ಮಂಗಳೂರು: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಬಸ್ ಚಾಲಕರು, ನಿರ್ವಾಹಕರು, ಮಾಲೀಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಮಂಗಳೂರು ನಗರ ಸಂಚಾರ ಪೊಲೀಸರ ವತಿಯಿಂದ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಸೆ.2ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 600 ಮಂದಿ ಶಾಲಾ ಬಸ್ ಚಾಲಕರು, ಮಾಲೀಕರು, ಬಸ್ ಮ್ಯಾನೇಜರ್‌ಗಳು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಚಾಲಕರು ಹಾಗೂ ನಿರ್ವಾಹಕರು ಪಾಲಿಸಬೇಕಾದ ಕಾನೂನು ನಿಯಮಗಳು, ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳು ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು.ಶಾಲಾ ವಾಹನಗಳಿಗೆ 40 ಕಿ.ಮೀ. ವೇಗದ ಮಿತಿಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ) ಅವರು ಮಾತನಾಡಿ, Karnataka Motor Vehicles (Condition for Vehicle engaged in Transport of School Children) Rules, 2012ರಂತೆ ಶಾಲಾ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು. ವಾಹನ ಮತ್ತು ಚಾಲಕರ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಅಗ್ನಿಶಾಮಕ ಉಪಕರಣ, ಸ್ಪೀಡ್ ಗವರ್ನರ್ ಹಾಗೂ ಕ್ಲೋಸ್ಡ್ ಬಾಡಿ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರಬೇಕು. ಶಾಲಾ ವಾಹನಗಳು ಗರಿಷ್ಠ 40 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ಸೂಚಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪರ್ಮಿಟ್ ಹೊಂದಿರುವ ವಾಹನಗಳಲ್ಲೇ ಮಕ್ಕಳನ್ನು ಸಾಗಿಸಬೇಕು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ಶಿಕ್ಷಣಾಧಿಕಾರಿಗಳು ಶಾಲಾ ಆಡಳಿತ ಮಂಡಳಿಗಳು ಶಿಕ್ಷಕರು, ಶಾಲಾ ಬಸ್ ಮಾಲೀಕರು, ಚಾಲಕರು ಹಾಗೂ ಪೋಷಕರ ಸಭೆಗಳನ್ನು ಆಗಾಗ ನಡೆಸಿ ಮಕ್ಕಳ ಸುರಕ್ಷತೆ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.ಎ.ಸಿ.ಪಿ. ಸಂಚಾರ ಉಪವಿಭಾಗ ಅವರು ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜತೆಗೆ ಶಿಸ್ತು ಮತ್ತು ಜವಾಬ್ದಾರಿಯಿಂದ ವಾಹನ ಚಲಾಯಿಸುವಂತೆ ಸೂಚಿಸಿದರು.ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ಬಸ್ ಚಾಲಕರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!