: ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲದ ಆಲಿಗುಡ್ಡೆಯಲ್ಲಿ ವಿವಾಹಿತ ಮಹಿಳೆ ಫಾತಿಮತ್ ನಿಶಾನ (22) ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ, ಸಂಪಾಜೆ ಕಡೆಪಾಲ ಆಲಿಗುಡ್ಡೆ ನಿವಾಸಿ ಸಿ.ಪಿ. ಅಳವಿಕುಟ್ಟಿ ಅವರ ಪುತ್ರ ಅನ್ಸಾರ್ ಅವರ ಪತ್ನಿ ಫಾತಿಮತ್ ನಿಶಾನ ಜುಲೈ 18ರಂದು ಪತಿ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ದಂಪತಿಗೆ ಒಂದು ಗಂಡು ಮಗುವಿದೆ.ಮಗಳ ಕೊಲೆ ಆರೋಪಿಸಿ ತಾಯಿ ದೂರು:ಜುಲೈ 18ರಂದು ರಾತ್ರಿ 8.35ರ ಸುಮಾರಿಗೆ ಮಗಳು ಕರೆ ಮಾಡಿ ಮಾವ ಅಳವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಳು ಎಂದು ತಾಯಿ ಜುಬೈದಾ ದೂರಿನಲ್ಲಿ ಆರೋಪಿಸಿದ್ದರು.ತಾನು ಅರಂಬೂರು ತಲುಪುವವರೆಗೆ ಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ, ಮಗಳ ಕೈಯಿಂದ ಫೋನ್ ಕಸಿದುಕೊಂಡ ಮಾವ ಅಳವಿ ಮಾತನಾಡಿ, ‘ನಿನ್ನ ಮಗಳನ್ನು ಕರೆದುಕೊಂಡು ಹೋಗು. ಇಲ್ಲವಾದರೆ ಅವಳನ್ನು ಕೊಂದು ಜೈಲಿಗೆ ಹೋಗುತ್ತೇನೆ’ ಎಂದು ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಬಳಿಕ ಕಡೆಪಾಲಕ್ಕೆ ತಲುಪುವ ಮುನ್ನವೇ ಮಗಳನ್ನು ಕೊಂದು ಮನೆಯ ಹೊರಾಂಗಣದಲ್ಲಿ ಮಲಗಿಸಲಾಗಿತ್ತು ಎಂದು ಆರೋಪಿಸಿದ್ದರು.ನಂತರ ಆ್ಯಂಬುಲೆನ್ಸ್ ಮೂಲಕ ಫಾತಿಮತ್ ನಿಶಾನ ಅವರನ್ನು ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರಾತ್ರಿ 10.36ರ ಸುಮಾರಿಗೆ ಪರಿಶೀಲಿಸಿದ ವೈದ್ಯರು, ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ಮಗಳನ್ನು ಆಕೆಯ ಮಾವ ಅಳವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಜುಬೈದಾ ನೀಡಿದ ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸರು ಬಿಎನ್‌ಎಸ್‌ನ ಕಲಂ 85, 103(1) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಫಾತಿಮತ್ ನಿಶಾನ ಅವರ ಮಾವ ಸಿ.ಪಿ. ಅಳವಿ (54), ಅತ್ತೆ ಆಯಿಷಾ ಸಿ.ಎ. (44) ಹಾಗೂ ನಾದಿನಿ ಫಸೀಲಾ ಸಿ.ಎ. (28) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಆಯಿಷಾ ಸಿ.ಎ. ಮತ್ತು ಫಸೀಲಾ ಸಿ.ಎ. ಅವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್‌ಪ್ರಸಾದ್ ಎನ್.ಕೆ. ಹಾಗೂ ವಿಮಲೇಶ್ ಆರ್. ಗೌಡ ವಾದಿಸಿದ್ದರು.













