ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮರಕೊಟ್ಲು ಟೋಲ್ ಗೇಟ್‌ನಲ್ಲಿ ನಿಯಮ ಹಾಗೂ ನಿಗದಿತ ಅವಧಿ ಮೀರಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಿದೆ.ಈ ಕುರಿತು ಇತ್ತೀಚೆಗೆ ಬಂಟ್ವಾಳದಲ್ಲಿ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಅವರ ಉಪಸ್ಥಿತಿಯಲ್ಲಿ ನಡೆದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಮುಂದಿನ ಹಂತದ ಹೋರಾಟಗಳ ಕುರಿತು ಚರ್ಚೆ ನಡೆಯಿತು.ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಎಸ್‌ಡಿಪಿಐ ಹಲವು ಹೋರಾಟಗಳನ್ನು ನಡೆಸಿದ್ದು, ಇತ್ತೀಚೆಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಡಿಸಿ ಕಚೇರಿ ಚಲೋ ಪಾದಯಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು.ಮುಂದಿನ ಹಂತದಲ್ಲಿ ಧರಣಿ ಸತ್ಯಾಗ್ರಹ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಚಲೋ, ಟೋಲ್ ಗೇಟ್‌ನಲ್ಲಿ ಪೋಸ್ಟರ್ ಪ್ರದರ್ಶನ, ಫ್ಲೆಕ್ಸ್ ಅಭಿಯಾನ, ಸಾರ್ವಜನಿಕರಿಗೆ ನೋಟಿಸ್ ಹಂಚಿಕೆ, ಟೋಲ್ ಬಹಿಷ್ಕಾರ ಹಾಗೂ ಜೈಲ್ ಭರೋ ಸೇರಿದಂತೆ ವಿವಿಧ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಬ್ರಹ್ಮರಕೊಟ್ಲು ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಸ್‌ಡಿಪಿಐ ಕಾರ್ಯದರ್ಶಿ ಮಂಡಳಿ ಸ್ಪಷ್ಟಪಡಿಸಿದೆ.ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನವಾಝ್ ಕಟ್ಟೆ ಹಾಗೂ ಸಮಿತಿ ಸದಸ್ಯರಾದ ಮೂನಿಶ್ ಅಲಿ ಮತ್ತು ರಹ್ಮಾನ್ ನಾವೂರು ಉಪಸ್ಥಿತರಿದ್ದರು.












