ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಸೆ.3ರಂದು ರಾತ್ರಿ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿ ರವಿರಾಜ್ ಅವರು ಬೈಕ್‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಮಂಗಳೂರು–ಬೆಂಗಳೂರು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಬಳಿ ಬೊಲೆರೋ ಪಿಕಪ್ ವಾಹನ ಹಾಗೂ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದವರ ಪೈಕಿ ಇಬ್ಬರನ್ನು ಹಿಡಿದು ವಿಚಾರಿಸಿದಾಗ, ಅವರು ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಮತ್ತು ಮುತ್ತು (28) ಎಂದು ತಿಳಿದುಬಂದಿದೆ. ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಸುಮಾರು 20 ಲೀಟರ್ ಡೀಸೆಲ್ ತುಂಬಿದ್ದ ಕ್ಯಾನ್, ಖಾಲಿ ಕ್ಯಾನ್‌ಗಳು, ಡೀಸೆಲ್ ಕಳವಿಗೆ ಬಳಸಿದ್ದ ರಬ್ಬರ್ ಪೈಪ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026ರಂತೆ ಬಿಎನ್‌ಎಸ್‌ಎಸ್ 2023ರ ಕಲಂ 35(1)(ಡಿ) ಹಾಗೂ ಬಿಎನ್‌ಎಸ್ 2023ರ ಕಲಂ 303(2) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.













