ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು ಹೊರಪ್ರದೇಶದಿಂದ ಬಂದಿರುವ ಜಗದೀಶ್ ಕಾರಂತ್ ಹಾಗೂ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ಮಾನವಬಂಧುತ್ವ ವೇದಿಕೆ ಪೊಲೀಸ್ ಇಲಾಖೆಗೆ ದೂರು ನೀಡಿದೆ.ದರ್ಬೆಯಲ್ಲಿ ಅಂಗಡಿ ಮಾಲಕರು ಹಾಗೂ ಗಿರಾಕಿಗಳ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ಪುತ್ತೂರಿಗೆ ಭೇಟಿ ನೀಡಿದ್ದ ಇಬ್ಬರು ಮಾಧ್ಯಮಗಳಲ್ಲಿ ಕೋಮುದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವೇದಿಕೆ ಆರೋಪಿಸಿದೆ. ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದರ ಜೊತೆಗೆ, ‘ದೇಶ ವಿಭಜನೆ ಮಾಡುವ ಹುನ್ನಾರ’, ‘ಭಯೋತ್ಪಾದಕ ಮುಸ್ಲಿಂ’ ಸೇರಿದಂತೆ ಹಲವು ಪದಗಳನ್ನು ಬಳಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಸಮುದಾಯಗಳ ನಡುವೆ ವೈರತ್ವ ಉಂಟುಮಾಡುವ ಹೇಳಿಕೆಗಳು ಕಾನೂನುಬಾಹಿರವಾಗಿದ್ದು, ಇಂತಹ ಹೇಳಿಕೆಗಳಿಂದ ಪುತ್ತೂರಿನಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಯಿದೆ. ಆದ್ದರಿಂದ ದ್ವೇಷಪೂರಿತ ಹೇಳಿಕೆಗಳಿಗೆ ಕಡಿವಾಣ ಹಾಕಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಡಿವೈಎಸ್ಪಿ ಹಾಗೂ ಠಾಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ವೇದಿಕೆ ಒತ್ತಾಯಿಸಿದೆ.‘ಪುತ್ತೂರು ಚಲೋ’ಗೆ ಅವಕಾಶ ನೀಡದಂತೆ ಮನವಿಇದೇ ವೇಳೆ ಆ.31ರಂದು ಸಂಘಪರಿವಾರ ನಡೆಸಲು ಉದ್ದೇಶಿಸಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮಾನವಬಂಧುತ್ವ ವೇದಿಕೆ ಪುತ್ತೂರು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದೆ.ಕಾರ್ಯಕ್ರಮದ ಆಯೋಜನೆ ಕೋಮುಗಲಭೆ ಸೃಷ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ವೇದಿಕೆ ಆರೋಪಿಸಿದ್ದು, ಇದರಿಂದ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದೆ.ನಿಯೋಗದಲ್ಲಿ ಮಾನವಬಂಧುತ್ವ ವೇದಿಕೆ ಸಂಚಾಲಕ ಅಮಳ ರಾಮಚಂದ್ರ, ಪದಾಧಿಕಾರಿಗಳಾದ ಎಚ್. ಮಹಮ್ಮದ್ ಆಲಿ, ಉಲ್ಲಾಸ್ ಕೋಟ್ಯಾನ್, ಮೌರೀಸ್ ಮಸ್ಕರೇನಸ್, ಅಮರಾಥ್ ಗೌಡ, ಮಹಮ್ಮದ್ ರಿಯಾಝ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












