ಬೇಡಿಕೆಗಳು, ಸಮಸ್ಯೆಗಳನ್ನು ನಾವು ಸಮಾವೇಶದಲ್ಲಿ ಹೇಳಿಕೊಂಡಿದ್ದೇವೆ. ಈ ಬಗ್ಗೆ ಪ್ರಣಾಳಿಕೆಯನ್ನು ತಯಾರಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳಬಹುದಾಗಿದೆ.’
– ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್
…………………..

Leave a Reply

Your email address will not be published. Required fields are marked *

Join WhatsApp Group
error: Content is protected !!