ಪುತ್ತೂರು, ಆ.29: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ನಾಯಕತ್ವದ ಗುಣ ಹಾಗೂ ಜವಾಬ್ದಾರಿಯುತ ಪ್ರತಿನಿಧಿತ್ವ ಬೆಳೆಸುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ III ಬಿ.ಕಾಂ. ವಿದ್ಯಾರ್ಥಿ ಮಹಮ್ಮದ್ ಇಬ್ರಾಹಿಂ ರಾಝ್ ಹಾಗೂ III ಬಿಬಿಎ ವಿದ್ಯಾರ್ಥಿ ಲಿಖಿತ್ ಜೆ.ಡಿ. ಸ್ಪರ್ಧಿಸಿದ್ದರು. ಕಾರ್ಯದರ್ಶಿ ಸ್ಥಾನಕ್ಕೆ III ಬಿಬಿಎಯ ಪ್ರಿಯಾ ಎಂ.ಕೆ., III ಬಿಸಿಎಯ ಹಸನ್ ಅಮ್ರಾ ಶಿಹಾಬುದ್ದೀನ್ ಹಾಗೂ III ಬಿ.ಕಾಂ.ನ ಜಯಕೃಷ್ಣ ಇ. ಸ್ಪರ್ಧಿಸಿದ್ದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ III ಬಿಎಸ್ಸಿ (BZC)ಯ ದಿಲ್ಶಾನಾ ಕೆ.ಎಸ್. ಹಾಗೂ III ಬಿಎಸ್ಸಿ (PMCs)ಯ ಎಂ. ನಿಶ್ಮಿತಾ ರೈ ಸ್ಪರ್ಧಿಸಿದ್ದರು.ಮತದಾನಕ್ಕೂ ಮುನ್ನ ಅಭ್ಯರ್ಥಿಗಳಿಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಪರಿಷತ್ತಿನ ಕುರಿತು ತಮ್ಮ ದೃಷ್ಟಿಕೋನ, ಆದ್ಯತೆಗಳು ಹಾಗೂ ಬದ್ಧತೆಗಳನ್ನು ವಿವರಿಸಲು ಅವಕಾಶ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಮತ ಚಲಾಯಿಸಿದರು.ಕಾಲೇಜಿನ ಪ್ರಾಂಶುಪಾಲರು ಹಾಗೂ ಮುಖ್ಯ ಚುನಾವಣಾಧಿಕಾರಿ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಿತು. ಅವರು ಅಭ್ಯರ್ಥಿಗಳಿಗೆ ಗೆಲುವು–ಸೋಲನ್ನು ಲೆಕ್ಕಿಸದೆ ಸಂಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿದು, ಸಮರ್ಪಣೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಜವಾಬ್ದಾರಿ ನಿರ್ವಹಿಸುವಂತೆ ಸಲಹೆ ನೀಡಿದರು. ನಾಯಕತ್ವವೆಂದರೆ ಅಧಿಕಾರ ಚಲಾಯಿಸುವುದಲ್ಲ; ಸೇವೆ, ಸಹಕಾರ ಹಾಗೂ ಸಹಪಾಠಿಗಳಿಗೆ ಮಾದರಿಯಾಗುವುದಾಗಿದೆ ಎಂದು ಹೇಳಿದರು.ಮತ ಎಣಿಕೆಯ ಬಳಿಕ ಲಿಖಿತ್ ಜೆ.ಡಿ. ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿ, ಜಯಕೃಷ್ಣ ಇ. ಕಾರ್ಯದರ್ಶಿಯಾಗಿ ಹಾಗೂ ಎಂ. ನಿಶ್ಮಿತಾ ರೈ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.ನೂತನ ಪದಾಧಿಕಾರಿಗಳನ್ನು ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಭಿನಂದಿಸಿ ಸನ್ಮಾನಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಕಾಲೇಜಿನ ಬೋಧಕ ವರ್ಗದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಹಕರಿಸಿದರು.












