ಪುತ್ತೂರು, ಆಗಸ್ಟ್ 24: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ ಹಾಗೂ ನವೀನ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ 2026–27ನೇ ಸಾಲಿನ ಸೈನ್ಸ್ ಫೋರಂ (ವಿಜ್ಞಾನ ವೇದಿಕೆ) ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನದ ಬಗ್ಗೆ ಆಸಕ್ತಿ, ಶಿಸ್ತು ಹಾಗೂ ದೃಢಸಂಕಲ್ಪದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಇಂದಿನ ವೈಜ್ಞಾನಿಕ ಪ್ರಗತಿಯ ಹಿಂದೆ ವಿಜ್ಞಾನಿಗಳ ಪರಿಶ್ರಮ ಮತ್ತು ತ್ಯಾಗವಿದ್ದು, ವಿದ್ಯಾರ್ಥಿಗಳು ಅವರಿಂದ ಪ್ರೇರಣೆ ಪಡೆದು ಇತರರಿಗೂ ಪ್ರೇರಣೆಯಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಸ್‌ಡಿಎಂ ಕಾಲೇಜು (ಸ್ವಾಯತ್ತ), ಉಜಿರೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಟಿ. ಎನ್. ಕೇಶವ ಮಾತನಾಡಿ, ಅವಲೋಕನ, ಪ್ರಯೋಗ ಹಾಗೂ ಅನ್ವೇಷಣೆಯ ಮೂಲಕ ವಿಜ್ಞಾನವನ್ನು ಕಲಿಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ವೈಜ್ಞಾನಿಕ ಪ್ರಗತಿಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಕುತೂಹಲ, ಸೃಜನಶೀಲತೆ ಹಾಗೂ ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕುಮಾರಿ ಸ್ನೇಹಾ ವಾಗ್ಳೆ ಕಾರ್ಯಕ್ರಮ ನಿರೂಪಿಸಿದರು. ಮಾನಸಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನ ವೇದಿಕೆಯ ಅಧ್ಯಕ್ಷ ಮನೀಶ್ ಸ್ವಾಗತಿಸಿದರು. ಸಂಚಾಲಕ ಡಾ. ಎಡ್ವಿನ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಕುಮಾರಿ ದಿಲ್ಶಾನಾ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಡಾ. ಎಡ್ವಿನ್ ಡಿಸೋಜಾ ಹಾಗೂ ಶ್ರೀಮತಿ ಶ್ರೇರಕ್ಷಾ ಬಿ.ವಿ. ಸಂಯೋಜಿಸಿದರು.












