ಪುತ್ತೂರು: ದರ್ಬೆಯ ಶ್ರೀವರ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ದಾಖಲಾತಿಗೆ ತಾಂತ್ರಿಕ ದೋಷದಿಂದ ಹಾನಿಯಾದ ವಿಚಾರಕ್ಕೆ ಸಂಬಂಧಿಸಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸುದರ್ಶನ್ ಪೈ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್. ಪೈ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಸುಳ್ಯ ತಾಲೂಕಿನ ಜಾಲ್ಲೂರು ನಿವಾಸಿ ಫಾತಿಮತ್ ಮಿಸ್ವಾನ್ (32) ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ.21ರಂದು ತನ್ನ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ವೇಳೆ ಕೆಲವು ದಾಖಲಾತಿಗಳ ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ದರ್ಬೆಯ ಶ್ರೀವರ್ ಡೆಸ್ಟಿನೇಶನ್ ಜನಸೇವಾ ಕೇಂದ್ರಕ್ಕೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಬಳಿಕ ದಾಖಲಾತಿಗಳನ್ನು ಪಡೆಯಲು ತೆರಳಿದಾಗ, ಅವುಗಳ ಪೈಕಿ ಒಂದು ದಾಖಲಾತಿ ತಾಂತ್ರಿಕ ದೋಷದಿಂದ ಹಾನಿಯಾಗಿರುವುದು ಗಮನಕ್ಕೆ ಬಂದಿತ್ತು. ಅದನ್ನು ಸರಿಪಡಿಸಿಕೊಡಬೇಕು ಅಥವಾ ಹೊಸ ದಾಖಲಾತಿ ಪಡೆಯಲು ₹300 ನೀಡಬೇಕು ಎಂದು ಕೇಳಿದಾಗ, ಅಂಗಡಿಯಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವರು ಅವಾಚ್ಯವಾಗಿ ಬೈದು, ಸುದರ್ಶನ್ ಪೈ ಅವರು ತನಗೆ, ಸಹೋದರ ಹಾಗೂ ತಂಗಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 352, 115(2), 109 ಹಾಗೂ 3(5)ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಸುದರ್ಶನ್ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಸುದರ್ಶನ್ ಪೈ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಂಜನಾ ಪೈಗೆ ನಿರೀಕ್ಷಣಾ ಜಾಮೀನು:
ಇದೇ ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್. ಪೈ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್ ಹಾಗೂ ನಿಶಾ ಕುಮಾರಿ ವಾದಿಸಿದ್ದರು.












