ಪುತ್ತೂರು, ಆ.29: ಸವಣೂರಿನ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಬಹು ಬ್ರಾಂಡ್ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸರ್ವಿಸ್‌ ನೀಡುವ ಶ್ವೇತಾ ಮೋಟಾರ್ಸ್ ಸಂಸ್ಥೆ ಆ.28ರಂದು ಶುಭಾರಂಭಗೊಂಡಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಜೀವನದಲ್ಲಿ ದ್ವಿಚಕ್ರ ವಾಹನಗಳು ಅವಿಭಾಜ್ಯವಾಗಿದ್ದು, ವಿವಿಧ ಕಂಪೆನಿಗಳ ವಾಹನಗಳು ಒಂದೇ ಸೂರಿನಡಿ ದೊರೆಯುವಂತಾಗಿರುವುದು ಗ್ರಾಹಕರಿಗೆ ಅನುಕೂಲಕರವಾಗಿದೆ ಎಂದರು.ಸವಣೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಸುತ್ತಮುತ್ತಲಿನ ಜನರಿಗೆ ಶ್ವೇತಾ ಮೋಟಾರ್ಸ್‌ನಿಂದ ಪ್ರಯೋಜನವಾಗಲಿದೆ. ಗ್ರಾಹಕರು ಸಂಸ್ಥೆಯನ್ನು ಬೆಳೆಸಬೇಕು. ಸಂಸ್ಥೆಯ ಮಾಲಕ ಹರೀಶ್ ಬಂಗೇರ ಆತ್ಮೀಯ ಸ್ನೇಹಿತರಾಗಿದ್ದು, ಅವರಲ್ಲಿನ ಮಾನವೀಯ ಗುಣಗಳನ್ನು ತಾನು ಕಂಡಿದ್ದೇನೆ. ಸರ್ವ ಧರ್ಮೀಯರ ಪ್ರೋತ್ಸಾಹದಿಂದ ಸಂಸ್ಥೆ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು. ಉದ್ಘಾಟನೆಗೂ ಮುನ್ನ ಈಶ್ವರ ಭಟ್ ಅವರು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ದೀಪ ಬೆಳಗಿಸಿದರು.ಊರಿನ ಅಭಿವೃದ್ಧಿಗೆ ಪೂರಕ: ಸವಣೂರು–ಕಾಣಿಯೂರು ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ ಮಾತನಾಡಿ, ಉದ್ಯೋಗಕ್ಕಾಗಿ ಬೆಂಗಳೂರು, ಮಂಗಳೂರು ಮುಂತಾದ ನಗರಗಳಿಗೆ ತೆರಳುವ ಬದಲು ಸ್ವ-ಉದ್ಯೋಗದತ್ತ ಯುವಕರು ಗಮನಹರಿಸಬೇಕು. ಹರೀಶ್ ಬಂಗೇರ ಅವರು ಸವಣೂರಿನಲ್ಲಿ ಉದ್ಯಮ ಆರಂಭಿಸಿ ಹತ್ತು ಮಂದಿಗೆ ಉದ್ಯೋಗ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಹೊಸ ಉದ್ಯಮಗಳ ಆರಂಭವು ಊರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.ಸಂತಸದ ವಿಚಾರ: ಪುತ್ತೂರು ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಆಲಿ ಮಾತನಾಡಿ, ವಿವಿಧ ಕಂಪೆನಿಗಳ ದ್ವಿಚಕ್ರ ವಾಹನಗಳು ಒಂದೇ ಸೂರಿನಡಿ ದೊರೆಯುವ ಸಂಸ್ಥೆ ಸವಣೂರಿನಲ್ಲಿ ಆರಂಭವಾಗಿರುವುದು ಸಂತಸದ ವಿಚಾರ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹರೀಶ್ ಬಂಗೇರ ಅವರು ಉತ್ತಮ ಹೆಸರು ಗಳಿಸಲಿ ಎಂದು ಹಾರೈಸಿದರು.