ಕಾಸರಗೋಡು : ಅಪಾಯಕಾರಿ ಬೀದಿ ನಾಯಿಗಳನ್ನು ದಯಾಮರಣಗೊಳಿಸುವ ಕುರಿತು ರಾಜ್ಯ ಸರ್ಕಾರ ವಿವರವಾದ ಮಾರ್ಗಸೂಚಿ ಹೊರಡಿಸಿದೆ. ಚಿಕಿತ್ಸೆ ನೀಡಿದರೂ ಗುಣವಾಗದ ರೋಗಗಳಿಂದ ಬಳಲುತ್ತಿರುವ, ಗಂಭೀರವಾಗಿ ಗಾಯಗೊಂಡಿರುವ, ರೇಬೀಸ್‌ ಸೋಂಕಿಗೆ ಒಳಗಾದ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುವ ನಾಯಿಗಳನ್ನು ಮಾತ್ರ ದಯಾಮರಣಗೊಳಿಸಲು ಪರಿಗಣಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿರ್ವಹಣೆ ಹಾಗೂ ಅಗತ್ಯವಿದ್ದಲ್ಲಿ ದಯಾಮರಣದ ಕುರಿತು ತೀರ್ಮಾನಿಸುವ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿ ಜುಲೈ 23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶವನ್ನು ಯಾವ ರೀತಿಯಲ್ಲಿ ಜಾರಿಗೊಳಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರದ ಹಿನ್ನೆಲೆಯಲ್ಲಿ ಇದೀಗ ವಿವರವಾದ ಮಾರ್ಗಸೂಚಿ ಪ್ರಕಟಿಸಲಾಗಿದೆ.ಮಾರ್ಗಸೂಚಿಯ ಪ್ರಮುಖ ಅಂಶಗಳುಅಪಾಯಕಾರಿ ನಾಯಿಗಳ ದಯಾಮರಣದ ಸಂಪೂರ್ಣ ಜವಾಬ್ದಾರಿ ಸ್ಥಳೀಯ ಮಟ್ಟದಲ್ಲಿ ರಚಿಸಲಾಗುವ ಬೀದಿ ನಾಯಿ ನಿರ್ವಹಣಾ ಸಮಿತಿಗೆ ಇರಲಿದೆ.ಪಶುವೈದ್ಯ ಶಸ್ತ್ರಚಿಕಿತ್ಸಕರಿಗೆ ಮಾತ್ರ ನಾಯಿಯನ್ನು ದಯಾಮರಣಗೊಳಿಸುವ ಅಧಿಕಾರವಿರಲಿದೆ.ಔಷಧದ ಚುಚ್ಚುಮದ್ದಿನ ಮೂಲಕವೇ ದಯಾಮರಣ ನಡೆಸಬೇಕು. ಇತರ ನಾಯಿಗಳ ಸಮ್ಮುಖದಲ್ಲಿ ದಯಾಮರಣಗೊಳಿಸಬಾರದು.ದಯಾಮರಣಕ್ಕಾಗಿ ಹಿಡಿಯುವ ನಾಯಿಗಳನ್ನು ಮೂರು ದಿನಗಳ ಕಾಲ ಆಶ್ರಯ ಕೇಂದ್ರದಲ್ಲಿ ಇರಿಸಬೇಕು.ಈ ಅವಧಿಯಲ್ಲಿ ಪ್ರಾಣಿ ಪ್ರಿಯರು ಅಥವಾ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಘಟನೆಗಳು ನಾಯಿಯನ್ನು ತಮ್ಮ ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಬೇಕು.ಸರ್ಕಾರದ ಆದೇಶವನ್ನು ಜಾರಿಗೊಳಿಸಿದ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ. ಆದರೆ ದುರುದ್ದೇಶ, ಅಧಿಕಾರದ ದುರುಪಯೋಗ ಅಥವಾ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡಿರುವುದು ಕಂಡುಬಂದರೆ ಈ ರಕ್ಷಣೆ ಅನ್ವಯಿಸುವುದಿಲ್ಲ.ದಯಾಮರಣಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸ್ಥಳೀಯ ಸಂಸ್ಥೆಗಳೇ ಭರಿಸಬೇಕು.ಸರ್ಕಾರದ ಈ ಹೊಸ ಮಾರ್ಗಸೂಚಿಯಿಂದ ಅಪಾಯಕಾರಿ ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟವಾದ ಕಾರ್ಯವಿಧಾನ ರೂಪುಗೊಂಡಂತಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!