ಪುತ್ತೂರು , ಜು.21: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ಮಂಗಳವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಡಿಜಿಟಲ್ ಯುಗದಲ್ಲಿಯೂ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಅಚಲವಾಗಿದೆ. ಪತ್ರಕರ್ತರು ಸಮಾಜಕ್ಕೆ ಆನೆಬಲದಂತೆ ಕಾರ್ಯನಿರ್ವಹಿಸುತ್ತಿದ್ದು, ಸತ್ಯನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಪತ್ರಿಕೋದ್ಯಮದ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಧಾಕರ ಸುವರ್ಣ, ಪತ್ರಿಕೋದ್ಯಮವು ಯಾವುದೇ ವ್ಯವಸ್ಥೆಯ ಪರವಾಗಿರದೆ ಸಮಾಜದ ಪರವಾಗಿ ಪ್ರಶ್ನಿಸುವ ವಿರೋಧ ಪಕ್ಷದ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು. ಕೃತಕ ಬುದ್ಧಿಮತ್ತೆ (AI) ಬಂದರೂ ಪತ್ರಿಕೆಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದಿಲ್ಲ. ಹಳೆಯ ಓದುಗರನ್ನು ಉಳಿಸಿಕೊಂಡು ಹೊಸ ಓದುಗರನ್ನು ಸೆಳೆಯುವುದು ಇಂದಿನ ಸವಾಲಾಗಿದೆ ಎಂದರು.ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು ಮಾತನಾಡಿ, ತಮ್ಮ ಸಂಸ್ಥೆ ತನ್ನ ಪತ್ರಕರ್ತರಷ್ಟೇ ಅಲ್ಲದೆ ಇತರ ಮಾಧ್ಯಮಗಳ ಪತ್ರಕರ್ತರಿಗೂ ಸದಾ ಬೆಂಬಲ ನೀಡಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಪತ್ರಕರ್ತರ ಕಲ್ಯಾಣ ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಗಳಿಗೆ ಸಂಘ ಆದ್ಯತೆ ನೀಡುತ್ತಿದ್ದು, ಪುತ್ತೂರು ಘಟಕದ ಸಾಮಾಜಿಕ ಸೇವೆಗಳು ಮುಂದುವರಿಯಲಿ ಎಂದು ಆಶಿಸಿದರು.ಸಂಘದ ಕಾನೂನು ಸಲಹೆಗಾರ ಕೃಷ್ಣ ಪ್ರಸಾದ್ ನಡ್ಸಾರ್, ಅಂತರ್ಜಾಲದ ಬಳಕೆಯಲ್ಲಿ ಎಚ್ಚರಿಕೆ ಅಗತ್ಯವಿದ್ದು, ಅದರ ದುರುಪಯೋಗದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಶರತ್ ಕುಮಾರ್ ಪಾರ, ಸಂಘದ ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, 2019ರಲ್ಲಿ ಸ್ಥಾಪನೆಯಾದ ಸಂಘವು ವೈದ್ಯಕೀಯ ಶಿಬಿರ, ವಿಶೇಷ ಚೇತನರ ಆಶ್ರಮಗಳಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದು ವಿವರಿಸಿದರು.ನೂತನ ಸದಸ್ಯರಿಗೆ ಸ್ವಾಗತವಿ4 ನ್ಯೂಸ್‌ನ ಕವಿತಾ ಮಾಣಿ, ಡೇ ಟುಡೇ ನ್ಯೂಸ್‌ನ ಸಂದೀಪ್ ಹಾಗೂ ಸುದ್ದಿ ಬಿಡುಗಡೆಯ ಭರತ್ ಶಾಂತಿನಗರ ಅವರನ್ನು ಸಂಘದ ನೂತನ ಸದಸ್ಯರಾಗಿ ಸ್ವಾಗತಿಸಲಾಯಿತು.ಸಾಧಕರಿಗೆ ಸನ್ಮಾನಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥಾಪಕ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಮತ್ತು ಸುದ್ದಿ ಬಿಡುಗಡೆಯ ಪ್ರಸರಣ ವಿಭಾಗದ ನಿವೃತ್ತ ಮುಖ್ಯಸ್ಥ ಜಯರಾಮ್ ಭಟ್ ಸಂಪಾಜೆ ಅವರನ್ನು ಶಾಲು, ಪೇಟ, ಹಾರ ಮತ್ತು ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಲಂಚ-ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆಸುದ್ದಿ ಸಮೂಹ ಸಂಸ್ಥೆಗಳ ಜನಾಂದೋಲನ ಕಾರ್ಯಕ್ರಮದ ಅಂಗವಾಗಿ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಜಾಗೃತಿ ಫಲಕ ಅನಾವರಣಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ನೂತನ ಪದಾಧಿಕಾರಿಗಳಿಗೆ ಪದಪ್ರದಾನ2026–27ನೇ ಸಾಲಿನ ಅಧ್ಯಕ್ಷ ಶರತ್ ಕುಮಾರ್ ಪಾರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ, ಕೋಶಾಧಿಕಾರಿ ಚಿತ್ರಾಂಗಿಣಿ ಸತ್ಯಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರ ಬಿ. ನಾಯ್ಕ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಮಿತ್ತಡ್ಕ ಹಾಗೂ ಜತೆ ಕಾರ್ಯದರ್ಶಿ ದಿನೇಶ್ ಬಡಗನ್ನೂರು ಅವರಿಗೆ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಪದಪ್ರದಾನ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಶೋಭಾ ಶಿವಾನಂದ, ಲಕ್ಷ್ಮೀ ಪ್ರಸಾದ್ ಬೆಟ್ಟ, ಜಯಂತ್ ಉರ್ಲಾಂಡಿ, ರವಿಪ್ರಸಾದ್, ಸಂಶುದ್ದೀನ್ ಸಂಪ್ಯ, ಮೇಘ ಪಾಲೆತ್ತಡಿ, ನಝೀರ್ ಕೊಯಿಲ, ಅನೀಶ್ ಮರಿಲ್, ಉಮಾಪ್ರಸಾದ್ ರೈ, ಲೋಕೇಶ್ ಬನ್ನೂರು, ಗಣೇಶ್ ಕಲ್ಲರ್ಪೆ, ಯತೀಶ್ ಉಪ್ಪಳಿಗೆ, ವಸಂತ ಸಾಮೆತಡ್ಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಮತ್ತು ಸದಸ್ಯರು ಉಪಸ್ಥಿತರಿದ್ದರು.ಚಿತ್ರಾಂಗಿಣಿ ಹಾಗೂ ರಕ್ಷಿತಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ ವಂದಿಸಿದರು. ಹರಿಪ್ರಸಾದ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!