ಬಹುದೊಡ್ಡ ಕೊಡುಗೆ: ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ವಿವಿಧ ಕಂಪೆನಿಗಳ ದ್ವಿಚಕ್ರ ವಾಹನಗಳ ಶೋರೂಂ ಸವಣೂರಿನಲ್ಲಿ ಆರಂಭಿಸಿರುವುದು ಈ ಭಾಗಕ್ಕೆ ದೊರೆತ ಬಹುದೊಡ್ಡ ಕೊಡುಗೆಯಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿ ಎಂದರು.ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ನೂತನ ಸಂಸ್ಥೆ ಆರಂಭಿಸಿರುವುದು ಸಂತಸದ ವಿಚಾರವಾಗಿದ್ದು, ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.ಸವಣೂರು ಗ್ರಾ.ಪಂ. ಮಾಜಿ ಸದಸ್ಯ ರಫೀಕ್ ಎಂ.ಎ. ಮಾಂತೂರು, ಸೋನಾ ಟಿವಿಎಸ್ ಗ್ರೂಪ್ ಮಾಲಕ ದೇಜಪ್ಪ ಪೂಜಾರಿ ಮತ್ತಿತರರು ಮಾತನಾಡಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.ಐದು ಪ್ರಮುಖ ಬ್ರಾಂಡ್‌ಗಳ ವಾಹನ, ಸರ್ವಿಸ್: ಶ್ವೇತಾ ಮೋಟಾರ್ಸ್‌ನಲ್ಲಿ ಟಿವಿಎಸ್, ಹೋಂಡಾ, ಬಜಾಜ್, ಸುಜುಕಿ ಹಾಗೂ ಹೀರೋ ಕಂಪೆನಿಗಳ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸರ್ವಿಸ್ ಸೌಲಭ್ಯ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕ ಹರೀಶ್ ಬಂಗೇರ ಹೇಳಿದರು.ಪ್ರಥಮ ಗ್ರಾಹಕರಿಗೆ ಬೈಕ್ ಹಸ್ತಾಂತರ: ಶ್ವೇತಾ ಮೋಟಾರ್ಸ್‌ನ ಪ್ರಥಮ ಗ್ರಾಹಕ ಅನ್ನಿತ್ ಪುತ್ತೂರು ಅವರಿಗೆ ಉದ್ಯಮಿ ವಿಜಯಕುಮಾರ್ ಸೊರಕೆ ಅವರು ಬೈಕ್ ಹಸ್ತಾಂತರಿಸಿದರು. ಸಂಸ್ಥೆಯ ಮಾಲಕ ಹರೀಶ್ ಬಂಗೇರ ಅವರು ಸ್ಮರಣಿಕೆ ನೀಡಿ ಗೌರವಿಸಿದರು.ಸವಣೂರು ಕರಾವಳಿ ಕಾಂಪ್ಲೆಕ್ಸ್ ಮಾಲಕರಾದ ರಫೀಕ್ ಎಂ.ಕೆ. ಸವಣೂರು, ಫಾರೂಖ್ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಗ್ರಾ.ಪಂ. ಮಾಜಿ ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ, ತೀರ್ಥರಾಮ್ ಕೆಡೆಂಜಿ, ಸವಣೂರು ಚಾಪಾಳ ಜುಮಾ ಮಸೀದಿ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಉದ್ಯಮಿ ವಿಜಯಕುಮಾರ್ ಸೊರಕೆ, ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಕುಂಬ್ರ ದಯಾಕರ್ ಆಳ್ವ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಸಂಸ್ಥೆಯ ಮಾಲಕ ಹರೀಶ್ ಬಂಗೇರ ಅತಿಥಿಗಳನ್ನು ಗೌರವಿಸಿದರು. ಧನ್ಯ ಕೆ. ಸ್ವಾಗತಿಸಿದರು. ಕೌಶಿಕ್ ಆಲಂಕಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!