ಸುಳ್ಯ: ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೌಟುಂಬಿಕ ಕಿರುಕುಳ ಮತ್ತು ಹತ್ಯೆ ಆರೋಪದಡಿ ಮಾವ, ಅತ್ತೆ ಹಾಗೂ ನಾದಿನಿಯ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುತ್ತೂರು ಕೆದಂಬಾಡಿ ನಿವಾಸಿ ಜುಬೈದ್ (43) ಅವರ ಪುತ್ರಿ ಫಾತಿಮತ್ ನಿಶಾನ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಜು.18ರ ರಾತ್ರಿ ಫಾತಿಮತ್ ನಿಶಾನ ಅವರು ತಾಯಿಗೆ ಕರೆ ಮಾಡಿ, ತನ್ನ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಅವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ತಾಯಿ ಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ, ಫೋನ್ ಅನ್ನು ಮಾವ ಅಲವಿ ಕಸಿದುಕೊಂಡು, ಫಾತಿಮತ್ ನಿಶಾನ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಪೋಷಕರು ಮಗಳ ಮನೆಗೆ ತೆರಳುವಷ್ಟರಲ್ಲಿ ಫಾತಿಮತ್ ನಿಶಾನ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ತಮ್ಮ ಮಗಳನ್ನು ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಕೊಲೆ ಮಾಡಿರುವುದಾಗಿ ಜುಬೈದ್ ನೀಡಿದ ದೂರಿನ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಡಿ BNS 2023ರ ಕಲಂ 85, 103(1) ಹಾಗೂ 3(5) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







