ಪುತ್ತೂರು: ಗಂಡ-ಹೆಂಡತಿ ನಡುವಿನ ಜಗಳದ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೆ.4ರಂದು ರಾತ್ರಿ ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಹೆಚ್‌ಸಿ ಮಧು ಹಾಗೂ ಸಿಪಿಸಿ ಭೀಮನಗೌಡ ಎಂ. ಬಿರಾದಾರ್ ಅವರು ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಳೆ ದೂರು ಬಂದ ಹಿನ್ನೆಲೆಯಲ್ಲಿ ಪಡ್ನೂರು ಗ್ರಾಮದ ಮುಂಡಾಜೆಗೆ ತೆರಳಿದ್ದರು.ಸ್ಥಳದಲ್ಲಿ ಮಹಿಳೆಯೊಬ್ಬರು ತನ್ನ ಪತಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನವೀನ್ ಎಂಬವರ ಬಳಿ ವಿಚಾರಣೆ ನಡೆಸುತ್ತಿದ್ದ ವೇಳೆ ಅವರು ಕೋಪಗೊಂಡು ಪತ್ನಿಗೆ ಮತ್ತೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನು ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಗೆ ನವೀನ್, ಅವರ ತಾಯಿ ಹಾಗೂ ಸಹೋದರ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026, ಬಿಎನ್‌ಎಸ್ 2023ರ **ಕಲಂ 352, 132, 121(1) ಜೊತೆಗೆ 3(5)**ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಪ್ರಕರಣದ ಆರೋಪಿ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಗೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!