ಸುಳ್ಯ: ಸುಮಾರು 13 ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀನಿವಾಸ್ ಅಲಿಯಾಸ್ ಶೀನಾ ಅವರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.2013ರ ಜ.27ರಂದು ನಾಗರಾಜ್ ಎಂಬವರು ಬಾಡಿಗೆ ಟಾಟಾ ಇಂಡಿಕಾ ಕಾರಿನಲ್ಲಿ (KA-50-7462) ರಾಜ್ಯ ಹೆದ್ದಾರಿ 88ರಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲುಗುಂಡಿಯಲ್ಲಿ ಕಾರನ್ನು ತಡೆದು ದರೋಡೆ ನಡೆಸಿದ ಆರೋಪ ಕೇಳಿಬಂದಿತ್ತು. ಕಾರಿನ ಚಾಲಕನ ಬಳಿಯಿದ್ದ 20 ಗ್ರಾಂ ಚಿನ್ನದ ಸರ, ಮೊಬೈಲ್, ವಾಹನದ ದಾಖಲೆಗಳು, ನಾಗರಾಜ್ ಅವರ ಬಳಿಯಿದ್ದ 16 ಗ್ರಾಂ ಚಿನ್ನದ ಸರ, 13 ಗ್ರಾಂ ತೂಕದ ಬ್ರಾಸ್‌ಲೆಟ್, 5 ಗ್ರಾಂ ತೂಕದ ಎರಡು ಉಂಗುರ, ₹4,500 ನಗದು, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಇದ್ದ ಪರ್ಸ್ ಹಾಗೂ ನಾಗರಾಜ್ ಅವರ ಪತ್ನಿಯ ಬಳಿಯಿದ್ದ ₹2,500 ನಗದನ್ನು ಸುಲಿಗೆ ಮಾಡಲಾಗಿದೆ ಎಂದು ದೂರಲಾಗಿತ್ತು.ಈ ಸಂಬಂಧ ಸುಳ್ಯ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವೇಳೆ ಶ್ರೀನಿವಾಸ್ ತಲೆಮರೆಸಿಕೊಂಡಿದ್ದರಿಂದ ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು. ಉಳಿದ ಆರೋಪಿಗಳ ವಿಚಾರಣೆ ಪೂರ್ಣಗೊಂಡು ಅವರು ಖುಲಾಸೆಯಾಗಿದ್ದರು.ನಂತರ ಶ್ರೀನಿವಾಸ್ ಅವರನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಮೂಲ ಪ್ರಕರಣವನ್ನು ವಿಭಜಿಸಿ (ಸ್ಪ್ಲಿಟ್ ಅಪ್) ಶ್ರೀನಿವಾಸ್ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಸಲಾಯಿತು.ವಿಚಾರಣೆ ವೇಳೆ ಒಟ್ಟು 21 ಸಾಕ್ಷಿಗಳ ಪೈಕಿ 9 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪರೀಕ್ಷಿಸಲಾಯಿತು. ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಸ್ಥಳದಲ್ಲಿದ್ದ ಬಗ್ಗೆ ಪೂರಕ ದಾಖಲೆಗಳು ಲಭ್ಯವಾಗದಿರುವುದು ಹಾಗೂ ಸಾಕ್ಷಿಗಳ ಹೇಳಿಕೆಗಳಿಂದ ಆರೋಪಿಯೇ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿರುವುದನ್ನು ನ್ಯಾಯಾಲಯ ಪರಿಗಣಿಸಿತು.ವಾದ-ವಿವಾದ ಆಲಿಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಆ.31ರಂದು ಶ್ರೀನಿವಾಸ್ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿ ಆದೇಶ ನೀಡಿದರು.ವಕೀಲರ ವಾದ: ಆರೋಪಿಯ ಪರವಾಗಿ ಪುತ್ತೂರಿನ ಕಜೆ ಲಾ ಚೇಂಬರ್ಸ್‌ನ ವಕೀಲ ಮಹೇಶ್ ಕಜೆ ಅವರು ವಾದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!