ಮಹಾರಾಷ್ಟ್ರದ ಪುಣೆಯ ಲೋಹಗಡ್ ಕೋಟೆಯಲ್ಲಿ ಜೂನ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.ಕೇತನ್ ಅವರೊಂದಿಗೆ ನಿಶ್ಚಿತಾರ್ಥಿತವಾಗಿದ್ದ ಸಿಯಾ ಗೋಯಲ್ ಮತ್ತು ಆಕೆಯ ಗೆಳೆಯ ಚೇತನ್ ಚೌಧರಿ ಅವರನ್ನು ಈಗಾಗಲೇ ಬಂಧಿಸಲಾಗಿತ್ತು.ಇದೀಗ ಚೇತನ್ ನ ಸ್ನೇಹಿತ ರಿತೇಶ್ ಹಾಂಗೆ ನನ್ನು ಬಂಧಿಸಲಾಗಿದೆ.ಕೇತನ್ ಅವರ ಕೊಲೆಗೆ ರೂಪಿಸಿದ್ದ ಸಂಚಿನಲ್ಲಿ ರಿತೇಶ್ ಭಾಗಿಯಾಗಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಶುಕ್ರವಾರ ಬಂಧಿಸಲಾದ ರಿತೇಶ್ ನನ್ನು ವಡ್ಗಾಂವ್ ಮಾವಲ್ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ಸೆ. 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.’ಕೇತನ್ ಅವರ ಕೊಲೆಯ ಯೋಜನೆಯಲ್ಲಿ ರಿತೇಶ್ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.ಕೇತನ್ ಅವರ ಕೈ-ಕಾಲುಗಳನ್ನು ಮುರಿದು, ಗಾಯಗೊಳಿಸಿದ ಬಳಿಕ ಕೊಲೆ ಮಾಡುವ ಯೋಜನೆಯನ್ನು ಸಿಯಾ ಮತ್ತು ಚೇತನ್ ರೂಪಿಸಿದ್ದರು. ಈ ಯೋಜನೆಯ ಬಗ್ಗೆ ರಿತೇಶ್‌ ಗೆ ಮೊದಲೇ ತಿಳಿದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 18ರಂದು ಕೇತನ್ ಕೊಲೆಯಾದ ಬಳಿಕ ಚೇತನ್, ರಿತೇಶ್‌ ಗೆ ಕರೆ ಮಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದ ಎಂದೂ ಅವರು ಹೇಳಿದ್ದಾರೆ.ಮೊಬೈಲ್ ಚಾಟ್‌ ನಿಂದ ಸುಳಿವು :ರಿತೇಶ್ ಅವರ ಮೊಬೈಲ್ ಫೋನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರ ವಿಧಿವಿಜ್ಞಾನ ಪರೀಕ್ಷೆ ನಡೆಸಿದಾಗ ಕೊಲೆ ಸಂಚಿಗೆ ಸಂಬಂಧಿಸಿದ ಚಾಟ್‌ ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಲೋಹಗಡ್ ಕೋಟೆಯಿಂದ ಕೇತನ್ ನನ್ನು ಹೇಗೆ ತಳ್ಳಬೇಕು ಮತ್ತು ಕೊಲೆಯ ಪುರಾವೆಗಳನ್ನು ಹೇಗೆ ನಾಶಪಡಿಸಬೇಕು ಎಂಬ ಬಗ್ಗೆ ಚಾಟ್‌ ನಲ್ಲಿ ಚರ್ಚಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ಬೀಡ್ ಮೂಲದ ರಿತೇಶ್ ನನ್ನು ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಕೇತನ್ ಮೃತಪಟ್ಟಿದ್ದು ಹೇಗೆ? :ಜೂನ್ 18ರಂದು ಕೇತನ್ ಅವರು ಸಿಯಾ ಅವರೊಂದಿಗೆ ಲೋಹಗಡ್ ಕೋಟೆಗೆ ತೆರಳಿದ್ದರು. ಸಿಯಾ ಆರಂಭದಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಫೋಟೊಗಳಿಗೆ ಪೋಸ್ ನೀಡುತ್ತಿದ್ದಾಗ ಕೇತನ್ ಜಾರಿಬಿದ್ದು ಕಮರಿಗೆ ಬಿದ್ದಿದ್ದರು.