ಪುತ್ತೂರು: ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಸುಮಾರು ₹3 ಲಕ್ಷ ಮೌಲ್ಯದ ಚಿನ್ನ, ನಗದು ಹಾಗೂ ಆಧಾರ್ ಕಾರ್ಡ್ ಇದ್ದ ಪರ್ಸ್‌ನ್ನು ಪೊಲೀಸರ ಮೂಲಕ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.ರಿಕ್ಷಾ ಚಾಲಕ ಮಹಮ್ಮದ್ ಅಶ್ರಫ್ ಮರಿಕೆಮನೆ ಅವರಿಗೆ ಒಳಮೊಗರು ಗ್ರಾಮದ ಕುಂಬ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಸ್‌ವೊಂದು ಬಿದ್ದು ಸಿಕ್ಕಿತ್ತು. ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಆಧರಿಸಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಅದು ಕೈಕಾರ ಪಾಂಡಿತಡ್ಕ ನಿವಾಸಿ ದಿವಾಕರ ಆಚಾರ್ಯ ಅವರಿಗೆ ಸೇರಿದ ಪರ್ಸ್ ಎಂಬುದು ತಿಳಿದುಬಂದಿದೆ.ದಿವಾಕರ ಆಚಾರ್ಯ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪರ್ಸ್ ಬಿದ್ದು ಹೋಗಿತ್ತು. ಪರ್ಸ್‌ನಲ್ಲಿ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಆಧಾರ್ ಕಾರ್ಡ್ ಇತ್ತು.ನಂತರ ಮಹಮ್ಮದ್ ಅಶ್ರಫ್ ಅವರು ಪರ್ಸ್ ಹಾಗೂ ಅದರೊಳಗಿನ ವಸ್ತುಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ ಭಂಡಾರಿ ಅವರ ಸಮಕ್ಷಮದಲ್ಲಿ ದಿವಾಕರ ಆಚಾರ್ಯ ಅವರಿಗೆ ಹಸ್ತಾಂತರಿಸಿದರು.ಅಶ್ರಫ್ ಅವರ ಪ್ರಾಮಾಣಿಕತೆಯನ್ನು ಪಿಎಸ್‌ಐ ಸುಷ್ಮಾ ಭಂಡಾರಿ ಅವರು ಪ್ರಶಂಸಿಸಿದರು.










