ಪುತ್ತೂರು: ಪತ್ರಿಕಾಗೋಷ್ಠಿ ನಡೆಸಲು ಪುತ್ತೂರು ಪ್ರೆಸ್ ಕ್ಲಬ್‌ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ತಳ್ಳಾಟ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿದ ಆರೋಪದ ಮೇಲೆ ಹಲವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿರುವ ತಾನು, ತನ್ನ ವಿರುದ್ಧ ಮಾಡಲಾಗಿರುವ ಕೆಲವು ಆರೋಪಗಳ ಕುರಿತು ಸ್ಪಷ್ಟನೆ ನೀಡಲು ಸೆ.1ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲು ಪುತ್ತೂರು ಪ್ರೆಸ್ ಕ್ಲಬ್‌ಗೆ ಬಂದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಈ ವೇಳೆ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಂ ಬೋಳ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀಣ್ ಆಚಾರ್ಯ ಸೇರಿದಂತೆ ಇತರರು ತನ್ನನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.ಬಳಿಕ ಪ್ರೆಸ್ ಕ್ಲಬ್ ಒಳಗೆ ತೆರಳಿದ್ದ ತನ್ನನ್ನು ಹೊರಗೆ ಬರದಂತೆ ಅಕ್ರಮವಾಗಿ ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಳ್ಳಾಟದಿಂದ ನೋವುಂಟಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅಬ್ದುಲ್ ಹಕೀಂ ತಿಳಿಸಿದ್ದಾರೆ.ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 105/2026ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, **ಬಿಎನ್‌ಎಸ್ ಕಲಂ 127(2), 351(1), 351(2), 351(3), 352, 115 r/w 3(5)**ರ ಅಡಿಯಲ್ಲಿ ತನಿಖೆ ಮುಂದುವರಿದಿದೆ.