ಈ ಹೇಳಿಕೆಯ ಆಧಾರದಲ್ಲಿ ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದರು.ಆದರೆ ಕೇತನ್ ಅವರ ಸಹೋದರಿಗೆ ಈ ವಿವರಣೆ ಬಗ್ಗೆ ಅನುಮಾನ ಮೂಡಿತ್ತು. ಕೇತನ್ ಅವರ ಅಂತ್ಯಕ್ರಿಯೆಯ ಬಳಿಕವೂ ಅವರು ಘಟನೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು.ಘಟನೆಯ ನಾಲ್ಕು ದಿನಗಳ ಬಳಿಕ ಸಿಯಾ ಅವರು ಕೇತನ್ ಅವರ ಮನೆಗೆ ಸಾಂತ್ವನ ಹೇಳಲು ತೆರಳಿದ್ದಳು. ಆಗ ಕೇತನ್ ಅವರ ಸಹೋದರಿ ಲೋಹಗಡ್‌ ನಲ್ಲಿ ನಡೆದ ಘಟನೆ ಬಗ್ಗೆ ಸಿಯಾಳನ್ನು ವಿವರವಾಗಿ ಪ್ರಶ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.ಕೇತನ್ ಮತ್ತು ಸಿಯಾ ಮೇ 31ರಂದು, ಜೂನ್ 14ರಂದು ಹಾಗೂ ಜೂನ್ 18ರಂದು-ಒಟ್ಟು ಮೂರು ಬಾರಿ ಲೋಹಗಡ್ ಕೋಟೆಗೆ ತೆರಳಿದ್ದರು. ಈ ಮೂರು ಭೇಟಿಗಳ ಬಗ್ಗೆ ಸಿಯಾ ನೀಡಿದ ವಿವರಗಳಲ್ಲಿ ಅಸಂಗತತೆ ಕಂಡುಬಂದಿದ್ದು, ಅವರ ಅನುಮಾನ ಮತ್ತಷ್ಟು ಹೆಚ್ಚಿಸಿತು.ಬಳಿಕ ಅವರು ತಮ್ಮ ಅನುಮಾನಗಳನ್ನು ಕುಟುಂಬದವರಿಗೆ ತಿಳಿಸಿದರು. ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಪ್ರಕರಣವನ್ನು ಮರುತನಿಖೆ ಮಾಡುವಂತೆ ಒತ್ತಾಯಿಸಿತು.ಸಿಸಿಟಿವಿಯಲ್ಲಿ ಅನುಮಾನಾಸ್ಪದ ವ್ಯಕ್ತಿ :ಕುಟುಂಬದ ಒತ್ತಾಯದ ಬಳಿಕ ಪೊಲೀಸರು ತನಿಖೆಯನ್ನು ವಿಸ್ತರಿಸಿದರು. ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಹಲವರನ್ನು ವಿಚಾರಣೆ ನಡೆಸಿದರು.ಈ ವೇಳೆ ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಯಿತು.ಲೋಹಗಡ್ ಕೋಟೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ‘ಹೂಡಿ’ ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ಪ್ರಯಾಣಿಸುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿತ್ತು. ಜೂನ್ ತಿಂಗಳ ಬಿಸಿಲಿನಲ್ಲೂ ಆತ ಹೂಡಿ ಧರಿಸಿರುವುದು ಪೊಲೀಸರ ಗಮನ ಸೆಳೆಯಿತು.ತನಿಖೆ ಮುಂದುವರಿಸಿದಾಗ ಆ ವ್ಯಕ್ತಿ ಚೇತನ್ ಚೌಧರಿ ಎಂಬುದು ಗೊತ್ತಾಯಿತು.ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಜನವರಿಯಿಂದ ಜೂನ್‌ ವರೆಗೆ ಇಬ್ಬರೂ 2,000ಕ್ಕೂ ಹೆಚ್ಚು ಬಾರಿ ಮಾತನಾಡಿದ್ದರು. ಫೇಸ್‌ಟೈಮ್ ಮತ್ತು ವಾಟ್ಸ್‌ಆಯಪ್ ಸೇರಿದಂತೆ ಒಟ್ಟು 238 ಗಂಟೆಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.ಕೊಲೆಗೆ ಕಾರಣವೇನು? :ಸಿಯಾ ಮತ್ತು ಚೇತನ್ ನಡುವಿನ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದರು. ಹೀಗಾಗಿ ಅವರನ್ನು ಕೊಲೆ ಮಾಡಲು ಸಿಯಾ ಮತ್ತು ಚೇತನ್ ಯೋಜಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.ಕೇತನ್ ಅವರನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿದ ಬಳಿಕ, ಅದನ್ನು ಅಪಘಾತದಂತೆ ಬಿಂಬಿಸಲು ಇಬ್ಬರೂ ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಜೂನ್ 23ರಂದು ಸಿಯಾ ಮತ್ತು ಚೇತನ್ ಅವರನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿತ್ತು. ಇದೀಗ ರಿತೇಶ್ ಬಂಧನವಾಗಿದೆ.ಬಾಲಿ ಪ್ರವಾಸದ ಯೋಜನೆ ಏನಾಯಿತು? :ಕೊಲೆಗೆ 12 ದಿನಗಳ ಮೊದಲು ಮತ್ತೊಂದು ಘಟನೆ ನಡೆದಿತ್ತು. ಕೇತನ್ ಮತ್ತು ಸಿಯಾ ಜೂನ್ 6ರಂದು ಫ್ರೀ ವೆಡ್ಡಿಂಗ್ ಫೋಟೊಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ತೆರಳಲು ಯೋಜಿಸಿದ್ದರು.ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಅವರ ಪಾಸ್‌ಪೋರ್ಟ್ ಕಾಣೆಯಾಗಿರುವುದು ಗೊತ್ತಾಯಿತು. ಹೀಗಾಗಿ ಬಾಲಿಗೆ ತೆರಳಲು ಸಾಧ್ಯವಾಗದೆ ವಾಪಸ್ ಬಂದಿದ್ದರು.ಈ ಪಾಸ್‌ಪೋರ್ಟ್ ಘಟನೆ ಹಿಂದೆ ಯಾರದ್ದಾದರೂ ಕೃತ್ಯ ಇರಬಹುದು ಎಂದು ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ.’ಜೂನ್ 6ರಂದು ಬಾಲಿಗೆ ತೆರಳಲು ಮನೆಯಿಂದ ಹೊರಟಾಗ ಕಾರಿನಲ್ಲಿ ನನ್ನ ಮಗಳು, ನನ್ನ ಮಗ, ಸಿಯಾ ಮತ್ತು ಸಿಯಾಳ ಸಹೋದರ ಸಾಹಿಲ್ ಇದ್ದರು. ಎಲ್ಲರ ಪಾಸ್‌ಪೋರ್ಟ್, ಕರೆನ್ಸಿ, ಕ್ರೆಡಿಟ್ ಕಾರ್ಡ್‌, ಚಾಲನಾ ಪರವಾನಗಿ ಮತ್ತಿತರ ವಸ್ತುಗಳನ್ನು ಒಂದೇ ಪೌಚ್‌ ನಲ್ಲಿ ಇಡಲಾಗಿತ್ತು. ಆ ಪೌಚ್ ಕಾರಿನಲ್ಲೇ ಇತ್ತು’ ಎಂದು ಅವರು ಹೇಳಿದ್ದಾರೆ.’ಅವರು ಫುಡ್ ಮಾಲ್‌ ನಲ್ಲಿ ನಿಂತಿದ್ದರು. ಆಗ ಸಿಯಾ ತನ್ನ ಮೊಬೈಲ್ ಕಾರಿನಲ್ಲಿ ಮರೆತುಬಿಟ್ಟಿದ್ದಾಗಿ ಹೇಳಿ ಅದನ್ನು ಪಡೆಯಲು ಕಾರಿನ ಬಳಿಗೆ ಹಿಂತಿರುಗಿದ್ದರು. ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಹೊರತುಪಡಿಸಿ ಉಳಿದ ಎಲ್ಲರ ಬಳಿಯೂ ಪಾಸ್‌ಪೋರ್ಟ್ ಇತ್ತು. ಕೇತನ್ ಅವರ ಪಾಸ್‌ಪೋರ್ಟ್ ಮಾತ್ರ ಕಾಣೆಯಾಗಿತ್ತು. ಹೀಗಾಗಿ ಅವರು ವಿಮಾನ ನಿಲ್ದಾಣದಿಂದ ಹಿಂದಿರುಗಬೇಕಾಯಿತು’ ಎಂದು ವಿಶಾಲ್ ತಿಳಿಸಿದ್ದಾರೆ.ಪಾಸ್‌ಪೋರ್ಟ್ ನಾಪತ್ತೆಯಾದ 12 ದಿನಗಳ ಬಳಿಕ ಕೇತನ್ ಲೋಹಗಡ್ ಕೋಟೆಯಲ್ಲಿ ಮೃತಪಟ್ಟಿದ್ದರು.ಪ್ರಕರಣದಲ್ಲಿ ಸಿಯಾ, ಚೇತನ್ ಮತ್ತು ಇದೀಗ ರಿತೇಶ್ ಅವರನ್ನು ಬಂಧಿಸಲಾಗಿದ್ದು, ಕೊಲೆ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!